ಸಮಾರಂಭಗಳಲ್ಲಿ ಅದ್ದೂರಿಯ ಭೋಜನ: ಪ್ರತಿಷ್ಠೆಯೋ? ದೌರ್ಬಲ್ಯವೋ?

Upayuktha
0


ಇಡ್ಲಿ ಸಾಂಬಾರ್, ವಡೆ ಚಟ್ನಿ, ಸೇಮಿಗೆ ಸಾಂಬಾರ್ ರಸಾಯನ, ಬನ್ಸ್, ಸೆಟ್ ದೋಸೆ, ಮಸಾಲೆ ದೋಸೆ, ಮೈಸೂರ್ ಪಾಕ್, ಕ್ಷೀರಾ, ಉಪ್ಪಿಟ್ಟು, ಅವಲಕ್ಕಿ, ಕಡ್ಲೆ ಉಸ್ಲಿ... ಕಾಪಿ, ಚಹಾ. ಇದೇನು ಹೋಟೆಲ್ ಮಾಣಿ ತಿಂಡಿಗಳನ್ನು ಸಾಲು ಸಾಲಾಗಿ ಹೇಳುವಂತೆ ಎಂದೆಣಿಸಬೇಡಿ. ನಾನು ಕಳೆದ ವಾರ ಒಂದು ವಿಷೇಷ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿದ್ದ ಬೆಳಗ್ಗಿನ ಫಲಾಹಾರದ ವ್ಯವಸ್ಥೆಯ ಚಿತ್ರಣ ಮುಂದಿಟ್ಟಿದ್ದೇನೆ. ಒಬ್ಬ ಆರೋಗ್ಯವಂತ ಮನುಷ್ಯನಾದರೂ ಬೆಳಗ್ಗಿನ ಉಪಾಹಾರಕ್ಕೆ ಇಷ್ಟೊಂದು ವ್ಯಂಜನಗಳನ್ನು ಸೇವಿಸಿದರೆ ಆತನ ಆರೋಗ್ಯವೂ ಸ್ಥಿರವಾಗಿರುವುದು ಅನುಮಾನವೇ. ಬೆಳಿಗ್ಗೆಯೇ ಇಷ್ಟೊಂದು ವ್ಯವಸ್ಥೆ ಇರುವಾಗ ನಂತರದ್ದು ನಿಮ್ಮ ಕಲ್ಪನೆಗೆ ಬಿಟ್ಟಿದ್ದೇನೆ. ಆದರೂ ಸಂಕ್ಷಿಪ್ತವಾಗಿ ಹೇಳಬೇಕಾದರೆ ಮೂರು ತರಹದ ಪಾನೀಯ ಇಪ್ಪತ್ತೈದಕ್ಕೂ ಮಿಕ್ಕಿ ಮಧ್ಯಾಹ್ನದೂಟದ ವ್ಯಂಜನಗಳು ಮಾತ್ರವಲ್ಲ ಊಟದ ನಂತರ ಮೂರಕ್ಕೂ ಮಿಗಿಲಾದ ಐಸ್ಕ್ರೀಂಗಳು ಜತೆಜತೆಗೆ ಕಾಪಿ ಚಾಯವೆಂಬ ಪಾನೀಯಗಳು... ಅಬ್ಬಾ ಇದು ಯಾವೂರೆಂದು ನಿಮಗನಿಸಬಹುದು ಅಥವಾ ಅನಿಸದೆಯೂ ಇರಬಹುದು. ನಮ್ಮಲ್ಲೇ ಈ ಪರಿಯ ಗೌಜಿಗಳಿರುವುದಂತು ನಿಜ. ಕೊಡುವವರು ಇರುವಾಗ, ಸೇವಿಸುವವರು ಇರುವಾಗ ಅದಕ್ಕಿಂತಲೂ ಹೆಚ್ಚಾಗಿ ಸಮಾಜ ಒಪ್ಪಿರುವಾಗ ಇವನದ್ದೊಂದು ಅಪಸ್ವರ ಯಾಕೆ ಎಂದು ಅನಿಸಬಹುದು.  


ಹೀಗೇ ಸುಮ್ಮನೆ ಒಂದು ಅವಲೋಕನ ಮಾಡಿದರೆ ಕೆಲವೊಂದು ವಿಷಯಗಳು ಕಣ್ಮುಂದೆ ಹಾಯುತ್ತವೆ. ಮೊದಲನೆಯದಾಗಿ ಅಡುಗೆಯವರ ಪಾಡು. ಇಷ್ಟೊಂದು ವ್ಯಂಜನಗಳಿರುವಾಗ ಅದಕ್ಕೆ ಬೇಕಾದಂಥ ಜನಗಳನ್ನು ಸೇರಿಸುವುದು ಮೊದಲ ಸಮಸ್ಯೆ. ಸಮಯಕ್ಕೆ ಸರಿಯಾಗಿ ತಯಾರಿ ಮಾಡಿಕೊಡುವ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಎರಡನೇ ಸಮಸ್ಯೆ. ಅಂತೆಯೇ ಮಾಡಿಟ್ಟ ಪದಾರ್ಥಗಳಲ್ಲಿ ಯಾವುದೂ ಬಡಿಸಲು ಬಾಕಿಯಾಗದಂತೆ ತಿನ್ನುವವರಿಗೆ ತಲುಪಿಸುವುದೂ ಒಂದು ಸಮಸ್ಯೆ... ಇಲ್ಲಿ ಸಮಸ್ಯೆ ಎಂದು ಯಾಕೆ ಹೇಳಿದೆನೆಂದರೆ, ಇದೆಲ್ಲವೂ ನಾವು ಅಂದುಕೊಂಡಂತೆ ಆದರೆ ಹೆಸರು, ಪ್ರತಿಷ್ಠೆ. ಅದಿಲ್ಲದಿದ್ದರೆ ಸಮಸ್ಯೆಯೇ.  ಯಾವುದೇ ಕಾರ್ಯಕ್ರಮವಿರಲಿ ಎಲ್ಲ ವ್ಯಂಜನಗಳೂ ಗುಣಮಟ್ಟದಲ್ಲಿದ್ದರೂ ಯಾವುದೋ ಒಂದು ಕಳಪೆಯಾದರೂ ಎಲ್ಲ ಬಣ್ಣ ಮಸಿ ನುಂಗಿತು ಎನ್ನುವಂತೆ ಆಗುವುದೂ ಇದೆ. ಹಾಗೆಯೇ ಒಂದು ಕಾರ್ಯಕ್ರಮದ ಸಾರ್ಥಕತೆ ಇರುವುದು ವ್ಯಂಜನಗಳ ಸಂಖ್ಯೆಯೋ ಅಥವಾ ಸರಳ ಭೋಜನವೋ ಎಂಬುದೇ ಗೊಂದಲದ ಪ್ರಶ್ನೆ. ಅಷ್ಟಾಗಿ ಇಷ್ಟೆಲ್ಲ ವ್ಯಂಜನಗಳಿದ್ದರೂ ಎಲ್ಲವನ್ನೂ ಸವಿದು ತೃಪ್ತಿಯಾಗಿ ತಿನ್ನುವವರೂ ಖಂಡಿತ ಯಾರೂ ಇರಲಾರರು. ಸುಮ್ಮನೆ ಕುತೂಹಲಕ್ಕಾಗಿ ಒಂದಿಷ್ಟು ಎಲೆ ಬದಿಗೆ ಹಾಕಿಸಿಕೊಂಡು ಒಂದು ಚಿಟಿಕೆಯಷ್ಟು ತಿಂದು ಅಥವಾ ಒಂದು ಬೆರಳ ತುದಿಯಿಂದ ರುಚಿ ನೋಡಿ ಬದಿಗೆ ಸರಿಸುವವರೇ ಜಾಸ್ತಿ. ಯಾಕೆಂದರೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಒಂದಿಷ್ಟು ಹೊಟ್ಟೆ ತುಂಬಿಸಿಕೊಂಡೇ ಮನೆ ಬಿಡುವುದು. ಮತ್ತೆ ಹೋದಲ್ಲಿ ಹಸಿವಿಗಾಗಿ ತಿನ್ನುವುದಲ್ಲದ ಕಾರಣ ರುಚಿಯಾದರೂ ಎಲ್ಲಿಂದ ಬರಬೇಕು.  


ಒಂದು ಕಾಲವಿತ್ತು. ಕಾರ್ಯಕ್ರಮ ಯಾವುದೇ ಇರಲಿ ಬೆಳಗ್ಗಿನ ಉಪಾಹಾರಕ್ಕೆ ಉಪ್ಪಿಟ್ಟು, ಅವಲಕ್ಕಿ, ಬಾಳೆಹಣ್ಣು ಮತ್ತು ಕುಡಿಯಲು ಕಾಪಿ ಅಲ್ಲಿಗೆ ಮುಗಿಯುತ್ತಿತ್ತು. ಮತ್ತೆ ಮಧ್ಯಾಹ್ನ ಊಟದವರೆಗೆ ಬಾಯಾರಿದರೆ ನೀರು ಮಾತ್ರ. ಮಧ್ಯಾಹ್ನದ ಊಟವೂ ಅಷ್ಟೆ ನಾಲ್ಕೈದು ವ್ಯಂಜನಗಳಲ್ಲೇ ಮುಗಿಯುತ್ತಿತ್ತು. ಇನ್ನು ಸ್ಪರ್ಧೆ ಇರುತ್ತಿದ್ದರೆ ವ್ಯಂಜನಗಳಲ್ಲಲ್ಲ ತಿನ್ನುವುದರಲ್ಲಿ. ಹತ್ತಾರು ಜಿಲೇಬಿಯೋ ಹತ್ತಾರು ಹೋಳಿಗೆಯೋ ಪಂಥದಿಂದ ತಿನ್ನುತ್ತಿರುವುದೂ ಇತ್ತು. ಅಂದರೆ ಊಟ ಮಾಡುವವನಿಗೆ ಹಸಿವು, ಬಡಿಸುವವನಿಗೆ ಯಾರು ಎಷ್ಟು ತಿನ್ನಬಹುದೆಂಬ ಕಲ್ಪನೆ ಜತೆಗೆ ಯಜಮಾನನಿಗೆ ಬಂದವರು ಹೊಟ್ಟೆ ತುಂಬ ಊಟ ಮಾಡಿದರೆಂಬ ತೃಪ್ತಿ. ಇದೆಲ್ಲದರ ಮಿಶ್ರಣವೇ ಒಂದು ಸಮಾರಂಭದ ಔತಣ. ಅಲ್ಲಿ ಯಾವುದೇ ಪ್ರತಿಷ್ಠೆಯೂ ಇರಲಿಲ್ಲ, ಕಾಟಾಚಾರವೂ ಇರಲಿಲ್ಲ. ಊಟ ಮಾಡುವವನಿಗೆ ಹಸಿವೂ ಇರುತ್ತಿತ್ತು. ಊಟ ಮಾಡಿ ಮೈಲುಗಳಷ್ಟು ನಡೆಯುವಂಥ ಕಸುವೂ ಇರುತ್ತಿತ್ತು. ನಾವು ಚಿಕ್ಕವರಿರುವಾಗ ಉಪಾಹಾರಕ್ಕೆ ಇಡ್ಲಿ ಸಾಂಬಾರ್ ಇರಬಹುದೆಂಬ ಕಲ್ಪನೆಯೂ ಇರಲಿಲ್ಲ. ಕಾಲ ಬದಲಾದಂತೆ ಅಥವಾ ನಾವು ಬದಲಾದಂತೆ ಕಾರ್ಯಕ್ರಮ ಮಾಡುವವನ ಆರ್ಥಿಕತೆಗೋ, ಪ್ರತಿಷ್ಠೆಗೋ, ಸ್ಪರ್ಧೆಗೋ, ಅನಿವಾರ್ಯತೆಗೋ ಅನುಗುಣವಾಗಿ ಅಥವಾ ಯಾವುದೋ ಒಂದು ದೌರ್ಬಲ್ಯಕ್ಕೊಳಗಾಗಿ ಇಂಥ ವರ್ತಮಾನ ಸೃಷ್ಟಿಯಾದದ್ದಂತು ವಾಸ್ತವ. ಇಲ್ಲಿ ಸರಿ ತಪ್ಪು ಅನ್ನುವ ವಿಶ್ಲೇಷಣೆ ಅಲ್ಲ. ಅವರವರ ಭಾವಕ್ಕೆ ಅವರವರ ಶಕ್ತ್ಯಾನುಸಾರ ಅವರವರ ವ್ಯವಹಾರ. ಆಕ್ಷೇಪ ಸಲ್ಲ. ಇಷ್ಟೆಲ್ಲದರ ಅವಶ್ಯಕತೆ ಇದೆಯೋ ಇಲ್ಲವೋ ಎನ್ನುವುದೂ ಅವರವರ ಪ್ರಜ್ಞೆಗೆ ಬಿಟ್ಟದ್ದು.  


ಮನುಷ್ಯ ಆಹಾರ ತಿನ್ನುವುದರಲ್ಲೂ ಹಲವು ಆಯಾಮಗಳಿವೆ. ಯಾವನು ಹಸಿವಾದ ಮೇಲೆ ಆಹಾರ ಸೇವಿಸುವನೋ ಆತನಿಗೆ ತಿನ್ನುವ ಆಹಾರದ ರುಚಿಯೂ ಗೊತ್ತಾಗುವುದು, ತಿಂದ ಆಹಾರ ಜೀರ್ಣವೂ ಆಗುವುದು. ಯಾವನು ಹಸಿವಾಗಬಾರದೆಂದು ತಿನ್ನುವನೋ ಆತನಿಗೆ ಯಾವುದೇ ವ್ಯಂಜನವೂ ರುಚಿಸದು ಮಾತ್ರವಲ್ಲ ಜೀರ್ಣವೂ ಆಗದು. ಇವತ್ತು ಎಲ್ಲವೂ ಪ್ರೀ ಪೈಡ್ ಯುಗ. ಮುಂದೆ ಹಸಿವಾಗಬಾರದೆಂದು ಮುಚಿತವಾಗಿಯೇ ತುರುಕಿಕೊಂಡು ವ್ಯವಹರಿಸುವುದು. ಇದು ಅನಾರೋಗ್ಯದ ಮೊದಲ ಹೆಜ್ಜೆ. ಮುಂದಿನ ಎಲ್ಲ ಏರುಪೇರುಗಳೂ ಇದರ ಪರಿಣಾಮವೇ. ಸಾಂಪ್ರದಾಯಿಕ ಶೈಲಿಯ ಭೋಜನವೆಂದರೆ ಅದು ಭಾರವೇ. ಅದರಲ್ಲೂ ಇಪ್ಪತ್ತೈದಕ್ಕೂ ಮಿಕ್ಕಿ ಪದಾರ್ಥಗಳಿದ್ದರಂತು ಯಾವಾಗ ಒಮ್ಮೆ ಈ ಭೋಜನವೆಂಬ ಕ್ರಿಯೆ ಮುಗಿಯಲಿಲ್ಲವೊ ಎಂಬ ಜಿಗುಪ್ಸೆ ಉಂಟಾಗುವುದೂ ಇದೆ. ಅಲ್ಲಿಗೆ ಒಂದು ಊಟ ಜಿಗುಪ್ಸೆ ತರುವಷ್ಟಾದರೆ ಅದು ಸುಖದ ವಿಚಾರವಂತು ಖಂಡಿತ ಅಲ್ಲ.


ಮತ್ತೊಂದು ವಿಚಾರವೆಂದರೆ ಇಂಥ ಊಟಗಳಲ್ಲಿ ತಿನ್ನುವುದಕ್ಕಿಂತಲೂ ತಿನ್ನದೆ ಬಿಸಾಡುವುದೇ ಹೆಚ್ಚು. ಒಂದು ಪದಾರ್ಥವಾಗಬೇಕಾದರೆ ಒಬ್ಬ ಅಡುಗೆಯವನು ಅದೆಷ್ಟು ಶ್ರದ್ಧೆಯಿಂದ ಮಾಡುತ್ತಾನೋ ಅದೇ ಪದಾರ್ಥವನ್ನು ಏನೂ ಅಲ್ಲವೆಂಬ ಭಾವದೊಡನೆ ಚೆಲ್ಲುವಾಗ ತಾದಾತ್ಮ್ಯತೆಯಿಂದ ಕೆಲಸ ಮಾಡಿದ ಅಡುಗೆಯವನಿಗಾಗಲಿ ಸಾಮಾನು ತಂದು ಹಾಕಿದ ಯಜಮಾನನಿಗಾಗಲಿ ಬೇಸರವಾಗದಿದ್ದೀತೇ? ಹಾಗೆಂದು ಲೆಕ್ಕದಿಂದ ಹೆಚ್ಚಾದದ್ದನ್ನು ತಿನ್ನುವುದಾದರೂ ಹೇಗೆ? ಬಿಸಾಡಲೇ ಬೇಕು ತಾನೆ. ಯಾವುದೇ ವ್ಯವಹಾರವು ಒಂದು ಇತಿ ಮಿತಿಯಲ್ಲಿದ್ದರೆ ಚಂದವೇ. ಯಾವಾಗ ಅದನ್ನು ದಾಟಿತೋ ಆವಾಗ ಅದಕ್ಕೆ ದುಶ್ಫಲವೇ ಗತಿ. ನಮ್ಮ ಕಾರ್ಯಕ್ರಮಗಳಲ್ಲಿ ಅದರಲ್ಲೂ ಹೊಟ್ಟೆಗೆ ತಿನ್ನುವ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಅಗತ್ಯವೆಂದೆನಿಸದೆ? ಹೊಟ್ಟೆ ತುಂಬ ತಿನ್ನೋಣ. ರುಚಿಯಾದದ್ದನ್ನೇ ತಿನ್ನೋಣ. ಮುಜುಗರವಾಗುವಂಥ, ಸ್ಪರ್ಧಾತ್ಮಕತೆ ಎನಿಸುವಂಥ, ಆರೋಗ್ಯ ಹಾಳು ಮಾಡುವಂಥ ಸಂಭ್ರಮವನ್ನು ಆದಷ್ಟು ಅನುಸರಿಸದಿರೋಣ. ಏನಂತೀರಿ...?

************

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top