ಏನಿದು ಲಿಪಿಡ್ ಪ್ರೊಫೈಲ್? ಈ ಪರೀಕ್ಷೆಯು ನಿಮ್ಮ ಆರೋಗ್ಯ ಸ್ಥಿತಿಯನ್ನು ತಿಳಿಯಲು ಅನುಕೂಲ

Upayuktha
0

 


ನಮ್ಮ ದೇಹದಲ್ಲಿ ಇರುವ ಸಂಪೂರ್ಣ ಕೊಲೆಸ್ಟ್ರಾಲ್ ಮತ್ತು ಟೈಗ್ಲಿಸರೈಡ್ ಎಂದು ಕರೆಯಲ್ಪಡುವ ಕೊಬ್ಬಿನ ಅಂಶಗಳ ಪ್ರಮಾಣವನ್ನು ಪತ್ತೆ ಮಾಡುವ ಪರೀಕ್ಷೆಯನ್ನು ಲಿಪಿಡ್ ಪ್ರೊಫೈಲ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಲಿಪಿಡ್ ಪಾನಲ್ ಅಂತಲೂ ಕರೆಯುತ್ತಾರೆ. ರಕ್ತದಲ್ಲಿ ಯಾವ ರೀತಿ ಕೊಬ್ಬು ಶೇಖರಣೆಯಾಗುತ್ತದೆ, ರಕ್ತದಲ್ಲಿ ಏನೇನು ಕೊಬ್ಬಿನ ತೊಂದರೆಗಳು ಉಂಟಾಗುತ್ತದೆ ಎಂಬುದರ ಸ್ಥೂಲ ಚಿತ್ರಣವನ್ನು ಈ ಪರೀಕ್ಷೆ ವೈದ್ಯರಿಗೆ ಒದಗಿಸುತ್ತದೆ. ರಕ್ತದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಒಳ್ಳೆಯಕೊಲೆಸ್ಟ್ರಾಲ್ ಗಳ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಈ ಪರೀಕ್ಷೆಯಿಂದ ತಿಳಿಯಲಾಗುತ್ತದೆ. ಕೊಲೆಸ್ಟ್ರಾಲ್ ಎನ್ನುವುದು ತೆಳ್ಳಗಿನ, ಮೇಣದ ರೀತಿಯ ವಸ್ತುವಾಗಿದ್ದು, ನಮ್ಮ ದೇಹದೊಳಗೆ ಇರುತ್ತದೆ. ಇದು ನಮ್ಮ ದೇಹದ ಹೆಚ್ಚಿನ ಜೈವಿಕ ಕ್ರಿಯೆಗಳಿಗೆ ಶಕ್ತಿ ಬಿಡುಗಡೆ ಮಾಡಲು ಅಗತ್ಯವಾಗಿರುತ್ತದೆ. ಅಗತ್ಯಕ್ಕಿಂತ ಜಾಸ್ತಿ ಕೊಬ್ಬು ನಮ್ಮ ದೇಹದಲ್ಲಿ ಸೇರಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಕೊಲೆಸ್ಟ್ರಾಲ್, ಟೈಗ್ಲಿಸರೈಡ್ ಮತ್ತು ಇತರ ಕೊಬ್ಬಿನ ಅಂಶಗಳು ರಕ್ತನಾಳದೊಳಗೆ ಸೇರಿಕೊಂಡು ರಕ್ತನಾಳವನ್ನು ಮುಚ್ಚುವಂತೆಮಾಡಿ, ಸರಾಗ ರಕ್ತ ಪರಿಚಲನೆಗೆ ಅಡ್ಡಿಯುಂಟು ಮಾಡುತ್ತದೆ. ಆ ಮೂಲಕ ಬೇರೆ ಬೇರೆ ರೀತಿಯ ಹೃದಯಾಘಾತ, ಮೇದುಳು ಆಘಾತ ಮುಂತಾದ ರೋಗಗಳಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ.


ಸಾಮಾನ್ಯವಾಗಿ ಈ ಪರೀಕ್ಷೆ ಮಾಡುವಾಗ 8 ರಿಂದ 12 ಗಂಟೆಗಳ ಕಾಲ ಉಪವಾಸ ಇದ್ದ ಬಳಿಕ ಮಾಡಲಾಗುತ್ತದೆ. ನೀರಿನ ಹೊರತು ಇನ್ನೇನನ್ನು ಸೇವಿಸುವಂತಿಲ್ಲ. ಹಾಗೆಂದ ಮಾತ್ರಕ್ಕೆ ಯಾವಾಗ ಬೇಕಾದರೂ ಮಾಡಬಾರದು ಎಂಬ ನಿಯಮವಿಲ್ಲ. ಆದರೆ ನಿಖರವಾಗಿ ಕೊಬ್ಬಿನ ಪ್ರಮಾಣವನ್ನು ತಿಳಿಯಬೇಕಾದಲ್ಲಿ 8 ರಿಂದ 12 ಗಂಟೆಗಳ ಉಪವಾಸ ಮಾಡಿದಲ್ಲಿ ನಿಖರವಾದ ಕೊಬ್ಬಿನ ಪ್ರಮಾಣವನ್ನು ಪತ್ತೆ ಹಚ್ಚಬಹುದು. ಈ ಪರೀಕ್ಷೆ ಮಾಡುವುದರ ಮೂಲಕ ಆ ವ್ಯಕ್ತಿಯು ಹೃದ್ರೋಗಕ್ಕೆ ಅಥವಾ ಮೆದುಳು ಸಂಬಂಧಿ ಸ್ಟ್ರೋಕ್ ಮುಂತಾದ ರೋಗಗಳಿಗೆ ತುತ್ತಾಗುವ ಸಾಧ್ಯತೆಯನ್ನು ಮೊದಲೇ ಊಹಿಸಲು ಸಾಧ್ಯವಾಗುತ್ತದೆ. ಅಂತಹಾ ವ್ಯಕ್ತಿಗಳನ್ನು ಗುರುತುಮಾಡಿ ಅವರ ಆಹಾರ ಪದ್ದತಿ ಬದಲಾವಣೆ, ಜೀವನ ಶೈಲಿ ಬದಲಾವಣೆ ಮಾಡಿ, ಅಂತವರಿಗೆ ಮುಂದೆ ಬರುವ ಅಪಾಯವನ್ನು ತಪ್ಪಿಸುವಲ್ಲಿ ಈ ಲಿಪಿಡ್ ಪ್ರೊಫೈಲ್ ಪರೀಕ್ಷೆ ಬಹಳ ಸಹಕಾರಿಯಾಗುತ್ತದೆ ಎಂದು ತಿಳಿದು ಬಂದಿದೆ. ಈ ಲಿಪಿಡ್ ಪ್ರೊಫೈಲ್ ಪರೀಕ್ಷೆಯ ವ್ಯಕ್ತಿಯ ರಕ್ತದಲ್ಲಿ ಇರುವ ಪೂರ್ಣ ಪ್ರಮಾಣದ ಕೊಲೆಸ್ಟ್ರಾಲ್ ಕಡಿಮೆ ಸಾಂದ್ರತೆಯ ಲೈಪೋ ಪ್ರೋಟಿನ್ ಕೊಲೆಸ್ಟ್ರಾಲ್, ಹೆಚ್ಚು ಸಾಂದ್ರತೆಯ ಲೈಪೋ ಪ್ರೋಟಿನ್ ಕೊಲೆಸ್ಟ್ರಾಲ್, ಟೈಗ್ಲಿಸರೈಡ್ ಮತ್ತು ತುಂಬಾ ಕಡಿಮೆ ಸಾಂದ್ರತೆಯ ಲೈಪೋಪ್ರೋಟಿನ್ ಕೊಲೆಸ್ಟ್ರಾಲ್  ಗಳ ಪ್ರಮಾಣವನ್ನು ಪತ್ತೆ ಹಚ್ಚಲಾಗುತ್ತದೆ.



   


1. ಟೋಟಲ್ ಕೊಲೆಸ್ಟ್ರಾಲ್


ಇದು ರಕ್ತದಲ್ಲಿ ಇರುವ ಒಟ್ಟು ಕೊಲೆಸ್ಟ್ರಾಲ್ ಪ್ರಮಾಣವನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ 200mg/ಜಟ ಗಿಂತ ಕಡಿಮೆ ಇದ್ದರೆ ಉತ್ತಮ. 200 ರಿಂದ 239ರವರೆಗೆ ಇದ್ದಲ್ಲಿ ಬಾರ್ಡರ್‌ಲೈನ್ ಅಂತಲೂ, 240 mg/ಜಟ ಗಿಂತ ಜಾಸ್ತಿ ಇದ್ದಲ್ಲಿ ಅಪಾಯಕಾರಿ ಎಂದೂ ತಿಳಿಯಲಾಗುತ್ತದೆ.


2. ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್ ಕೊಲೆಸ್ಟ್ರಾಲ್ (LDL-C)


ಈ ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್ ಕೊಲೆಸ್ಟ್ರಾಲ್ ರಕ್ತನಾಳದ ಒಳಭಾಗದಲ್ಲಿ ಶೇಖರಣೆಯಾಗಿ ರಕ್ತನಾಳದಲ್ಲಿ ರಕ್ತ ಸರಾಗವಾಗಿ ಪರಿಚಲನೆಯಾಗದಂತೆ ಮಾಡುತ್ತದೆ. ಈ ರೀತಿ ಮಾಡುವುದರ ಮುಖಾಂತರ ಪರೋಕ್ಷವಾಗಿ ಹೃದಯ ರೋಗ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಇಂತಹ ಕೊಲೆಸ್ಟ್ರಾಲ್ ಗಳಿಗೆ ಕೆಟ್ಟ ಕೊಲೆಸ್ಟ್ರಾಲ್ ಎಂದೂ ಕರೆಯಲಾಗುತ್ತದೆ. ಇದು 60 ರಿಂದ 130 mg/dl ಇದ್ದಲ್ಲಿ ಸಹಜ ಎಂದು ತಿಳಿಸಲಾಗುತ್ತದೆ. 130 ರಿಂದ 159 mg/dl ಇದ್ದಲ್ಲಿ ಬಾರ್ಡರ್‌ಲೈನ್ ಅಂತಲೂ, 160 ರಿಂದ 189 mg/dl ಇದ್ದಲ್ಲಿ ಅಪಾಯಕಾರಿ ಎಂದೂ ಅಂದಾಜಿಸಲಾಗುತ್ತದೆ. ಒಟ್ಟಿನಲ್ಲಿ ಈ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇದ್ದಲ್ಲಿ ಉತ್ತಮ ಎಂದೂ ತಿಳಿದು ಬಂದಿದೆ.


3. ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟಿನ್ (HDL-C) ಕೊಲೆಸ್ಟ್ರಾಲ್


ಈ ಹೆಚ್ಚಿನ ಸಾಂದ್ರತೆಯ ಕೊಲೆಸ್ಟ್ರಾಲ್ ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದೂ ಕರೆಯುತ್ತಾರೆ. ಈ ಹೆಚ್ಚಿನ ಸಾಂದ್ರತೆಯ ಕೊಲೆಸ್ಟ್ರಾಲ್ ದೇಹಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಇದು ರಕ್ತದಲ್ಲಿ ಹೆಚ್ಚು ಇರುವ ಕೊಲೆಸ್ಟ್ರಾಲ್ ಅನ್ನು ಪಿತ್ತಕೋಶಕ್ಕೆ ಕೊಂಡೊಯ್ಯುತ್ತದೆ ಮತ್ತು ರಕ್ತನಾಳದೊಳಗೆ ಶೇಖರಣೆಯಾಗುವುದನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದ ಈ ಕೊಲೆಸ್ಟ್ರಾಲ್ ದೇಹದಲ್ಲಿ ಜಾಸ್ತಿ ಇದ್ದಲ್ಲಿ ಉತ್ತಮ ಎಂದು ಅಂದಾಜಿಸಲಾಗಿದೆ. ಕನಿಷ್ಟ 60 mg/dl ಇದ್ದಲ್ಲಿ ಉತ್ತಮ. 35 ರಿಂದ 45 mg/dl ಇದ್ದಲ್ಲಿ ಬಾರ್ಡರ್‌ಲೈನ್ ಅಂತಲೂ, 35 mg/dl ಗಿಂತ ಕಡಿಮೆ ಇದ್ದಲ್ಲಿ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂದೂ ಅಂಕಿ ಅಂಶಗಳಿಂದ ತಿಳಿದುಬಂದಿದೆ.


4. ಟೈಗ್ಲಿಸರೈಡ್‌ಗಳು


ಇದು ಒಂದು ವಿಷೇಶ ರೀತಿಯ ಕೊಲೆಸ್ಟ್ರಾಲ್ ಆಗಿದ್ದು, ಕೊಬ್ಬಿನ ರೀತಿಯಲ್ಲಿ ದೇಹದಲ್ಲಿ ಶೇಖರಣೆಯಾಗುತ್ತದೆ. ಇವುಗಳ ಪ್ರಮಾಣ ನಿಯಂತ್ರಣದಲ್ಲಿ ಇರಲೇ ಬೇಕು. ಇವುಗಳ ಪ್ರಮಾಣ ಜಾಸ್ತಿ ಆದಷ್ಟು ಅಪಾಯ ಹೆಚ್ಚುತ್ತಲೇ ಹೋಗುತ್ತದೆ. 150 mg/dl ಗಿಂತ ಕಡಿಮೆ ಇದ್ದಲ್ಲಿ ಉತ್ತಮ 150 ರಿಂದ 199 mg/dl ಬಾರ್ಡರ್‌ಲೈನ್ ಅಂತಲೂ, 200 ರಿಂದ 499 mg/dl ಅಪಾಯಕಾರಿ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ.


ಯಾರು ಈ ಪರೀಕ್ಷೆ ಮಾಡಿಸಬೇಕು?


1. ದೇಹದ ತೂಕ ನಿಯಂತ್ರಣದಲ್ಲಿ ಇಲ್ಲದಿದ್ದಾಗ.


2. ಹೃದಯಾಘಾತ, ಸ್ಟ್ರೋಕ್ ಮುಂತಾದ ಕುಟುಂಬ ಚರಿತ್ರೆ ಇರುವ ವ್ಯಕ್ತಿಗಳು ವರ್ಷದಲ್ಲಿ ಒಮ್ಮೆಯಾದರೂ ಈ ಪರೀಕ್ಷೆ ಮಾಡಿಸಬೇಕು.


3. ಅತಿಯಾದ ದೂಮಪಾನ ಮತ್ತು ಮದ್ಯಪಾನಿಗಳು ಪ್ರತಿ ಆರು ತಿಂಗಳಿಗೊಮ್ಮೆ ಈ ಪರೀಕ್ಷೆ ಮಾಡಿಸಿಕೊಳ್ಳಬೇಕು.


4. 40 ವರ್ಷ ಕಳೆದ ಬಳಿಕ ಪ್ರತಿಯೊಬ್ಬರು ವರ್ಷದಲ್ಲಿ ಒಮ್ಮೆ ಈ ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಬೇಕು.


5. ಮಧುಮೇಹ ರೋಗಿಗಳು ಪ್ರತಿ ಆರು ತಿಂಗಳಿಗೊಮ್ಮೆ ಮಾಡಿಸಬೇಕು.


6. ಥೈರಾಯ್ಡ್ ಸಂಬಂಧಿ ರೋಗ, ಪಿತ್ತಕೋಶ ರೋಗ ಮತ್ತು ಕಿಡ್ನಿ ಸಂಬಂಧಿ ರೋಗ ಇರುವವರು ವರ್ಷಕೊಮ್ಮೆ ಮಾಡಿಸಬೇಕು.


7. ಜಾಸ್ತಿ ಕರಿದ ಆಹಾರ ಮತ್ತು ಹೆಚ್ಚು ಪ್ರಾಣಿಜನ್ಯ ಆಹಾರ ಸೇವಿಸುವವರು ಪ್ರತಿ ಆರು ತಿಂಗಳಿಗೊಮ್ಮೆ ಈ ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಬೇಕು.


8. ಈಗಾಗಲೇ ಹೃದಯ ಸಂಬಂಧಿ ರೋಗ ಮತ್ತು ಮೆದುಳು ಸಂಬಂಧಿ ರೋಗ ಇರುವವರು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ರೋಗದ ಚಿಕಿತ್ಸೆಯ ಪರಿಣಾಮಕತ್ವವನ್ನು ತಿಳಿಯಲು ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಬೇಕಾಗುತ್ತದೆ.


9. ನಿಮ್ಮ ದೇಹದ ಬಾಡಿಮಾಸ್ ಇಂಡೆಕ್ಸ್ (BMI) ಅಥವಾ ದೇಹದ ತೂಕದ ಅನುಪಾತ 25ಕ್ಕಿಂತ ಜಾಸ್ತಿ ಇದ್ದಲ್ಲಿ ಪ್ರತಿ ವರ್ಷಕ್ಕೊಮ್ಮೆ ಈ ಲಿಪಿಡ್ ಪ್ರೊಫೈಲ್ ಪರೀಕ್ಷೆ ಅತೀ ಅಗತ್ಯವಾಗಿರುತ್ತದೆ.


10. ದೇಹದಲ್ಲಿ ಕೌಟುಂಬಿಕವಾಗಿ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇರುವ ವ್ಯಕ್ತಿಗಳು ಪ್ರತಿ ಆರು ತಿಂಗಳಿಗೊಮ್ಮೆ ಈ ಪರೀಕ್ಷೆ ಮಾಡಿಸಬೇಕು.


ಕೊನೆಮಾತು:


ಒಬ್ಬ ವ್ಯಕ್ತಿಗೆ ಯಾವಾಗ, ಯಾವ ಹೊತ್ತಿನಲ್ಲಿ ಎಲ್ಲಿ ಹೃದಯಾಘಾತ ಅಥವಾ ಮೆದುಳಿನ ಆಘಾತ (ಸ್ಟ್ರೋಕ್) ಆಗುತ್ತದೆ ಎಂದು ನಿಖರವಾಗಿ ವೈದ್ಯರಿಗೆ ಹೇಳಲು ಸಾಧ್ಯವಾಗದಿದ್ದರೂ, ಯಾವ ವ್ಯಕ್ತಿಗೆ ಈ ಅಪಾಯ ಬರಬಹುದು ಎಂಬುದನ್ನು ವೈದ್ಯರಿಗೆ ಪತ್ತೆ ಮಾಡಲು ಸಾಧ್ಯವಿದೆ. ಈ ಸಾಧ್ಯತೆಯನ್ನು ತಿಳಿಯಲು ಸಾಮಾನ್ಯವಾಗಿ ವೈದ್ಯರು ಈ ‘ಲಿಪಿಡ್ ಪ್ರೊಫೈಲ್’ ಪರೀಕ್ಷೆ ಮಾಡಿ, ಆ ವ್ಯಕ್ತಿಯ ‘ಜಾತಕವನ್ನು’ ತಿಳಿಯಲು ಸಾಧ್ಯವಿದೆ. ಈ ಕಾರಣದಿಂದ ಸ್ಥೂಲಕಾಯ, ಮದುಮೇಹ ರೋಗ, ರಕ್ತದೊತ್ತಡ, ಅತಿಯಾದ ಒತ್ತಡದ ಜೀವನ ಶೈಲಿ, ಕೌಟುಂಬಿಕ ಚರಿತ್ರೆ ಮುಂತಾದ ವಿಷಯಗಳನ್ನು ವೈದ್ಯರು ರೋಗಿಗಳ ಮೂಲಕ ತಿಳಿದು, ರೋಗಿಗಳಿಗೆ ಈ ಪರೀಕ್ಷೆ ನಡೆಸಲು ಆದೇಶಿಸುತ್ತಾರೆ. ವೈದ್ಯರ ಆದೇಶದಂತೆ ಈ ಲಿಪಿಡ್ ಪ್ರೊಫೈಲ್ ಪರೀಕ್ಷೆ ಮಾಡಿಸಿದಲ್ಲಿ ಮುಂದೆ ಉಂಟಾಗುವ ಅಪಾಯಗಳನ್ನು ಮೊದಲೇ ತಡೆಯಲು ಸಾಧ್ಯವಿದೆ. ಹಾಗಾಗಿ ನಿಮ್ಮ ವೈದ್ಯರ ಸಲಹೆಯನ್ನು ಯಾವತ್ತೂ ಪಾಲಿಸಿ ಮತ್ತು ಮುಂದೊದಗುವ ಅಪಾಯವನ್ನು ತಪ್ಪಿಸಿಕೊಂಡಲ್ಲಿ ನೂರು ಕಾಲ ಸುಖವಾಗಿ ಬಾಳಬಹುದು.

 

✍ಡಾ|| ಮುರಲೀ ಮೋಹನ್ ಚೂಂತಾರು

 BDS, MDS,DNB,MOSRCSEd(U.K), FPFA, M.B.A

 ಸುರಕ್ಷಾದಂತ ಚಿಕಿತ್ಸಾಲಯ

 ಹೊಸಂಗಡಿ – 671 323

 ಮೊ : 9845135787


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top