ಇದೊಂದು ಹೃದಯ ಸಂಬಂಧಿ ಪರೀಕ್ಷೆಯಾಗಿದ್ದು, ಈ ಪರೀಕ್ಷೆಯಲ್ಲಿ ಅಲ್ಟ್ರಾಸೌಂಡ್ ಅಲೆಗಳನ್ನು ಬಳಸಿ ಹೃದಯದ ಸ್ನಾಯುಗಳ ಮತ್ತು ಕವಾಟಗಳ ಕಾರ್ಯಕ್ಷಮತೆಯನ್ನು ಪತ್ತೆ ಹಚ್ಚಲಾಗುತ್ತದೆ. ಈ ಶಬ್ದದ ಅಲೆಗಳಿಂದ ಹೃದಯದ ಚಲನ ವಲಯದ ಚಿತ್ರವನ್ನು ದಾಖಲಿಸಲಾಗುತ್ತದೆ ಮತ್ತು ಹೃದಯದ ರಚನೆ, ಗಾತ್ರ ಮತ್ತು ಆಕಾರದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಇದೊಂದು ನಾನ್ ಇನ್ ವೇಸಿವ್ ಅಂದರೆ (ನಿಮ್ಮ ದೇಹದ ಚರ್ಮವನ್ನು ಬೇಧಿಸದೆ/ಚುಚ್ಚದೆ ಮಾಡುವ ಪರೀಕ್ಷೆ) ಆಗಿರುತ್ತದೆ.
ಈ ಪರೀಕ್ಷೆಯಲ್ಲಿ ಮೈಕ್ರೋಫೋನ್ ನಂತಹ ಉಪಕರಣ ಬಳಸಿ ಶಬ್ದಾತೀತವಾದ ತರಂಗಗಳನ್ನು ಅಥವಾ ಶಬ್ದದ ಅಲೆಗಳನ್ನು ಹೃದಯದ ಸುತ್ತ ಮುತ್ತ ಇಟ್ಟು ಈ ಅಲೆಗಳು ಹೃದಯವನ್ನು ತಲುಪುವಂತೆ ಮಾಡಲಾಗುತ್ತದೆ. ಹೃದಯಕ್ಕೆ ನೇರವಾಗಿ ಅಲೆಗಳು ತಲುಪಲು ಪೂರಕವಾದ ಜಾಗ ಮತ್ತು ಕೋನಗಳಲ್ಲಿ ಈ ಅಲೆಗಳನ್ನು ಹೃದಯ ತಲುಪುವಂತೆ ಮಾಡಲಾಗುತ್ತದೆ. ಈ ಶಬ್ದಾತೀತ ಅಲೆಗಳು ಹೃದಯವನ್ನು ತಲುಪಿ ಅಲ್ಲಿಂದ ಸ್ನಾಯುಗಳ ಮೂಲಕ ಪ್ರತಿಧ್ವನಿಸುವಂತೆ ಮಾಡಿ ಅದನ್ನು ದಾಖಲು ಮಾಡಲಾಗುತ್ತದೆ. ಈ ಪ್ರತಿಧ್ವನಿಸಿದ ಅಲೆಗಳು ಕಂಪ್ಯೂಟರ್ ಪರದೆಗೆ ತಲುಪುವಂತೆ ಮಾಡಿ ಹೃದಯದ ಬಡಿತದ, ಹೃದಯದ ಚಲನೆಯ ಮತ್ತು ಹೃದಯದ ಕವಾಟಗಳ ಚಿತ್ರವನ್ನು ಪರದೆಯಲ್ಲಿ ಮೂಡುವಂತೆ ಮಾಡಲಾಗುತ್ತದೆ. ಆ ಮೂಲಕ ವೈದ್ಯರು ತಮಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾರೆ.
ವಿಧಗಳು:
1. M-ಮೋಡ್ ಇಕೋಕಾರ್ಡಿಯೋಗ್ರಾಫಿ:
ಇದು ಬಹಳ ಸರಳ ವಿಧಾನವಾಗಿದ್ದು, ಇದರಿಂದ ಹೃದಯದ ಕವಾಟಗಳು, ಹೃದಯದ ಕೋಣೆಗಳು ಮತ್ತು ಹೃದಯದ ಗಾತ್ರ ಹಾಗೂ ಹೃದಯದ ಕವಾಟಗಳ ದಪ್ಪವನ್ನು ತಿಳಿಯಲಾಗುತ್ತದೆ.
2. ಡಾಪ್ಲರ್ ಇಕೋಕಾರ್ಡಿಯೋಗ್ರಾಫಿ:
ಹೃದಯದ ಕವಾಟಗಳಲ್ಲಿ ಮತ್ತು ಕೋಣೆಗಳಲ್ಲಿ ಹರಿಯುವ ರಕ್ತದ ಪ್ರಮಾಣ, ವೇಗ ಮತ್ತು ದಿಕ್ಕನ್ನು ಪತ್ತೆ ಹಚ್ಚಲು ಬಳಸುತ್ತಾರೆ. ಪ್ರತಿ ಬಾರಿ ಹೃದಯ ಬಡಿದಾಗ ಹೊರ ಹೋಗುವ ರಕ್ತದ ಪ್ರಮಾಣವನ್ನು ತಿಳಿಯಲು ಉಪಯೋಗಿಸುತ್ತಾರೆ. ಹೃದಯದ ಕವಾಟದ ಕಾರ‍್ಯಕ್ಷಮತೆ ಮತ್ತು ಹೃದಯದ ಗೋಡೆಗಳ ಬಗ್ಗೆ ಮಾಹಿತಿ ಇದರಿಂದ ತಿಳಿಯಬಹುದು.
3. ಕಲರ್ ಡಾಪ್ಲರ್ ಇಕೋಕಾರ್ಡಿಯೋಗ್ರಾಫಿ:
ಇದೊಂದು ಮುಂದುವರಿದ ಡಾಪ್ಲರ್ ಇಕೋ ಆಗಿರುತ್ತದೆ. ಬೇರೆ ಬೇರೆ ಬಣ್ಣ ಬಳಸಿ, ರಕ್ತದ ಪರಿಚಲನೆಯ ದಿಕ್ಕನ್ನು ಪತ್ತೆ ಹಚ್ಚಲಾಗುತ್ತದೆ.
4. 2-D ಇಕೋಕಾರ್ಡಿಯೋಗ್ರಾಫಿ:
ಇದು ಹೃದಯದ ನಿಜವಾದ ಚಲನೆಯ ಚಿತ್ರವನ್ನು ಎರಡು ಆಯಾಮಗಳಲ್ಲಿ ಪರದೆಯಲ್ಲಿ ಮೂಡಿಸುತ್ತದೆ. ಹೃದಯ ಕೆಲಸ ಮಾಡುವಾಗ ಅದರ ರಚನೆ ಮತ್ತು ಕೆಲಸದ ಕಾರ‍್ಯಕ್ಷಮತೆಯನ್ನು ಪತ್ತೆ ಹಚ್ಚಲು ಇದು ಸಹಾಯಕಾರಿ.
5. 3- D ಇಕೋಕಾರ್ಡಿಯೋಗ್ರಾಫಿ:
ಇದೊಂದು ವಿಶೇಷ ಪರೀಕ್ಷೆಯಾಗಿದ್ದು ಶಬ್ದಾತೀತ ತರಂಗಗಳನ್ನು ಬಳಸಿ ಹೃದಯದ ಪರಿಪೂರ್ಣ ರಚನೆ, ಕಾರ‍್ಯಕ್ಷಮತೆ ಮತ್ತು ಗಾತ್ರದ ಬಗ್ಗೆ ಮೂರು ಆಯಾಮಗಳಲ್ಲಿ ಪತ್ತೆ ಹಚ್ಚಿ ಚಿತ್ರದ ರೂಪದಲ್ಲಿ ಪರದೆಯಲ್ಲಿ ಮೂಡುವಂತೆ ಮಾಡುತ್ತದೆ. ಹೃದಯದ ಕಾರ‍್ಯಕ್ಷಮತೆ ಪತ್ತೆ ಹಚ್ಚಲು ಮತ್ತು ಹೃದಯದ ರೋಗವನ್ನು ಕಂಡು ಹಿಡಿಯಲು ಈ ಪರೀಕ್ಷೆ ಬಲು ಉಪಯುಕ್ತವಾಗಿದೆ.
ಯಾವಾಗ ಇಕೋಕಾರ್ಡಿಯೋಗ್ರಾಂ ಮಾಡಿಸಬೇಕು:
1. ಹೃದಯದ ತೊಂದರೆ ಇದ್ದು, ಹೃದಯದ ರಕ್ತನಾಳಗಳಲ್ಲಿ ಅಥೆರೋಸ್ಲೀರೋಸಿಸ್ ಅಥವಾ ರಕ್ತನಾಳ ಪೆಡಾಸಾಗಿರುವುದನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. ರಕ್ತನಾಳದ ಗಾತ್ರ, ರಚನೆ ಮತ್ತು ರಕ್ತನಾಳ ತಿರುಚಿಕೊಂಡಿರುವುದು ಹಾಗೂ ರಕ್ತನಾಳ ಮುಚ್ಚಿಕೊಂಡಿರುವುದರ ಬಗ್ಗೆ ಮಾಹಿತಿ ಈ ಪರೀಕ್ಷೆಯಿಂದ ಸಿಗುತ್ತದೆ.
2. ಹೃದಯದ ಗೋಡೆಗಳು ದೊಡ್ಡದಾಗಿರುವುದನ್ನು ಪತ್ತೆ ಹಚ್ಚಲು ಈ ಪರೀಕ್ಷೆ ಬಳಸಲಾಗುತ್ತದೆ. ದುರ್ಬಲವಾದ ಹೃದಯದ ಸ್ನಾಯುಗಳ ಅಥವಾ ದಪ್ಪವಾದ ಹೃದಯದ ಗೋಡೆಗಳು ಇಕೋ ಕಾರ್ಡಿಯೋಗ್ರಾಂ ಪರೀಕ್ಷೆಯಲ್ಲಿ ಸುಲಭವಾಗಿ ಗೋಚರಿಸುತ್ತದೆ.
3. ಜನ್ಮಜಾತ ಹೃದಯದ ತೊಂದರೆಗಳನ್ನು ಪತ್ತೆ ಹಚ್ಚಿ, ಹೃದಯ ಬೆಳವಣೆಗೆ ಸಂದರ್ಭದಲ್ಲಿ ಹೃದಯದ ಕವಾಟಗಳು ಅಥವಾ ಹೃದಯದ ಗೋಡೆಗಳ ನಡುವೆ ಉಂಟಾಗುವ ಆಕೃತಿ ರಚನಾ ತೊಂದರೆಗಳನ್ನು ಪತ್ತೆ ಹಚ್ಚಲು ಈ ಪರೀಕ್ಷೆ ಬಳಸಲಾಗುತ್ತದೆ.
4. ಹೃದಯದ ವೈಫಲ್ಯ ಪತ್ತೆ ಹಚ್ಚಲು: ಹೃದಯದ ಸ್ನಾಯುಗಳು ವಿಫಲವಾಗಿ ಅಥವಾ ಸರಿಯಾಗಿ ಸಂಕುಚಿತ ಮತ್ತು ವಿಕಸನವಾಗದಿದ್ದಲ್ಲಿ, ಹೃದಯ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ಹೃದಯದಿಂದ ಹೊರ ಹೋಗುವ ರಕ್ತದ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ. ಹೃದಯದಿಂದ ರಕ್ತ ಸರಿಯಾಗಿ ಹೊರ ಹೋಗಲು ಸಾಧ್ಯವಾಗದೇ ಇರಬಹುದು. ಈ ರೀತಿಯ ಹೃದಯದ ಸ್ನಾಯುಗಳ ಕಾರ‍್ಯಕ್ಷಮತೆಯ ನ್ಯೂನತೆಯನ್ನು ಪತ್ತೆ ಹಚ್ಚಲು ಇಕೋಕಾರ್ಡಿಯೋಗ್ರಾಂ ಪರೀಕ್ಷೆ ಮಾಡಲಾಗುತ್ತದೆ.
5. ಅನ್ಯೂರಿಸಂ ಎಂಬ ಹೃದಯದಿಂದ ಹೊರ ಹೋಗುವ ಆಮ್ಲಜನಕಯುಕ್ತ ರಕ್ತ ಪೂರೈಸುವ ಅಯರ‍್ಟಾ ಎಂಬ ರಕ್ತನಾಳದಲ್ಲಿ ಇರುವ ತೊಂದರೆ ಪತ್ತೆ ಹಚ್ಚಲು ಇಕೋ ಪರೀಕ್ಷೆ ಮಾಡಲಾಗುತ್ತದೆ.
6. ಹೃದಯದ ಕೋಣೆಗಳ ನಡುವೆ ಇರುವ ಹೃದಯದ ಕವಾಟಗಳ ರಚನೆ, ಕಾರ‍್ಯಕ್ಷಮತೆ ತಿಳಿಯಲು ಈ ಪರೀಕ್ಷೆ ಮಾಡುತ್ತಾರೆ.
7. ಹೃದಯದ ಸುತ್ತ ಅಥವಾ ಹೃದಯ ಸ್ನಾಯುಗಳಲ್ಲಿ ಬೆಳೆದಿರುವ ಗಡ್ಡೆ ಅಥವಾ ಟ್ಯೂಮರ್‌ಗಳು ಪತ್ತೆ ಹಚ್ಚಲು ಬಳಸಲಾಗುತ್ತದೆ.
8. ಪೆರಿಕಾರ್ಡೈಟಿಸ್ ಎಂಬ ಹೃದಯದ ಸೋಂಕು ಅಥವಾ ಉರಿಯೂತವನ್ನು ಪತ್ತೆ ಹಚ್ಚಲು ಇಕೋ ಪರೀಕ್ಷೆ ಬಳಸಲಾಗುತ್ತದೆ.
9. ಹೃದಯದ ಸುತ್ತ ಇರುವ ಚೀಲದಲ್ಲಿ ಕೀವು, ರಕ್ತ ಅಥವಾ ಇನ್ನಾವುದೇ ದ್ರವ ತುಂಬಿಕೊಂಡಿರುವುದನ್ನು ಪತ್ತೆ ಹಚ್ಚಲು ಬಳಸುತ್ತಾರೆ.
10. ಹೃದಯ ಬಲ ಹಾಗೂ ಎಡ ಭಾಗದ ಹೃತ್ಕರ್ಣ ಹಾಗೂ ಹೃತ್ಕರ್ಷಿಗಳ ನಡುವೆ ಇರುವ ರಚನೆಯಲ್ಲಿನ ನ್ಯೂನತೆಯನ್ನು ಪತ್ತೆ ಹಚ್ಚಲು ಇಕೋ ಪರೀಕ್ಷೆ ಬಳಸುತ್ತಾರೆ. ಉದಾಹರಣೆಗೆ VSD, ASD ಎಂಬ ರೋಗಗಳು.
ಹೇಗೆ ಮಾಡುತ್ತಾರೆ?
1. ಈ ಪರೀಕ್ಷೆ ಮಾಡಲು ಯಾವುದೇ ಪೂರ್ವ ಸಿದ್ಧತೆ ಅಗತ್ಯವಿಲ್ಲ. ಯಾವುದೇ ರೀತಿಯ ಉಪವಾಸ ಅಥವಾ ಸೆಡೇಷನ್ ಅಂದರೆ ಮತಿ ತಪ್ಪಿಸುವ ಅಗತ್ಯವಿಲ್ಲ.
2. ವೈದ್ಯರು ನಿಮಗೆ ಪರೀಕ್ಷೆ ಬಗ್ಗೆ ಮಾಹಿತಿ ನೀಡಿ ನಿಮ್ಮನ್ನು ಅಂಗಾತ ಮಲಗಿಸುತ್ತಾರೆ. ನೀವು ಪೇಸ್ ಮೇಕರ್ ಬಳಸುತ್ತಿದ್ದಲ್ಲಿ ವೈದ್ಯರಿಗೆ ಮೊದಲೇ ತಿಳಿಸಬೇಕು.
3. ಇದೊಂದು ಸರಳ, ನೋವು ರಹಿತ, 15 ನಿಮಿಷದಲ್ಲಿ ಮುಗಿಯುವ ಪರೀಕ್ಷೆ ಆಗಿರುತ್ತದೆ. ಯಾವುದೇ ರೀತಿಯ ಒತ್ತಡ ಹಾಗೂ ದೈಹಿಕ ಪರಿಶ್ರಮ ಈ ಪರೀಕ್ಷೆಯಲ್ಲಿ ಇರುವುದಿಲ್ಲ. ಹೊರ ರೋಗಿಯಾಗಿಯೂ ಈ ಪರೀಕ್ಷೆ ಮಾಡಬಹುದು.
4. ನಿಮ್ಮ ದೇಹದ ಮೇಲ್ಭಾಗ ಅಂಗಿ/ಸಲ್ವಾರ್ ತೆಗೆಯಲಾಗುತ್ತದೆ. ಗೌನ್ ನಿಮಗೆ ಧರಿಸುತ್ತಾರೆ. ನಿಮ್ಮ ದೇಹದಲ್ಲಿನ ಒಡವೆ ತೆಗೆಯುತ್ತಾರೆ. ನೀವು ಅಂಗಾತ ಮಲಗಿ ಎಡಭಾಗಕ್ಕೆ ತಿರುಗುವಂತೆ ಹೇಳುತ್ತಾರೆ.
5. ನಿಮ್ಮ ದೇಹಕ್ಕೆ ECG ಯಂತ್ರವನ್ನು ಜೋಡಿಸಿ ಹೃದಯದ ವಿದ್ಯುತ್ ತರಂಗಗಳ ಚಲನೆಯನ್ನು ತಿಳಿಯಲಾಗುತ್ತದೆ. ಇದನ್ನು ಕಂಪ್ಯೂಟರ್ ಪರದೆಗೆ ಜೋಡಿಸಲಾಗುತ್ತದೆ. ಪರದೆಯಲ್ಲಿ ಮಾತ್ರ ಹೃದಯದ ಆಕಾರ, ಗಾತ್ರ, ಚಿತ್ರದೊಂದಿಗೆ ಹೃದಯದ ವಿದ್ಯುತ್ ತರಂಗಗಳ ವಿನ್ಯಾಸವನ್ನು ತಾಳ ಹಾಕಿ ಹೃದಯದ ಕಾರ‍್ಯಕ್ಷಮತೆಯನ್ನು ತಿಳಿಯಲಾಗುತ್ತದೆ.
6. ಟ್ರಾನ್ಸುಡರ್ ಎಂಬ ಪ್ರೋಬ್ ಅಥವಾ ಉಪಕರಣದಿಂದ ಬೇರೆ ಬೇರೆ ಕೋನಗಳಲ್ಲಿ ಮತ್ತು ಜಾಗಗಳಿಂದ ಶಬ್ದಾತೀತ ಶಬ್ದದ ತರಂಗಗಳನ್ನು ಹೃದಯಕ್ಕೆ ತಲುಪುವಂತೆ ಮಾಡಲಾಗುತ್ತದೆ. ಹೃದಯದ ಸ್ನಾಯುಗಳು ಪ್ರತಿಧ್ವನಿಸಿದ ಶಬ್ದಾತೀತ ತರಂಗಳನ್ನು ಬಳಸಿ ಕಂಪ್ಯೂಟರ್ ಪರದೆಯಲ್ಲಿ ಹೃದಯದ ಚಿತ್ರ ಮೂಡಿಸಲಾಗುತ್ತದೆ. ಅಗತ್ಯವಿದ್ದಲ್ಲಿ ರಕ್ತನಾಳಗಳ ರಕ್ತದಲ್ಲಿ ಎದ್ದುಕಾಣುವ ದ್ರಾವಣವನ್ನು ಬಳಸಿ ಹೃದಯದ ಕವಾಟಗಳು, ಹೃದಯದ ಗೋಡೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗುತ್ತದೆ.
7. ಕೊನೆಗೆ ನಿಮ್ಮ ಹೃದಯದ ಬಡಿತ, ವೇಗ ರಕ್ತದ ಚಲನೆಯ ವೇಗ, ದಿಕ್ಕು, ಹೃದಯದ ಸ್ನಾಯುಗಳ ಕಾರ‍್ಯಕ್ಷಮತೆ, ಹೃದಯದ ಗಾತ್ರ, ಆಕಾರ ಹೀಗೆ ಎಲ್ಲದರ ಬಗ್ಗೆ ಸಂಪೂರ್ಣ ವರದಿ ಲಿಖಿತ ರೂಪದಲ್ಲಿ ನೀಡುತ್ತಾರೆ. ಹೃದಯದ ಕಾರ‍್ಯಕ್ಷಮತೆ ಬಗ್ಗೆಯೂ ದೀರ್ಘ ವರದಿ ನೀಡುತ್ತಾರೆ. ಸಾಮಾನ್ಯವಾಗಿ ಪ್ರಾಥಮಿಕ ಹೃದಯ ಪರೀಕ್ಷೆಯಾದ ECG ಮಾಡಿದಾಗ ವೈದ್ಯರಿಗೆ ಹೃದಯ ರೋಗದ ಬಗ್ಗೆ ಸಣ್ಣ ಪುಟ್ಟ ಮಾಹಿತಿ ದೊರೆತಲ್ಲಿ ECHO ಪರೀಕ್ಷೆಗೆ ಆದೇಶಿಸುತ್ತಾರೆ.
8. ಈ ಪರೀಕ್ಷೆಯಲ್ಲಿ ಹೃದಯದ ಯಾವುದಾದರೂ ಭಾಗ ರಕ್ತ ಸಂಚಾರ ಇಲ್ಲದೆ, ಸ್ನಾಯುಗಳು ಚಲಿಸದೇ ಇದ್ದಲ್ಲಿ, ಅಥವಾ ಹೃದಯದ ಒಂದು ಭಾಗ ನಿಶ್ಚಲವಾಗಿದ್ದಲ್ಲಿ ಅದರ ಬಗ್ಗೆಯೂ ವೈದ್ಯರು ಸಚಿತ್ರ ವರದಿ ನೀಡುತ್ತಾರೆ.
ಕೊನೆ ಮಾತು:
ಇಕೋಕಾರ್ಡಿಯೋಗ್ರಾಂ ಎನ್ನುವುದು ಹೃದಯದ ಜಾತಕ ಹೇಳುವ ಬಹಳ ಉತ್ತಮ ಪರೀಕ್ಷೆಯಾಗಿರುತ್ತದೆ. ಹೃದಯದ ಗಾತ್ರ, ಆಕಾರ, ದಪ್ಪ, ಚಲನೆ ಮತ್ತು ಸ್ನಾಯುಗಳ ಚಲನೆ ಬಗ್ಗೆ ಪರಿಪೂರ್ಣ ಮಾಹಿತಿ ಈ ಪರೀಕ್ಷೆಯಿಂದ ತಿಳಿಯುತ್ತದೆ. ಹೃದಯ ಹೇಗೆ ಚಲಿಸುತ್ತದೆ, ಹೃದಯದ ರಕ್ತ ಪೂರೈಸುವ ಶಕ್ತಿಯ ಅಂದಾಜಿಸುವಿಕೆ, ಹೃದಯದ ಕವಾಟಗಳ ಕಾರ‍್ಯಕ್ಷಮತೆ ಹಾಗೂ ಹೃದಯದ ಕವಾಟಗಳ, ಗಾತ್ರ, ರಚನೆ ಬಗ್ಗೆ ಮಾಹಿತಿ ದೊರಕುತ್ತದೆ. ಇದರ ಜೊತೆಗೆ ಹೃದಯ ಹೊರ ಭಾಗದಲ್ಲಿ ಉಂಟಾಗುವ ತೊಂದರೆಗಳು, ಹೃದಯದ ಕೋಣೆಗಳಲ್ಲಿನ ಹೆಪ್ಪುಗಟ್ಟಿದ ರಕ್ತ, ಹೃದಯದ ರಕ್ತನಾಳಗಳಲ್ಲಿನ ನ್ಯೂನತೆ ಬಗ್ಗೆ ಕೂಡ ಮಾಹಿತಿ ನೀಡುತ್ತದೆ.
ಇದನ್ನು ನೋವು ರಹಿತ, ಸುರಕ್ಷಿತವಾದ ಹಾಗೂ ಹೊರರೋಗ ವಿಭಾಗದಲ್ಲಿ ನಡೆಸಬಹುದಾದ ಕಡಿಮೆ ಖರ್ಚಿನ ಹೃದಯ ಪರೀಕ್ಷೆ ಆಗಿರುತ್ತದೆ. ಯಾವಾಗ, ಎಲ್ಲಿ, ಹೇಗೆ ಮಾಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಒಟ್ಟಿನಲ್ಲಿ ನಿಮ್ಮ ಹೃದಯದ ಜಾತಕ ತಿಳಿಯಲು ವೈದ್ಯರು ಈ ಇಕೋಕಾರ್ಡಿಯೋಗ್ರಾಂ ಪರೀಕ್ಷೆ ಆದೇಶಿಸಿದ್ದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ನಿಶ್ಚಿಂತೆಯಿಂದ ಈ ಪರೀಕ್ಷೆ ಮಾಡಿಸಿಕೊಳ್ಳಿ.
✍ ಡಾ|| ಮುರಲೀ ಮೋಹನ್ ಚೂಂತಾರು
BDS, MDS, DNB, MOSRCSEd(U.K), FPFA, M.B.A
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ-671323
ಮೊ:9845135787
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ