ಮಂಗಳೂರು :- ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿ ಮಂಗಳೂರು ನಗರದಲ್ಲಿ ಅಭಿವೃದ್ಧಿ ಪರ್ವವೇ ಆರಂಭಗೊಂಡಿದ್ದು, ಮುಂಬರುವ ವರ್ಷದಲ್ಲಿ ಪಂಪ್‍ವೆಲ್‍ನಲ್ಲಿ ಬಹುದೊಡ್ಡ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ತಿಳಿಸಿದರು.

ಅವರು ನ.2ರ ಮಂಗಳವಾರ ಮಂಗಳೂರು ನಗರದ ಉರ್ವ ಮಾರುಕಟ್ಟೆ ಬಳಿ 20.54 ಕೋಟಿ ರೂ.ಗಳಡಿ ಉದ್ದೇಶಿತ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್‍ಗಳನ್ನೊಳಗೊಂಡ ಒಳಾಂಗಣ ಕ್ರೀಡಾಂಗಣ ಹಾಗೂ 70 ಕೋಟಿ ರೂ.ಗಳ ವೆಚ್ಚದಲ್ಲಿ ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಬಳಿ ಪಿಪಿಪಿ ಮಾದರಿಯಡಿ ಉದ್ದೇಶಿತ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣ ಕಾಮಗಾರಿಗಳಿಗೆ ರಂಗರಾವ್ ಪುರಭವನದಲ್ಲಿ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಮುಂದಿನ ವರ್ಷ ಮಂಗಳೂರಿನ ಪಂಪ್‍ವೆಲ್‍ನಲ್ಲಿ ಅತಿ ದೊಡ್ಡ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗುವುದು, ಆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದ್ದು, ಅಂಕಿತವಾಗಿದೆ, ಮಾರುಕಟ್ಟೆ ಸ್ಥಳಾಂತರ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಸಮಸ್ಯೆ ಇರ್ತಥ್ಯವಾದ ನಂತರ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಮಂಗಳೂರು ಸ್ಮಾಟ್ ಸಿಟಿ ಕಾಮಗಾರಿಗಳನ್ನು ಎರಡನೇ ಹಂತದಲ್ಲಿ ಕೈಗೊಳ್ಳಲಾಯಿತು. ಆದರೂ ಕಾಮಗಾರಿಗಳಲ್ಲಿ ಮಂಗಳೂರು ನಂಬರ್ ಒನ್ ಆಗಿ ಹೊರಹೊಮ್ಮಿದೆ, ಅದಕ್ಕೆ ಪ್ರಮುಖ ಕಾರಣ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರ ಉತ್ಸಾಹ ಹಾಗೂ ಪ್ರೋತ್ಸಾಹ. ಮಂಗಳೂರು ಮೇಯರ್ ಕೂಡ ಸ್ಮಾಟ್ ಸಿಟಿಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. 20 ವರ್ಷಗಳಲ್ಲಿ ಸ್ಮಾರ್ಟ್ ಸಿಟಿಯನ್ನು ಅಭಿವೃದ್ಧಿಪಡಿಸಲಾಗುವುದು, ವಿವಿಧ ಕಾಮಗಾರಿಗಳಿಗಾಗಿ ಪ್ರಧಾನಿಯವರು 500 ಕೋಟಿ ರೂ.ಗಳ ಅನುದಾನ ನೀಡಿರುವುದ ಸ್ವಾಗತಾರ್ಹ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್ ಮಾತನಾಡಿ, ರಾಜ್ಯದಲ್ಲಿ ಅಮೃತ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯನ್ನು ಮಂಗಳೂರು ಪಡೆದುಕೊಂಡಿದೆ ಹಾಗೂ 24 ಗಂಟೆಗಳ ಕಾಲ ಜನರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಸರಕಾರದಿಂದ ಈಗಾಗಲೇ 789 ಕೋಟಿ ರೂ.ಗಳ ಅನುದಾನ ದೊರಕಿದೆ. ಗ್ಯಾಸ್ ಪೈಪ್‍ಲೈನ್ ಮುಖಾಂತರ ಮನೆ ಮನೆಗೆ ಗ್ಯಾಸ್ ತಲುಪಿಸುವ ಕೆಲಸವನ್ನು ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಮಾಡಲಾಗುತ್ತಿದೆ. ಇಡೀ ರಾಜ್ಯದ ಬೇರೆ ಜಿಲ್ಲೆಗಳಿಗಿಂತ ಮಂಗಳೂರಿಗೆ ವಿವಿಧ ರೀತಿಯ ಯೋಜನೆಗಳನ್ನು ನೀಡಲಾಗಿದ್ದು ಅದರ ಅನುಷ್ಠಾನವಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಸ್ಮಾಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.