ಬ್ಯಾಂಕ್‌ ಆಫ್ ಬರೋಡದಿಂದ ಶುದ್ಧ ಗಂಗಾ ಘಟಕ ಸ್ಥಾಪನೆಗೆ ಅನುದಾನ

Upayuktha
0


ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಾರಂಭಿಸುವ ಶುದ್ಧ ಗಂಗಾ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುದಾನವಾಗಿ ಧರ್ಮಸ್ಥಳದ ಬ್ಯಾಂಕ್‌ ಆಫ್ ಬರೋಡ ಶಾಖೆಯು 20 ಲಕ್ಷ ರೂ ಅನುದಾನ ಮಂಜೂರು ಮಾಡಿದ್ದು ಮಂಗಳವಾರ ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕ್ ವತಿಯಿಂದ 9,80,000ರೂ.ನ ಡಿ.ಡಿ.ಯನ್ನು ಗ್ರಾಮಾಭಿವೃದ್ಧಿ ಯೋಜನೆಗೆ ಹಸ್ತಾಂತರಿಸಲಾಯಿತು.


ಕೊಡುಗೆಯನ್ನು ಸ್ವೀಕರಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಾನು ಹಿಂದೆ ವಿಜಯಾ ಬ್ಯಾಂಕಿನ ನಿರ್ದೇಶಕನಾಗಿದ್ದು, ಬ್ಯಾಂಕಿಗೂ, ಧರ್ಮಸ್ಥಳಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು. ಅಶುದ್ಧ ನೀರಿನ ಬಳಕೆಯಿಂದ ಅನೇಕ ರೋಗಗಳು ಬರುತ್ತವೆ. ಇದನ್ನು ತಡೆಗಟ್ಟಲು 323 ಶುದ್ಧ ಗಂಗಾ ಘಟಕಗಳನ್ನು ಪ್ರಾರಂಭಿಸಲು ಈಗಾಗಲೆ 15 ಕೋಟಿ ರೂ. ವಿನಿಯೋಗಿಸಲಾಗಿದೆ. ವಿಷ ಪದಾರ್ಥ ಹಾಗೂ ರೋಗಕಾರಕ ವೈರಸ್‌ಗಳನ್ನು ನಿರ್ಮೂಲನಗೊಳಿಸಿ ಜನರಿಗೆ ಲೀಟರ್‌ ಒಂದಕ್ಕೆ 15 ಪೈಸೆಯಂತೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಹೇಳಿದರು.


ಈ ವರ್ಷ ಉತ್ತರ ಕರ್ನಾಟಕದ ಗುಲ್ಬರ್ಗಾದಲ್ಲಿ 100 ಶುದ್ಧ ಗಂಗಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ. ಬ್ಯಾಂಕ್‌ ಆಫ್ ಬರೋಡದ ಹಿರಿಯ ಅಧಿಕಾರಿ ಗಾಯತ್ರಿ ಮಾತನಾಡಿ ಪವಿತ್ರ ಸೇವೆಯ ಪುಣ್ಯ ಕಾರ್ಯದಲ್ಲಿ ಬ್ಯಾಂಕ್‌ಗೂ ಅವಕಾಶ ನೀಡಿರುವುದಕ್ಕೆ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿದರು.


ಡಿ. ಹರ್ಷೇಂದ್ರ ಕುಮಾರ್, ಬ್ಯಾಂಕ್‌ ಆಫ್ ಬರೋಡಾ ಧರ್ಮಸ್ಥಳ ಶಾಖೆಯ ಪ್ರಬಂಧಕ ವಿಜಯ್ ಪಾಟೀಲ್, ಆಡಳಿತಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ,  ನಿರ್ದೇಶಕ ಲಕ್ಷ್ಮಣ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top