|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇರುವುದೊಂದೇ ಹೃದಯ ಜೋಪಾನ

ಇರುವುದೊಂದೇ ಹೃದಯ ಜೋಪಾನ




ನಿಮ್ಮ ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು?


ನಮ್ಮ ಹೃದಯವು ರಕ್ತ, ಮಾಂಸ, ಖಂಡಗಳಿಂದ ಕೂಡಿದ್ದು ಮೃದುವಾದ ಟೊಳ್ಳಾದ ಒಂದು ಅಂಗವಾಗಿದ್ದು ಹೆಚ್ಚಾಗಿ ಎದೆಗೂಡಿನ ಮಧ್ಯಭಾಗದಲ್ಲಿ ಉಪಸ್ಥಿತವಾಗಿರುತ್ತದೆ. ಹೃದಯದ ಎಡ ಮತ್ತು ಬಲ ಭಾಗಗಳಲ್ಲಿ  ಶ್ವಾಸಕೋಶಗಳು ಮತ್ತು ಹಿಂದಿನ ಭಾಗದಲ್ಲಿ ಬೆನ್ನು ಮೂಳೆಗಳು ಮತ್ತು ಮುಂದೆ ಎದೆಗೂಡಿನ ಮೂಳೆಗಳು ಇರುತ್ತದೆ. ಹೃದಯದ ಸುತ್ತ ತೆಳ್ಳನೆಯ ಪದರವೊಂದು ಹೃದಯದ ಸುತ್ತಲೂ ಆವರಿಸಿಕೊಂಡಿರುತ್ತದೆ. ಹೃದಯದ ಮಧ್ಯ ದಲ್ಲಿ ಪರದೆಯೊಂದಿದ್ದು ಹೃದಯವನ್ನು ಎಡ ಮತ್ತು ಬಲ ಭಾಗಗಳಾಗಿ ವಿಭಜಿಸಿರುತ್ತದೆ.   


ಸಾಮಾನ್ಯವಾಗಿ ಮನುಷ್ಯರಲ್ಲಿ ಹೃದಯ ಗಾತ್ರ ಒಂದು ಕೈ ಮುಷ್ಠಿಯಷ್ಟು ಇರುತ್ತದೆ. ಮಹಿಳೆಯರಲ್ಲಿ 250ರಿಂದ 300ಗ್ರಾಂ ತೂಗುವ ಹೃದಯ ಪುರುಷರಲ್ಲಿ 300ರಿಂದ 350 ಗ್ರಾಂ ತೂಗುತ್ತದೆ. ನಮ್ಮ ದೇಹದಲ್ಲಿ ಒಟ್ಟು 5ರಿಂದ 6 ಲೀಟರ್ ರಕ್ತವಿದ್ದು ಪ್ರತಿ ನಿಮಿಷಕ್ಕೆ 5 ಲೀಟರ್‌ನಷ್ಟು ರಕ್ತವನ್ನು ಹೊರ ಹಾಕಲಾಗುತ್ತದೆ. ಹೃದಯವು ಯಾವತ್ತೂ ಚಲನೆಯಲ್ಲಿ ಇರುತ್ತದೆ. ಮತ್ತು ಪ್ರತಿ ಬಾರಿ ಸಡಿಲ ಮತ್ತು ಸಂಕುಚಿತಗೊಳ್ಳುವುದರ ಮೂಲಕ, ಪ್ರತಿ ಸ್ಪಂದನದಲ್ಲಿಯೂ 60ರಿಂದ 80 ಮೀ.ಲೀ ರಕ್ತವನ್ನು ಹೃದಯದಿಂದ ಹೊರದೂಡಿ ರಕ್ತನಾಳಗಳಲ್ಲಿ ರಕ್ತ ಮುಂದಕ್ಕೆ ಚಲಿಸುವಂತೆ ಮಾಡುತ್ತದೆ.


ದೇಹದ ರಕ್ತನಾಳಗಳಲ್ಲಿ ಚಲಿಸುವ ರಕ್ತ ಅಂಗಾಂಗಳಿಗೆ ಆಮ್ಲಜನಕ ಪೂರೈಸಿದ ಬಳಿಕ, ನೀಲವರ್ಣಕ್ಕೆ ತಿರುಗಿ ಹೃದಯದ ಬಲಭಾಗಕ್ಕೆ ತಲುಪುತ್ತದೆ. ಹೃದಯದ ಬಲಭಾಗದಿಂದ ನೀಲವರ್ಣದ ಆಮ್ಲಜನಕ ರಹಿತ ರಕ್ತವನ್ನು ಹೃದಯವು ಶ್ವಾಸಕೋಶಗಳಿಗೆ ರಕ್ತನಾಳಗಳ ಮೂಲಕ ತಲುಪಿಸುತ್ತದೆ. ಶ್ವಾಸಕೋಶಗಳಲ್ಲಿ ಆಮ್ಲಜನಕ ಹೀರಿಕೊಂಡು ರಕ್ತ ಕೆಂಪು ಬಣ್ಣಕ್ಕೆ ಪರಿವರ್ತನೆಗೊಂಡು ಎಡಭಾಗದ ಹೃದಯಕ್ಕೆ ತಲುಪುತ್ತದೆ. ಎಡಭಾಗದ ಹೃದಯದಿಂದ ಆಮ್ಲಜನಕಯುಕ್ತ ರಕ್ತ ಆಯೋರ್ಟ ಎಂಬ ಮುಖ್ಯ ರಕ್ತನಾಳದ ಮೂಲಕ ದೇಹದ ಎಲ್ಲಾ ಭಾಗಗಳಿಗೂ ತಲುಪುತ್ತದೆ. ಒಟ್ಟಿನಲ್ಲಿ ಹೃದಯದ ಕೆಲಸವೆಂದರೆ ರಕ್ತವನ್ನು ನಿರಂತರವಾಗಿ ಚಲನೆಯಲ್ಲಿರುವಂತೆ ಮಾಡುವುದು.  


ಪ್ರತಿ ನಿಮಿಷಕ್ಕೆ ಸುಮಾರು 72ಬಾರಿ ಹೃದಯ ಮಿಡಿಯುತ್ತಲೇ ಇರುತ್ತದೆ. ಅಂದರೆ 60 ವಯಸ್ಸಿನ ವ್ಯಕ್ತಿ ಹುಟ್ಟಿನಿಂದ ಸರಿ ಸುಮಾರು ಇನ್ನೂರ ಐವತ್ತು ನೂರು ಕೋಟಿ ಬಾರಿ  ಅಂದರೆ 2.5 ಮಿಲಿಯನ್ ಬಾರಿ ಮಿಡಿಯುತ್ತದೆ. ಮಕ್ಕಳಲ್ಲಿ ಹೃದಯದ ಮಿಡಿತ ನಿಮಿಷಕ್ಕೆ ಸುಮಾರು 60ರಿಂದ 100 ಬಾರಿ ಇರುತ್ತದೆ. ಗಾಬರಿ, ಭಯ, ನೋವು ನಲಿವು, ಸಂತಸ, ಉದ್ವೇಗದ ಸಮಯದಲ್ಲಿ ಹೃದಯವು ಹೆಚ್ಚು ಬಾರಿ ಮಿಡಿಯುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ಮೂರನೇ ವಾರದಿಂದಲೇ ಹೃದಯ ಮಿಡಿಯಲು ಆರಂಭವಾಗುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯುವುದು ಅಂಗವೆಂದರೆ ಹೃದಯ ಮಾತ್ರ. ಹೃದಯ ಸ್ತಂಭನವಾದಲ್ಲಿ ಸಾವು ಖಚಿತ.  


3ರಿಂದ 4 ನಿಮಿಷಗಳ ಕಾಲ ಹೃದಯದ ಮಿಡಿತ ನಿಂತಲ್ಲಿ ಮೆದುಳು ನಿಷ್ಕ್ರಿಯವಾಗಿ ಸಾವು ಕಟ್ಟಿಟ್ಟ ಬುತ್ತಿ. ಸದಾ ಸ್ಪಂದಿಸುವ ಹೃದಯದ ಮಾಂಸ ಖಂಡಗಳಿಗೆ ರಕ್ತದ ಅವಶ್ಯಕತೆ ಅತೀ ಅಗತ್ಯ. ಹೃದಯದ ಒಳಗೆ ರಕ್ತವಿದ್ದರೂ ಹೃದಯದ ಮಾಂಸ ಖಂಡಗಳಿಗೆ ಬಲ ಮತ್ತು ಎಡ ಭಾಗದ ಕರೋನರಿ ರಕ್ತನಾಳಗಳ ಮೂಲಕ ಅಯೋರ್ಟ ಮುಖ್ಯ ರಕ್ತನಾಳಗಳಿಂದ ರಕ್ತ ಸರಬರಾಜು ಆಗುತ್ತದೆ. ಈ ಎಡ ಮತ್ತು ಬಲ ಕರೋನರಿ ರಕ್ತನಾಳಗಳು ಹೃದಯದ ಮಿಡಿತಕ್ಕೆ ಅತೀ ಅವಶ್ಯಕ. 


ಅತಿಯಾದ ಕೊಲೆಸ್ಟ್ರಾಲ್, ಟೈಗ್ಲಿಸಲೈಡ್, ಧೂಮಪಾನ, ಮಧ್ಯಪಾನಗಳಿಂದ ಅಥವಾ ಅಧಿಕ ರಕ್ತದೊತ್ತಡಗಳಿಂದ ಮಧುಮೇಹ ರೋಗಗಳಿಂದ ಈ ಎಡ ಮತ್ತು ಬಲ ಕರೋನರಿ ರಕ್ತನಾಳಗಳು ಪೆಡಸುಗೊಂಡಲ್ಲಿ ಪರಿಣಾಮಕಾರಿ ರಕ್ತದ ಚಲನೆಗೆ ತೊಂದರೆಯಾದಲ್ಲಿ, ಹೃದಯಾಘಾತ ಆಗದ ಸಂಭವ ಹೆಚ್ಚುತ್ತದೆ. ಜೀವನ ಶೈಲಿ ಬದಲಾವಣೆ, ಉತ್ತಮ ಆಹಾರ ಪದ್ಧತಿ ಅಳವಡಿಕೆ ಮತ್ತು ನಿಯಮಿತವಾದ ದೈಹಿಕ ವ್ಯಾಯಾಮಗಳಿಂದ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿದಲ್ಲಿ ನೂರುಕಾಲ ಸುಖವಾಗಿ ಬದುಕಬಹುದು.  

ಏನಿದು ಹೃದಯ ಸ್ತಂಭನ 


ಹೃದಯ ತನ್ನ ಬಡಿತವನ್ನು ನಿಲ್ಲಿಸುವುದನ್ನು ಹೃದಯ ಸ್ತಂಭನ ಎನ್ನುತ್ತಾರೆ. ಹೃದಯಾಘಾತ ಅದರ ಮುಖ್ಯ ಕಾರಣಗಳಲ್ಲಿ ಒಂದು ಹೃದಯ ಸ್ತಂಭನ ಎನ್ನುವುದು ಒಂದು ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣವೇ ಹೃದಯದ ಬಡಿತ ಆರಂಭವಾಗುವಂತೆ ನೋಡಿಕೊಳ್ಳಬೇಕು. ತುರ್ತು ಹೃದಯ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಹೃದಯ ಸ್ತಂಭನದ ಚಿಹ್ನೆಗಳನ್ನು ಗುರುತಿಸಬೇಕು.  

ಏನಿದು ಚಿಹ್ನೆಗಳು ? 

1. ರೋಗಿ ದಿಡೀರನೆ ಜ್ಞಾನ ಅಥವಾ ಪ್ರಜ್ಞೆ ತಪ್ಪುವುದು.

 2. ಉಸಿರಾಟ ನಿಂತಿರುತ್ತದೆ.

3. ದೇಹವು ನೀಲಿ ಬಣ್ಣಕ್ಕೆ ತಿರುಗುತ್ತದೆ.

4. ನಾಡಿ ಬಡಿತ ಇಲ್ಲದಿರುವುದು.

5. ಕಣ್ಣಿನ ಪಾಪೆಗಳು ಅಗಲವಾಗಿರುವುದು ಮತ್ತು ಬೆಳಕು ಚೆಲ್ಲಿದಾಗ ಪಾಪೆಗಳು ಚಿಕ್ಕದಾಗದಿರುವುದು.


ಹೃದಯಾಘಾತದಿಂದ ಹೃದಯ ಸ್ತಂಭನ ಆದಾಗ ಹೃದಯವು ರಕ್ತವನ್ನು ಹೃದಯದಿಂದ ಹೊರತಳ್ಳಲು ಸಾಧ್ಯವಾಗುವುದಿಲ್ಲ ದೇಹದ ಅತಿ ಮುಖ್ಯ ಅಂಗಗಳಾದ ಮೆದುಳು / ಕಿಡ್ನಿ ಮುಂತಾದ ಅಂಗಗಳು ಜೀವಕೋಶಗಳು 3ರಿಂದ 4 ನಿಮಿಷಕ್ಕಿಂತ ಜಾಸ್ತಿ ಆಮ್ಲಜನಕ ಇಲ್ಲದೆ ಜೀವಿಸಲಾರದು ತಕ್ಷಣವೇ ಗುರುತಿಸಿ ಹೃದಯ ತನ್ನ ಚಲನೆಯನ್ನು ಆರಂಭಿಸುವತೆ ಮಾಡಬೇಕು. ಕಾರ್ಡಿಯಾಕ್ ರಿಸ್‌ಸಿಟೀಷನ್ ಎಂಬ ಪ್ರಕ್ರಿಯೆ ಮುಖಾಂತರ ಸ್ತಂಭನಗೊಂಡ ಹೃದಯ ಮಗದೊಮ್ಮೆ ಕೆಲಸ ಮಾಡುವಂತೆ ಪ್ರಚೋದಿಸಲಾಗುತ್ತದೆ. 


ಎದೆಯ ಭಾಗದಲ್ಲಿ ಹೃದಯ ನೀವುವಿಕೆ ಮತ್ತು ಬಾಯಿಯಿಂದ ಉಸಿರು ತುಂಬುವಿಕೆ ಮಾಡಿ ಹೃದಯ ಪುನಃ ತನ್ನ ಕೆಲಸ ಆರಂಭಿಸುವಂತೆ ಪ್ರಚೋದಿಸಲಾಗುತ್ತದೆ. ಶ್ರವಣ ಸ್ತಂಭನವಾದ 3ರಿಂದ 5 ನಿಮಿಷದ ಒಳಗೆ ಈ ಪ್ರಕ್ರಿಯೆ ಮಾಡತಕ್ಕದ್ದು. ಇದಕ್ಕೆ ಸ್ಪಂಧಿಸದೇ ಇದ್ದಾಗ ಇಲೆಕ್ಟ್ರಿಕ್ ಶಾಕ್ ಅಥವಾ ಡಿಫಿಬ್ರಿಲೇಷನ್ ಎಂಬ ಪ್ರಕ್ರಿಯೆ ಮೂಲಕ ಹೃದಯ ಪುನಃ ಕೆಲಸ ಮಾಡುವಂತೆ ಮಾಡುತ್ತಾರೆ.


ಹೃದಯ ಸ್ಥಂಭನ ಮತ್ತು ಹೃದಯಾಘಾತಕ್ಕೆ ಇರುವ ವ್ಯತ್ಯಾಸಗಳು:


1. ಹೃದಯ ಸ್ತಂಭನ ಎನ್ನುವುದು ಹೃದಯದ ವಿದ್ಯುತ್ ಸಂಚಲನಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುತ್ತದೆ. ಹೃದಯಾಘಾತ ಎನ್ನುವುದು ಹೃದಯದ ರಕ್ತ ಸಂಚಲನಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುತ್ತದೆ. 

   

ಹೃದಯ ಸ್ತಂಭನ ಎನ್ನುವುದು ಹೃದಯದ ಕಾರ್ಯಕ್ಷಮತೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಹೃದಯದಲ್ಲಿ ನಿರಂತರವಾಗಿ ವಿದ್ಯುತ್ ತರಂಗಗಳು ಸೃಷ್ಠಿಯಾಗಿ, ಹೃದಯ ನಿರಂತರವಾಗಿ ಚಲನೆಯಾಗುತ್ತಿರುವಂತೆ ಮಾಡುತ್ತದೆ.  ಯಾವಾಗ ಈ ವಿದ್ಯುತ್ ತರಂಗಗಳ ಉತ್ಪಾದನೆ ಹಾಗೂ ಚಲನೆಯಲ್ಲಿ ವ್ಯತ್ಯಾಸವಾಗುತ್ತದೆ ಆವಾಗ, ಹೃದಯ ಅನಿಯಂತ್ರಿತವಾಗಿ ಬಡಿಯುತ್ತದೆ. ಇದನ್ನೇ ಅರಿಥ್‌ಮಿಯಾ ಅಥವಾ ಅನಿಯಂತ್ರಿತ (ಅಸ್ವಾಭಾವಿಕ) ಹೃದಯ ಬಡಿತ ಎನ್ನಲಾಗುತ್ತದೆ. ಇದರಿಂದ ಹೃದಯದಿಂದ ರಕ್ತ ಹೊರಹೋಗಲು ಸಾಧ್ಯವಾಗುವುದಿಲ್ಲ.  ಆ ಮೂಲಕ ಮೆದುಳು, ಶ್ವಾಸಕೋಶ ಮತ್ತು ಇತರ ಅಂಗಾಂಗಗಳಿಗೆ ರಕ್ತ ಪೂರೈಕೆ ವ್ಯತ್ಯಯವಾಗಿಸುತ್ತದೆ.  


ಹೀಗೆ ಹೃದಯ ಅನಿಯಂತ್ರಿತವಾಗಿ ಬಡಿಯುವಾಗ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾಗಿ, ಆ ವ್ಯಕ್ತಿ ಉಸಿರಾಟಕ್ಕಾಗಿ ಒದ್ದಾಡುತ್ತಿರುತ್ತಾನೆ.  ತಕ್ಷಣವೇ ಚಿಕಿತ್ಸೆ ದೊರೆಯದಿದ್ದಲ್ಲಿ ಆ ವ್ಯಕ್ತಿ ಸಾವಿಗೀಡಾಗುವ ಎಲ್ಲಾ ಸಾಧ್ಯತೆ ಇರುತ್ತದೆ.  ಈ ಹೃದಯ ಸ್ಥಂಭನವನ್ನು ತಕ್ಷಣವೇ ಗುರುತಿಸಿ, ಕೃತಕ ಉಸಿರಾಟ ಮತ್ತು ಹೃದಯ ಒತ್ತುವಿಕೆ  ಮಾಡಿದ್ದಲ್ಲಿ, ಹೃದಯ ಪುನ: ಸ್ಪಂದಿಸುವಂತೆ ಮಾಡಲು ಸಾಧ್ಯವಿದೆ.  ಆದರೆ ಒಂದೆರಡು ನಿಮಿಷಗಳಲ್ಲಿ ಕಾರ್ಯ ಪ್ರವೃತ್ತರಾಗಬೇಕು ಮತ್ತು ತಕ್ಷಣವೇ ಎಮರ್ಜೆಸ್ಸಿ ರೂಮ್‌ಗೆ ಸಂಪರ್ಕಿಸಿ  ಅಥವಾ ಆಟೋಮ್ಯಾಟೆಡ್ ಎಕ್ಸ್ಟರ್ನಲ್ ಡಿ ಪೈಬ್ರಿಲೇಟರ್ ಎಂಬ ಯಂತ್ರದ ಸಹಾಯದಿಂದ ಕರೆಂಟ್ ಪ್ರವಹಿಸುವಂತೆ ಮಾಡಿ ನಿಂತ ಹೃದಯ ಚಲಿಸುವಂತೆ ಮಾಡಲಾಗುತ್ತದೆ.   


2. ಹೃದಯಾಘಾತ ಎನ್ನುವುದು ಹೃದಯದ ರಕ್ತ ಸಂಚಲನದಲ್ಲಿ  ತಡೆ ಉಂಟಾಗುವ ಕಾರಣದಿಂದ  ಆಗುವ ಸಮಸ್ಯೆ ಆಗಿರುತ್ತದೆ. ಹೃದಯದ ರಕ್ತ ಪೂರೈಕೆಯಾಗುವ ರಕ್ತನಾಳ  ಒಡೆದಾಗ ಅಥವಾ ಮುಚ್ಚಿಕೊಂಡಾಗ, ಆ ಭಾಗದ ಹೃದಯ ನಿಷ್ಕ್ರಿಯವಾಗಿ ಕ್ರಮೇಣ ಸತ್ತು ಹೋಗುತ್ತದೆ. ಆದರೆ ಹೃದಯದ ಇತರ ಭಾಗಗಳು ಕೆಲಸ ಮಾಡುತ್ತಿರುತ್ತದೆ. ಇದನ್ನು ಗುರುತಿಸಿ, ರಕ್ತನಾಳವನ್ನು ಸರಿಪಡಿಸಿದಲ್ಲಿ ಹೃದಯ ಮೊದಲಿನಂತಾಗುತ್ತದೆ. ಹೃದಯಾಘಾತ ಉಂಟಾದಾಗ ವಿಪರೀತ ಎದೆನೋವು, ಬೆವರುವಿಕೆ, ಎಡಕೈಯಲ್ಲಿ ನೋವು, ಉಸಿರಾಟದಲ್ಲಿ ತೊಂದರೆ, ವಾಂತಿ, ವಾಕರಿಕೆ ಉಂಟಾಗಬಹುದು. 


ಸಾಮಾನ್ಯವಾಗಿ ಈ ಲಕ್ಷಣಗಳು  ನಿಧಾನವಾಗಿ  ಗೋಚರಿಸಿ  ಗಂಟೆಗಳ ಕಾಲ, ದಿನಗಳ ಕಾಲ ಅಥವಾ ವಾರಗಳ ಕಾಲ  ಕಾಡುತ್ತದೆ. ಆದರೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಹೃದಯ ಸ್ತಂಭನವಾದಾಗ ಮಾತ್ರ ಹೃದಯ ಕೆಲಸ ನಿಲ್ಲಿಸುತ್ತದೆ. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ, ಹೃದಯಾಘಾತ, ಹೃದಯ ಸ್ತಂಭನದಲ್ಲಿ  ಪರ್ಯಾಯಾವಸಾನವಾಗುತ್ತದೆ. ನೆನಪಿರಲಿ ಎಲ್ಲಾ ಹೃದಯಾಘಾತಗಳು ಹೃದಯ ಸ್ತಂಭನದಲ್ಲಿ ಮುಕ್ತಾಯವಾಗುವುದಿಲ್ಲ.  ಆದರೆ ಎಲ್ಲಾ ಹೃದಯ ಸ್ತಂಭನಗಳಿಗೂ ಹೃದಯಾಘಾತವೇ ಮುಖ್ಯ ಕಾರಣವಾಗಿರುತ್ತದೆ. ಈ ಕಾರಣದಿಂದ ಎದೆನೋವು, ಬೆವರುವಿಕೆ ಮತ್ತು ಉಸಿರಾಟದ ಸಮಸ್ಯೆ ಆದ ತಕ್ಷಣವೇ ವೈದ್ಯರನ್ನು ಕಾಣತಕ್ಕದ್ದು.


ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ?


ಹೆಚ್ಚಿನ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ತಡೆಗಟ್ಟಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.


1. ದೈಹಿಕ ವ್ಯಾಯಾಮ : ದೈಹಿಕ ವ್ಯಾಯಾಮ ಅಥವಾ ಕಸರತ್ತು ಹೃದಯದ ಆರೋಗ್ಯಕ್ಕೆ ಅತೀ ಅವಶ್ಯಕ ಕನಿಷ್ಠ ಪಕ್ಷ ದಿನಕ್ಕೆ 30 ನಿಮಿಷಗಳ ಬಿರುಸು ನಡಿಗೆ ಮಾಡಲೇ ಬೇಕು. ಹೀಗೆ ಮಾಡಿದಲ್ಲಿ ಹೃದಯಾಘಾತವನ್ನು ಶೇಕಡಾ 60ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿವೆ. ಈಗಿನ ಒತ್ತಡದ ಧಾವಂತದ ಬದುಕಿನಲ್ಲಿ ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಅತಿಯಾದ ಕೆಲಸದ ಒತ್ತಡ, ತೀವ್ರ ತರವಾದ ಪೈಪೋಟಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದ ರಸದೂತಗಳ ಸ್ರವಿಕೆ ಏರುಪೇರಾಗಿ ಹೃದಯದ ಆರೋಗ್ಯದ ಮೇಲೆ ವ್ಯಕ್ತಿರಕ್ತ ಪರಿಣಾಮ ಬೀರುತ್ತದೆ. ಅತಿಯಾದ ಮಾನಸಿಕ ಒತ್ತಡ ಕೂಡಾ ಹೃದಯಘಾತಕ್ಕೆ ಪರೋಕ್ಷವಾಗಿ ಕಾರಣವಾಗಬಲ್ಲದು.  


2. ಅನಾರೋಗ್ಯಕರವಾದ ಆಹಾರ ಪದ್ಧತಿ :  ನಮ್ಮ ಹಿರಿಯರು ಯಾವಾಗಲೂ ಹೇಳುವ ಮಾತು “ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬುದು ಅಕ್ಷರಶಃ ಸತ್ಯ. ನಮ್ಮ ಆಹಾರಕ್ಕೂ ಹೃದಯಕ್ಕೂ ನೇರ ಸಂಬಂಧವಿದೆ. ಅತಿಯಾದ ಕೊಬ್ಬಿನಂಶ ಇರುವ ಅತಿಯಾದ ಸೋಡಿಯಂ ಇರುವ ಕರಿದ ತಿಂಡಿಗಳು ಮತ್ತು ಸಿದ್ಧ ಆಹಾರವನ್ನು ತೆಗೆದುಕೊಳ್ಳಬಾರದು. ಹಸಿ ತರಕಾರಿಗಳು ಮತ್ತು ಹಣ್ಣು ಹಂಪಲುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಸಿದ್ಧ ಆಹಾರಗಳು ಮತ್ತು ಪರಿಷ್ಕ್ಕರಿಸಿದ ಆಹಾರಗಳಿಗೆ ಹೆಚ್ಚಾಗಿ ಹೆಚ್ಚು ಪ್ರಕ್ಟೋಸ್ ಇರುವ ಸಿಹಿಕಾರಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂತಹ ಆಹಾರ ಪದಾರ್ಥಗಳು ರಕ್ತದಲ್ಲಿನ ಟೈಗ್ಲಿಸರೈಡ್ ಎಂಬ ಕೊಬ್ಬಿನ ಅಂಶವನ್ನು ಹೆಚ್ಚು ಮಾಡಿ ಹೃದಯಾಘಾತದ ಸಂಭವವನ್ನು ಹೆಚ್ಚು ಮಾಡಬಹುದು. ಆಮ್ಲಯುಕ್ತ ಪೇಯಗಳು ಮತ್ತು ರಾಸಾಯನಿಕ ಮಿಶ್ರಿತ ಸಿದ್ಧ ಆಹಾರಗಳೂ ಕೂಡಾ ಹೃದಯದ ಆರೋಗ್ಯಕ್ಕೆ ಮಾರಕವಾಗಬಲ್ಲದು.  


3. ಜೀವನ ಶೈಲಿಯ ಬದಲಾವಣೆ : ನಾವು ಕೆಲಸ ಮಾಡುವ  ಸ್ಥಳಗಳಲ್ಲಿ ಮಾನಸಿಕ ಒತ್ತಡದ ವಾತಾವರಣವಿದ್ದಲ್ಲಿ ಹೃದಯದ ಮೇಲೆ ದುಷ್ಪರಿಣಾಮ ಬೀರಬಹುದು. ಕೆಲಸದ ಒತ್ತಡದಿಂದ ನಿದ್ದೆ ಕಡಿಮೆಯಾದಲ್ಲಿ ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಮತ್ತು ಇತರ ಲವಣಗಳು ಶೇಖರಣೆಗೊಂಡು ಹೃದಯಾಘಾತವಾಗುವ ಸಂಭವ ಜಾಸ್ತಿ ಇರುತ್ತದೆ. ಅದೇ ರೀತಿ ಮಾನಸಿಕ ಒತ್ತಡದಿಂದ ರಸದೂತಗಳ ಏರುಪೇರು ಉಂಟಾಗಿ ಹೃದಯಕ್ಕೆ ಮಾರಕವಾಗಬಹುದು. ಅಮೇರಿಕಾದ ಹೃದಯ ಸಂಘದ ಅಂಕಿ ಅಂಶಗಳ ಪ್ರಕಾರ ದಿನದಲ್ಲಿ 2 ಗಂಟೆಗಳಿಗಿಂತಲೂ ಜಾಸ್ತಿ ಹೊತ್ತು ಟಿವಿ ನೋಡುಗರಲ್ಲಿ 125 ಶೇಕಡಾ ಹೆಚ್ಚು ಹೃದಯಾಘಾತವಾಗುವ ಸಂಭವವಿರುತ್ತದೆ. ಅತಿಯಾದ ಮಧ್ಯಪಾನ, ಧೂಮಪಾನ ಖಂಡಿತವಾಗಿಯೂ ಹೃದಯ ರೋಗಗಳಿಗೆ ನೇರ ರಹದಾರಿ ನೀಡಬಹುದು. ಧೂಮಪಾನ ಮಧ್ಯಪಾನ ಬರೀ ಹೃದಯಕ್ಕೆ ಮಾತ್ರವಲ್ಲ, ದೇಹದ ಎಲ್ಲಾ ಅಂಗಾಂಗಗಳಿಗೆ ಮತ್ತು ಸಮಾಜದ ಒಳಿತಿಗೆ ಯಾವತ್ತೂ ಪೂರಕವಲ್ಲ.  


4. ಬೊಜ್ಜು, ಅನುವಂಶಿಯತೆ ಮತ್ತಿತರ ಕಾರಣಗಳು : ಅತಿಯಾದ ಬೊಜ್ಜು ಯಾವತ್ತೂ ಹೃದಯದ ಬದ್ಧವೈರಿ. ಇದು ಯಾವ ಕಾಲಕ್ಕೂ ಹೃದಯಾಘಾತಕ್ಕೆ ಮುನ್ನುಡಿ ಬರೆಯಬಹುದು. ಈಗಿನ ಬದಲಾದ ಆಹಾರ ಪದ್ಧತಿಯಿಂದಾಗಿ, ಚಿಕ್ಕ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗಿ ಕೇವಲ ಮೂವತ್ತರ ಆಸು ಪಾಸಿನಲ್ಲಿಯೇ ಹೃದಯಾಘಾತ ವಾಗುವ ಆತಂಕಕಾರಿ ಬೆಳವಣಿಗೆ ಕಂಡು ಬರುತ್ತದೆ. ಮೊದಲೆಲ್ಲಾ 50, 60ರ ಆಸುಪಾಸಿನಲ್ಲಿ ಆಗುತ್ತಿದ್ದ ಹೃದಯಾಘಾತ ಈಗೀಗ ಮೂವತ್ತರ ಯುವಕರಲ್ಲಿ ಬರುವುದು ನಿಜಕ್ಕೂ ಬಹಳ ಆಘಾತಕಾರಿ ವಿಚಾರ ಅದೇ ರೀತಿ ಅನುವಂಶೀಯತೆ ಕೂಡ ಹೃದ್ರೋಗಕ್ಕೆ ಕಾರಣವಾಗಬಹುದು. ವಂಶವಾಹಿನಿಗಳ ಮುಖಾಂತರ ಬರುವ ಹೃದಯಘಾತಕ್ಕೆ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಹೆಚ್ಚಿನ ಮಾರ್ಪಾಡು ಮಾಡಿ ಹೃದಯಕ್ಕೆ ಹೆಚ್ಚು ತೊಂದರೆ ಆಗದಂತೆ ನಿಗಾ ವಹಿಸಬೇಕು. ಅದೇ ರೀತಿ ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ರೋಗಿಗಳು ಹೆಚ್ಚಿನ ಕೊಲೆಸ್ಟ್ರಾಲ್  ಹೊಂದಿರುವವರು ಮತ್ತು ದೇಹದ ತೂಕ ಜಾಸ್ತಿ ಇರುವವರು, ಸಾಕಷ್ಟು ಮುಂಜಾಗರೂಕತೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮಾರ್ಪಾಡು ಮಾಡಿದಲ್ಲಿ ಹೃದ್ರೋಗ ಸಂಬಂಧಿ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.  


5. ನಿಯಮಿತವಾಗಿ ಕುಟುಂಬ ವೈದ್ಯರ ಭೇಟಿ : ಹೃದಯ ರೋಗಕ್ಕೆ ಪೂರಕವಾದ ವಾತಾವರಣವುಳ್ಳ ವ್ಯಕ್ತಿಗಳು ಅಂದರೆ ಹೆಚ್ಚಿನ ಬೊಜ್ಜು ಅಧಿಕ ದೇಹದ ಭಾರ, ಅಧಿಕ ರಕ್ತದೊತ್ತಡ ಮಧುಮೇಹ ರೋಗಿಗಳು ಮತ್ತು ಅನುವಂಶೀಯವಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಸಾಧ್ಯತೆ ಇರುವವರು  ಜೀವನ ಶೈಲಿ ಮತ್ತು ಆಹಾರದ ಮಾರ್ಪಾಡುವಿನ ಜೊತೆಗೆ ನಿಯಮಿತವಾಗಿ ವೈದ್ಯರಿಂದ ಪರೀಕ್ಷೆಗೊಳಗಾಗಿರಬೇಕು ಮತ್ತು ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ಪರಿಹಾರ ಮತ್ತು ಮಾರ್ಗದರ್ಶನ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಿ ಹೃದಯಾಘಾತವನ್ನು ತಡೆಗಟ್ಟಬಹುದು. ನೆನಪಿರಲಿ ಶೇಕಡಾ ೮೦ರಷ್ಟು ಹೃದಯಾಘಾತಗಳನ್ನು ಖಂಡಿತವಾಗಿಯೂ ತಡೆಗಟ್ಟಬಹುದು ಎಂದು ಸಂಶೋಧನೆಗಳು ಸಾರಿ ಹೇಳಿದೆ. 

ವಸಡು ರೋಗ ಮತ್ತು ಹೃದಯ ಸಂಬಂಧಿ ರೋಗಗಳು

ವಸಡಿನ ಆರೋಗ್ಯ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಬಹಳ ಹತ್ತಿರದ ಸಂಬಂಧವಿದೆ. ಬಾಯಿಯ ಆರೋಗ್ಯ ಮತ್ತು ಹೃದಯದ ಆರೋಗ್ಯಕ್ಕೆ ನೇರವಾದ ಸಂಬಂಧವಿರುವುದಂತೂ ಸತ್ಯ. ಶೇಕಡಾ 30ರಿಂದ 35ರಷ್ಟು ವಸಡು ಸಂಬಂಧ ರೋಗಕ್ಕೆ ಒಳಗಾದವರಿಗೆ, ಹೃದಯಘಾತವಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಕಾರಣದಿಂದಲೇ ನಾವೆಲ್ಲರೂ ವಸಡಿನ ಆರೋಗ್ಯವನ್ನು ಹತೋಟಿಯಲ್ಲಿ ಇಟ್ಟು ಕೊಳ್ಳುವುದು ಅತೀ ಅವಶ್ಯಕ ಮತ್ತು ಈಗಿನ ನಮ್ಮ ನಾಗರಿಕ ಜೀವನ ಶೈಲಿಯಲ್ಲಿ ಅನಿವಾರ್ಯವೂ ಕೂಡ. ಇದರ ಜೊತೆಗೆ ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಇರುವ ಅಥವಾ ಅಧಿಕ ರಕ್ತದ ಒತ್ತಡ ಇರುವ ರೋಗಿಗಳಲ್ಲಿ ವ್ಯಾಯಾಮ ಕೊರತೆ, ವಿಪರೀತ ಒತ್ತಡದ ಜೀವನ ಶೈಲಿ, ಬೊಜ್ಜು, ಧೂಮಪಾನ ಇತ್ಯಾದಿಗಳು ಸೇರಿಕೊಂಡು ವಸಡಿನ ರೋಗಗಳಿಗೆ ನಾಂದಿ ಹಾಡುತ್ತದೆ.


ಸಾಮಾನ್ಯವಾಗಿ ವಸಡಿನ ರೋಗವನ್ನು ಹೊಂದಿರುವ ರೋಗಿಗಳಲ್ಲಿ ಹಲ್ಲಿನ ಸುತ್ತ ಇರುವ ದಂತಪಾಚಿ ಮತ್ತು ದಂತಕಿಟ್ಟಗಳಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಗಳು ಸೇರಿಕೊಂಡಿರುತ್ತವೆ. ಈ ಬ್ಯಾಕ್ಟೀರಿಯಗಳ ಸಂಖ್ಯೆ ವೃದ್ದಿಸಿದಂತೆ, ವ್ಯಕ್ತಿಯ ರಕ್ತನಾಳಗಳು ಪೆಡಸುಗೊಂಡು, ರಕ್ತನಾಳಗಳ ಒಳಗೆ ಪಾಚಿ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ರೀತಿ ರಕ್ತನಾಳಗಳ ಒಳಗೆ ಪಾಚಿಕಟ್ಟಿಕೊಳ್ಳುವುದಕ್ಕೆ Atheroslerosis or Artierioslerosis ಎಂದು ಹೇಳಲಾಗುತ್ತದೆ. ಈ ರೀತಿ ರಕ್ತನಾಳಗಳಲ್ಲಿ ಪಾಚಿಕಟ್ಟಿಕೊಂಡಲ್ಲಿ, ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.


ಅದೇ ರೀತಿ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ಕೊಡಲಾಗುವ ಕೆಲವೊಂದು ಔಷಧಿಗಳು ಕೂಡಾ ವಸಡಿನ ಅನಿಯಂತ್ರಿತ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ಈ ಅನಿಯಂತ್ರಣ ಬೆಳವಣಿಗೆಯಿಂದ, ವಸಡಿನ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಕಷ್ಟವಾಗಬಹುದು ಮತ್ತು ವಸಡು ಸಂಬಂಧಿ ರೋಗಗಳಿಗೆ ಕಾರಣೀಭೂತವಾಗಬಹುದು. ಉದಾ : 'Nifidifine' ಎಂಬ ಔಷಧಿ ಸಾಮಾನ್ಯವಾಗಿ ವಸಡಿನ ಅನಿಯಂತ್ರಿತ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಹಂತದಲ್ಲಿ ವೈದ್ಯರನ್ನು ಕಂಡು ಬೇರೆ ಸೂಕ್ತ ಔಷಧಿಯನ್ನು ತೆಗೆದು ಕೊಂಡಲ್ಲಿ, ಅನಿಯಂತ್ರಿತ ವಸಡು ಬೆಳವಣಿಗೆಯನ್ನು ತಡೆಗಟ್ಟಿ ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.


ಹೃದಯಾಘಾತ ತಪ್ಪಿಸಲು ನೀವು ಏನು ಮಾಡಬೇಕು?

1. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತ ವೈದ್ಯರ ಬಳಿ ದಂತ ತಪಾಸಣೆ ಮಾಡಿಸಿಕೊಳ್ಳಿ.

2. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತ ವೈದ್ಯರ ಬಳಿ ಹಲ್ಲುಗಳನ್ನು ಶುಚಿಗೊಳಿಸಿಕೊಳ್ಳಬೇಕು. ಹಲ್ಲುಗಳ ಸುತ್ತ ಬೆಳೆಯುವ ದಂತ ಕಿಟ್ಟದಲ್ಲಿರುವ ಬ್ಯಾಕ್ಟೀರಿಯಾಗಳು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

3. ನಿಮ್ಮ ಹಲ್ಲುಗಳು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಲುಗಾಡಲು ಆರಂಭವಾದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ಹಲ್ಲುಗಳ ಸುತ್ತ ಎಲುಬು ಕರಗಿ ಹಲ್ಲು ಅಲುಗಾಡುತ್ತಿದ್ದಲ್ಲಿ ವಸಡು ಸಂಬAಧಿ ರೋಗ ಅಥವಾ ಮಧುಮೇಹ ರೋಗ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ವ್ಯಕ್ತಿಗಳಿಗೆ ಹೃದಯಾಘಾತವಾಗುವ ಸಾಧ್ಯತೆ ಇತರರಿಗಿಂತ ಎರಡು ಪಟ್ಟು ಜಾಸ್ತಿ ಇರುತ್ತದೆ.

4. ನಿಮ್ಮ ವಸಡುಗಳಲ್ಲಿ ರಕ್ತ ಒಸರುತ್ತಿದ್ದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ವಸಡುಗಳಲ್ಲಿ ರಕ್ತ ಒಸರುತ್ತಿದ್ದಲ್ಲಿ ಅದು ವಸಡು ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಮುಂದೆ ಉಂಟಾಗುವ ವಸಡು ರೋಗ ಮತ್ತು ಹೃದಯಾಘಾತದಂತಹ ಸಮಸ್ಯೆಗಳನ್ನು ಆರಂಭದಲ್ಲಿಯೇ ತಪ್ಪಿಸಬಹುದಾಗಿದೆ.

5. ನಿಮ್ಮ ಬಾಯಿಯಲ್ಲಿ ದುರ್ವಾಸನೆ ಬರುತ್ತಿದ್ದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಬೇಕು. ಬಾಯಿ ದುರ್ವಾಸನೆ ಎನ್ನುವುದು ವಸಡು ರೋಗದ ಪ್ರಮುಖ ಲಕ್ಷಣವಾಗಿರುತ್ತದೆ. ಸಕಾಲದಲ್ಲಿ ಚಿಕಿತ್ಸೆ ಪಡೆದಲ್ಲಿ ಮುಂಬರುವ ಅನಾಹುತವನ್ನು ತಪ್ಪಿಸಬಹುದಾಗಿದೆ.


ಕೊನೆ ಮಾತು

ಹೃದಯಾಘಾತ ಎನ್ನುವುದು ಬಹಳ ಶಕ್ತಿಶಾಲಿಯಾದ ರೋಗ ಮತ್ತು ಇದಕ್ಕೆ ಕೊಲ್ಲುವ ಶಕ್ತಿ ಬಹಳ ಅಧಿಕವಾಗಿರುತ್ತದೆ. ಒಂದು ವೇಳೆ ಬದುಕಿ ಉಳಿದರೂ ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ದುಬಾರಿ ಶಸ್ತ್ರ ಚಿಕಿತ್ಸೆ ಮಾಡಿದರೂ, ಮಾನಸಿಕವಾಗಿ ಉಡುಗಿ ಹೋಗಿ ಮೊದಲಿನಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ಕುಟುಂಬದ ಆರ್ಥಿಕತೆಗೆ ಕೊಡಲಿ ಏಟು ನೀಡಿ, ಮಾನಸಿಕವಾಗಿ ಕುಗ್ಗಿಸಿ, ದುಡಿವ ವಯಸ್ಸಿನ ಕುಟುಂಬದ ಆಧಾರ ಸ್ತಂಭವಾದ ಮನೆಯ ಯಜಮಾನ ಹೃದಯಾಘಾತದಿಂದ ಮೃತಪಟ್ಟರೆ, ಇಡೀ ಕುಟುಂಬವೇ ತಲ್ಲಣಿಸಿ ಹೋಗುತ್ತಿದೆ.  


ಈ ಕಾರಣದಿಂದಲೇ ಸಕಾಲದಲ್ಲಿ ನಾವೆಲ್ಲಾ ಎಚ್ಚೆತ್ತುಕೊಂಡು ಜಾಗೃತರಾಗಿ ಸೂಕ್ತ ಜೀವನಶೈಲಿ, ಆರೋಗ್ಯಕರ ಆಹಾರ ಪದ್ಧತಿ ಅಗತ್ಯ ವ್ಯಾಯಾಮ ಮುಂತಾದವುಗಳಿಂದ ಮಾನಸಿಕ ನೆಮ್ಮದಿ ಪಡೆದು, ತಂಬಾಕು ಹಾಗೂ ಮಧ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿದ್ದಲ್ಲಿ, ಹೃದಯಾಘಾತ ಎಂಬ ಪೆಡಂಬೂತವನ್ನು ಹೊಸಕಿ ಹಾಕುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಆರೋಗ್ಯ ಪೂರ್ಣವಾದ ದೈಹಿಕ ಮತ್ತು ಮಾನಸಿಕ ಜೀವನ ಶೈಲಿಯೇ ಹೃದಯಾಘಾತ ಎಂಬ ರೋಗವನ್ನು ಎದುರಿಸಿ ಗೆಲ್ಲಬಲ್ಲ ಬಹುದೊಡ್ಡ ಬ್ರಹ್ಮಾಸ್ತ್ರ ಎಂದರೂ ತಪ್ಪಲ್ಲ.


 ನೆನಪಿರಲಿ, ನೀವು ಆಹಾರ ಸೇವಿಸುವಾಗ ಔಷಧಿಯಂತೆ ಸೇವಿಸಿ. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರವಾಗಿ ಸೇವಿಸಬೇಕಾದ ಅನಿವಾರ್ಯತೆ ಬರಲೂಬಹುದು. ಜೋಕೆ!! 


ಡಾ|| ಮುರಲೀ ಮೋಹನ್ ಚೂಂತಾರು 

      ಸುರಕ್ಷಾದಂತ ಚಿಕಿತ್ಸಾಲಯ

      ಹೊಸಂಗಡಿ – 671 323

      ಮೊ : 9845135787

web counter

0 Comments

Post a Comment

Post a Comment (0)

Previous Post Next Post