ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥರ ದಿವ್ಯ ಉಪಸ್ಥಿಯಲ್ಲಿ ವಿದ್ವಾಂಸರಿಗೆ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ

Upayuktha
0


ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ಬೆಂಗಳೂರು ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದಲ್ಲಿ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವ ಮಧ್ವಮತ ವೆಲ್‌ಫೇರ್ ಅಸೋಸಿಯೇಷನ್ ಆಯೋಜಿಸಿತ್ತು.


ವಿಜಯದಾಸರ ಆರಾಧನೆಯಂದು ದಿವ್ಯ ಸಾನ್ನಿಧ್ಯ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥರು ಮಾತನಾಡುತ್ತ ಶ್ರೀಮಧ್ವಾಚಾರ್ಯರು ನಿಜವಾದ ಅರ್ಥದಲ್ಲಿ ವಿಶ್ವಗುರುಗಳು. ಹರಿದಾಸ ಸಾಹಿತ್ಯ ಇದು ಆಚಾರ್ಯ ಮಧ್ವರು ಗೈದ ತತ್ವಜ್ಞಾನದ ವಿಕೇಂದ್ರೀಕರಣ. ಸಮಗ್ರ ಮಾನವತೆಯನ್ನೇ ವೇದಶಾಸ್ತ್ರ ಇತಿಹಾಸ ಪುರಾಣಗಳ ಭದ್ರ ಬುನಾದಿಯ ಮೇಲೆ ನಿಲ್ಲಿಸುವ ಕಾರ್ಯವೇ ಹರಿದಾಸ ಸಾಹಿತ್ಯ. ಸಮಾಜದಲ್ಲಿ ಪರಂಪರಾ ಪ್ರಾಪ್ತವಾಗಿ ಬಂದ ಪೀಠಾಧಿಪತಿಗಳನ್ನೇ ಈ ಹರಿದಾಸ ಸಾಹಿತ್ಯ ನಿರ್ಮಿತಿ ಹಾಗೂ ಪ್ರಸಾರದಲ್ಲಿ ತೊಡಗಿಸಿದರು. ಅಂತೆಯೇ ಮಧ್ವರ ಕ್ರಾಂತಿ ಯಶಸ್ವಿಯಾಯಿತು.


ಎಲ್ಲ ಧಾರ್ಮಿಕರನ್ನು, ಪೀಠಾಧಿಪತಿಗಳನ್ನು ಪಂಡಿತ ಪಾಮರರನ್ನು ಎಲ್ಲರನ್ನೂ ಒಂದು ವಿಚಾರಧಾರೆಯ ಅಡಿಯಲ್ಲಿ ಒಂದುಗೂಡಿಸಿದರು. ಎಲ್ಲರೂ ಒಂದು ವಾಙ್ಮಯದ ಆಧಾರದ ಮೇಲೆ, ಅದರ ಆರಾಧಕರಾಗಿ ಒಂದುಗೂಡಬೇಕಾದರೆ ಎಲ್ಲರ ಬುದ್ಧಿಗಳನ್ನು ಓಲೈಸುವ ಭಾವನೆಗಳಿಗೆ ಮುದ ನೀಡುವ ವಿಚಾರಗಳನ್ನು ಪ್ರಚೋದಿಸುವ ಬದುಕನ್ನು ಭವ್ಯವಾಗಿಸುವ ತಾತ್ವಿಕ ಹಾಗೂ ಎಲ್ಲ ವೈಚಾರಿಕ ವಿಷಯಗಳನ್ನು ಇಲ್ಲಿ ಬಿತ್ತಿದರು. ಪ್ರತಿಯೊಬ್ಬನ ಕ್ರಿಯೆಗಳನ್ನು ಆತ್ಮವಿಮರ್ಶೆಗೆ ತೊಡಗಿಸಿದರು. ಸಮಾಜಕ್ಕೆ ಅಭಿಮುಖವಾಗಿ ಸಮಾಜಕ್ಕೆ ಸಂಬಂಧಿಸಿದ ವಿಷಯಗಳು ಇದ್ದುದರಿಂದ ಆ ಅಭಿಮಾನ, ಅರಿವುಗಳು ಪಾಮರ ಸಮಾಜವನ್ನು ಒಂದುಗೂಡಿಸಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.


ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಾದ ಪ್ರಾಂಶುಪಾಲ ಡಾ.ಎಸ್.ಆರ್.ರಾಘವೇಂದ್ರ, ಕನ್ನಡ ಪ್ರಾಧ್ಯಾಪಕಿ ಡಾ.ವಾಣಿಶ್ರೀ ಬಿ.ಎಂ, ದಾಸ ಸಾಹಿತ್ಯ ಪ್ರಚಾರಕರಾದ ಗೀತಾಬಾಯಿ, ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದ ಡಾ.ಪರಶುರಾಮ ಬೆಟಗೇರಿ ಹಾಗೂ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ಪ್ರಥಮ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು ಮತ್ತು ಇದೇ ಸಂದರ್ಭದಲ್ಲಿ ಯುವ ವಿದ್ವಾಂಸರಾದ ಭೀಮಸೇನ ದೇಸಾಯಿ, ರಾಘವೇಂದ್ರ ಆಚಾರ್ಯ, ಸಂಜೀವ ಆಚಾರ್ಯ, ಪ್ರಭಂಜನ ಅಚಾರ್ಯ, ಮಧ್ವೇಶ ಮೌದ್ಗಲ್ಯರವರನ್ನು ಸನ್ಮಾನಿಸಲಾಯಿತು. ಕರೋನ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಅಮೋಘ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.


ವಿಎಂಡ್ಲ್ಯೂಎ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ವೆಂಕೋಬ ರಾವ್ ಪ್ರಾಸ್ತಾವಿಕ ಮಾತನಾಡುತ್ತ ಕನ್ನಡ ನಾಡಿನ ಹೆಮ್ಮೆಯ ಆಚಾರ್ಯರಾದ ವಿಶ್ವಗುರು ಮಧ್ವಾಚಾರ್ಯರ ಸಂದೇಶದ ಪ್ರಸಾರ ತನ್ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕೈಂಕರ‍್ಯ ಮಾಡುತ್ತಿರುವ ವಿಎಂಡ್ಲ್ಯೂಎ ವತಿಯಿಂದ ಈ ಸಮಾರಂಭ ನಡೆದಿದ್ದು ಮುಂದಿನ ದಿನಗಳಲ್ಲಿ ಆಚಾರ್ಯರ ಪೂರ್ವಾವತಾರವಾದ ಭೀಮಸೇನ ಮತ್ತು ಹನುಮಂತನ ಜಯಂತಿಯಲ್ಲಿ ಅಡುಗೆಯವರು ಮತ್ತು ಸಹಾಯಕ ಅರ್ಚಕರನ್ನು ಗೌರವಿಸುವುದಾಗಿ ತಿಳಿಸಿದರು.ಪದಾಧಿಕಾರಿಗಳಾದ ಎ.ಪಿ.ಕೃಷ್ಣ, ಕೆ.ಆರ್.ಜಯತೀರ್ಥ, ಅನಿರುದ್ಧ್ ಮೊದಲಾದವರು ಉಪಸ್ಥಿತರಿದ್ದರು.


ವಿವರಗಳಿಗೆ : 91138 53325


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top