ಉಜಿರೆ: ಸಂಸ್ಕೃತ ಸಾಹಿತ್ಯದಲ್ಲಿ ಜ್ಞಾನಪೀಠ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ. ಸತ್ಯವ್ರತ ಶಾಸ್ತ್ರಿಯವರು ಸಾಹಿತ್ಯದಲ್ಲಿ ಧ್ರುವತಾರೆಯಾಗಿದ್ದವರು. ಅವರ ಅಗಲುವಿಕೆ ಸಾಹಿತ್ಯ ಲೋಕಕ್ಕೆ ನಷ್ಟ. ಅಂತಹವರ ವ್ಯಕ್ತಿತ್ವ ನೋಡಿಕೊಂಡು ಹಾಗೂ ಅರಿತುಕೊಂಡು ಎಲ್ಲಾ ವಿದ್ಯಾರ್ಥಿಗಳು ಸಾಧನೆಯತ್ತ ಮನಃ ಮಾಡಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ. ಪೂ ಕಾಲೇಜಿನ ಪ್ರಾಚಾರ್ಯ ಪ್ರೊ. ದಿನೇಶ ಚೌಟ ಹೇಳಿದರು.
ಇವರು ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಅಂತರಾಧ್ಯಯನ ವೃತ್ತಮ್ ಇವುಗಳ ಸಹಯೋಗದಲ್ಲಿ ದಿವಂಗತರಾದ ಸಂಸ್ಕೃತ ಸಾಹಿತ್ಯದಲ್ಲಿ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರೊ.ಸತ್ಯವ್ರತ ಶಾಸ್ತ್ರಿಗಳಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಅವರು ಪ್ರಾಸ್ತಾವಿಕವಾಗಿ ಶಾಸ್ತ್ರಿಗಳ ಸಾಹಿತ್ಯ ಸಾಧನೆಗಳನ್ನು ತಿಳಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷ ಕಾರ್ತಿಕ್ ಕಾರಂತ್ ಅವರು ಶಾಸ್ತ್ರಿಗಳ ಜೀವನದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಮೌನ ಪ್ರಾರ್ಥನೆ ಸಲ್ಲಿಸಿದರು. ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಂಯೋಜಕಿ ಧನ್ಯಾ ಹೆಬ್ಬಾರ ನಿರೂಪಿಸಿ ವಂದಿಸಿದರು.