|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಮಾಲೆ (ಜಾಂಡೀಸ್) ರೋಗ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾಮಾಲೆ (ಜಾಂಡೀಸ್) ರೋಗ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

 


ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ ಎರಡು ಪದಗಳಿಂದ ಕೂಡಿರುತ್ತದೆ. ಕಾಮ ಎಂದರೆ ಆಹಾರದ ಬಯಕೆ, ಲಾ ಎಂದರೆ ಇಲ್ಲದಿರುವುದು ಅಥವಾ ಬೇಡ ಎನ್ನುವ ಭಾವನೆ. ರೋಗದಿಂದ ಬಳಲುತ್ತಿರುವ ರೋಗಿಗೆ ಆಹಾರದ ಬಯಕೆ ಇಲ್ಲದಿರುವಿಕೆ ಎಂಬ ಅರ್ಥವಾಗಿರುತ್ತದೆ. ಅದನ್ನೇ ಕಾಮಾಲೆ ಅಥವಾ ಕಾಮಾಲಾ ಎನ್ನುತ್ತಾರೆ. ಆಡು ಭಾಷೆಯಲ್ಲಿ ಇದನ್ನು ಜಾಂಡೀಸ್ ಎನ್ನುತ್ತಾರೆ.


ವೈಜ್ಞಾನಿಕವಾಗಿ ಹೇಳುವುದಾದರೆ ಕಾಮಾಲೆ ಎಂಬುದು ರಕ್ತದಲ್ಲಿನ ಬಿಲಿರುಬಿನ್ ಎಂಬ ಪಿತ್ತವರ್ಣವು ರಕ್ತದಲ್ಲಿ ಸಾಮಾನ್ಯ ಮಟ್ಟಕ್ಕಿಂತ ಜಾಸ್ತಿ ಇರುವ ಸ್ಥಿತಿಯನ್ನು ಸೂಚಿಸುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಈ ಬಿಲಿರುಬಿನ್ ಪಿತ್ತವರ್ಣವು 100 ಮಿಲಿ ಲೀಟರ್ ರಕ್ತದಲ್ಲಿ 0.2 ಮಿಲಿಗ್ರಾಂ ನಿಂದ 0.8 ಮಿಲಿಗ್ರಾಂನವರೆಗೆ ಇರುತ್ತದೆ. ಇದರ ಮಟ್ಟ 2 ಮಿಲಿಗ್ರಾಂಗಿಂತ ಜಾಸ್ತಿ ಆದಲ್ಲಿ ಆ ವ್ಯಕ್ತಿಯ ಮೂತ್ರ, ಕಣ್ಣು, ಚರ್ಮ, ಉಗುರು ಮುಂತಾದವುಗಳು ಹಳದಿ ಬಣ್ಣವನ್ನು ತಾಳುತ್ತದೆ. ಇದನ್ನೇ ವೈದ್ಯರು ಕಾಮಾಲೆ ರೋಗ ಅಥವಾ ಜಾಂಡೀಸ್ ಎನ್ನುತ್ತಾರೆ. ರಕ್ತದಲ್ಲಿ ಈ ಬಿಲಿರುಬಿನ್ ಮಟ್ಟ ಜಾಸ್ತಿಯಾದಂತೆ, ಆ ವ್ಯಕ್ತಿಗೆ ಹಸಿವಿಲ್ಲದಿರುವುದು, ಬಾಯಿ ರುಚಿ ಇಲ್ಲದಿರುವುದು, ಸುಸ್ತು, ಆಯಾಸ, ನಿಶ್ಯಕ್ತಿ ಮುಂತಾದವುಗಳು ಕಾಣಿಸುತ್ತದೆ. ದೇಹದ ಒಳಭಾಗದ ಅಂಗಗಳು ಕೂಡ ತೆಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಸಾಮಾನ್ಯವಾಗಿ ದೇಹದಲ್ಲಿನ ಜೈವಿಕ ಕ್ರಿಯೆಗಳಲ್ಲಿ ಉತ್ಪತ್ತಿಯಾದ ಈ ಬಿಲಿರುಬಿನ್ ಪಿತ್ತ ವರ್ಣವನ್ನು ಲಿವರ್ ಅಥವಾ ಯಕೃತ್ ದೇಹದಿಂದ ಹೊರಹಾಕುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಲಿವರ್ ವೈರಾಣು ಸೋಂಕಿನಿಂದ ಬಳಲುತ್ತಿದ್ದಲ್ಲಿ, ಈ ಪ್ರಕ್ರಿಯೆಗೆ ಹಿನ್ನಡೆ ಉಂಟಾಗುತ್ತದೆ ಮತ್ತು ಜಾಂಡೀಸ್ ಅಥವಾ ಕಾಮಾಲೆಯಲ್ಲಿ ಪರ್ಯಾಯವಸಾನವಾಗುತ್ತದೆ. ಜಾಂಡೀಸ್ ಎಂಬ ಕಾಯಿಲೆಯ ಸ್ಥಿತಿಗೆ ವೈರಾಣು ಸೋಂಕು ತಗಲಿರುವ ಲಿವರ್, 80 ಶೇಕಡಾ ಸಂದರ್ಭಗಳಲ್ಲಿ ಕಾರಣೀಭೂತವಾಗಿರುತ್ತದೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.


ಜಾಂಡೀಸ್ ಉಂಟಾಗಲು ಮೂರು ಕಾರಣಗಳನ್ನು ನೀಡಲಾಗಿದೆ.


1. ಬಿಲಿರುಬಿನ್ ಪಿತ್ತವರ್ಣದ ತಯಾರಿಸುವಿಕೆಯ ಮೊದಲೇ ಜಾಂಡೀಸ್ ಬರಬಹುದು. ಉದಾಹರಣೆ ಗಾಯದಿಂದ ಉಂಟಾದ ದೊಡ್ಡ ರಕ್ತದ ಗಂಟು ರಕ್ತಕ್ಕೆ ಪುನ: ಸೇರಿಕೊಂಡಾಗ ಅತವಾ ಹೊಮೋಲೈಟಿಕ್ ಅನೀಮಿಯಾ ಎಂಬ ರೋಗದ ಕಾರಣದಿಂದ, ಕೆಂಪು ರಕ್ತಕಣಗಳು ನಮ್ಮ ಜೀವಿತಾವಧಿ ಮುಗಿಯುವ ಮೊದಲೇ ಸತ್ತು ಹೋಗಿ, ಬಿಲಿರುಬಿನ್ ಪಿತ್ತವರ್ಣ ರಕ್ತಕ್ಕೆ ಸೇರಿಕೊಳ್ಳುತ್ತದೆ. ಇದನ್ನೇ ಹಿಮೋಲೈಟಿಕ್ ಜಾಂಡೀಸ್ ಎನ್ನುತ್ತಾರೆ. 


2. ಬಿಲುರುಬಿನ್ ಪಿತ್ತವರ್ಣದ ಉತ್ಪಾದನೆಯ ಸಂದರ್ಭದಲ್ಲಿ ಲಿವರ್‌ಗೆ ವೈರಾಣು ಸೋಂಕು ಆದಲ್ಲಿ ಜಾಂಡೀಸ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೆಪಟೈಟೀಸ್ ಎ ಮುಂತಾದ ವೈರಾಣು ಸೋಂಕು ಮೂಲ ಕಾರಣವಾಗಿರುತ್ತದೆ. ಇದಲ್ಲದೆ ಅತಿಯಾದ ಅಲ್ಕೋಹಾಲ್ ಸೇವನೆ, ಅತಿಯಾದ ಔಷಧಿಗಳ ಸೇವನೆ, ಗರ್ಭ ಧರಿಸದಂತೆ ಬಳಸುವ ಔಷಧಿಗಳ ದುರ್ಬಳಕೆ ಮುಂತಾದ ಕಾರಣಗಳಿಂದ ಲಿವರ್‌ಗೆ ಹಾನಿಯಾಗಿ ರಕ್ತದಲ್ಲಿನ ಬಿಲಿರುಬಿನ್ ಪಿತ್ತವರ್ಣವನ್ನು ದೇಹದಿಂದ ಹೊರಹಾಕಲು ಘಾಸಿಗೊಂಡ ಲಿವರ್‌ಗೆ ಸಾಧ್ಯವಾಗದೇ ಇರಬಹುದು ಮತ್ತು ಜಾಂಡೀಸ್‌ನಲ್ಲಿ ಅಂತ್ಯವಾಗುತ್ತದೆ.


3. ಇನ್ನು ಬಿಲಿರುಬಿನ್ ಪಿತ್ತವರ್ಣವನ್ನು ದೇಹದಿಂದ ಹೊರಹಾಕುವ ಪ್ರಕ್ರಿಯೆಗೆ ತೊಡಕಾದಲ್ಲಿ ಜಾಂಡೀಸ್ ಬರುವ ಸಾಧ್ಯತೆ ಇರುತ್ತದೆ. ಪಿತ್ತಕೋಶದಲ್ಲಿ ಕಲ್ಲು, ಪಿತ್ತಕೋಶದ ಉರಿಯೂತ, ಪಿತ್ತಕೋಶದ ಕ್ಯಾನ್ಸರ್, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಕಾರಣದಿಂದ ಪಿತ್ತನಾಳಗಳು ಮುಚ್ಚಿಕೊಂಡು, ಪಿತ್ತವರ್ಣವಾದ ಬಿಲಿರುಬಿನ್ ರಾಸಾಯನಿಕವನ್ನು ದೇಹದಿಂದ ಹೊರಹಾಕಲು ಸಾಧ್ಯವಾಗದೇ ಇರಬಹುದು. ಲಿವರ್‌ನ ಕಾರ್ಯಕ್ಷಮತೆ ಸರಿಯಿದ್ದರೂ ನಾರ್ಮಲ್ ಸಂಖ್ಯೆಯ ಪಿತ್ತವರ್ಣ ಬಿಲಿರುಬಿನ್ ದೇಹದಲ್ಲಿ ಉತ್ಪತ್ತಿಯಾಗುತ್ತಿದ್ದರೂ ಸರಿಯಾದ ರೀತಿಯಲ್ಲಿ ಅವುಗಳು ದೇಹದಿಂದ ಹೊರಹಾಕಲು ತೊಂದರೆಯಾದಾಗ ಈ ರೀತಿಯ ಜಾಂಡೀಸ್‌ಗೆ ಕಾರಣವಾಗುತ್ತದೆ ಇದನ್ನು ಅಬ್‌ಸ್ಟ್ರಕ್ಟಿವ್ ಜಾಂಡೀಸ್ ಎನ್ನುತ್ತಾರೆ.


ಕಾಮಾಲೆ ರೋಗದ ಲಕ್ಷಣಗಳೇನು?


ಕಾಮಾಲೆ ರೋಗದ ಲಕ್ಷಣಗಳು ಎಲ್ಲರಲ್ಲಿಯೂ ಒಂದೇ ರೀತಿ ಇರಬೇಕೆಂದಿಲ್ಲ. ಕೆಲವೊಮ್ಮೆ ರೋಗದ ಲಕ್ಷಣಗಳು ಕಾಣಿಸದೇ ಇರಬಹುದು. ಇನ್ನು ಕೆಲವರಲ್ಲಿ ತೀವ್ರವಾಗಿ ಗೋಚರಿಸಬಹುದು. ರೋಗದ ತೀವ್ರತೆ, ಯಾವ ಕಾರಣದಿಂದ ರೋಗ ಬಂದಿದೆ ಮತ್ತು ರೋಗಿಯ ದೇಹಸ್ಥಿತಿಯ ಮೇಲೆ ಅವಲಂಬಿಸಿದೆ. ಸಾಮಾನ್ಯವಾಗಿ ವೈರಾಣು ಸೋಂಕಿನಿಂದ ಕಾಮಾಲೆ ರೋಗದ ಲಕ್ಷಣಗಳು ಈ ಕೆಳಗಿನಂತೆ ಬರುತ್ತದೆ. 


1. ಜ್ವರ: ಜ್ವರದ ತೀವ್ರತೆ ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ.


2. ಜ್ವರದ ಜೊತೆಗೆ ನಡುಕ ಕೂಡ ಇರಬಹುದು.


3. ಹೊಟ್ಟೆಯಲ್ಲಿ ಸ್ನಾಯುಗಳ ನೋವು ಇರಬಹುದು.


4. ಚರ್ಮದ ಬಣ್ಣ ನಸು ಹಳದಿ ಬಣ್ಣಕ್ಕೆ ಬದಲಾಗುತ್ತದೆ.


5. ಮೂತ್ರದ ಬಣ್ಣ ಕಡು ಹಳದಿ ಇರುತ್ತದೆ ಮತ್ತು ಮಲದ ಬಣ್ಣ ಕಂದು ಮಿಶ್ರಿತ ಹಳದಿ ಇರಬಹುದು.


ಇನ್ನು ಸೋಂಕು ಇಲ್ಲದೇ ಕಾಮಾಲೆ ರೋಗ ಬಂದಿದ್ದಲ್ಲಿ ದೇಹದ ತೂಕ ಕಡಿಮೆಯಾಗುತ್ತಲೇ ಹೋಗುತ್ತದೆ ಮತ್ತು ಚರ್ಮದಲ್ಲಿ ತುರಿಕೆ ಇರುತ್ತದೆ. ಇನ್ನು ಪಿತ್ತಕೋಶದ ಕ್ಯಾನ್ಸರ್ ಅಥವಾ ಮೇದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಜಾಂಡೀಸ್ ಬಂದಿದ್ದಲ್ಲಿ ಹೊಟ್ಟೆಯ ಭಾಗದಲ್ಲಿ ವಿಪರೀತ ನೋವು, ಸ್ನಾಯು ಸೆಳೆತ ಇರುತ್ತದೆ. ಇನ್ನು ಧೀರ್ಘಕಾಲಿಕ ಲಿವರ್ ಕಾಯಿಲೆ ಇರುವವರಲ್ಲಿ, ದೀರ್ಘಕಾಲಿಕ ವೈರಾಣು ಸೋಂಕು ಇರುವವರಲ್ಲಿ ಕೂಡ ಜಾಂಡೀಸ್ ಕಂಡುಬರುವ ಸಾಧ್ಯತೆ ಇರುತ್ತದೆ.


ಪತ್ತೆ ಹಚ್ಚುವುದು ಹೇಗೆ?


ಸಾಮಾನ್ಯವಾಗಿ ಕಾಮಾಲೆ ರೋಗವನ್ನು ರಕ್ತ ಪರೀಕ್ಷೆ ಮಾತ್ರ ಪರೀಕ್ಷೆ ಮತ್ತು ದೇಹದ ಕೂಲಂಕುಷ ಪರೀಕ್ಷೆ ಮುಖಾಂತರ ಪತ್ತೆ ಹಚ್ಚಲಾಗುತ್ತದೆ. 


1. ಮೂತ್ರದ ಪರೀಕ್ಷೆ ಮಾಡಿ ಮೂತ್ರದಲ್ಲಿನ ಬಿಲಿರುಬಿನ್ ಪಿತ್ತವರ್ಣವನ್ನು ಕಂಡು ಹಿಡಿಯುತ್ತಾರೆ.


2. ಸಂಪೂರ್ಣ ರಕ್ತ ಪರೀಕ್ಷೆ ಮಾಡುತ್ತಾರೆ ಮತ್ತು ರಕ್ತದಲ್ಲಿನ ಬಿಲಿರುಬಿನ್ ಪಿತ್ತವರ್ಣದ ಪ್ರಮಾಣವನ್ನು ಕಂಡು ಹಿಡಿಯಲಾಗುತ್ತದೆ.


3. ದೇಹದ ಕೂಲಂಕುಶ ಪರೀಕ್ಷೆ ಮುಖಾಂತರ, ಚರ್ಮದಲ್ಲಿ ಬಿರುಕು, ಸೈಡರ್ ಆಂಜಿಯೋಮಾ ಎಂಬ ತಿರುಚಿದ ರಕ್ತನಾಳಗಳ ಗುಚ್ಚವನ್ನು ಚರ್ಮದಲ್ಲಿ ಗುರುತಿಸಲಾಗುತ್ತದೆ. ಅದೇ ರೀತಿ ಅಂಗೈ ಒಳಭಾಗದಲ್ಲಿ ಮತ್ತು ಬೆರಳಿನ ತುದಿಗಳಲ್ಲಿ ಕೆಂಪುವರ್ಣಕ್ಕೆ ತಿರುಗಿರುವುದು ಪತ್ತೆ ಹಚ್ಚಲಾಗುತ್ತದೆ. 


ಹೆಚ್ಚಿನ ಪರೀಕ್ಷೆ ಅಗತ್ಯವಿದ್ದಲ್ಲಿ ಹೊಟ್ಟೆಯ ಭಾಗದ ಅಲ್ಟ್ರಾ ಸೌಂಡ್ ಮತ್ತು ಸಿಟಿ ಸ್ಕ್ಯಾನ್ ಮತ್ತು ಲಿವರ್ ಬಯಾಪ್ಸಿ ಕೂಡಾ ಮಾಡಲಾಗುತ್ತದೆ.


ಹೇಗೆ ಕಾಮಾಲೆ ಬರುತ್ತದೆ?


ನಮ್ಮ ದೇಹದಲ್ಲಿ ಲಕ್ಷಾಂತರ ಕೆಂಪುರಕ್ತ ಕಣಗಳು ಇರುತ್ತದೆ. ಇದರಲ್ಲಿನ ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ಒಂದು ಕೆಂಪು ರಕ್ತಕಣಗಳ ಜೀವಿತಾವಧಿ 120 ದಿನಗಳು. 120 ದಿನಗಳ ಬಳಿಕ ನಿತ್ರಾಣಗೊಂಡು ಅಥವಾ ಅವಧಿ ಮುಗಿದ ಕೆಂಪು ರಕ್ತಕಣಗಳನ್ನು ನಮ್ಮ ದೇಹದ ಸ್ಪ್ಲಿನ್ (ಗುಲ್ಮಗ್ರಂಥಿ) ಎಂಬ ಅಂಗ ನಾಶಪಡಿಸುತ್ತದೆ. ಈ ಕೆಂಪುರಕ್ತಕಣಗಳನ್ನು ಒಡೆದು, ಅದರಲ್ಲಿನ ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ಕೊಬ್ಬಿನಾಂಶ ಉಳ್ಳ ಹೀಮ್ ಮತ್ತು ಪ್ರೋಟಿನ್‌ಯುಕ್ತ ಗ್ಲೋಬಿನ್‌ಗಳಾಗಿ ಪರಿವರ್ತನೆಯಾಗುತ್ತದೆ. ಹೀಮ್ ಮಗದೊಮ್ಮೆ ವಿಭಜಿತವಾಗಿ ಬಿಲಿರುಬಿನ್ ಎಂಬ ಪಿತ್ತ ವರ್ಣವಾಗಿ ಪರಿವರ್ತನೆಯಾಗುತ್ತದೆ. ಇದೊಂದು ಹಳದಿ ರಾಸಾಯನಿಕ ಸಂಯುಕ್ತ ಸಂಕೀರ್ಣವಾಗಿರುತ್ತದೆ. ಇದು ರಕ್ತದಲ್ಲಿ ಸಂಚರಿಸುತ್ತದೆ. ಆದರೆ ನೀರಿನಲ್ಲಿ ಕರಗುವುದೇ ಇಲ್ಲ. ಈ ಬಿಲಿರುಬಿನ್ ರಕ್ತದ ಮುಖಾಂತರ ಯಕೃತ್(ಲಿವರ್)ಗೆ ಬಂದು ಸೇರುತ್ತದೆ. ಯಕೃತ್ತಿನ ಮುಖಾಂತರ ಹಾದು ಹೋಗುವಾಗ ಈ ಬಿಲಿರುಬಿನ್ ರಾಸಾಯನಿಕ ನೀರಿನಲ್ಲಿ ಕರಗುವ ವಸ್ತುವಾಗಿ ಲಿವರ್‌ನ ಕಿಣ್ವಗಳು ಮಾರ್ಪಾಡುಗೊಳಿಸುತ್ತದೆ. ಈ ರೀತಿ ಮಾರ್ಪಾಡಾದ ಬಿಲಿರುಬಿನ್ ನಂತರ ಪಿತ್ತಕೋಶದಲ್ಲಿ ಸಂಗ್ರಹವಾಗಿ ಸಾಂದ್ರೀಕರಣಗೊಂಡು, ಆ ಬಳಿಕ ಪಿತ್ತನಾಳದ ಮುಖಾಂತರ ಕರುಳಿನ ಡುಯೋಡಿನಮ್ ಎಂಬ ಭಾಗವನ್ನು ಸೇರುತ್ತದೆ. ಇದು ಮಲಕ್ಕೆ ಹಳದಿ ಛಾಯೆಯನ್ನು ನೀಡುತ್ತದೆ. ಕರುಳಿಗೆ ಸೇರಿದ ಬಿಲಿರುಬಿನ್‌ನ ಸ್ವಲ್ಪಭಾಗ ಮಗದೊಮ್ಮೆ ರಕ್ತಕ್ಕೆ ಮರುಹೀರಲ್ಪಟ್ಟು ಮೂತ್ರದ ಮುಖಾಂತರ ವಿಸರ್ಜನೆಯಾಗುತ್ತದೆ. ಈ ಕಾರಣದಿಂದಲೇ ಮೂತ್ರದ ಬಣ್ಣವು ನಸು ಹಳದಿ ಬಣ್ಣಕ್ಕೆ ತಿರುಗುತ್ತದೆ. ಒಟ್ಟಿನಲ್ಲಿ ದೇಹದಲ್ಲಿನ ಪಿತ್ತವರ್ಣವನ್ನು ಹೊರಹಾಕುವಲ್ಲಿ ಪಿತ್ತಕೋಶ ಮತ್ತು ಯಕೃತ್, ಕಿಡ್ನಿ ಹೀಗೆ ಎಲ್ಲಾ ಅಂಗಗಳು ಒಟ್ಟು ಸೇರಿ ಕೆಲಸ ಮಾಡುತ್ತದೆ. ಯಾವುದೇ ಅಂಗದಲ್ಲಿ ತೊಂದರೆ ಉಂಟಾದರೂ ಬಿಲಿರುಬಿನ್ ದೇಹದಿಂದ ಹೊರಹಾಕಲು ಸಾಧ್ಯವಾಗದೇ, ಕಾಮಾಲೆ ಅಥವಾ ಜಾಂಡೀಸ್ ರೋಗಕ್ಕೆ ಕಾರಣವಾಗುತ್ತದೆ.  


ಚಿಕಿತ್ಸೆ ಹೇಗೆ?


ಯಾವ ಕಾರಣದಿಂದ ಕಾಮಾಲೆ ರೋಗ ಬಂದಿದೆ ಎಂದು ತಿಳಿದು ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ ವೈರಾಣು ಸೋಂಕಿನಿಂದ ಕಾಮಾಲೆ ರೋಗ ಬಂದಿದ್ದಲ್ಲಿ ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ರಕ್ತದಲ್ಲಿ ಕೆಂಪು ರಕ್ತಕಣಗಳು ಸಿಡಿದುಕೊಂಡು ಕಾಮಾಲೆ ರೋಗ ಬಂದಿದ್ದಲ್ಲಿ ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಲಾಗುತ್ತದೆ. ಪಿತ್ತ ಕೋಶದ ಕಲ್ಲು, ಪಿತ್ತಕೋಶದ ಕ್ಯಾನ್ಸರ್ ಅಥವಾ ಮೆದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದಾಗಿ ಕಾಮಾಲೆ ರೋಗ ಬಂದಿದ್ದಲ್ಲಿ ಅದನ್ನು ಮೊದಲು ಚಿಕಿತ್ಸೆ ನೀಡಿದ ಬಳಿಕವೇ ಕಾಮಾಲೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಒಟ್ಟಿನಲ್ಲಿ ಕಾಮಾಲೆ ರೋಗದ ಚಿಕಿತ್ಸೆ ಅತ್ಯಂತ ಸಂಕೀರ್ಣವಾಗಿದ್ದು, ಹಲವಾರು ವೈದ್ಯರು ಮತ್ತು ಹಲವಾರು ಪರೀಕ್ಷೆಗಳ ಅಗತ್ಯವಿರುತ್ತದೆ. ಔಷಧಿ ಜೊತೆಗೆ ಅತ್ಯಂತ ಜಾಗರೂಕವಾದ ಆಹಾರದ ಅವಶ್ಯಕತೆಯೂ ಇರುತ್ತದೆ. ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಕಾಮಾಲೆ ರೋಗ ಮಾರಣಾಂತಿಕವಾಗಿ ಕಾಡದಿದ್ದರೂ, ಕಡೆಗಣಿಸಿದಲ್ಲಿ ಮಾರಣಾಂತಿಕವಾಗಿ ಕಾಡುವ ಸಾಧ್ಯತೆಯೂ ಇದೆ.


ಕೊನೆಮಾತು:


ಜಾಂಡೀಸ್ ಅಥವಾ ಕಾಮಾಲೆ ರೋಗ ಶೇಕಡಾ 90ರಷ್ಟು ಜನರಲ್ಲಿ ವೈರಾಣು ಸೋಂಕಿನಿಂದಲೇ ಬಂದಿರುತ್ತದೆ. ಬೇರೆ ಬೇರೆ ಮಾರ್ಗಗಳಿಂದ ದೇಹವನ್ನು ಪ್ರವೇಶಿಸಿದ ವೈರಸ್‌ಗಳು, ದೇಹದೆಲ್ಲೆಡೆ ವಂಶಾಭಿವೃದ್ದಿ ಮಾಡಲು ತೊಡಗುತ್ತದೆ. ಈ ವೈರಾಣುಗಳ ಇನ್‌ಕ್ಯುಬೇಶನ್ ಪೀರಿಯೆಡ್ ಅಥವಾ ಪ್ರಕಟಗೊಳ್ಳುವ ಅವಧಿ 15 ರಿಂದ 40 ದಿನಗಳಾಗಿರುತ್ತದೆ. ಈ ಅವಧಿಯಲ್ಲಿ ಜಾಂಡೀಸ್ ರೋಗ ಪ್ರಕಟವಾಗುತ್ತದೆ. ಸಣ್ಣ ಪ್ರಮಾಣದ ಜ್ವರ, ವಾಕರಿಕೆ, ಹಸಿವಿಲ್ಲದಿರುವುದು, ಸುಸ್ತು, ಹೊಟ್ಟೆ ಉಬ್ಬರಿಸುವುದು, ಮೈ ಬಿಳಿಚಿಕೊಳ್ಳುವಿಕೆ, ಹೊಟ್ಟೆಯ ಭಾಗದಲ್ಲಿ ನೋವು, ಹಳದಿ ಮೂತ್ರ, ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಮುಂತಾದ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಹೆಪಟೈಟಿಸ್ ಎಂಬ ವೈರಾಣು ಸೋಂಕು ಕಾಮಾಲೆಗೆ ಕಾರಣವಾಗುತ್ತದೆ. ಇದನ್ನು ಲಸಿಕೆ ಹಾಕಿಸಿಕೊಂಡು ತಡೆಗಟ್ಟಲು ಸಾಧ್ಯವಿದೆ. ರೋಗ ಬಂದ ಬಳಿಕ ಗುಣಪಡಿಸಿಕೊಳ್ಳುವ ಬದಲು ರೋಗ ಬರದಂತೆ ತಡೆಯುವುದೇ ಜಾಣತನ ಆಗಿರುತ್ತದೆ. ನವಜಾತ ಶಿಶುಗಳಲ್ಲಿ ಮೊದಲ 6 ತಿಂಗಳಲ್ಲಿ ಮೂರು ಬಾರಿ ಲಸಿಕೆ ಹಾಕಿಸಿದಲ್ಲಿ ಜೀವಮಾನವಿಡೀ ರಕ್ಷಣೆ ಸಿಗುತ್ತದೆ. ಯಾವುದೇ ಕಾರಣಕ್ಕೂ ಲಸಿಕೆ ತೆಗೆದುಕೊಳ್ಳದೇ ಇರಬಾರದು. ಹೆಪಟೈಟಿಸ್ ರೋಗಕ್ಕೆ ತಮ್ಮ ವೃತ್ತಿಯ ಕಾರಣದಿಂದಾಗಿ ಹೆಚ್ಚು ತೆರೆದುಕೊಳ್ಳುವ ವೈದ್ಯರು, ದಂತವೈದ್ಯರು ಮತ್ತು ದಾದಿಯರು ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಪ್ರತಿ 10 ವರ್ಷಗಳಿಗೊಮ್ಮೆ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ. ಒಟ್ಟಿನಲ್ಲಿ ಲಸಿಕೆ ಹಾಕಿಸಿ ಹೆಪಟೈಟಿಸ್ ಬಾರದಂತೆ ಮಾಡಿದಲ್ಲಿ ಹೆಚ್ಚಿನ ಎಲ್ಲಾ ಕಾಮಾಲೆ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ.


ಡಾ|| ಮುರಲೀ ಮೋಹನ್ ಚೂಂತಾರು

       BDS, MDS,DNB,MOSRCSEd(U.K), FPFA, M.B.A

      ಸುರಕ್ಷಾದಂತ ಚಿಕಿತ್ಸಾಲಯ

      ಹೊಸಂಗಡಿ – 671 323

      ಮೊ : 9845135787


 (ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post