ತಮಸೋಮಾ ಜ್ಯೋತಿರ್ಗಮಯ... ದೀಪದಿಂದ ದೀಪವ ಹಚ್ಚೋಣ...

Upayuktha
0


ದೀಪಗಳ ತುದಿ ಸರ್ವತೋಮುಖವಾಗಿದೆ, ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ. ಆದರೆ ದೀಪದ ಗಮನ ಊರ್ಧ್ವಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸು ಕೂಡ ಸದಾ ಊರ್ಧ್ವಗಾಮಿಯಾಗಿರಬೇಕು, ಮನುಷ್ಯ ಸದಾ ಇತಿಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಕೂಡ ಇಲ್ಲಿದೆ.


ವೇದಗಳ ಕಾಲದಲ್ಲಿ, ಎಲ್ಲವೂ ಕೂಡ ಋತೋತ್ಸವಗಳೇ, ದೀಪಾವಳಿಗೆ ಯಕ್ಷರಾತ್ರಿ ಎಂದು ಕರೆಯುತ್ತೇವೆ, ವೇದದಲ್ಲಿ ಬರುವ ಶ್ರೀಸೂಕ್ತದಲ್ಲಿ ಮಣಿನಾಸಹ ಎಂಬುದಿದೆ, ಅಂದರೆ ಲಕ್ಷ್ಮಿಯನ್ನು ಇಲ್ಲಿ ಯಕ್ಷನ ತಂಗಿಯಾಗಿ ಕಾಣಲಾಗುತ್ತದೆ. ಯಕ್ಷರು ನಮಗೆ ಹಣವನ್ನು ಕೊಡುವಂತವರು. ರಾತ್ರಿ ಕಾಲದಲ್ಲಿ ಯಕ್ಷರನ್ನು ಪೂಜೆ ಮಾಡಲಾಗುತ್ತದೆ. ಕುಬೇರ ಯಕ್ಷರ ಅಧಿಪತಿ. ಕುಬೇರನನ್ನು ಮತ್ತು ಅವನ ತಂಗಿಯಾದ ಲಕ್ಷ್ಮಿ ಇವರಿಬ್ಬರನ್ನು ಪೂಜಿಸಿ ಧನಸಂಪತ್ತಿನೊಂದಿಗೆ ಬಾ ಎಂದು ಭಕ್ತಿಯಿಂದ ಆರಾಧಿಸುತ್ತೇವೆ ಎನ್ನುತ್ತಾರೆ ವಿಭು ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕಿ, ಸಂಸ್ಕೃತ ಮತ್ತು ಸಂಗೀತ ವಿದುಷಿ, ತರಬೇತಿ ತಜ್ಞರು, ಸಂಸ್ಕೃತಿ ಚಿಂತಕರಾದ ಡಾ ಆರತಿ ವಿ.ಬಿ. Upayuktha


ಇದನ್ನು ಕಾರ್ತಿಕ ದೀಪೋತ್ಸವ ಎಂದು ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಸೂರ್ಯಾಸ್ತ ಬೇಗನೆ ಆಗುತ್ತದೆ. ಹೀಗಾಗಿ ದೀಪಗಳ ಆವಳಿ ಅಂದರೆ ಸಾಲು ಸಾಲು ದೀಪಗಳನ್ನು ಬೆಳಗಿ ಕತ್ತಲೆಯನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ದೀಪಾವಳಿ ಕಳೆದ ನಂತರ ಚಳಿಗಾಲ ಆರಂಭವಾಗುತ್ತದೆ.


ದೀಪಾವಳಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಹಬ್ಬ. ಭಾರತದ ಮೇಲೆ ಆಕ್ರಮಣಕಾರರು ದಾಳಿ ಮಾಡಿದ ಮೇಲೆ ಭೂಭಾಗ ತುಂಡು ತುಂಡಾಗಿ ಹೋಯಿತು. ಮೊದಲು ಆಫ್ಘಾನಿಸ್ತಾನದಿಂದ ಬರ್ಮಾವರೆಗೆ, ಶ್ರೀಲಂಕಾ, ಕಾಂಬೋಡಿಯಾ, ವಿಯೆಟ್ನಾಂ ಅವೆಲ್ಲವೂ ಕೂಡ ಸಾಂಸ್ಕೃತಿಕ ಭಾರತದ ಭಾಗವಾಗಿತ್ತು. ಅಲ್ಲೆಲ್ಲ ಕೂಡ ದೀಪಾವಳಿಯ ಕಾರ್ತಿಕೋತ್ಸವವನ್ನು ಬೇರೆ ಬೇರೆ ತರದಲ್ಲಿ ಆಚರಣೆ ಮಾಡುತ್ತಾರೆ.


ಜೈನರಿಗೆ ಇದು ಮೋಕ್ಷ್ಮ ಲಕ್ಷ್ಮಿ ಪೂಜೆ. ಇಡೀ ವರ್ಷ ಅವರು ಧನಲಕ್ಷ್ಮಿ ಪೂಜೆ ಮಾಡುತ್ತಾರೆ. ದೀಪಾವಳಿ ಹಿಂದಿನ ದಿನ ಮೋಕ್ಷ್ಮಲಕ್ಷ್ಮಿ ಪೂಜೆ ಮಾಡುತ್ತಾರೆ. ವೈರಾಗ್ಯದ ದೃಷ್ಟಿಯಿಂದ ದಾನ, ಉಪವಾಸ ಮಾಡುತ್ತಾರೆ. ನಮ್ಮಲ್ಲಿ ದೀಪಾವಳಿ ಅಮಾವಾಸ್ಯೆ ದಿನ ಕೇದಾರೇಶ್ವರ ವ್ರತ ಮಾಡುತ್ತೇವೆ. ಕೆಲವರು ಕೇದಾರ ಗೌರಿ ವ್ರತ ಮಾಡುತ್ತಾರೆ. ಶಿವನ ವ್ರತವೇ ಕೇದಾರ ವ್ರತವಾಗಿರುತ್ತದೆ.


ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳ ಹಬ್ಬ. ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ, ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆಯಿರುತ್ತದೆ.


ಬೌದ್ಧರಲ್ಲಿರುವ ಹಲವಾರು ಪಂಗಡಗಳು ದೀಪಾವಳಿಯ ಮೂರು ದಿನ ಪೂಜೆ ಮಾಡುತ್ತಾರೆ. ಸಿಖ್ಖರು ಕೂಡ ಆಚರಿಸುತ್ತಾರೆ. ಒಟ್ಟಿನಲ್ಲಿ ಇದು ಈ ದೇಶದಲ್ಲಿ ಹುಟ್ಟಿರುವ ಮೂಲತಃ ಭಾರತೀಯರು, ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬೌದ್ಧರು ಸಿಖ್ಖರು, ಹಿಂದೂಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬ.


ದೀಪಾವಳಿಯಲ್ಲಿ ಬಲೀಂದ್ರನ ಆರಾಧನೆಯೆಂಬುದು ಕೃಷಿಜನಪದರ ಬದುಕಿನಲ್ಲಿ ಪಾರಂಪರಿಕವಾಗಿ, ಪವಿತ್ರಾತ್ಮಕವಾಗಿ ಬೆಸೆದು ಬಂದಿದೆ. ಬಲೀಂದ್ರನ ತ್ಯಾಗ ಬಲಿದಾನದ ಮಹಾ ಮಂಗಲಕರ ಮಹಾತ್ಮೆಯೆಂಬುದು ಈ ದೀಪದ ಹಬ್ಬದಲ್ಲಿ ಬೆಳಗುತ್ತದೆ. ಇಲ್ಲಿ ಬಲೀಂದ್ರ ಅನ್ನಬ್ರಹ್ಮನಾಗಿ ಅರ್ಚಿಸಲ್ಪಡುವುದು ವಿಶೇಷವೆನಿಸುತ್ತದೆ.


ಕಾರ್ತಿಕಮಾಸದ ದೀಪಾರಾಧನೆಯ ದೀಪಾವಳಿಯಲ್ಲಿ ಬಲೀಂದ್ರನ ಆರಾಧನೆ, ತುಳಸಿ ಪೂಜೆ, ಧನಲಕ್ಷ್ಮಿ ಪೂಜೆ ಮತ್ತು ಗೋಪೂಜೆ.. ಹೀಗೆ ಎಲ್ಲವೂ ಭಕ್ತಿಪೂರ್ಣವಾಗಿ ಆಚರಿಸಲ್ಪಡುವುದನ್ನು ಗಮನಿಸಬಹುದಾಗಿದೆ.


ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ.

ನಿಮಗೆ, ನಿಮ್ಮ ಕುಟುಂಬದವರಿಗೆ ಈ ದೀಪಾವಳಿ ಮಂಗಳ ಮಾಡಲಿ ಎಂದು ಹಾರೈಸುತ್ತಾ...


ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top