ಮಂಗಳೂರು: "ಸ್ವಾಮಿ ವಿವೇಕಾನಂದ ಚಿಂತನೆ ವಿಶ್ವವನ್ನೇ ತಬ್ಬುವ ವಿಶ್ವಾತ್ಮ ಭಾವ. ಭಾರತೀಯರು ಸ್ವಾಮಿ ವಿವೇಕಾನಂದರನ್ನು ರಾಷ್ಟ್ರ ಭಕ್ತಸಂತ ಎಂದು ಕರೆದರೂ ಅವರು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದವರಲ್ಲ. ಅವರ ಕಾರ್ಯ ಹಾಗೂ ಚಿಂತನೆಗಳು ಜಾಗತಿಕವಾದದ್ದು” ಎಂದು ಯುಕೆಯ ರಾಮಕೃಷ್ಣ ವೇದಾಂತ ಸೆಂಟರ್ ಇದರ ಮುಖ್ಯಸ್ಥ ಸ್ವಾಮಿ ಸರ್ವಸ್ಥಾನಂದಜಿ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ 'ವಿವೇಕವಾಣಿ' ಸರಣಿ ಉಪನ್ಯಾಸ ಕಾರ್ಯಕ್ರಮದ ಹತ್ತನೇ ಉಪನ್ಯಾಸದಲ್ಲಿ ಅವರು ಶನಿವಾರ, "ಸ್ವಾಮಿ ವಿವೇಕಾನಂದ ಹಾಗೂ ಅವರ ವಿಶ್ವಮಾನವತೆಯ ಪರಿಕಲ್ಪನೆ" ಎಂಬ ವಿಷಯದ ಕುರಿತು ಮಾತನಾಡಿದರು. ಭಾರತದ ಮೇಲಿನ ವಿವೇಕಾನಂದರ ಪ್ರೀತಿ ಜಾಗತಿಕ ಮೌಲ್ಯಗಳ ಆಧಾರಿತವಾದದ್ದು.
ಸಮಾಜದ ಕೆಳ ಸ್ತರದ ವ್ಯಕ್ತಿಯಿಂದ ಹಿಡಿದು ಮೇಲಿನ ಸ್ತರದ ಪ್ರಭಾವಿ ಮೇಧಾವಿ ವ್ಯಕ್ತಿಗಳವರೆಗೆ ಎಲ್ಲರನ್ನೂ ಒಳಗೊಳ್ಳುವ ವಿಶಾಲವಾದ ದೃಷ್ಟಿಕೋನ ಅವರದ್ದು. ಜಗತ್ತಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜತಾಂತ್ರಿಕ, ಸೇರಿದಂತೆ ಪ್ರತಿಯೊಂದು ಸಮಸ್ಯೆಗಳ ಮೇಲೆ ಅವರು ಬೆಳಕು ಚೆಲ್ಲಿದ್ದರು ಎಂದರು.
ನ್ಯಾಕ್ ನಿರ್ದೇಶಕ ಡಾ. ಎಸ್. ಸಿ. ಶರ್ಮ, ಗುಜರಾತ್ ರಾಜ್ಯದ ರಾಜಕೋಟ್ ನ ಉದ್ಯಮಿ ಧರ್ಮೇಶ್ ಜೋಶಿ, ನಿಟ್ಟೆ ವಿಶ್ವವಿದ್ಯಾಲಯದ ಡಾ. ಸತೀಶ್ ರಾವ್, ಡಾ. ಶಶಿಕುಮಾರ್ ಶೆಟ್ಟಿ, ಮಂಗಳೂರಿನ ಎಸ್.ಡಿಎಂ. ಸ್ನಾತಕೋತ್ತರ ವ್ಯವಹಾರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸೀಮಾ ಶೆಣೈ, ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ವಿವಿ ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹಾಗೂ ಆಸಕ್ತ ಸಾರ್ವಜನಿಕರು ಈ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಶ್ರೀಪತಿ ಕಲ್ಲೂರಾಯ ಪಿ. ಸ್ವಾಗತಿಸಿ, ವಿವೇಕಾನಂದ ಅಧ್ಯಯನ ಕೇಂದ್ರದ ಸದಸ್ಯ ಡಾ.ಚಂದ್ರು ಹೆಗ್ಡೆ ವಂದಿಸಿದರು. ಮಂಗಳೂರು ರಾಮಕೃಷ್ಣ ಮಠದ ಸ್ವಯಂ ಸೇವಕ ರಂಜನ್ ಬೆಳ್ಳರ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ