ಸಪ್ನ ಬುಕ್ ಹೌಸ್: ಕನ್ನಡ ಪುಸ್ತಕಗಳ ಭಾಗ್ಯದ ಬಾಗಿಲು

Upayuktha
0

ಕರ್ನಾಟಕದಲ್ಲಿ ಪುಸ್ತಕವೆಂದರೆ ಸಪ್ನ ಎಂಬ ಸಮೀಕರಣ ಸಾಧ್ಯವಾಗುವಂತೆ ಮಾಡಿದ ಶ್ರೇಯ ಈ ಬುಕ್ ಹೌಸಿನದು. ಅರ್ಧ ಶತಮಾನದ ಅನೂಚಾನ ನಡೆ ಅದರದು. ಕನ್ನಡ ಪುಸ್ತಕಗಳಿಗೂ ಮಾರುಕಟ್ಟೆಯುಂಟು ಎಂದು ರಾಜ್ಯದಲ್ಲಿ ಮೊದಲ ಬಾರಿಗೆ ಮನವರಿಕೆ ಮಾಡಿದ ಸಂಸ್ಥೆ. ಸ್ವತಃ ಡಾ. ಶಿವರಾಮ ಕಾರಂತರಂತಹವರೇ ಬೆರಗಾಗಿ; ಅದರ ಈ ಸಾಮರ್ಥ್ಯ ಕುರಿತು ನನ್ನೊಂದಿಗೆ ಸುದೀರ್ಘವಾಗಿ ಮಾತನಾಡಿದ್ದುಂಟು. 



1988ರಲ್ಲಿ ಸಪ್ನ, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಿತ್ತು. ಅದನ್ನು 30-10-1988ರಂದು ಉದ್ಘಾಟಿಸಿದ್ದು ಆಗ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್. ಬೊಮ್ಮಾಯಿ ಅವರು. ಈ ಪ್ರದರ್ಶನದ ಫಲಶ್ರುತಿಯಿಂದಾಗಿ ಸಪ್ನದಲ್ಲಿ ಪ್ರತ್ಯೇಕ ಕನ್ನಡ ವಿಭಾಗ (ಕರ್ನಾಟಕ ಬುಕ್ ಎಜೆನ್ಸಿ) ಆರಂಭವಾಯಿತು. ಇದು ಸಪ್ನ ಹಾಗೂ ಕನ್ನಡ ಪುಸ್ತಕೋದ್ಯಮದ ಭಾಗ್ಯದ ಬಾಗಿಲನ್ನು ತೆರೆಯುವಂತೆ ಮಾಡಿತು. ಇದು ಇತಿಹಾಸ.   


ಇದೀಗ ಎಸ್.ಆರ್. ಬೊಮ್ಮಾಯಿ ಅವರ ಮಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ. ಅವರು ಸಪ್ನದ 66 ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. 33 ವರ್ಷದ ಅನಂತರ 66 ಪುಸ್ತಕ! 1988ರಲ್ಲಿ ಎಸ್.ಆರ್. ಬೊಮ್ಮಾಯಿಯವರು ಬರೀ ಟೇಪು ಕತ್ತರಿಸಿದ್ದರು. ಕಾರಣ ಆಗ ಸಪ್ನ ಇನ್ನೂ ಪ್ರಕಾಶನಕ್ಕೆ ತೊಡಗಿರಲಿಲ್ಲ. ಅನಂತರ ರಾಮಕೃಷ್ಣ ಹೆಗಡೆಯವರ 'ಚುನಾವಣಾ ಸುಧಾರಣೆ'ಗಳು ಎಂಬ ಕೃತಿಯನ್ನು ಹೊರತಂದಿತು. ಡಾ. ಎಸ್. ವಿದ್ಯಾಶಂಕರ್ ಮತ್ತು ಎಂ.ಪಿ. ಪ್ರಕಾಶ್ ಅವರಿಂದ ಕನ್ನಡಾನುವಾದ. ಅದು ಸಪ್ನದ ಅಂಬೆಗಾಲು. ಈಗ 66 ಪುಸ್ತಕ. ಇದು ದಾಪುಗಾಲು! ಅಂಬೆಗಾಲಿನ ವೇಳೆ ಕನ್ನಡ ಪುಸ್ತಕೋದ್ಯಮದ ಅರುಣೋದಯ. ಉತ್ಕರ್ಷ ಕಾಲ.


ಇದು ದಾಪುಗಾಲಿನ ಸಂದರ್ಭವಾದರೂ ಕನ್ನಡ ಪುಸ್ತಕೋದ್ಯಮದ ಅಪಕರ್ಷ ಕಾಲ. ಇದೆಂತಹ ವೈರುಧ್ಯ!  ಕೆಲವು ಅಪವಾದಗಳಿರಬಹುದು. ಬಸವರಾಜ ಬೊಮ್ಮಾಯಿ ದೈತ್ಯ ವಾಚಕ. ಅಪರೂಪಕ್ಕೆ ಎಂಬಂತೆ ಸ್ವತಃ ಚಿಂತನಶೀಲ ಲೇಖನ, ವಿಶ್ಲೇಷಣೆಗಳನ್ನು ಬರೆಯುತ್ತಾರೆ. ಕನ್ನಡ ಪುಸ್ತಕೋದ್ಯಮವನ್ನು ಸಚೇತನಗೊಳಿಸಬಲ್ಲ ನೆರವನ್ನು ಪ್ರಕಾಶನೋದ್ಯಮ ಅವರಿಂದ ಅಪೇಕ್ಷಿಸಿದೆ. ಅವರಿಗೆ ಮನವರಿಕೆ ಮಾಡಿದರೆ ಖಂಡಿತ ಅಸ್ತು, ತಥಾಸ್ತು ಎನ್ನುತ್ತಾರೆ. ಅವರು ಜನಮನದ ನಾಡಿ ಹಿಡಿಯಬಲ್ಲ ಚಾಣಾಕ್ಷರು.


ಪುನೀತ್ ರಾಜಕುಮಾರ್ ಅವರಿಗೆ ನಿಯಮ, ನಿಬಂಧನೆ ಮೀರಿ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪುರಸ್ಕಾರವನ್ನು ಘೋಷಿಸಿದ ಧೀರ ನಡೆ ಅವರದು. ಇನ್ನು ಮರಣಶಯ್ಯೆಯಲ್ಲಿರುವ ಕನ್ನಡ ಪುಸ್ತಕಗಳಿಗೆ ಉಸಿರುತುಂಬಿ ಜೀವದಾನ ಮಾಡಲಾರರೆ? ಖಂಡಿತ ಮಾಡಿಯಾರು. ನಾವು ಅನುಸಂಧಾನಕ್ಕೆ ತೊಡಗಬೇಕು. ಕನ್ನಡಕ್ಕೆ ಒಳಿತಾಗಲಿ.

- ಕೆ. ರಾಜಕುಮಾರ್


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top