ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ಹಿನ್ನೆಲೆ
ಮಂಗಳೂರು: ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಸ್ವಚ್ಛ ಮಂಗಳೂರು ಜನಜಾಗೃತಿ ಅಭಿಯಾನವನ್ನು ನಿರಂತರವಾಗಿ ಐದು ವರ್ಷಗಳಿಂದ ನಡೆಸುತ್ತ ಬಂದಿರುವ ಶ್ರೀ ರಾಮಕೃಷ್ಣ ಮಠಕ್ಕೆ ಗೌರವಾಭಿನಂದನೆ ಹಾಗೂ ಪೌರಸಮ್ಮಾನ ಕಾರ್ಯಕ್ರಮವನ್ನು ನ.27ರಂದು ಸಂಜೆ 6 ಗಂಟೆಗೆ ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.
ಇದಕ್ಕೆ ಮುನ್ನ ಸಂಜೆ 5ರಿಂದ 6 ಗಂಟೆಯ ವರೆಗೆ ಭಜನಾ ಸತ್ಸಂಗ ಕಾರ್ಯಕ್ರಮವೂ ನಡೆಯಲಿದೆ.
ಶ್ರೀಮಠದ ಈ ಸೇವಾಕಾರ್ಯಗಳನ್ನು ವಿಶೇಷವಾಗಿ ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕ್ರಮವನ್ನು ಗುರುತಿಸಿ ಕರ್ನಾಟಕದ ಸರಕಾರವು ಈ ವರ್ಷ ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷ ರಾಜ್ಯೋತ್ಸವ ಪ್ರಶಸ್ತಿ’ ಯನ್ನು ನೀಡಿರುವುದಕ್ಕಾಗಿ ಮಂಗಳೂರು ನಗರವೇ ಸಂಭ್ರಮಿಸಿದೆ. ಮಠದ ಪೂಜ್ಯ ಸ್ವಾಮಿಜಿಗಳು “ಈ ಪ್ರಶಸ್ತಿ ಮಂಗಳೂರು ಜನತೆಗೆ ಸಮರ್ಪಿತ!” ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಗೌರವಾಭಿನಂದನೆ ಸಮಿತಿ ಮಂಗಳೂರು ಮತ್ತು ಸ್ವಚ್ಛ ಮಂಗಳೂರು ಫೌಂಡೇಶನ್ ಗಳು ಜತೆಯಾಗಿ ಈ ಗೌರವಾಭಿನಂದನೆ ಕಾರ್ಯಕ್ರಮ ಆಯೋಜಿಸಿವೆ. ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ನೇತೃತ್ವದ ಸಮಿತಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ಪ್ರಕಟಿಸಿದರು.
ಸಮಾರಂಭದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಗೌರವಾನ್ವಿತ ಅಭ್ಯಾಗತರಾಗಿ ನಿಟ್ಟೆ ವಿಶ್ವವಿದ್ಯಾನಿಲಯ ಮಂಗಳೂರು ಕುಲಾಧಿಪತಿಗಳಾದ ಡಾ. ನಿಟ್ಟೆ ವಿನಯ್ ಹೆಗ್ಡೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಇವರು ಆಗಮಿಸಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ವಿ, ಇವರು ದೀಪ ಪ್ರಜ್ವಲನ ಮಾಡಲಿದ್ದಾರೆ. ಅಭ್ಯಾಗತರಾಗಿ ಮಂಗಳೂರು ದಕ್ಷಿಣ ಶಾಸಕರು ವೇದವ್ಯಾಸ್ ಕಾಮತ್, ಮಂಗಳೂರು ಶಾಸಕರ ಯು ಟಿ ಖಾದರ್, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಮಂಗಳೂರಿನ ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಮಾಜಿ ಶಾಸಕ ಜೆ ಆರ್ ಲೋಬೊ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು ಇವರು ಭಾಗಿಯಾಗಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಎಂಆರ್‍ಪಿಎಲ್ ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್, ಎಸ್ ಸಿ ಎಸ್ ಆಸ್ಪತ್ರೆ ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ಡಾ. ಜೀವರಾಜ್ ಸೊರಕೆ, ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳು ಮಂಗಳೂರು ಇದರ ಮುಖ್ಯಸ್ಥರಾದ ಡಾ. ಮಂಜುನಾಥ್ ಭಂಡಾರಿ ಇವರು ಉಪಸ್ಥಿತರಿರುವರು.
ಈ ಸಮಾರಂಭದಲ್ಲಿ ಶ್ರೀರಾಮಕೃಷ್ಣ ಮಠದ ಭಕ್ತರು, ಹಿತೈಷಿಗಳು, ಕಾರ್ಯಕರ್ತರು, ಸ್ವಚ್ಛ ಮಂಗಳೂರು ಸ್ವಯಂಸೇವಕರು ಭಾಗಿಯಾಗಲಿದ್ದಾರೆ.ಶ್ರೀ ಮಠದ ಬಗ್ಗೆ ಗೌರವವುಳ್ಳ ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಕ್ತ ಅವಕಾಶವಿದೆ. ಸಂಘ-ಸಂಸ್ಥೆಗಳ ನೆಲೆಯಲ್ಲಿ ಹಾಗೂ ವೈಯಕ್ತಿಕವಾಗಿ ಶ್ರೀಮಠವನ್ನು ಗೌರವಿಸಬಯಸುವವರಿಗೆ ಸಭಾ ಕಾರ್ಯಕ್ರಮದ ಬಳಿಕ ಅವಕಾಶವಿದೆ. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ದಿಲ್‍ರಾಜ್ ಆಳ್ವ 99005 12727, ಉಮಾನಾಥ್ ಕೋಟೆಕಾರ್ 99000 44073 ಇವರನ್ನು ಸಂಪರ್ಕಿಸಬಹುದು.
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಮಂಗಳೂರಿನ ರಾಮಕೃಷ್ಣ ಮಠ ಕೂಡ ಸಂಸ್ಥಾಪನೆಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಕಾಕತಾಳೀಯವಾಗಿದೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ನಾಗರಿಕರಿಗೆ ಮಠವನ್ನು ಅಭಿನಂದಿಸುವ ಅವಕಾಶವೂ ದೊರೆತಿದೆ.
ಮಠದ ಹಿನ್ನೆಲೆ:
ಇಂದಿಗೆ ನೂರಿಪ್ಪತ್ತೈದು ವರ್ಷಗಳ ಹಿಂದೆ (1987) ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಹಾಸಂಘ ಎಂಬ ಸನ್ಯಾಸಿಗಳ ಸಂಘವನ್ನು ಸ್ಥಾಪಿಸಿದರು. ಹಾಗೂ ಆ ಸಂಘದ ನೇತೃತ್ವದಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಎಂಬ ಅವಳಿ ಸಂಸ್ಥೆಗಳನ್ನು ತಮ್ಮ ಗುರುಗಳಾದ ಅಧ್ಯಾತ್ಮದ ಮೇರುಶಿಖರ ಶ್ರೀರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ಸ್ಥಾಪಿಸಿದರು. ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎನ್ನುವ ಧ್ಯೇಯದೊಂದಿಗೆ ಜಗತ್ತಿನಾದ್ಯಂತ ಶಾಖೋಪಶಾಖೆಗಳನ್ನು ಹೊಂದಿರುವ ಪ್ರತಿಷ್ಠಿತ ಆಧ್ಯಾತ್ಮಿಕ ಹಾಗೂ ಜನಸೇವಾ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಮಂಗಳೂರಿಗರ ಸೌಭಾಗ್ಯದಿಂದ ಇಂದಿಗೆ ಎಪ್ಪತ್ತೈದು ವರ್ಷಗಳ ಹಿಂದೆ (3-6-1947) ಸ್ವರ್ಗೀಯ ರಾವ್ ಬಹದ್ದೂರ್ ಡಾ ಕೇಶವ್ ಪೈ ಹಾಗೂ ಇತರೆ ಭಕ್ತರ ಒತ್ತಾಸೆಯಿಂದ ಅಂದಿನ ರಾಮಕೃಷ್ಣ ಮಹಾಸಂಘದ ಹಿರಿಯ ಯತಿವರೇಣ್ಯರು ಮಂಗಳೂರು ನಗರದಲ್ಲಿ ರಾಮಕೃಷ್ಣ ಮಠವನ್ನು ಪ್ರಾರಂಭಿಸಿದರು.
ಪ್ರಸಕ್ತ ಮಂಗಳಾದೇವಿ ದೇವಸ್ಥಾನದ ಬಳಿಯಿರುವ ಏಳು ಎಕರೆ ವಿಸ್ತೀರ್ಣದ ಆವರಣವನ್ನು 11-8-1951 ರಂದು ದಿ. ಸಾವಕಾರ್ ವೆಂಕಟೇಶ್ ಪೈ ಇವರು ಶ್ರೀಮಠಕ್ಕೆ ಹಸ್ತಾಂತರಿಸಿದರು. ಹೀಗಾಗಿ ಅದೇ ವರುಷ ಮತ್ತೊಂದು ಸಂಸ್ಥೆಯಾದ ರಾಮಕೃಷ್ಣ ಮಿಷನ್ ಕೂಡ ಮಂಗಳೂರಿನಲ್ಲಿ ಕಾರ್ಯಾರಂಭಿಸಿತು.
ಒಂದೆಡೆ ದೇಶಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯಾದರೆ ಮಂಗಳೂರಿನಲ್ಲಿರುವ ರಾಮಕೃಷ್ಣ ಮಠಕ್ಕೂ ಎಪ್ಪತ್ತೈದು ಸಂವತ್ಸರಗಳು ತುಂಬಿ ಅಮೃತ ವರ್ಷದ ಆಚರಣೆಯಾಗುತ್ತಿರುವುದು ನಮ್ಮೆಲ್ಲರ ಪಾಲಿಗೆ ಹಾಲಿಗೆ ಜೇನು ಸೇರಿಸಿದಷ್ಟು ಸಂತೋಷವನ್ನುಂಟು ಮಾಡಿದೆ. ಈ ಎಪ್ಪತ್ತೈದು ವರ್ಷಗಳಲ್ಲಿ ಶ್ರೀಮಠದ ಕಾರ್ಯ ವರ್ಣನಾತೀತ. ಶ್ರೀಮಠದ ಹಚ್ಚ ಹಸುರು ಆವರಣ, ಕಣ್ಮನ ಸೆಳೆಯುವ ಬ್ರಿಟಿಷ-ತುಳುನಾಡು ವಾಸ್ತುಶೈಲಿಯ ಪ್ರಾರ್ಥನಾ ಮಂದಿರ ಭಕ್ತಿಭಾವವನ್ನು ಉದ್ದಿಪಿಸುವಂತಿದೆ. ಮಂದಿರದ ಗರ್ಭದಲ್ಲಿ ಪ್ರತಿಷ್ಠಿತರಾಗಿರುವ ದಿವ್ಯತ್ರಯರು ಭಕ್ತರ ಪಾಲಿನ ಕಲ್ಪತರುವಾಗಿದ್ದಾರೆ. ಈ ಆಶ್ರಮದಲ್ಲಿ ಪ್ರತಿನಿತ್ಯ ವೇದಮಂತ್ರಘೋಷ, ಭಗವದ್ಗೀತಾ ಪಠನ, ಪೂಜೆ, ಧ್ಯಾನ, ಭಜನೆ ಸಂಧ್ಯಾರತಿ, ಪಾಠಪ್ರವಚನಗಳು ಕಳೆದ ಎಪ್ಪತ್ತೈದು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವುದು ವಿಶೇಷ. ಪ್ರತಿವರ್ಷ ದಿವ್ಯತ್ರಯರ ಜಯಂತಿ, ಮಹಾಪುರುಷರ ಜಯಂತಿಗಳು, ಹಬ್ಬ-ಹರಿದಿನಗಳು, ನಿಯಮಿತವಾಗಿ ಆಯೋಜಿತವಾಗುವ ಆಧ್ಯಾತ್ಮಿಕ ಶಿಬಿರಗಳು, ಜಪಯಜ್ಞ, ಸತ್ಸಂಗಗಳು ಮಂಗಳೂರಿನ ಜನತೆಯನ್ನು ಆಧ್ಯಾತ್ಮಿಕವಾಗಿ ಶ್ರೀಮಂತಗೊಳಿಸಿವೆ.
ಸೇವಾಕ್ಷೇತ್ರದಲ್ಲಂತೂ ರಾಮಕೃಷ್ಣ ಮಿಷನ್ ತನ್ನ ವಿಶೇಷತೆಯನ್ನು ಮೆರೆದಿದೆ. ಕಳೆದ ಎಪ್ಪತ್ತೈದು ವರ್ಷಗಳಿಂದ ಗ್ರಾಮೀಣ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ, ವಸತಿ ಹಾಗೂ ಮಾರ್ಗದರ್ಶನ ನೀಡಲು ಬಾಲಕಾಶ್ರಮವೆಂಬ ವಿದ್ಯಾರ್ಥಿನಿಲಯವನ್ನು ಮುನ್ನಡೆಸಿಕೊಂಡು ಬಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸ ನೀಡಿ ಸಂಸ್ಕಾರಯುತ ಪ್ರಜೆಗಳನ್ನಾಗಿಸಿದೆ. ಇದರೊಂದಿಗೆ ಪ್ರತಿನಿತ್ಯ ಮಠದ ಸುತ್ತಮುತ್ತಲಿನ ಪಾಠ್ಯಚಟುವಟಿಕೆಗಳಲ್ಲಿ ಹಿಂದುಳಿಯುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಶೈಕ್ಷಣಿಕ ದತ್ತು ಪಡೆದು ಬೋಧನೆ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ. ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ ನೀಡುವುದರೊಂದಿಗೆ ನಿಯಮಿತವಾಗಿ ಶಾಲಾ- ಕಾಲೇಜು ಅಧ್ಯಾಪಕರಿಗೆ, ಯುವಜನತೆಗೆ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.
ಆರೇಳು ವರ್ಷಗಳಿಂದೀಚಿಗೆ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಮಂಗಳೂರಿನ ಮನೆಮಾತಾಗಿದೆ. ಜಾತಿ-ಮತ, ಪಕ್ಷ-ಪಂಗಡ, ಮೇಲು-ಕೀಳೆಂಬ ಬೇಧಭಾವಗಳಿಲ್ಲದೇ ಆಬಾಲವೃದ್ಧರಾದಿಯಾಗಿ ಎಲ್ಲರು ಒಗ್ಗಟ್ಟಿನಿಂದ ಸಮಾಜಸೇವಾಕಾರ್ಯ ಮಾಡಲು ರಾಮಕೃಷ್ಣ ಮಿಷನ್ ನಮ್ಮೆಲ್ಲರಿಗೂ ಅವಕಾಶಮಾಡಿಕೊಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಪ್ರತಿ ಭಾನುವಾರ ಶ್ರಮದಾನ, ಪ್ರತಿನಿತ್ಯ ಮನೆಮನೆ ಭೇಟಿ, ಸ್ವಚ್ಛ ಮನಸ್ ಕಾರ್ಯಕ್ರಮ, ದಕ-ಉಡುಪಿ ಜಿಲ್ಲೆಗಳಲ್ಲಿ ಸ್ವಚ್ಛಗ್ರಾಮ ಅಭಿಯಾನ, ಕಾಲೇಜು ವಿದ್ಯಾರ್ಥಿಗಳಿಗೆ ಸ್ವಚ್ಛ ಸೋಚ್‍ನಂತಹ ಕಾರ್ಯಕ್ರಮಗಳ ಮೂಲಕ ಈÀ ಸ್ವಚ್ಛ ಮಂಗಳೂರು ಅಭಿಯಾನ ದೇಶಾದ್ಯಂತ ಮಾದರಿಯಾಗಿದೆ. ಐದು ವರ್ಷಗಳ ಈ ಕಾರ್ಯ ಜನಮಾನಸದಲ್ಲಿ ಸ್ವಚ್ಛತೆಯ ಕುರಿತು ಜಾಗೃತಿಗೈಯುವುದರ ಜೊತೆಗೆ ಸಮಾಜದ ಬಗ್ಗೆ ಜನತೆಯಲ್ಲಿ ಕಾಳಜಿ-ಬದ್ಧತೆಗಳನ್ನು ಬೆಳೆಸುವಲ್ಲಿಯೂ ಯಶಸ್ವಿಯಾಗಿದೆ. ಹತ್ತು ಸಾವಿರಕ್ಕೂ ಅಧಿಕ ಸ್ವಯಂಸೇವಕರು ಈ ಸ್ವಚ್ಛತಾ ಅಭಿಯಾನದ ಶಕ್ತಿಯಾಗಿ ರೂಪುಗೊಂಡು ಮಂಗಳೂರನ್ನು ಆದರ್ಶ ನಗರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ.
ಶ್ರೀಮಠದ ಈ ಸೇವಾಕಾರ್ಯಗಳನ್ನು ವಿಶೇಷವಾಗಿ ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕ್ರಮವನ್ನು ಗುರುತಿಸಿ ಕರ್ನಾಟಕದ ಸರಕಾರವು ಈ ವರ್ಷ ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷ ರಾಜ್ಯೋತ್ಸವ ಪ್ರಶಸ್ತಿ’ ಯನ್ನು ನೀಡಿರುವುದಕ್ಕಾಗಿ ಮಂಗಳೂರು ನಗರವೇ ಸಂಭ್ರಮಿಸಿದೆ. ಮಠದ ಪೂಜ್ಯ ಸ್ವಾಮಿಜಿಗಳು “ಈ ಪ್ರಶಸ್ತಿ ಮಂಗಳೂರು ಜನತೆಗೆ ಸಮರ್ಪಿತ!” ಎಂದಿದ್ದಾರೆ ಹೀಗಾಗಿ ಇದೀಗ ನಮ್ಮೆಲ್ಲರ ಜವಾಬ್ದಾರಿ ಇಮ್ಮಡಿಯಾಗಿರುವುದು ಸುಳ್ಳಲ್ಲ. ಶ್ರೀಮಠವನ್ನು ಅನೇಕ ಗೌರವ-ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಪ್ರಮುಖವಾಗಿ ದಕ ಜಿಲ್ಲಾಡಳಿತ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2012, ಶ್ರೀ ಏರ್ಯ ಪ್ರಶಸ್ತಿ -2013, ಮಂಗಳೂರು ಮಹಾನಗರ ಪಾಲಿಕೆ ಕೊಡಮಾಡುವ ಶ್ರೀ ಉಳ್ಳಾಲ ಶ್ರೀನಿವಾಸ ಮಲ್ಯ ಪ್ರಶಸ್ತಿ-2019, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಶಸ್ತಿ-2019, ರೋಟರಿ ಕ್ಲಬ್ ನೀಡುವ ವಂದನಾ ಪ್ರಶಸ್ತಿ-2019, ಕಾರ್ಡೋಲೈಟ್ ನೀಡುವ ಎನ್ವಿರೋನ್‌ಮೆಂಟ್ ಎಕ್ಸಲನ್ಸ್ ಅವಾರ್ಡ್-2019, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಕನ್ನಡ ಸಿರಿ ಪುರಸ್ಕಾರ-2021 ಸೇರಿದಂತೆ ಅನೇಕ ಸಮ್ಮಾನ ಗೌರವಗಳು ಶ್ರೀಮಠಕ್ಕೆ ಸಮರ್ಪಿತವಾಗಿವೆ.