ಯಕ್ಷಗಾನವನ್ನು ಗಂಡುಕಲೆ ಎಂದು ಹೇಳುವ ಮಾತಿದೆ. ಈ ವಾಕ್ಯವು ತಪ್ಪು ಕಲ್ಪನೆಗೆ ಅವಕಾಶ ಮಾಡಿ ಕೊಟ್ಟಿದೆ. ಇಲ್ಲಿ ಗಂಡು ಎಂದರೆ 'ಬಲಿಷ್ಠ' ಎಂಬ ಅರ್ಥವೇ ಹೊರತು ಗಂಡಸರು ಮಾತ್ರ ನಿರ್ವಹಿಸಬೇಕಾದ ಕಲೆ ಎಂದು ಅರ್ಥೈಸಬಾರದು. ಪ್ರಾಕೃತಿಕವಾಗಿ, ಶಾರೀರಿಕವಾಗಿ ಹೆಣ್ಣಿಗಿಂತಲೂ ಗಂಡೇ ಬಲಿಷ್ಠನಾಗಿರುವ ಕಾರಣ "ಶ್ರೇಷ್ಠ" ಎಂಬ ಅರ್ಥದಲ್ಲಿ "ಗಂಡುಕಲೆ"ಯೇ ಹೊರತು, ಯಕ್ಷಗಾನ ಕೇವಲ ಗಂಡಸರ ಕಲೆ, ಹೆಣ್ಮಕ್ಕಳಿಗಲ್ಲಾ ಎಂಬ ಅರ್ಥದಲ್ಲಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಯಕ್ಷರಂಗಕ್ಕೆ ಹೆಣ್ಮಕ್ಕಳ ಪ್ರವೇಶ ಇತ್ತೀಚಿನ ಬೆಳವಣಿಗೆಯಲ್ಲ. ಎಷ್ಟೋ ವರ್ಷಗಳ ಹಿಂದೆಯೇ ಹೆಣ್ಣುಮಕ್ಕಳು ಯಕ್ಷಗಾನದ ಪಾತ್ರ ನಿರ್ವಹಿಸಿದ ದಾಖಲೆಯಿದೆ. ಇಂತಹ ಒಂದು ಐತಿಹಾಸಿಕ ಕಲೆಯಲ್ಲಿ ಮಿಂಚುತ್ತಿರುವವರು ಯಕ್ಷಗಾನ, ಕಥಾಕರ್ತೆ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಕಲಾವಿದೆ ಶ್ರೀಮತಿ ಅರ್ಪಿತಾ ಹೆಗಡೆ.
30.11.1994 ರಂದು ಶ್ರೀಮತಿ ಶ್ರೀದೇವಿ ಹೆಗಡೆ ಹಾಗೂ ಸುರೇಶ್ ಹೆಗಡೆ ಇವರ ಮಗಳಾಗಿ ಜನನ. ಅನಿಮೇಷನ್ ಶಿಕ್ಷಣ ಹಾಗೂ BBA ಇವರ ವಿದ್ಯಾಭ್ಯಾಸ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಇವರ ತಂದೆ ಹಾಗೂ ತಾಯಿ ಪ್ರೇರಣೆ ಎಂದು ಹೇಳುತ್ತಾರೆ ಅರ್ಪಿತಾ ಅವರು.ಪ್ರಾಥಮಿಕ ಯಕ್ಷಗಾನ ಶಿಕ್ಷವನ್ನು ಯಕ್ಷ ದೇಗುಲ ಸಂಸ್ಥೆಯಲ್ಲಿ ಕಲಿತರು. ಶ್ರೀಯುತ ಕೃಷ್ಣಮೂರ್ತಿ ತುಂಗಾ ಇವರ ಯಕ್ಷಗಾನದ ಗುರುಗಳು.
ಲವ ಕುಶ ಕಾಳಗ, ಚಕ್ರವ್ಯೂಹ ಇವರ ನೆಚ್ಚಿನ ಪ್ರಸಂಗಗಳು. ಕೃಷ್ಣ, ಅಭಿಮನ್ಯು, ಲವ, ಕುಶ, ಅಂಬೆ, ದಾಕ್ಷಾಯಣಿ, ರಾಧಾಂತರಂಗ ರಾಧೆ, ಬಬ್ರುವಾಹನ, ಚಿತ್ರಾಂಗದೆ, ಸಾಲ್ವ ಇವರ ನೆಚ್ಚಿನ ವೇಷಗಳು. ಸಾಲಿಗ್ರಾಮ, ಪೆರ್ಡೂರು, ಅಮೃತೇಶ್ವರಿ, ಸೌಕೂರು ಹಾಗೂ ಇವರದೆ ಮೇಳವಾದಂತಹ ಸಿರಿಕಲಾ ಮೇಳದಲ್ಲಿ ತಿರುಗಾಟವನ್ನು ಮಾಡಿದ್ದಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-
ಪ್ರಸಂಗದ ಪ್ರತಿ ಓದುವುದು, ಅ ದಿನದ ಪ್ರಸಂಗದ ಬಗ್ಗೆ ಓದಿ ತಿಳಿದುಕೊಂಡು, ಹಾಗೂ ಪ್ರಸಂಗದ ಬಗ್ಗೆ ಅನುಭವ ಇರುವ ಕಲಾವಿದರ ಹತ್ತಿರ ಹೋಗಿ ಪ್ರಸಂಗದ ಬಗ್ಗೆ ಕೇಳುವುದು ಹಾಗೂ ನಾನು ಮಾಡಿರುವ ಪಾತ್ರವೇ ಮತ್ತೊಮ್ಮೆ ಸಿಕ್ಕಿದಲ್ಲಿ ಅ ಪಾತ್ರದಲ್ಲಿ ಇನ್ನು ಏನು ಹೊಸ ವಿಷಯಗಳನ್ನು ಮಾಡಬಹುದು ಎಂದು ಯೋಚನೆ ಮಾಡುತ್ತೇನೆ. ಹೀಗೆ ರಂಗಕ್ಕೆ ಹೋಗುವ ಮೊದಲು ತಯಾರಿಯನ್ನು ಮಾಡುತ್ತೇನೆ ಎಂದು ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
Corona ಬಂದಾಗಿನಿಂದ ಯಕ್ಷಗಾನ ಕಾರ್ಯಕ್ರಮಗಳು ಕಮ್ಮಿ ಆಗಿತ್ತು. ಇವಾಗ ಸ್ವಲ್ಪ ಮಟ್ಟಿಗೆ ಯಕ್ಷಗಾನ ಮತ್ತೆ ಪ್ರಾರಂಭವಾಗಿದೆ. ಯಕ್ಷಗಾನ ಕ್ಷೇತ್ರಕ್ಕೆ ಯುವ ಕಲಾಭಿಮಾನಿಗಳು ಬರುವುದು ಸ್ವಲ್ಪ ಕಮ್ಮಿ ಆಗಿದೆ ಎಂದು ಇವರ ಅಭಿಪ್ರಾಯ. ಒಂದು ಕಾಲದಲ್ಲಿ ಯಕ್ಷಗಾನ ರಂಗಕ್ಕೆ ಅನೇಕ ಯುವ ಪೀಳಿಗೆಯ ಕಲಾಭಿಮಾನಿಗಳು ಬಂದ್ರು. ಆದರೆ ಇವಾಗ ಯುವ ಕಲಾಭಿಮಾನಿಗಳು ಬರುವುದು ಕಮ್ಮಿ ಆಗಿದೆ. ಮುಂದಿನ ದಿನಗಳಲ್ಲಿ ಇನ್ನು ಅನೇಕ ಯುವ ಕಲಾಭಿಮಾನಿಗಳು ಯಕ್ಷಗಾನ ರಂಗಕ್ಕೆ ಬರಬೇಕು ಎಂಬುವುದು ಇವರ ಅಭಿಪ್ರಾಯ.
ಇಂದಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಒಬ್ಬೊಬ್ಬ ಪ್ರೇಕ್ಷಕರರಿಗೆ ಬೇರೆ ಬೇರೆ ತರಹದ ಅಭಿರುಚಿ ಇರುತ್ತದೆ. ಕೆಲವರಿಗೆ ಸಂಪ್ರದಾಯ ಯಕ್ಷಗಾನ ಇಷ್ಟ, ಇನ್ನೂ ಕೆಲವರಿಗೆ ಬರೀ ನಾಟ್ಯ, ಅರ್ಥಗಾರಿಕೆ, ಸಾಮಾಜಿಕ ಪ್ರಸಂಗಗಳು ಇಷ್ಟ ಹಾಗೂ ಅ ದಿನದ ಕಾರ್ಯಕ್ರಮದಲ್ಲಿ ಯಾವ ರೀತಿಯ ಪ್ರೇಕ್ಷಕರು ಇದ್ದಾರೆ ಎಂದು ನೋಡಿ ಸ್ಪಂದಿಸುವುದು ಉತ್ತಮ ಎಂದು ಹೇಳುತ್ತಾರೆ ಅರ್ಪಿತಾ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಸಿರಿ ಕಲಾ ಮೇಳದ ಅಡಿಯಲ್ಲಿ "ಯಕ್ಷ ರಥ" ಎಂಬ ಸಂಸ್ಥೆಯ ಹೆಸರಿನಲ್ಲಿ ಯಕ್ಷಗಾನ ಶಿಕ್ಷಣವನ್ನು ಹೇಳಿಕೊಡುತ್ತಿದ್ದಾರೆ. ಮುಂದೆ ಅದನ್ನು ಮುಂದುವರಿಸಿಕೊಂಡು ಹೋಗುವುದು ಹಾಗೂ ಯಕ್ಷಗಾನ ಪ್ರಸಂಗಗಳನ್ನು ಬರೆಯುವುದು ಮುಂದುವರೆಸಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ.
ಕೆಂಪೇಗೌಡ ಪ್ರಶಸ್ತಿ, ಭಾರತ ರತ್ನ ಬಾಪೂಜಿ ಪ್ರಶಸ್ತಿ ಹಾಗೂ ಅನೇಕ ಸನ್ಮಾನ ಹಾಗೂ ಪ್ರಶಸ್ತಿಗಳು ಇವರಿಗೆ ಸಿಕ್ಕಿರುತ್ತದೆ. ಪ್ರಸಂಗ ಬರೆಯುವುದು, ಪುಸ್ತಕ ಓದುವುದು, ಸಂಗೀತ ಕೇಳುವುದು ಇವರ ಹವ್ಯಾಸಗಳು.
ಪೂರ್ಣ ಚಂದ್ರ, ನಾಗ ಪಂಚಮಿ, ಪ್ರೇಮ ಸಾರಂಗ, ಗಂಡುಗಲಿ ದೇವರಾಯ ಹಾಗೂ ಚಕ್ರ ಪೂರ್ಣಿಮೆ ಇವರು ಬರೆದ ಪ್ರಸಂಗಗಳು. ಪೂರ್ಣಚಂದ್ರ ಪ್ರಸಂಗಕ್ಕೆ ಪದ್ಯ ಬರೆದವರು ದಿ.ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಹಾಗೂ ನಾಗ ಪಂಚಮಿ, ಪ್ರೇಮ ಸಾರಂಗ, ಗಂಡುಗಲಿ ದೇವರಾಯ ಹಾಗೂ ಚಕ್ರ ಪೂರ್ಣಿಮೆ ಪ್ರಸಂಗಕ್ಕೆ ಪದ್ಯ ಬರೆದವರು ಪ್ರಸಾದ್ ಮೊಗೆಬೆಟ್ಟು. ನಾಗ ಪಂಚಮಿ, ಪ್ರೇಮ ಸಾರಂಗ, ಗಂಡುಗಲಿ ದೇವರಾಯ ಪೆರ್ಡೂರು ಮೇಳದಲ್ಲಿ ಪ್ರದರ್ಶನವನ್ನು ಕಂಡಿದೆ ಹಾಗೂ ಚಕ್ರ ಪೂರ್ಣಿಮೆ ಪ್ರಸಂಗ ಸಾಲಿಗ್ರಾಮ ಮೇಳದಲ್ಲಿ ಪ್ರದರ್ಶನ ಕಂಡಿದೆ.
10.11.2019 ರಂದು ಮನೋಜ್ ಅವರನ್ನು ವಿವಾಹವಾಗಿ ಓರ್ವ ಮಗಳು ಪರ್ಣಿಕಾ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
#Photo Click: P.K.Jain, P.K Vaddarse, Shannmukha Clicks.
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
8971275651
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ