ಮೈಸೂರಿನಲ್ಲಿ ವಿದುಷಿ ಅಯನಾ ಪೆರ್ಲ ಅವರ ಭರತನಾಟ್ಯ ಪ್ರದರ್ಶನ

Upayuktha
0

ಮೈಸೂರು: ಮೈಸೂರಿನ 'ನಾದಬ್ರಹ್ಮ ಸಂಗೀತಸಭಾ'ದಲ್ಲಿ ಇದೇ ದಿನಾಂಕ 23ರ ಮಂಗಳವಾರದಿಂದ ಒಂದು ವಾರ ಕಾಲ ನಡೆಯುತ್ತಿರುವ ವಸುಂಧರೋತ್ಸವದಲ್ಲಿ ಕರಾವಳಿಯ ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರ ಭರತನಾಟ್ಯ ಪ್ರದರ್ಶನವು 24ರ ಬುಧವಾರದಂದು ಸಂಜೆ ಅತ್ಯಂತ ಯಶಸ್ವಿಯಾಗಿ ಪ್ರದರ್ಶಿತವಾಯಿತು.


'ಲಂಬೋದರ ಲಕುಮಿಕರ' ಎಂಬ ಗಣಪತಿ ಸ್ತುತಿಯೊಂದಿಗೆ ಆರಂಭಗೊಂಡ ಪ್ರದರ್ಶನವು ರೇವತಿ ರಾಗದಲ್ಲಿರುವ ಶಿವಸ್ತೋತ್ರ 'ನಮಸ್ತೇ ಅಸ್ತು ಭಗವನ್' ಎಂಬುದರ ಮೂಲಕ ಮುಂದುವರಿಯಿತು.


ಅನಂತರದ 'ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ..' ಎಂಬ ಖಮಾಜ್ ರಾಗದಲ್ಲಿರುವ ಮುತ್ತಯ್ಯ ಭಾಗವತರ ರಚನೆ ಚಾಮುಂಡೇಶ್ವರಿಯ ಸ್ತುತಿಗೀತೆ ದರುವರ್ಣವು ಮನೋಜ್ಞವಾಗಿ ಅಭಿನೀತವಾಯಿತು.


ಬಳಿಕ ಅಭಿನಯಕ್ಕೆ ವಿಪುಲ ಅವಕಾಶವಿರುವ - ಆದಿತಾಳದಲ್ಲಿರುವ ರಾಗಮಾಲಿಕೆ ಪುರಂದರದಾಸರ ರಚನೆಯಾದ 'ಇಂಥಾ ಹೆಣ್ಣನು ನಾನೆಲ್ಲು ಕಾಣೆನು' ಎಂಬುದಕ್ಕೆ ಅಯನಾ ಅವರು ಭಾವಪೂರ್ಣವಾದ ಸುಂದರ ಅಭಿನಯ ನೀಡಿದರು.


ಕೊನೆಯಲ್ಲಿ ಕದನಕುತೂಹಲ ರಾಗದಲ್ಲಿರುವ ಎಂ. ಬಾಲಮುರಳಿಕೃಷ್ಣ ಅವರ ರಚನೆಯಾದ ತಿಲ್ಲಾನವು ಸ್ಪಷ್ಟ ಅಡವು ಹಾಗೂ ಆಂಗಿಕದಿಂದ ತುಂಬ ಚೆನ್ನಾಗಿ ಮೂಡಿ ಬಂತು.


ಮೈಸೂರಿನ ಪ್ರಬುದ್ಧ ಪ್ರೇಕ್ಷಕರು ವಿದುಷಿ ಅಯನಾ ಪೆರ್ಲ ಅವರ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನವನ್ನು ಮುಕ್ತವಾಗಿ ಶ್ಲಾಘಿಸಿದರು.


'ವಸುಂಧರೋತ್ಸವ' ಸಂಚಾಲಕಿ, ಪ್ರಸಿದ್ಧ ಕಲಾವಿದೆ ವಿದುಷಿ ವಸುಂಧರಾ ದೊರೆಸ್ವಾಮಿ ಕಲಾವಿದೆಯನ್ನು ನೆನಪಿನ ಕಾಣಿಕೆಗಳನ್ನಿತ್ತು ಶಾಲು ಹೊದೆಸಿ ಸನ್ಮಾನಿಸಿದರು. ಶ್ರೀಮತಿ ಭುವನ ಕಾರ್ಯಕ್ರಮ ನಿರೂಪಿಸಿದರು.


ಪಕ್ಕವಾದ್ಯದಲ್ಲಿ ನಟ್ಟುವಾಂಗದಲ್ಲಿ ವಿದುಷಿ ಶಾರದಾಮಣಿ ಶೇಖರ್, ಹಾಡುಗಾರಿಕೆಯಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಮೃದಂಗದಲ್ಲಿ ಉಡುಪಿಯ ಬಾಲಚಂದ್ರ ಭಾಗವತ್ ಮತ್ತು ಕೊಳಲಿನಲ್ಲಿ ಅಭಿಷೇಕ್ ಉತ್ತಮ ರೀತಿಯಲ್ಲಿ ಸಹಕಾರ ನೀಡಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top