ಹಕ್ಕಿಗಳಾಗುವ ನಾವು... ಹಾರುತ ಮರೆಯುವ ನೋವು

Upayuktha
0

ಹಾಸ್ಟೆಲ್ ಜೀವನದ ಮೆಲುಕು... 


ಹಾಸ್ಟೆಲ್ ಎಂದರೆ ಬೇರೆ ಬೇರೆ ಪ್ರದೇಶಗಳಿಂದ ಬಂದ ಹಕ್ಕಿಗಳು ಒಂದೆಡೆ ಸೇರುವ ಗೂಡು. ಇಲ್ಲಿ ಯಾವುದೇ ಜಾತಿ, ಧರ್ಮ, ವಣ೯ಗಳ ಭೇದ ಭಾವವಿಲ್ಲ. ಎಲ್ಲರೂ ನಮ್ಮವರೇ ಎಂಬ ಭಾವ ಹಾಸ್ಟೆಲ್ ನಲ್ಲಿ ಮೂಡುತ್ತದೆ. ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿ, ಅಜ್ಜ, ಅಜ್ಜಿ ಇವರೆಲ್ಲರೊಂದಿಗೆ ಇದ್ದು, ತನ್ನ ವಿದ್ಯಾಭ್ಯಾಸದ ಒಂದು ಹಂತದ ನಂತರ, ಕನಸಿನ ತೇರನ್ನು ಹೊತ್ತು ಮುಂದಿನ ಓದಿಗಾಗಿ ಹಲವರು ಹಾಸ್ಟೆಲ್ ಕಡೆ ಮುಖ ಮಾಡಲೇಬೇಕು. 

      

ಮನೆಯವರನ್ನು ಬಿಟ್ಟು ಹೊಸ ಜಾಗ, ಹೊಸ ಜನರು ಅವರೊಂದಿಗೆ ಹೇಗೆ ಹೊಂದಿಕೊಳ್ಳುವುದು ಎಂಬ ಭಯದಿಂದ ಹಾಸ್ಟೆಲ್ ಗೆ ಕಾಲಿಡುವ ಮುಂಚೆ ಅನೇಕರು ಗಂಗಾ ಕಾವೇರಿಯನ್ನು ಹರಿಸುವುದಿದೆ. ಆದರೆ, ದಿನ ಕಳೆದಂತೆ ಹಾಸ್ಟೆಲ್ ನಲ್ಲಿ ನಮ್ಮ ಜೀವನಕ್ಕೊಂದು ತಿರುವು ಕೊಡುವುದಂತು ನಿಜ. ನಮ್ಮ ಜೀವನದ ಪಯಣಕ್ಕೆ ಅದ್ಭುತವಾದ ಅನುಭವಗಳನ್ನು ನೀಡುವ ಹಾಸ್ಟೆಲ್ ಜೀವನ ನಿಜಕ್ಕೂ ಸುಮಧುರ.  

    

ಈ ಪುಟ್ಟ ಪ್ರಪಂಚದಲ್ಲಿ ಮನೆ ಮಂದಿ ನಮ್ಮಿಂದ ದೂರವಿದ್ದರೂ ಸೀನಿಯರ್ಸ್ ಅಕ್ಕನ ಸ್ಥಾನದಲ್ಲಿದ್ದು, ಜೂನಿಯರ್ಸ್ ತಂಗಿ ಸ್ಥಾನವನ್ನು ತುಂಬುತ್ತಾರೆ. ಪ್ರತಿಯೊಂದು ಸುಖ ದುಃಖಗಳಿಗೆ ಜೊತೆಯಾಗಿ ನಿಲ್ಲುವ ರೂಮೆಂಟ್ಸ್ ಗಳಿಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. 


ನಾವು ಮಾಡುವ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿ ಸರಿದಾರಿಗೆ ತರಲು ಪ್ರಯತ್ನಿಸುವ ವಾಡ೯ನ್ ಗಳಿಗೆ ಎಂದಿಗೂ ಚಿರಋಣಿ. ಅಮ್ಮನಲ್ಲದಿದ್ದರೂ, ಅಮ್ಮನ ಸ್ಥಾನದಲ್ಲಿದ್ದು ನಮ್ಮ ಸಮಯಕ್ಕೆ ಸರಿಯಾಗಿ ಊಟ ತಿಂಡಿಗಳನ್ನು ತಯಾರಿಸಿ, ಎಲ್ಲರನ್ನೂ ಕರೆದು ಬಡಿಸುವ ಅಡುಗೆ ಆಂಟಿಯವರೆಂದೇ ಖ್ಯಾತರಾಗಿರುವ ಹಾಸ್ಟೆಲ್ ನ ಅಡುಗೆ ಸಿಬ್ಬಂದಿಗಳು ನಮಗೆ ಏನೇ ಆರೋಗ್ಯ ಸಮಸ್ಯೆಗಳು ಬಂದರೂ ಉಪಚರಿಸುವ ಪರಿ ನಿಜಕ್ಕೂ ಅದ್ಭುತ.

      

ಓದಿಗೆ ಇಲ್ಲಿ ದೊರಕುವಷ್ಟು ಸಮಯಾವಕಾಶ ಮನೆಯಲ್ಲಂತು ಖಂಡಿತ ಸಿಗದು. ದೊರಕುವ ಸಮಯವನ್ನು ಸರಿಯಾಗಿ ಉಪಯೋಗಿಸುವ ರೀತಿ ನಮಗೆ ತಿಳಿದಿರಬೇಕು. ಸಂಬಂಧಗಳ ಬೆಲೆ ತಿಳಿಸಿಕೊಡುವ ಹಾಸ್ಟೆಲ್, ಇನ್ನೊಬ್ಬರ ಜೊತೆ ನಮ್ಮ ವತ೯ನೆ ಹೇಗಿರಬೇಕು, ಹಿರಿಯರಿಗೆ ಗೌರವ ನೀಡುವ ಪರಿ ಎಲ್ಲವನ್ನೂ ತಿಳಿಸಿಕೊಡುತ್ತದೆ.


ಆಧುನಿಕ ದಿನಗಳಲ್ಲಿ ಮನೆಯವರೆಲ್ಲರೂ ಒಟ್ಟಿಗೆ ಸೇರಿ ಒಂದೊತ್ತು ಊಟ ಮಾಡುವುದು ಅಪರೂಪ. ಆದರೆ ಹಾಸ್ಟೆಲ್ ನಲ್ಲಿ ದಿನದ ಮೂರೊತ್ತು ಕೂಡಾ ಎಲ್ಲರೂ ಜೊತೆ ಸೇರಿ ಊಟ ಮಾಡುವಾಗ ಸಿಗದ ಆನಂದ ಬೇರೆಲ್ಲೂ ಸಿಗದು. ದಿನಂಪ್ರತಿ ಕಾಲೇಜಿನಲ್ಲಿ ನಡೆಯುವ ವಿಷಯಗಳನ್ನು ರೂಮೆಂಟ್ಸ್ ಗಳೊಂದಿಗೆ ಹಂಚಿಕೊಳ್ಳದಿದ್ದರೆ ಆ ದಿನ ನಿದಿರೆಯೂ ಬಾರದು. ಸಮಯ ಸಿಕ್ಕಲೆಲ್ಲಾ ಹರಟೆ ಹೊಡೆಯುತ್ತಾ, ಹಲವು ವಿಚಾರಗಳನ್ನು ತಿಳಿಯುತ್ತೇವೆ. 


ಹಾಸ್ಟೆಲ್ ಜೀವನದ ಅನುಭವ ಎಷ್ಟು ಬರೆದರೂ ಪದಗಳೇ ಸಾಲದು...


-ಸರೋಜ ಪಿ ಜೆ ದೋಳ್ಪಾಡಿ

ತೃತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top