ಮಂಗಳೂರು ವಿವಿ: ಯಕ್ಷಗಾನ ಅಧ್ಯಯನ ಕೇಂದ್ರದ 'ದಶಮಸಂಭ್ರಮ'

Upayuktha
0

 


ಮಂಗಳಗಂಗೋತ್ರಿ: ದಶಮಾನೋತ್ಸವದ ಸಂಭ್ರಮದಲ್ಲಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ.ಪಿ.ಸತೀಶ್ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನ ಕ್ಷೇತ್ರದ ಸಾಧಕರಿಗೆ 'ದಶಮಾನೋತ್ಸವ ಪ್ರಶಸ್ತಿ' ನೀಡಿ ಗೌರವಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತೆಂಕು, ಬಡಗುತಿಟ್ಟಿನ ಹಿಮ್ಮೇಳ ಹಾಗೂ ಮುಮ್ಮೇಳ ಸೇರಿದಂತೆ ಹದಿನೈದು ಮಂದಿ 'ದಶಮಾನೋತ್ಸವ  ಪ್ರಶಸ್ತಿ'ಗೆ ಹಾಗೂ ಯಕ್ಷಗಾನ ಸಾಹಿತ್ಯ ಕ್ಷೇತ್ರದ ಇಬ್ಬರು ಸಾಧಕರು 'ಕೃತಿಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ


ಮುಮ್ಮೇಳದ ಸಾಧಕರಾದ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಪೇತ್ರಿ ಮಾಧವ ನಾಯ್ಕ್, ಮುಖ್ಯಪ್ರಾಣ ಕಿನ್ನಿಗೋಳಿ, ಕೃಷ್ಣ ಯಾಜಿ ಬಳ್ಕೂರು, ಆರ್ಗೋಡು ಮೋಹನದಾಸ್ ಶೆಣೈ,  ಶಿವರಾಮ ಜೋಗಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ಕುಂಬ್ಳೆ ಸುಂದರ್ ರಾವ್, ಹಿಮ್ಮೇಳ ಕ್ಷೇತ್ರದ ಸಾಧಕರಾದ ಸುಬ್ರಹ್ಮಣ್ಯ ಧಾರೇಶ್ವರ, ಕುರಿಯ ಗಣಪತಿ ಭಟ್ ,  ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ,  ಪದ್ಯಾಣ ಶಂಕರನಾರಾಯಣ ಭಟ್, ಹರಿನಾರಾಯಣ ಬೈಪಾಡಿತ್ತಾಯ 'ದಶಮಾನೋತ್ಸವ ಪ್ರಶಸ್ತಿ' ನೀಡಲಾಗುವುದು. ಯಕ್ಷಗಾನ ಸಾಹಿತ್ಯ ಕೃತಿಗಳನ್ನು ರಚಿಸಿರುವ ಡಾ.ಉಪ್ಪಂಗಳ ಶಂಕರ ನಾರಾಯಣ ಭಟ್, ಗೂಡಾ.ಚಂದ್ರ ಶೇಖರ್ ದಾಮ್ಲೆ ಅವರು ದಶಮಾನೋತ್ಸವದ 'ಕೃತಿಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.


ಅಲ್ಲದೆ ದಶಮಾನೋತ್ಸವದ ಸಂದರ್ಭದಲ್ಲಿ ಯಕ್ಷಗಾನಕ್ಕೆ ಹಾಗೂ ಯಕ್ಷಗಾನ ಕೇಂದ್ರದ ಬೆಳವಣಿಗೆಗೆ ಸಹಕಾರ ನೀಡಿದ ಮಹನೀಯರನ್ನು ಕೇಂದ್ರದ ವತಿಯಿಂದ ಗೌರವಿಸಲಾಗುವುದು. ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ದಶಮಾನೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ, ಸನ್ಮಾನ ನಡೆಯಲಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಶ್ರೀಪತಿ ಕಲ್ಲೂರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ದಶಮಸಂಭ್ರಮ


ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಪರಿಪೂರ್ಣ ರಂಗಭೂಮಿಯಾದ ಯಕ್ಷಗಾನ ಅಧ್ಯಯನ, ಪ್ರಕಟಣೆ, ಸಂವರ್ಧನೆ ಮತ್ತು ಸಂರಕ್ಷಣೆಗಾಗಿ ಮಂಗಳೂರು ವಿವಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಯಕ್ಷಗಾನದ ಕುರಿತ ಅಧ್ಯಯನ ಮತ್ತು ಸಂಗ್ರಹ, ವಿಚಾರ ಸಂಕಿರಣ, ಪ್ರಚಾರೋಪನ್ಯಾಸ, ದಾಖಲಾತಿ,  ಯಕ್ಷತರಬೇತಿ, ಪ್ರಾತ್ಯಕ್ಷಿಕೆ, ಯಕ್ಷಮಂಗಳ ಪ್ರಶಸ್ತಿ ನೀಡುವಿಕೆ, ಪ್ರಚಾರೋಪನ್ಯಾಸಗಳನ್ನು ನಡೆಸಲಾಗುತ್ತಿದೆ. ಕಲಾವಿದರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಮುಖ್ಯ ಆಕರವಾಗಬಲ್ಲ ಸುಸಜ್ಜಿತ ಗ್ರಂಥಾಲಯ, ಅನನ್ಯವಾದ ವಸ್ತು ಸಂಗ್ರಹಾಲಯ ನಿರ್ಮಾಣ,  ಸಹಯೋಗದ ಕಾರ್ಯಕ್ರಮಗಳು. ಇಂತಹ ಬಹುಮುಖಿ ಉದ್ದೇಶ, ಕಾರ್ಯ ಯೋಜನೆಗಳೊಂದಿಗೆ ಮುನ್ನಡೆಯುತ್ತಿರುವ ಕೇಂದ್ರ ಈ ಬಾರಿ ದಶಮ ಸಂಭ್ರಮವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top