ಗಡಿಯಲ್ಲಿ ಕನ್ನಡಕ್ಕೆ ಆತಂಕವಿದೆ: ವಿವಿಯಲ್ಲಿ ಕನ್ನಡ ಡಿಂಡಿಮ ಉದ್ಘಾಟಿಸಿ ಡಾ. ಸಿ ಸೋಮಶೇಖರ್

Chandrashekhara Kulamarva
0


ಮಂಗಳ ಗಂಗೋತ್ರಿ: ಸಮೃದ್ಧ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗಡಿಪ್ರದೇಶಗಳಲ್ಲಿ ಆತಂಕ ತಲೆದೋರಿದೆ. ಕರ್ನಾಟಕ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಗಡಿ ಭಾಗದ ಕನ್ನಡಕ್ಕೆ ರಕ್ಷಣೆ ಮತ್ತು ಪೋಷಣೆ ನೀಡಲಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಸಿ ಸೋಮಶೇಖರ್ ಹೇಳಿದರು.


ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ನಡೆದ ಕನ್ನಡ ಡಿಂಡಿಮ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡದ ಕವಿಗಳು ನಾಡು ನುಡಿಯ ಬಗೆಗೆ ಅಪಾರ ಅಭಿಮಾನದಿಂದ ಹಾಡಿದ್ದಾರೆ. ಅವರ ಹಾಡುಗಳಲ್ಲಿ ಕನ್ನಡ ನಾಡು, ಸಂಸ್ಕೃತಿ, ಜೀವನ ಸಂದೇಶಗಳಿವೆ. ಅದನ್ನು ಅರ್ಥ ಮಾಡಿಕೊಂಡು ನಾವು ಕೂಡ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಕರಾವಳಿ ಜನತೆ ಕನ್ನಡ ಭಾಷಾ ಶುದ್ಧತೆ ಹೊಂದಿರುವುದನ್ನು ಅವರು ಶ್ಲಾಘಿಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ, ಕಲೆ ಸಾಹಿತ್ಯ ಸಂಸ್ಕೃತಿಯ ಕುರಿತಾದ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದ್ದರೆ ನಾಡಿನ ಒಳ ಮನಸ್ಸು ಆರೋಗ್ಯ ಪೂರ್ಣವಾಗಿರುತ್ತದೆ. ಅದಕ್ಕೆ ವಿವಿಯ ವಿವಿಧ ಪೀಠಗಳ ಸಹಭಾಗಿತ್ವದಲ್ಲಿ ನಿತ್ಯೋತ್ಸವ ನಡೆಯುವಂತೆ ಯೋಜನೆ ರೂಪಿಸಲಾಗುವುದು ಎಂದರು.


ಸಮಾರಂಭದಲ್ಲಿ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ, ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್ ಧರ್ಮ, ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ಸೋಮಣ್ಣ, ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.


ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಪರಿಚಾರಿಕೆಯಲ್ಲಿ ತೊಡಗಿದ ಹೋರಾಟಗಾರರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕವಿ ಕಯ್ಯಾರ ಕಿಂಞಣ್ಣ ರೈ ಹೆಸರಲ್ಲಿ ರಾಜ್ಯ ಪ್ರಶಸ್ತಿ ನೀಡಲಾಗುವುದು ಎಂದು ಡಾ. ಸಿ ಸೋಮಶೇಖರ್ ಘೋಷಿಸಿದರು.


ಜೀವನ್ ರಾಂ ಸುಳ್ಯ ಮತ್ತು ಬಳಗದವರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು.ಶ್ರೀವಾಣಿ ಕಾಕುಂಜೆ ಮತ್ತು ಸುನಾದ ಕುಂಟಾರು ಇವರು ಕನ್ನಡ ಹಾಡುಗಳನ್ನು ಹಾಡಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
To Top