ಮೂಡಬಿದ್ರೆ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮೂಡಬಿದ್ರೆ ಘಟಕದ ನೂತನ ಕಛೇರಿ ಉದ್ಘಾಟನೆಯು ದಿನಾಂಕ: 14-11-2021 ರಂದು ಭಾನುವಾರ ಮೂಡಬಿದ್ರೆ ತಾಲೂಕು ನಾಡಕಛೇರಿ ಕಟ್ಟಡದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಮುಲ್ಕಿ ಮತ್ತು ಮೂಡಬಿದ್ರೆ ಶಾಸಕರಾದ ಮಾನ್ಯ ಉಮಾನಾಥ ಕೋಟ್ಯಾನ್ ಇವರು ಕಛೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ಅವರು ಸಭಾ ಕರ‍್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀಮೋಹನ್ ಚೂಂತಾರು ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು, ಇಂಜಿನಿಯರ್‌ಗಳು, ಸರಕಾರಿ ನೌಕರರಿರಬಹುದು ಬೇರೆ ಬೇರೆ ವೃತ್ತಿಯ ಎಲ್ಲರೂ ಸೇರಿಕೊಂಡು ದೇಶಕ್ಕಾಗಿ ದುಡಿಯುವ ಸಂಸ್ಥೆಯೆಂದರೆ ಅದು ಗೃಹರಕ್ಷಕ ಸಂಸ್ಥೆ, ಹೀಗೆ ಎಲ್ಲರೂ ಒಟ್ಟು ಸೇರಿ ಉತ್ತಮ ಬಾಂಧವ್ಯವನ್ನು ಹೊಂದಿ ನಮ್ಮದೇ ಆದ ಸ್ವಂತ ಸೂರಿಗೆ ಬಂದು ಸೇರಿಕೊಂಡಿದ್ದೇವೆ. ಈ ನಮ್ಮ ಹೊಸ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಲಿ. ನಮಗೆ ಶಾಸಕರು ಮಾಡಿದಂತಹ ಸಹಾಯ ಮತ್ತಷ್ಟು ಹುರುಪಿನಿಂದ, ಹುಮ್ಮಸ್ಸಿನಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲು ಶಕ್ತಿ ಕೊಡಲಿ ಎಂದು ನುಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹರಕ್ಷಕರ ಒಟ್ಟು ಸಂಖ್ಯಾಬಲ 1000 ಆಗಿದ್ದು, ಪ್ರಸ್ತುತ 815 ಮಂದಿ ಸಕ್ರಿಯ ಗೃಹರಕ್ಷಕರು ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಜನರ ಹಾಗೂ ಆಸ್ತಿಪಾಸ್ತಿ ರಕ್ಷಣೆ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಈಗ ಈ ಘಟಕಕ್ಕೆ ಸ್ವಂತ ಸೂರು ದೊರೆತಿರುವುದು ಸಂತಸ ತಂದಿದೆ ಎಂದು ನುಡಿದರು. ಈ ಶ್ರಮದ ಹಿಂದೆ ಹಲವರ ಸಹಕಾರ, ಆಶೀರ್ವಾದ ಇದೆ ಮತ್ತು ಶಕ್ತಿನೂ ಇದೆ. ಗೃಹರಕ್ಷಕ ಇಲಾಖೆಗೆ ಇನ್‌ಫೋಸಿಸ್ ಕಂಪನಿಯವರು ಈಗಾಗಲೀ 4 ಕಂಪ್ಯೂಟರ್‌ಗಳನ್ನು 4 ಘಟಕಗಳಿಗೆ ನೀಡಿದ್ದಾರೆ. ಇನ್ನೂ 12 ಕಂಪ್ಯೂಟರ್‌ಗಳನ್ನು ನೀಡಲಿದ್ದಾರೆ ಅದನ್ನು ಆದ್ಯತೆ ಮೇರೆಗೆ ಮೊದಲು ಮೂಡಬಿದ್ರೆ ಘಟಕಕ್ಕೆ ನೀಡಲಾಗುತ್ತದೆ. ಏಕೆಂದರೆ ಇನ್ನು ಮುಂದೆ ಕಾಗದ ರಹಿತ ಕಛೇರಿ ಆಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರಾದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಹಾಗೂ ಮುಖ್ಯಮಂತ್ರಿ ಪದಕ ಮತ್ತು ರಾಷ್ಟ್ರಪತಿ ಪದಕ ವಿಜೇತರಾದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಉಪಸಮಾದೇಷ್ಟರಾದ ಶ್ರೀ ರಮೇಶ್ ಇವರನ್ನು ಮೂಡಬಿದ್ರೆ ಘಟಕದ ವತಿಯಿಂದ ಫಲಕ ಹಾಗೂ ಫಲಪುಷ್ಟ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಟರಾದ ಶ್ರೀ ರಮೇಶ್ ಅವರು ಮಾತನಾಡಿ 50 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಮೂಡಬಿದ್ರೆ ಘಟಕ ಉತ್ತಮ ಸಮಾಜಮುಖಿ ಕೆಲಸ ಮಾಡುತ್ತಿದೆ. ಅವರ ಸೇವೆ ಶ್ಲಾಘನೀಯ ಎಂದು ನುಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಘಟಕಾಧಿಕಾರಿ ದಯಾನಂದ ಪೈ ಮತ್ತು , ಮಾಜಿ ಘಟಕಾಧಿಕಾರಿ ಅಣ್ಣು ದೇವಾಡಿಗ ಭಾಗವಹಿಸಿದ್ದರು ಹಾಗೂ ಮೂಡಬಿದ್ರೆ ಘಟಕದ ಪ್ರಭಾರ ಘಟಕಾಧಿಕಾರಿ ಪಾಂಡಿರಾಜ್, ಮತ್ತು ಮೂಡಬಿದ್ರೆ ಘಟಕದ 48 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.