ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಿ: ಪ್ರೊ.ಕಿಶೋರ್ ಕುಮಾರ್
ಮಂಗಳಗಂಗೋತ್ರಿ : ಹಲವು ಜಾತಿ, ಧರ್ಮ, ಭಾಷೆಗಳನ್ನು ಹೊಂದಿರುವ ಭಾರತವು ಸಾಮರಸ್ಯಕ್ಕೆ ಹೆಸರಾದ ದೇಶ. ಈ ದೇಶದ ಪ್ರಜೆಗಳಾಗಿ ನಾವು ಜಾತ್ಯತೀತ ಮನೋಭಾವ ಬೆಳಸಿಕೊಳ್ಳಬೇಕು. ಕನಕದಾಸರಂತಹ ಸಂತರ ಚಿಂತನೆಗಳು ಜಾತಿ ಧರ್ಮಗಳ ಬಗೆಗೆ ಭಿನ್ನಾಭಿಪ್ರಾಯ ಬೇಡ ಎಂಬ ಸಂದೇಶ ನೀಡಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕಿಶೋರ್ ಕುಮಾರ್.ಸಿ.ಕೆ ಹೇಳಿದರು.
ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಹರೇಕಳ ಶ್ರೀರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿʻಕನಕಜಯಂತಿʼ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾನಿಲಯದ ದತ್ತು ಸ್ವೀಕೃತ ಶಾಲೆಗಳಲ್ಲಿ ಕನಕದಾಸರ ಜೀವನ ಮತ್ತು ಸಾಹಿತ್ಯ ಕುರಿತ ಉಪನ್ಯಾಸ ಮತ್ತು ರಸಪ್ರಶ್ನೆ ಕಾರ್ಯಕ್ರಮ 'ಕನಕಾಭಿಯಾನ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಕನಕ ಜಯಂತಿಯ ಮೊದಲೇ ಕವಿಯ ಕುರಿತು ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಜಯಂತಿ ಆಚರಣೆಯನ್ನು ಅರ್ಥಪೂರ್ಣಗೊಳಿಸುತ್ತವೆ. ಸೋಲಿನ ಕಹಿಯಿಂದ ತಿಮ್ಮಪ್ಪ ನಾಯಕ ಎಂಬ ಸೇನಾ ನಾಯಕ, ಕನಕನಾದ. ನಾವೂ ಸವಾಲುಗಳನ್ನು ಸ್ವೀಕರಿಸಿ ಹೊಸ ಸಾಧನೆಯ ದಾರಿಗಳನ್ನು ನಾವು ಕಂಡುಕೊಳ್ಳಬೇಕು” ಎಂದರು.
ಮುಖ್ಯ ಅತಿಥಿ ಶ್ರೀರಾಮಕೃಷ್ಣ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಜಯರಾಮ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ವಿನಯವಂತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಶಾಲಾ ದತ್ತು ಸ್ವೀಕಾರ ಯೋಜನೆಯ ಸಂಯೋಜಕ ಡಾ. ಪ್ರಶಾಂತ್ ನಾಯ್ಕ್ ಮಾತನಾಡಿ, ತಳ ವರ್ಗದಿಂದ ಬಂದ ಕನಕ ದಾಸರು ಭಕ್ತಿಮಾರ್ಗದಲ್ಲಿ ಮಹಾನ್ ಸಾಧನೆ ಮಾಡಿ ತಮ್ಮ ಚಿಂತನೆಗಳ ಮೂಲಕ ಜೀವಂತರಾಗಿದ್ದಾರೆ ಎಂದು ಹೇಳಿದರು.
ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾಲತ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಪ್ರಾಸ್ತವಿಕವಾಗಿ ಮಾತನಾಡಿದರು. ಯಕ್ಷಗಾನ ಅರ್ಥಧಾರಿ, ಪೊಸಕುರಲ್ ಮಾಧ್ಯಮದ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಾಪಕ ಕೃಷ್ಣ ಶಾಸ್ತ್ರಿ ಸ್ವಾಗತಿಸಿದರು, ನೋಡಲ್ ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಸಬಿತ ವಂದಿಸಿದರು. ಶ್ರೀರಾಮಕೃಷ್ಣ ಅನುದಾನಿತ ಪ್ರೌಢ ಶಾಲೆಯ ಅಧ್ಯಾಪಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ರವಿಶಂಕರ್, ಕನಕ ಕೀರ್ತನೆ ಹಾಡಿದರು.
ʻಕನಕಾಭಿಯಾನʼ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದತ್ತು ಸ್ವೀಕೃತ ಹತ್ತು ಶಾಲೆಗಳಲ್ಲಿ ಕನಕದಾಸರ ಜೀವನ ಮತ್ತು ಸಾಹಿತ್ಯದ ಕುರಿತು ಉಪನ್ಯಾಸ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ.