||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಲ್ಲಿ ಜೀವನ ನಡೆವುದೋ ಅದೇ ನನ್ನೂರು... ಯಾರು ಸ್ನೇಹದಿ ಬರುವರೋ ಅವರೇ ನನ್ನೋರು...

ಎಲ್ಲಿ ಜೀವನ ನಡೆವುದೋ ಅದೇ ನನ್ನೂರು... ಯಾರು ಸ್ನೇಹದಿ ಬರುವರೋ ಅವರೇ ನನ್ನೋರು...ಎಲ್ಲಿ ಜೀವನ ನಡೆವುದೋ ಅದೇ ನನ್ನೂರು,

ಯಾರು ಸ್ನೇಹದಿ ಬರುವರೋ ಅವರೇ ನನ್ನೋರು...


ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು. 


ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾವುದೋ ಉದ್ಯೋಗ ಮಾಡಿ ಒಂದು ಕಡೆ ಶಾಶ್ವತವಾಗಿ ನೆಲೆನಿಂತ. ಅದು ಎಷ್ಟರಮಟ್ಟಿಗೆ ಎಂದರೆ ಆತನ ಹುಟ್ಟು ಬದುಕು ಸಾವು ಎಲ್ಲವೂ ಒಂದೇ ಪ್ರದೇಶದಲ್ಲಿ ನಡೆಯುತ್ತಿತ್ತು. ಆ ಸ್ಥಳದಿಂದ ಆತ ದೂರ ಸರಿಯುತ್ತಿದ್ದುದು ತೀರಾ ಅಪರೂಪ. ಭಾವನಾತ್ಮಕವಾಗಿ ಆತ ಆ ಪ್ರದೇಶದ ಬಗ್ಗೆ ತುಂಬಾ ಅಭಿಮಾನ ಹೊಂದಿರುತ್ತಿದ್ದ.


ಯಾವಾಗ ಜನಸಂಖ್ಯೆ ಹೆಚ್ಚಾಗಿ ಬದುಕಿನ ಅನಿವಾರ್ಯತೆಗಾಗಿ ಕೈಗಾರಿಕೀಕರಣ ಮತ್ತು ಅದರಿಂದಾಗಿ ಸೃಷ್ಟಿಯಾದ ನಗರೀಕರಣ ಪ್ರಾರಂಭವಾಯಿತೋ ಆಗ ಈ ಪ್ರದೇಶದ ಭಾವನಾತ್ಮಕ ಸಂಬಂಧ ಸಡಿಲವಾಗತೊಡಗಿತು.


ತಾತ ಮುತ್ತಾತಂದಿರು ಹುಟ್ಟಿ ಬೆಳೆದ ಊರಿನಿಂದ ಮಕ್ಕಳು, ಮಕ್ಕಳು ಇದ್ದ ಸ್ಥಳದಿಂದ ಮೊಮ್ಮಕ್ಕಳು, ಅಲ್ಲಿಂದ ಮರಿ ಮಕ್ಕಳು ಬೇರೆ ಬೇರೆ ವಾಸ ಸ್ಥಾನಗಳನ್ನು ಹುಡುಕಿಕೊಂಡು ಹೊರಟರು. ನಮ್ಮ ಪೂರ್ವಿಕರ ನಿಜವಾದ ಪ್ರದೇಶಗಳು ಪತ್ತೆ ಹಚ್ಚವುದೇ ಕಷ್ಟವಾಯಿತು. ಎಲ್ಲೋ ಅಪರೂಪದಲ್ಲಿ ನೂರು ಇನ್ನೂರು ವರ್ಷಗಳಷ್ಟು ದೀರ್ಘಕಾಲ ಒಂದೇ ಸ್ಥಳದಲ್ಲಿ ವಾಸವಾಗಿರುವ ಕೆಲವು ಕುಟುಂಬಗಳು ಉದಾಹರಣೆಗೆ ಸಿಗಬಹುದು.


ಇಂತಹ ಸಂದರ್ಭ ಮತ್ತು ಸನ್ನಿವೇಶದಲ್ಲಿ ಮೇಲಿನ ಸಿನಿಮಾ ಹಾಡು ನೆನಪಾಗುತ್ತದೆ. ಒಂದು ಊರಿನಲ್ಲಿ, ಒಂದೇ ಮನೆಯಲ್ಲಿ ಹತ್ತು ಇಪ್ಪತ್ತು ವರ್ಷ ವಾಸಿಸುವುದೇ ಒಂದು ದೊಡ್ಡ ಸಾಧನೆಯಾಗಿದೆ. ಸ್ವಂತ ಮನೆಯವರು ಆಯ್ಕೆಗಳಿಲ್ಲದೆ ಸ್ವಲ್ಪ ದೀರ್ಘಕಾಲ ಒಂದೇ ಮನೆಯಲ್ಲಿ ಉಳಿಯಬಹುದು. ಬಾಡಿಗೆ ಮನೆಯವರಿಗೆ, ವರ್ಗಾವಣೆ ಇರುವ ಉದ್ಯೋಗ ವ್ಯವಹಾರ ಮಾಡುವವರಿಗೆ, ಹೊಸ ಅವಕಾಶಗಳ ಹುಡುಕಾಟದವರಿಗೆ ಐದು ಹತ್ತು ವರ್ಷಗಳೇ ದೊಡ್ಡ ಸಮಯವಾಗಿರುತ್ತದೆ.


ನಮ್ಮ ಮೂಲ ಬೇರುಗಳು ಸಡಿಲವಾದಂತೆ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತದೆ. ಈ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಇದಕ್ಕಿಂತ ಅಪಾಯಕಾರಿಯಾದ ಮನುಷ್ಯ ಸಂಬಂಧಗಳು ಸಡಿಲವಾಗತೊಡಗಿರುವುದು. ಪ್ರತ್ಯೇಕ ವಾಸಸ್ಥಳಗಳು ಮನುಷ್ಯರ ನಡುವಿನ ಗಾಡ ಸಂಬಂಧಗಳನ್ನು ಸಹ ಪ್ರತ್ಯೇಕಿಸಿದೆ. ಅವಿಭಕ್ತ ಕುಟುಂಬಗಳು ಸಣ್ಣ ಕುಟುಂಬಗಳಾಗಿ, ಅವು ಏಕ ಕೊಣೆಯ ಚಿಕ್ಕ ಮನೆಗಳಾಗಿ ಕೊನೆಗೆ ಹಾಸ್ಟೆಲ್ ಮತ್ತು ಪಿ.ಜಿ. ಕೇಂದ್ರಗಳಾಗಿ ರೂಪಾಂತರ ಹೊಂದುತ್ತಿವೆ. ಅಪಾರ್ಟ್ ಮೆಂಟ್ ಸಮುಚ್ಚಯಗಳಲ್ಲಿ ಪ್ರತ್ಯೇಕ ಊರಿನ ಗುಣಲಕ್ಷಣಗಳನ್ನು ಕಾಣುತ್ತಿದ್ದೇವೆ.


ಬದಲಾವಣೆ ಜಗದ ನಿಯಮ. ಅದನ್ನು ಸ್ವೀಕರಿಸಬೇಕು ನಿಜ. ಆದರೆ ಯಾವ ದಿಕ್ಕಿನತ್ತ ಈ ಬದಲಾವಣೆ ಸಾಗುತ್ತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ? ಸರಿ ಸುಮಾರು 60/80 ವರ್ಷಗಳ ಬದುಕಿನ ಬಹಳಷ್ಟು ಸಮಯವನ್ನು ನಮ್ಮ ನಿಯಂತ್ರಣವಿಲ್ಲದೆ, ಊಟ, ವಸತಿ, ವಾಹನಗಳಿಗಾಗಿ ನಮ್ಮ ಇಚ್ಚೆಗೆ ವಿರುದ್ಧವಾಗಿ ಜೀವನದ ಗುಣಮಟ್ಟ ಮತ್ತು ನೆಮ್ಮದಿಯ ಗುಣಮಟ್ಟ ಎರಡನ್ನೂ ಬಲಿಕೊಟ್ಟು ಜೀವಿಸುವುದು ನಮ್ಮ ಹುಟ್ಟನ್ನೇ ಪ್ರಸ್ನಿಸುವಂತೆ ಮಾಡುತ್ತದೆ. ಸಾರ್ಥಕ ಜೀವನ ಅಂದರೆ ಏನು ಎಂಬ ಪ್ರಶ್ನೆ ಕಾಡತೊಡಗುತ್ತದೆ. ಊಟ ವಸತಿಗಾಗಿ ಬದುಕೇ, ಗಂಡ ಹೆಂಡತಿ ಮಕ್ಕಳಿಗಾಗಿ ಬದುಕೇ, ನಮ್ಮ ಆಸಕ್ತಿಯ ಚಟುವಟಿಕೆಗಳಿಗಾಗಿ ಬದುಕೇ, ಏನಾದರೂ ಸಾಧಿಸುವುದು ಬದುಕೇ ಎಂಬ ಆಲೋಚನೆಗಳ ನಡುವೆ ಬದುಕುವುದೇ ಸಾಧನೆಯಾಗುವ ಹಂತಕ್ಕೆ ನಮ್ಮಲ್ಲಿ ಬಹುತೇಕರು ಬಂದು ತಲುಪಿದ್ದಾರೆ.


ಪರಿಸ್ಥಿತಿ ಹೀಗೇ ಮುಂದುವರಿದರೆ ಮುಖ್ಯವಾಗಿ ಯುವ ಸಮುದಾಯ ಯಂತ್ರ ಮಾನವರಾಗುವ ನಿರ್ಭಾವುಕ ಸ್ಥಿತಿ ತಲುಪಬಹುದು. ಮನೆ, ವಾಹನ, ಶಿಕ್ಷಣ, ಆರೋಗ್ಯ ಇವುಗಳಿಗಾಗಿ ಇರುವ ಹಣಕಾಸಿನ ಬ್ಯಾಂಕಿಂಗ್ ಇಎಂಐ ವ್ಯವಸ್ಥೆ ಅನೇಕ ನಗರ ಪ್ರದೇಶದ ಜನರ ಇಡೀ ಬದುಕನ್ನು ನಿಯಂತ್ರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸಾಲದ ಸುತ್ತಲೇ ಜೀವನವನ್ನು ಕಟ್ಟಿಹಾಕಿ ಮಾನವ ಸಂಪನ್ಮೂಲಗಳನ್ನು ತಮ್ಮ ಹಿತಾಸಕ್ತಿಯ ಬಳಕೆಗಾಗಿ ದುಡಿಸಿಕೊಳ್ಳುತ್ತಿರುವ ವರ್ಗದ ಬಗ್ಗೆ ನಾವು ಜಾಗೃತವಾಗಬೇಕಿದೆ. ಕೆಲವೇ ಕೆಲವು ಜನರ ಸುಖಕ್ಕಾಗಿ ಇಡೀ ಸಮೂಹ ದುಡಿಯುವುದು ನಿಜಕ್ಕೂ ದುರಂತ. ಹೋಗಲಿ ಆ ದುಡಿತದಿಂದ ನೆಮ್ಮದಿಯಾದರೂ ಸಿಗುತ್ತಿದೆಯೇ?


ಎಲ್ಲರ ಮೇಲೆ ಅಪನಂಬಿಕೆ, ಆತ್ಮಹತ್ಯೆ ಅಪರಾಧ ಅಪಘಾತ ಅನಾರೋಗ್ಯ ಹೆಚ್ಚಳ, ಇದೇ ಒತ್ತಡದ ಕಾರಣದಿಂದ ಹಣದ ಮಹತ್ವ ಹೆಚ್ಚಾಗಿ ಮಾನವಿಯ ಮೌಲ್ಯಗಳ ಕುಸಿತ. ನೆಮ್ಮದಿಗಾಗಿ ಹುಡುಕಾಟ. ಕೊರೋನಾ ನಂತರದ ದಿನಗಳಲ್ಲಿ ನಮ್ಮ ಬದುಕಿನ ದಿಕ್ಕುಗಳನ್ನು ಈ ಎಲ್ಲಾ ಹಿಂದಿನ ಅನುಭವಗಳ ಆಧಾರದಲ್ಲಿ ಮತ್ತೊಂದು ದಿಕ್ಕಿನತ್ತ ಸಾಗಿಸುವ ಪ್ರಯತ್ನ ಮಾಡಬೇಕಿದೆ. ಬದುಕಿನ ಅತ್ಯಮೂಲ್ಯ ಸಮಯವನ್ನು ಒಂದು ಆಹ್ಲಾದಕರ, ಹೆಚ್ಚು ನಗುವಿನಿಂದ ಕೂಡಿದ, ನಮ್ಮ ಆಸಕ್ತಿಯ ವಿಷಯಗಳಲ್ಲಿ ತೊಡಗಿಸಿಕೊಳ್ಳುವ, ಹೆಚ್ಚು ಒತ್ತಡವಿಲ್ಲದ, ಇಎಂಐ ಗಳಲ್ಲಿ ಬಂಧಿಯಾಗದ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕಿದೆ.


ಸ್ಪರ್ಧೆ ಇರಲಿ ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ. ಅದು ಜೂಜಾಟವಾಗುತ್ತದೆ. ಆಗ ಕೆಲವೇ ಕೆಲವು ಜನ ಆ ಜೂಜಾಟದಲ್ಲಿ ಲಾಭ ಮಾಡಿ ಉಳಿದವರು ದಿವಾಳಿಯಾಗುತ್ತಾರೆ. ಹಣದ ದಿವಾಳಿತನವೇ ಬದುಕಿನ ದಿವಾಳಿತನವಾಗುತ್ತದೆ. ನಮಗರಿವಿಲ್ಲದೆ ನಾವು ನಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡು ಬೇರೆಯವರ ದಾಳವಾಗುತ್ತಿದ್ದೇವೆ. ಜೀತದಾಳುಗಳಾಗುವ ಮುನ್ನ ದಯವಿಟ್ಟು ಎಚ್ಚೆತ್ತುಕೊಳ್ಳಿ.


ಇರುವುದೊಂದೇ ಬದುಕು. ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳಿ.

-ವಿವೇಕಾನಂದ. ಹೆಚ್.ಕೆ.

9844013068


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post