ಭಾವುಕ ಮನಸ್ಸುಗಳಿಗೆ ಸಾಹಿತ್ಯರೂಪದಲ್ಲಿ ಮನ ಮುಟ್ಟುವಂತೆ ಮಾಡುವ ಕೃತಿ ಸಂಚಾರ ವಿಚಾರ : ಡಾ. ಶ್ರೀಪತಿ ಕಲ್ಲೂರಾಯ
ಪುತ್ತೂರು: ಪ್ರಯಾಣವು ನಮಗೆ ಹೊಸತನ ಹಾಗೂ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಇಂತಹ ಪ್ರಯಾಣದ ಅನುಭವಗಳನ್ನು ಒಳಗೊಂಡಿರುವಂತಹ ಪುಸ್ತಕ 'ಸಂಚಾರ ವಿಚಾರ'. ಈ ಪುಸ್ತಕವು ಸಕಾರಾತ್ಮಕವಾದ ಭಾವನೆಗಳಿಂದ ತುಂಬಿದ್ದು, ಸರಳ ಸಾಹಿತ್ಯವನ್ನು ಬಳಸಿಕೊಂಡು ಪ್ರಸ್ತುತ ಸಾಮಾಜಿಕ ಕಾಳಜಿ, ಮೌಲ್ಯಗಳ ಕಾಳಜಿಯನ್ನು ಸೂಕ್ಷ್ಮವಾಗಿ ಗುರುತಿಸುವಂತಹ ಪುಸ್ತಕವಾಗಿದೆ. ಭಾವುಕ ಮನಸುಗಳಿಗೆ ಸಾಹಿತ್ಯ ರೂಪದಲ್ಲಿ ಮನ ಮುಟ್ಟುವಂತೆ ಮಾಡುವ ಪುಸ್ತಕ ‘ಸಂಚಾರ ವಿಚಾರ’ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.
ಅವರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕ ಇದರ ಜಂಟಿ ಸಹಯೋಗದಲ್ಲಿ ಆಯೋಜಿಸಿದ, ಡಾ.ಸಿ.ಎಸ್ ಶಾಸ್ತ್ರಿ ಅವರ 'ಸಂಚಾರ ವಿಚಾರ' ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅವರು ಡಾ.ಸಿ.ಎಸ್ ಶಾಸ್ತ್ರಿ ಅವರ ಸಂಚಾರ ವಿಚಾರ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಪ್ರಸ್ತುತ ವಿಚಾರಗಳು ತಲುಪಬೇಕಾದ್ದು ಯುವಜನತೆಗೆ. ಆಧುನಿಕ ಬದುಕಿನಲ್ಲಿ ಲೌಕಿಕ ಸೌಲಭ್ಯಗಳು ಬೆಳೆದಿದೆ ಆದರೆ ಮಾನವ ಸಂಬಂಧಗಳು ಕುಸಿಯುತ್ತಿದೆ. ಜೀವನದ ಬಹುತೇಕ ಅನುಭವಗಳು ಪ್ರಯಾಣದಿಂದ ಸಿಗುವುದು. ಪ್ರಯಾಣವು ಕಾಲದಿಂದ ಕಾಲಕ್ಕೆ ಪರಿವರ್ತನೆಯಾಗುತ್ತದೆ. ಅಂತಹ ಪರಿವರ್ತನೆಯ ವಿಭಿನ್ನ ರೂಪಗಳನ್ನು ಒಳಗೊಂಡಿರುವ ಕೃತಿಯಿದು ಎಂದರು.
ಕೃತಿ ಪರಿಚಯಿಸಿ ಮಾತನಾಡಿದ ಉಡುಪಿ ಅತ್ರಾಡಿಯ ವಿಶ್ರಾಂತ ಪ್ರಾಂಶುಪಾಲ ಡಾ. ಪಾದೆಕಲ್ಲು ವಿಷ್ಣು ಭಟ್, ಕೃತಿಯ ಪ್ರಸ್ತುತತೆಯನ್ನು ವಿವರಿಸಿ ಲೇಖಕರ ಪ್ರಯತ್ನವನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಇಲ್ಲಿನ ಆಡಳಿತ ಮಂಡಳಿಯ ಸಂಚಾಲಕರು ಮುರಳಿಕೃಷ್ಣ ಕೆ .ಎನ್. ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಪೈ, ಸಂಚಾರ ವಿಚಾರ ಕೃತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೃತಿಕಾರ ಡಾ.ಸಿ.ಎಸ್ ಶಾಸ್ತ್ರಿ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಸ್ವಾತಿ ಹಾಗೂ ಶಿವಪ್ರಿಯ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಸ್ವಾಗತಿಸಿ , ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್ .ಜಿ. ಶ್ರೀಧರ್ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ