|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಷ್ಠೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರು... ಆದರೆ ಬದುಕು ಮಾತ್ರ 'ನಾಯಿ' ಪಾಡು

ನಿಷ್ಠೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರು... ಆದರೆ ಬದುಕು ಮಾತ್ರ 'ನಾಯಿ' ಪಾಡು



ಬಹುಷಃ ಮಾನವನಿಗೆ ಅತ್ಯಂತ ವಿಧೇಯವಾಗಿರುವ ಪ್ರಾಣಿಯೆಂದರೆ ನಾಯಿ. ಒಂದು ತುತ್ತು ಅನ್ನ ಹಾಕಿದರೆ ಸಾಕು, ಜನ್ಮ ಪೂರ್ತಿ ಮರೆಯದ ಪ್ರಾಮಾಣಿಕ ಪ್ರಾಣಿಯೊಂದಿದ್ದರೆ ಅದು ನಾಯಿ ಮಾತ್ರ. ಸಾಮಾನ್ಯರಿಂದ ತೊಡಗಿ ಸೈನಿಕನವರೆಗೂ ನಾಯಿಯ ಔಚಿತ್ಯ ಬಹಳವೇ ಇದೆ. ತನ್ನ ಯಜಮಾನನೆಂದು ಗುರುತಿಸಲ್ಪಟ್ಟವನನ್ನು ನಾಯಿಯು ಅದೆಷ್ಟು ಪ್ರೀತಿಸುತ್ತದೆಂದರೆ, ಎಷ್ಟೇ ಹೊಡೆದರೂ, ದೂರ ಮಾಡಿದರೂ, ಉಪವಾಸವಿಟ್ಟರೂ ಒಡೆಯನಿಗೆ ಕೇಡು ಬಗೆಯದು. ಆದ್ದರಿಂದ ನಿಷ್ಠೆಯನ್ನು ನಾವು ನಾಯಿಯಿಂದಲೇ ಕಲಿಯಬೇಕು. ಹಾಗಾದರೆ ನಾಯಿಯ ಪ್ರಾಮಾಣಿಕತೆ ಮಾನವನಿಗಿದೆಯೇ? ಉತ್ತರ ಸಮಾಧಾನಕರವಾಗಿಲ್ಲ. ನಾಯಿಗಳನ್ನು ಮಕ್ಕಳಂತೆ ಸಾಕುವ ಒಂದು ವರ್ಗವಿದ್ದರೆ, ರಾಕ್ಷಸರಂತೆ ವರ್ತಿಸಿ ದಾರಿಯಲ್ಲಿ ಬಿಡುವ ಒಂದು ವರ್ಗವೂ ಇದೆ. 


ಸಹಜವಾಗಿ ನಾಯಿ ಮರಿಗಳನ್ನಿಟ್ಟಾಗ ಅದಕ್ಕೆ ಆಶ್ರಯ ತಾಯಿಯೇ ಆಗಿರುತ್ತದೆ. ಅನ್ನ ತಿನ್ನುವಷ್ಟಾಗುವಲ್ಲಿವರೆಗೆ ಅದನ್ನು ಬೇರ್ಪಡಿಸಿದರೆ ಮರಿಗಳು ಬದುಕುವುದು ಸಾಧ್ಯವೇ ಇಲ್ಲ. ಹೆಚ್ಚಾಗಿ ವಾಹನಗಳ ಅಡಿಯಲ್ಲಿ ಬಿದ್ದು ಸಾಯುವಂಥವೇ ಜಾಸ್ತಿ. ಗಂಡು ಮರಿಯಾದರೆ ಹಣ ಕೊಟ್ಟಾದರೂ ಕೊಂಡು ಹೋಗುವವರಿದ್ದಾರೆ. ಆದರೆ ಹೆಣ್ಣು ಮರಿ ಎಂದರೆ ಅದು ಎಲ್ಲರಿಗೂ ಬೇಡದ ಜೀವವೇ. ಅದಕ್ಕೆ ಕಾರಣಗಳೂ ಇವೆ. ಒಂದನೇಯದ್ದು ಇತರ ಗಂಡು ನಾಯಿಗಳ ಗೋಳು. ಎರಡನೇಯದಾಗಿ ಮರಿಗಳ ಲಾಲನೆ ಪಾಲನೆ. ಮೂರನೆಯದಾಗಿ ಹೆಣ್ಣು ಮರಿಗಳೇ ಆದರೆ ಅದನ್ನು ಸಾಗಹಾಕುವಲ್ಲಿ ಸಮಸ್ಯೆಗಳು. ನಾಲ್ಕನೆಯದಾಗಿ ಮರಿಗಳು ದೊಡ್ಡದಾಗುವಲ್ಲಿವರೆಗೆ ಅದರ ಮಲ ಮೂತ್ರದ ವೀಲೆವಾರಿ... ಇತ್ಯಾದಿ ಇತ್ಯಾದಿ.


ಇವತ್ತಿನ ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಇದಕ್ಕೂ ಪರಿಹಾರವಿದೆ. ಹೆಣ್ಣು ಮರಿಯೆಂದು ತಿರಸ್ಕಾರ ಮಾಡಬೇಕಿಲ್ಲ. ಮರಿಯು ಪ್ರಾಯಕ್ಕೆ ಬರುವ ಮುಂಚೆ ಸಂತಾನ ಹರಣ ಚಿಕಿತ್ಸೆ ಮಾಡಿಸಿದರೆ ಗಂಡು ನಾಯಿಯಂತೆಯೇ ಹೆಣ್ಣು ಮರಿಗಳನ್ನೂ ಸಾಕಬಹುದು. 


ಮತ್ತೊಂದು ಸೂಕ್ಷ್ಮವೆಂದರೆ ಮನೆ ಕಾಯುವಲ್ಲಿ ಗಂಡು ನಾಯಿಗಿಂತ ಹೆಣ್ಣು ನಾಯಿಗಳೇ ಸದಾ ಜಾಗೃತವಾಗಿರುವುದೂ ಸತ್ಯವೇ. ನಾವು ಯಾವ್ಯಾವುದಕ್ಕೋ ಅದೆಷ್ಟೋ ಖರ್ಚು ಮಾಡುತ್ತೇವೆ. ಪ್ರಾಮಾಣಿಕತೆಗೆ ಇನ್ನೊಂದು ಹೆಸರಾದ ನಾಯಿಯಂಥ ಒಂದು ಮುಗ್ಧ ಪ್ರಾಣಿಗೆ ಒಂದಿಷ್ಟು ಖರ್ಚು ಮಾಡಿ ಅದರ ಜೀವ ಹಾಗೂ ಜೀವನವನ್ನೂ ಉಳಿಸಬಹುದು. ಮಾರ್ಗದಲ್ಲಿ ಬಿಟ್ಟ ನಾಯಿಮರಿಗಳು ಹಸಿವಿನಿಂದ ಆಕಾಶ ನೋಡಿ ಬೊಬ್ಬೆ ಹೊಡೆಯುವುದನ್ನು ನೋಡಿದಾಗ ಯಾರ ಕರುಳಾದರೂ ಒಂದು ಕ್ಷಣ ಕರಗದೇ ಇದ್ದೀತೇ?

ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಪಶುವೈದ್ಯ ಚಿಕಿತ್ಸಾ ಕೇಂದ್ರಗಳಿರುತ್ತವೆ ಅಲ್ಲಿ ಸಂತಾನ ಹರಣ ಚಿಕಿತ್ಸೆಯ ಸೌಲಭ್ಯಗಳೂ ಇರುತ್ತವೆ. ನಾಯಿಗಳ ಮೇಲೆ ಪ್ರೀತಿ ಇದ್ದು ಸಾಕಬೇಕೆನ್ನುವವರು ಹೆಣ್ಣು ಮರಿಯೆಂದು ತಿರಸ್ಕರಿಸಬೇಕಾಗಿಲ್ಲ. ಒಂದು ಹಂತದವರೇಗೆ ಸಾಕಿ ಮರಿ ಹಾಕದಂತೆ ವ್ಯವಸ್ಥೆ ಮಾಡಿಕೊಂಡರೆ ನಾಯಿ ಬಾಳು ಉತ್ತಮವಾಗಿ ನಾಯಿ ಪಾಡಾಗದು. ಹಿಂದಿನ ಕಾಲದಲ್ಲಿ ಒಂದು ಮನೆಯಲ್ಲಿ ನಾಯಿ, ಬೆಕ್ಕು, ದನ ಕರುಗಳು ಇದ್ದರೆ ಅದೊಂದು ಪರಿಪೂರ್ಣ ಜೀವನ ಮಾತ್ರವಲ್ಲ ನೆಮ್ಮದಿಯ ವಾತಾವರಣವೇ ಆಗಿರುತ್ತಿತ್ತು. ಇವತ್ತು ಒಂದೊಂದೇ ಸಂಬಂಧಗಳು ಕಳಚುತ್ತಲೇ ಬಂದು ಮನುಷ್ಯ ಸಂಬಂಧಗಳೂ ದೂರವಾಗಿ ವೃದ್ಧಾಶ್ರಮಗಳೇ ಅಂತಿಮ ಹಂತವಾಗುವಲ್ಲಿವರೇಗೆ ಬಂದುದು ನಾಗರಿಕತೆ ಎನ್ನೋಣವೇ, ಕಾಲ ಮಹಿಮೆ ಎನ್ನೋಣವೇ, ಮನುಷ್ಯನಿಗೆ ಮಾತ್ರ ಬದುಕು ಎಂಬ ಧೋರಣೆ ಎನ್ನೋಣವೇ...? ಅವರವರ ಭಾವಕ್ಕೆ...!!

**********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post