ಜನರ ಪ್ರೀತಿ, ವಿಶ್ವಾಸವೇ ಧರ್ಮಸ್ಥಳದ ಅಮೂಲ್ಯ ಆಸ್ತಿ: ಡಿ. ವೀರೇಂದ್ರ ಹೆಗ್ಗಡೆ
ಉಜಿರೆ: ತ್ಯಾಗ ಮತ್ತು ಸೇವೆಯ ಮೂಲಕ ಮಾಡುವ ಸತ್ಕಾರ್ಯಗಳಿಂದ ಪುಣ್ಯ ಸಂಚಯದೊಂದಿಗೆ ಶಾಂತಿ, ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ. ಜನರ ಪ್ರೀತಿ, ವಿಶ್ವಾಸವೇ ಧರ್ಮಸ್ಥಳದ ಅಮೂಲ್ಯ ಆಸ್ತಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಲಕ್ಷದೀಪೋತ್ಸವದ ಪ್ರಥಮ ದಿನವಾದ ಕಾರ್ತಿಕ ಸೋಮವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಸಿಗುವ ಅನುಭವದಿಂದ ಪ್ರಗತಿ ಸಾಧ್ಯವಾಗುತ್ತದೆ. ತಾನು ಧರ್ಮಸ್ಥಳದ ವತಿಯಿಂದ ಸದಾ ಲೋಕ ಕಲ್ಯಾಣಕ್ಕಾಗಿ ಸತ್ಕಾರ್ಯಗಳನ್ನು ಮಾಡುವುದಾಗಿ ಅವರು ತಿಳಿಸಿದರು.
ಧರ್ಮದ ಜಾಗೃತಿ ಹಾಗೂ ಉತ್ಥಾನದೊಂದಿಗೆ ಅಧರ್ಮ, ಅನ್ಯಾಯದ ನಾಶವೇ ನಮ್ಮ ಗುರಿಯಾಗಿರಬೇಕು. ಧರ್ಮಸ್ಥಳವು ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ಸದಾಜಾಗೃತಿಯಲ್ಲಿದ್ದು ನೆಲೆ ನಿಂತಿರುವ ಪವಿತ್ರ ಕ್ಷೇತ್ರವಾಗಿದೆ. ದೇಶ-ವಿದೇಶಗಳಿಂದ ಭಕ್ತರು ಕ್ಷೇತ್ರದ ಬಗ್ಗೆ ಹೊಂದಿರುವ ಅಪಾರ ಶ್ರದ್ಧಾ-ಭಕ್ತಿ ಮತ್ತು ಗೌರವವೇ ಇದಕ್ಕೆ ಸಾಕ್ಷಿಯಾಗಿದೆ. ಲೋಕ ಕಲ್ಯಾಣಕ್ಕಾಗಿ ಸರ್ವಜನಹಿತ ಕಾರ್ಯಗಳನ್ನು ನಿರಂತರ ತಾನು ಮುಂದುವರಿಸುವುದಾಗಿ ಅವರು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಆರ್‌ಸೆಟಿಗಳು, ಕೆರೆಗಳಿಗೆ ಕಾಯಕಲ್ಪ, ಶುದ್ಧಕುಡಿಯುವ ನೀರಿನ ಪೂರೈಕೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ಇತ್ಯಾದಿ ಸೇವಾ ಕಾರ್ಯಗಳು ಸರ್ಕಾರ ಹಾಗೂ ಸರ್ವರಿಂದಲೂ ಮಾನ್ಯತೆ ಹಾಗೂ ವಿಶ್ವಾಸಾರ್ಹತೆಯನ್ನು ಪಡೆದಿವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಪಾದಯಾತ್ರೆಯು ಲಕ್ಷದೀಪೋತ್ಸವದ ಅವಿಭಾಜ್ಯ ಅಂಗವಾಗಿದೆ. ಸಜ್ಜನ ಶಕ್ತಿ ಸಾಮೂಹಿಕವಾಗಿ ಜಾಗೃತವಾದಾಗ ಕ್ರಾಂತಿಕಾರಿ ಪರಿವರ್ತನೆ ಸಾಧ್ಯವಾಗುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ಸಾಗುವುದೇ ನಮ್ಮೆಲ್ಲರ ಉದ್ದೇಶವಾಗಿದೆ.
ಪ್ರತಿವರ್ಷವೂ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಎಲ್ಲರಿಗೂ ಸಂತೋಷ, ತೃಪ್ತಿ ಮತ್ತು ಧನ್ಯತಾಭಾವವನ್ನು ಮೂಡಿಸಿದೆ ಎಂದು ಅವರು ಹೇಳಿದರು. ಹೇಮಾವತಿ ವಿ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರಕುಮಾರ್ ಉಪಸ್ಥಿತರಿದ್ದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಇದ್ದರು.
ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ ಕುಮಾರ್ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ಹೊಸಕಟ್ಟೆ ಉತ್ಸವ : ಸೋಮವಾರ ರಾತ್ರಿ ಲಕ್ಷದೀಪೋತ್ಸವದ ಅಂಗವಾಗಿ ಹೊಸಕಟ್ಟೆ ಉತ್ಸವ ನಡೆಯಿತು. ದೇಗುಲದ ಅಂಗಣದಲ್ಲಿ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸುತ್ತುಇತ್ಯಾದಿ ಒಟ್ಟು 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಉತ್ಸವದ ಪೂಜೆಗಳು ಒಂದೇ ರೀತಿಯಾಗಿದ್ದರೂ ಪಲ್ಲಕ್ಕಿಗಳು ಮಾತ್ರ ಬೇರೆ ಬೇರೆ ಆಗಿರುತ್ತವೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ