ಉಜಿರೆ: ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆಯವರ ಸ್ಮರಣಾರ್ಥ ಗುರುವಾರ ಪಡಂಗಡಿ ಗ್ರಾಮದಲ್ಲಿರುವ ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ 108 ಕಲಶ ಅಭಿಷೇಕ, ಉತ್ಸವ, ವಿಶೇಷ ಪೂಜೆ, ಸ್ವಾಧ್ಯಾಯಕ್ಕಾಗಿ ಶ್ರುತ ಭಂಡಾರ (ಗ್ರಂಥಾಲಯ) ಉದ್ಘಾಟನೆ, 'ತ್ಯಾಗಸಿಂಧು' ಶಾಸ್ತ್ರ ದಾನ ಕೃತಿ ಲೋಕಾರ್ಪಣೆ ಮೊದಲಾದ ವಿಶೇಷ ಕಾರ್ಯಕ್ರಮಗಳು ನಡೆದವು.
ಜೈನಕಾಶಿ ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭೋಜರಾಜ ಹೆಗ್ಡೆ ಸ್ಮಾರಕ ಶ್ರುತ ಭಂಡಾರ (ಗ್ರಂಥಾಲಯ)ವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಧರ್ಮಕ್ಕೂ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ಧರ್ಮದ ನೆಲೆಯಲ್ಲಿ ಕೆಲಸ ಮಾಡಿದಾಗ ಜೀವನ ಪಾವನವಾಗುತ್ತದೆ. ಧರ್ಮವು ನಮ್ಮ ವರ್ತನೆಗಳನ್ನು ಪರಿವರ್ತನೆ ಮಾಡಿ ಮೋಕ್ಷ ಸಾಧನೆಗೆ ಮಾರ್ಗದರ್ಶನ ನೀಡುತ್ತದೆ ಎಂದು ಸ್ವಾಮೀಜಿ ಹೇಳಿದರು.
ಎಲ್ಲಾ ಶ್ರಾವಕರು ನಿತ್ಯವೂ ದೇವರು, ಗುರು ಮತ್ತು ಶಾಸ್ತ್ರದ ಆರಾಧನೆಯೊಂದಿಗೆ ಷಟ್ಕರ್ಮಗಳನ್ನು ಮಾಡಬೇಕು. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಜಪ, ತಪ, ಧ್ಯಾನ ಮಾಡಿ, ನಿತ್ಯವೂ ಒಂದು ಗಂಟೆಯಾದರೂ ಸ್ವಾಧ್ಯಾಯ ಮಾಡಬೇಕು ಎಂದು ಸ್ವಾಮೀಜಿಯವರು ಸಲಹೆ ನೀಡಿದರು.
ಇತ್ತೀಚೆಗೆ ನಿಧನರಾದ ಪಡಂಗಡಿ ಭೋಜರಾಜ ಹೆಗ್ಡೆಯವರು ಸಾಧು-ಸಂತರ ಸೇವೆಯಲ್ಲಿ ಪರಿಣತರಾಗಿದ್ದು ಎಲ್ಲಾ ಮುನಿಗಳು ಹಾಗೂ ಭಟ್ಟಾರಕರುಗಳ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿದ್ದರು. ಸರಳ, ಸಾತ್ವಿಕ ವ್ಯಕ್ತಿತ್ವವನ್ನು ಹೊಂದಿದ ಅವರು ಸದಾ ನಗುಮೊಗದದಿಂದ ಎಲ್ಲರೊಂದಿಗೂ ಮುಕ್ತವಾಗಿ ವಿಚಾರ ವಿನಿಮಯ ಮಾಡುತ್ತಿದ್ದರು ಎಂದು ಹೇಳಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಮುನಿರಾಜ ರೆಂಜಾಳ ಮತ್ತು ಬಜಗೋಳಿಯ ಭರತ್‌ರಾಜ್ ಜೈನ್ “ತ್ಯಾಗ ಸಿಂಧು” ಕೃತಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳೊಂದಿಗೆ ಮಾಹಿತಿ ನೀಡಿದರು. “ತ್ಯಾಗಸಿಂಧು” ಕೃತಿಯನ್ನು ಎಲ್ಲರಿಗೂ ಸ್ವಾಧ್ಯಾಯಕ್ಕಾಗಿ ಶಾಸ್ತ್ರದಾನ ರೂಪದಲ್ಲಿ ವಿತರಿಸಲಾಯಿತು. ಪಂಚ ನಮಸ್ಕಾರ ಮಂತ್ರ ಪಠಣ ಹಾಗೂ ಮಹಾಮಂಗಳಾರತಿಯೊಂದಿಗೆ ಸಭೆ ಮುಕ್ತಾಯಗೊಂಡಿತು.
ಭೋಜರಾಜ ಹೆಗ್ಡೆಯವರ ಮಗ ವಿನಯ ಪ್ರಸಾದ್‌ಜೈನ್ ಮತ್ತು ಕುಟುಂಬಸ್ಥರು, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಉಜಿರೆಯ ಪ್ರೊ.ದಿನೇಶ್ ಚೌಟ, ಮೂಡಬಿದ್ರೆಯ ಯುವರಾಜ ಜೈನ್, ಹಿರಿಯ ವಕೀಲ ನೇಮಿರಾಜ ಶೆಟ್ಟಿ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ