ಮೂಲ್ಕಿ: ಇಲ್ಲಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಶಿರೂರಿನ ಫಣಿಗಿರಿ ಪ್ರತಿಷ್ಠಾನದ ಉದ್ಘಾಟನೆ, ಮೂಲಿಕೆಯ ವೆಂಕಣ್ಣ ಕವಿ ವಿರಚಿತ 'ಮಾನಸ ಚರಿತ್ರೆ' ಹಾಗೂ ಶಿರೂರು ಫಣಿಯಪ್ಪಯ್ಯ ವಿರಚಿತ 'ವಾಜಿಗ್ರಹಣ ಅಥವಾ ಯೌವನಾಶ್ವ ಕಾಳಗ' ಯಕ್ಷಗಾನ ಪ್ರಸಂಗಗಳ ಬಿಡುಗಡೆ ನೆರವೇರಿತು.
ಯಕ್ಷಗಾನ ವಿದ್ವಾಂಸ, ಸಾಹಿತಿ, ಛಾಂದಸ, ದಾಸಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿರುವ, ಯಕ್ಷಗಾನ ಅಷ್ಣಾವಧಾನಿ, ಬಹುಶ್ರುತ ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಮೂಲ್ಕಿಯ ವೆಂಕಟರಮಣ ದೇವಸ್ಥಾನದಲ್ಲಿದ್ದು ಮೂಲಿಕೆಯ ವೆಂಕಣ್ಣಕವಿ (1750-1830) ರಚಿಸಿದ್ದ 'ಮಾನಸ ಚರಿತ್ರೆ' ಯಕ್ಷಗಾನ ಪ್ರಸಂಗ ಪಠ್ಯವನ್ನು ತಾಡವಾಲೆ ಹಾಗೂ ಕೈಬರಹದಲ್ಲಿದ್ದುದನ್ನು ಸ್ವೀಕರಿಸಿ ಶುದ್ಧಪ್ರತಿಯಾಗಿ ಸಂಸ್ಕರಿಸಿ ಸಂಪಾದಿಸಿದ್ದರು. ಮೂಲ ತಾಳವಾಡೆ ಹಾಗೂ ಕೈಬರಹ ಪ್ರತಿಗಳು ಶಿರೂರಿನ ಫಣಿಯಪ್ಪಯ್ಯ ಅವರ ಮನೆಯ ಗ್ರಂಥಭಂಡಾರದಿಂದ ಲಭಿಸಿತ್ತು.
'ಮಾನಸ ಚರಿತ್ರೆ' ಪ್ರಸಂಗ ಪಠ್ಯವನ್ನು ಕಾಪಿಟ್ಟವರಾದ ಪ್ರಸಂಗಕರ್ತ, ಭಾಗವತರೂ ಆಗಿದ್ದ ಶಿರೂರಿನ ಫಣಿಯಪ್ಪಯ್ಯ (1981-2004) ಅವರ 'ವಾಜಿಗ್ರಹಣ ಅಥವಾ ಯೌವನಾಶ್ವ ಕಾಳಗ' ಕೈ ಬರಹದ ಯಕ್ಷಗಾನ ಪ್ರಸಂಗ ಪಠ್ಯವನ್ನು ಸಂಪಾದಿಸಿ ಭಾರದ್ವಾಜರೇ ಮುದ್ರಣಕ್ಕೆ ಸಿದ್ಧಗೊಳಿಸಿದ್ದರು. ಈ ಎರಡೂ ಕೃತಿಗಳ ಸಾದ್ಯಂತ ಪರಿಚಯವನ್ನು ಮಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರತಿಷ್ಠಾನವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ವೆಂಕಟರಮಣ ದೇವಳದ ಆಡಳಿತೆ ಮೊಕ್ತೇಸರ ದಾಮೋದರ ಕುಡ್ವ ಅವರು 'ಮಾನಸ ಚರಿತ್ರೆ' ಯಕ್ಷಗಾನ ಪ್ರಸಂಗವನ್ನು ಬಿಡುಗಡೆಗೊಳಿಸಿದರು.ವೆಂಕಣ್ಣ ಕವಿಯ ಭಜನೆಯ ಹಾಡುಗಳನ್ನು ದೇವಳದಲ್ಲಿ ಹಿಂದಿನಿಂದಲೂ ಭಜನೆಯಾಗಿ ಹಾಡಲಾಗುತ್ತಿದೆ ಎಂದರು.
ವಾಜಿಗ್ರಹಣ ಪ್ರಸಂಗವನ್ನು ಬಿಡುಗಡೆಗೊಳಿಸಿದ ಜಾನಪದ ಸಂಶೋಧಕ ಕೆ.ಎಲ್. ಕುಂಡಂತಾಯ ಅವರು ಪುರಾತನ ಪ್ರಸಂಗಳ ಅನ್ವೇಷಣೆ ಹಾಗೂ ಪ್ರಕಟಣೆ ಕಾರ್ಯ ನಡೆಸುತ್ತಿರುವ ಫಣಿಯಪ್ಪಯ್ಯ ಪ್ರತಿಷ್ಠಾನದ ಕಾರ್ಯ ನಿರಂತರವಾಗಲಿ ಎಂದು ಶುಭ ಹಾರೈಸಿದರು.
ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ವ, ನರಸಿಂಹ ಪೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮುದ್ದಣ ಪ್ರಕಾಶನದ ಅಧ್ಯಕ್ಷ ನಂದಳಿಕೆ ಬಾಲಚಂದ್ರರಾವ್, ಕಾರ್ಯಕ್ರಮ ಸಂಘಟಿಸಿದ್ದ ಉಮೇಶರಾವ್, ದಿನೇಶ ಉಪ್ಪೂರು, ಲೇಖಕ ರಾಜಗೋಪಾಲ ಕನ್ಯಾನ, ಕೃಷ್ಣಮೂರ್ತಿ ಪುರಾಣಿಕ ಬ್ರಹ್ಮಾವರ, ಜನಾರ್ದನ ಮರವಂತೆ ಉಪಸ್ಥಿತರಿದ್ದರು.
ಸತ್ಯನಾರಾಯಣ ಪುರಾಣಿಕ್ ಸ್ವಾಗತಿಸಿದರು.ಎಸ್.ಉಮೇಶ ಶಿರೂರು ಪ್ರಸ್ತಾವಿಸಿದರು.ರಾಮಕೃಷ್ಣ ಶಿರೂರು ಕಾರ್ಯಕ್ರಮ ನಿರೂಪಿಸಿದರು.
ಎರಡೂ ಪ್ರಸಂಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ವಿದ್ವಾಂಸ ಡಾ. ವಸಂತ ಭಾರದ್ವಾಜ ಅವರಿಗೆ ಫಣಿಗಿರಿ ಪ್ರತಿಷ್ಠಾನದ ಮೊತ್ತಮೊದಲ 'ಫಣಿಗಿರಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ವೆಂಕಟ್ರಮಣ ದೇವಳವತಿಯಿಂದ ಅತಿಥಿಗಳೆಲ್ಲರನ್ನೂ ಸಮ್ಮಾನಿಸಲಾಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ