ಭೂತಕಾಲದಲ್ಲಿ ಬಂಧಿಯಾಗದೆ, ಭವಿಷ್ಯದ ಪ್ರವರ್ತಕರಾಗುವೆಡೆಗೆ ಶ್ರಮಿಸಬೇಕು: ಅರವಿಂದ್ ಕೆಪಿ

Upayuktha
0


ಆಳ್ವಾಸ್ ತುಲಿಪು: 2021


ಮೂಡುಬಿದಿರೆ: ಉದ್ಯೋಗ ನಿಮಿತ್ತ ನಾವಿಂದು ಬೇರೆ ಬೇರೆ ಭಾಷೆಗಳ ಆಸರೆ ಪಡೆದರೂ, ತುಳು ಭಾಷೆ ಎಂದೂ ನಮ್ಮ ಹೃದಯದ ಭಾಷೆಯಾಗಿರುತ್ತದೆ ಎಂದು ಕನ್ನಡ ಬಿಗ್‌ಬಾಸ್ ಸೀಸನ್ 8ರ ರನ್ನರ್ ಅಪ್ ಅರವಿಂದ ಕೆಪಿ ನುಡಿದರು.


ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ತುಳು ಸಂಘ ಎಐಇಟಿ ಅಡಿಟೋರಿಯಂನಲ್ಲಿ ಆಯೋಜಿಸಿದ್ದ ''ತುಲಿಪು 2021'' ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 


ತುಳು ಭಾಷೆ ನಮ್ಮ ನಡುವೆ ಸದಾ ಜೀವಂತವಿರುತ್ತದೆ. ನಮ್ಮ ಆಚರಣೆಗಳಾದ ಕೋಲ, ಕಂಬಳ, ನೇಮ, ಆಟ ಪ್ರತಿ ಕ್ಷಣ ಈ ಸಂಸ್ಕೃತಿಯ ವಿಶೇಷತೆಯನ್ನು ಸಾರುತ್ತವೆ. ಪ್ರತಿಯೊಬ್ಬರಿಗೂ ಅವರ ಭಾಷೆಯ ಬಗ್ಗೆ ಗೌರವವಿರಬೇಕು. ನಮ್ಮ ಭಾಷೆಯ ಮಹತ್ವ ನಾವು ನಮ್ಮ ಊರನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ನೆಲೆಸಲು ಆರಂಭಿಸಿದಾಗ ಮಹತ್ವ ತಿಳಿಯುತ್ತದೆ ಎಂದರು. ಜೀವನದಲ್ಲಿ ಸದಾ ಧನಾತ್ಮಕ ಚಿಂತನೆಯನ್ನು ಹೊಂದಿದರೆ ಯಶಸ್ಸನ್ನು ಪಡೆಯಲು ಸಾಧ್ಯ. ನಾವೆಂದು ಭೂತ ಕಾಲದಲ್ಲಿ ಬಂಧಿಯಾಗದೆ, ನಮ್ಮ ಭವಿಷ್ಯದ ಪ್ರವರ್ತಕರಾಗುವೆಡೆಗೆ ಶ್ರಮಿಸಬೇಕು ಎಂದರು.


ತುಳು ಭಾಷೆ ಸಂಸ್ಕೃತಿ, ಆಚರಣೆ ನನ್ನನ್ನು ಈ ಭಾಗವನ್ನು ಹೆಚ್ಚು ಪ್ರೀತಿಸುವಂತೆ ಮಾಡಿದೆ. ಜೀವನದಲ್ಲಿ ಏನೇ ಕೆಲಸ ಮಾಡಿದರೂ ಒಳ್ಳೆಯ ಉದ್ದೇಶದಿಂದಲೇ ಮಾಡಿ. ಆಗ ನಿಮಗೆ ನೆಮ್ಮದಿ ಹಾಗೂ ತೃಪ್ತಿ ಸಿಗುತ್ತದೆ ಎಂದು ಬಿಗ್ ಬಾಸ್ ಸೀಸನ್ 8ರ ಖ್ಯಾತಿಯ ದಿವ್ಯಾ ಉರುಡುಗ ತಿಳಿಸಿದರು


ತುಳು ಸಂಸ್ಕೃತಿ ಅವಿಭಕ್ತ ಕುಟುಂಬ ವ್ಯವಸ್ಥೆಗೆ ಸದಾ ಒತ್ತು ನೀಡುತ್ತಿದ್ದು, ಕುಟುಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ. ತುಳು ಜೀವನ ಸಂದೇಶವನ್ನು ನೀಡುವ ಭಾಷೆಯಾಗಿದೆ. ನಮ್ಮ ಧಾವಂತದ ಬದುಕಿನಲ್ಲಿ ಕಳೆದುಕೊಂಡ ಅಮೂಲ್ಯವಾದ ಅಂಶಗಳನ್ನು ಈ ತುಲಿಪುನಂತಹ ಕಾರ‍್ಯಕ್ರಮಗಳ ಮೂಲಕ ಪಡೆಯಲು ಸಾಧ್ಯ ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ ಕೃರೋಡಿ ತಿಳಿಸಿದರು. 


''ನಾನು ಸಹ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕೆಂಬ ಹಂಬಲದಿಂದ ಕಾಲೇಜಿನ ಪ್ರೋಸ್ಪೆಕ್ಟಸ್‌ನ್ನು ಒಯ್ದು, ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಬೇಕಾಗಿ ಬಂತು. ಆದರೆ ಇಂದು ಆಳ್ವಾಸ್ ಕಾಲೇಜಿಗೆ ಅತಿಥಿಯಾಗಿ ಬಂದಿರೋದು ನನಗೆ ಹೆಚ್ಚು ಖುಷಿ ನೀಡಿದೆ.''

- ದಿವ್ಯಾ ಉರುಡುಗ


ಜಗತ್ತಿನ ಸರ್ವಶ್ರೇಷ್ಠ ಡಕರ್ ರ‍್ಯಾಲಿ 2019ರಲ್ಲಿ ಭಾಗವಹಿಸಿ, ಕನ್ನಡದ ಬಿಗ್‌ಬಾಸ್ ಮೂಲಕ ಖ್ಯಾತಿಗಳಿಸಿದ, ಆಳ್ವಾಸ್ ಮೋಟೋರಿಗ್ ಈವೆಂಟ್‌ನ ಪ್ರೇರಕ ಶಕ್ತಿಯಾದ ಅರವಿಂದ ಕೆಪಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.  


ಆಳ್ವಾಸ್ ವಿದ್ಯಾರ್ಥಿಗಳಾದ ತಿಲಕ್ ಕುಲಾಲ್, ಶ್ರವಣ್ ಪೂಜಾರಿ ಹಾಗೂ ನಿಖಿಲ್ ಎಸ್ ಆಚಾರ‍್ಯ, ಅರವಿಂದ ಕೆಪಿ ಯ ಭಾವಚಿತ್ರವನ್ನು ಕ್ರಮವಾಗಿ ಲೀಫ್ ಆರ್ಟ್, ಕಾಫಿ ಪೈಟಿಂಗ್ ಹಾಗೂ ಪೆನ್ಸಿಲ್ ಸ್ಕೆಚ್‌ನಲ್ಲಿ ಚಿತ್ರಿಸಿ ನೀಡಿದರು. 


ತುಲಿಪು ಕಾರ‍್ಯಕ್ರಮದ ಹಿನ್ನಲೆಯಲ್ಲಿ ಅಂತರ್ ಕಾಲೇಜು ಹಾಡುಗಾರಿಕೆ, ಚರ್ಚಾ ಸ್ಪರ್ಧೆ, ಧಮ್‌ಶರಾ, ಕ್ವಿಝ್, ಚಿತ್ರಕಲೆ ಸ್ಪರ್ಧೆಯನ್ನು ಅಯೋಜಿಸಲಾಗಿತ್ತು. 


ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಛಾಯಾಗ್ರಾಹಕ ಮೋಕ್ಷಿತ್ ಪೂಜಾರಿ ಮೂಖ್ಯ ಅತಿಥಿಗಳಾಗಿ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಸುಧಾರಾಣಿ ಅಥಿತಿಯಾಗಿ ಆಗಮಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.


ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ‍್ಯ ಡಾ ಪೀಟರ್ ಫೆರ್ನಾಂಡೀಸ್, ಅರವಿಂದ ಕೆಪಿಯ ಸಹೋದರ ಪ್ರಶಾಂತ, ತುಳು ಕೂಟದ ಸಂಯೋಜಕ ಪ್ರೋ ಕೆವಿ ಸುರೇಶ್, ವಿದ್ಯಾರ್ಥಿ ಸಂಯೋಜಕರಾದ ಪದ್ಮರಾಜ್ ರೈ, ಅಶ್ಮಿತಾ ಮೆಂಡನ್ ಉಪಸ್ಥಿತರಿದ್ದರು. 


ಎಂಬಿಎ ವಿದ್ಯಾರ್ಥಿನಿ ಅಂಕಿತಾ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿ, ಗಾನವಿ ಸ್ವಾಗತಿಸಿ, ಶರಣ್ಯ ಶೆಟ್ಟಿ ವಂದಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top