ಕಾಸರಗೋಡು ಜಿಲ್ಲೆಯ ದ ಕ ಅವಲಂಬಿತ ಗಡಿನಾಡಿಗರ ತಂಡ ಸಹಯಾತ್ರಿ
ಮಂಗಳೂರು: ಕಾಸರಗೋಡಿನವರಿಗೆ ದಕ್ಷಿಣ ಕನ್ನಡ ಪ್ರವೇಶಿಸಲು ಆರ್ ಟಿ ಪಿ ಸಿ ಆರ್ ಟೆಸ್ಟಿನಿಂದ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಕಾಸರಗೋಡು ಜಿಲ್ಲೆಯ ದಕ್ಷಿಣ ಕನ್ನಡ ಅವಲಂಬಿತ ಗಡಿನಾಡಿಗರ ತಂಡವಾದ "ಸಹಯಾತ್ರಿ" ಯು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಇಂದು ಮನವಿ ನೀಡಿತು. ಮನವಿಯನ್ನು ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿಯಲ್ಲಿ ಈಗಾಗಲೇ ಈ ವಿಷಯದ ಕುರಿತು ಮಾತುಕತೆ ನಡೆದಿದೆ. ಜಿಲ್ಲಾಧಿಕಾರಿಯವರಲ್ಲಿ ಇನ್ನೊಮ್ಮೆ ಚರ್ಚಿಸಿ ಮುಂದಿನ ಅತಿ ಶೀಘ್ರದಲ್ಲಿ ಸೂಕ್ತ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.
ಸಹಯಾತ್ರಿ ಸಚಿವರಿಗೆ ನೀಡಿದ ಮನವಿಯಲ್ಲಿ ಕಾಸರಗೋಡು ಜಿಲ್ಲೆಯ ಉತ್ತರ ಭಾಗದ ತಾಲೂಕುಗಳಾದ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಂದಿಕೊಂಡಿರುವ ಕೇರಳದ ಭಾಗವಾಗಿದ್ದು ಈ ಭಾಗದ ಸಾವಿರಾರು ಮಂದಿ ಜನರು ಉದ್ಯೋಗ, ವಿದ್ಯಾಭ್ಯಾಸ ಹಾಗೂ ವ್ಯಾಪಾರ ವಹಿವಾಟುಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿದ್ದಾರೆ. ಕಳೆದ ಸುಮಾರು 2 ತಿಂಗಳಿನಿಂದ ಈ ಭಾಗದ ಜನರು ದಕ್ಷಿಣ ಕನ್ನಡಕ್ಕೆ ಪ್ರವೇಶವನ್ನು ಪಡೆಯಲು ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ್ ಅನ್ನು ಹಾಜರಿ ಪಡಿಸುವುದನ್ನು ಕಡ್ಡಾಯಗೊಳಿಸಿಲಾಗಿದ್ದು ನೆಗೆಟಿವ್ ರಿಪೋರ್ಟ್ ಅನ್ನು ಹಾಜರಿಪಡಿಸಿದವರಿಗೆ ಮಾತ್ರ ಕರ್ನಾಟಕಕ್ಕೆ ಪ್ರವೇಶವನ್ನು ನೀಡುತ್ತಿದೆ.
ಅದರೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳ ಟೆಸ್ಟ್ ಪೊಸೆಟಿವ್ ದರವು 2% ಕ್ಕಿಂತಲೂ ಕಡಿಮೆಯಾಗಿದೆ.ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗುವ 80% ಹೆಚ್ಚು ಕೋರೋನ ಕೇಸು ದಾಖಲಾಗುತ್ತಿರುವುದು ಕಾಸರಗೋಡಿನ ದಕ್ಷಿಣ ಭಾಗದ ತಾಲೂಕುಗಳಾದ ವೆಳ್ಳರಿಕುಂಡು ಹಾಗೂ ಹೊಸದುರ್ಗ ತಾಲೂಕುಗಳಲ್ಲಿ.ದ.ಕ ಜಿಲ್ಲೆಗೆ ಉದ್ಯೋಗ ನಿಮಿತ್ತ ನಿತ್ಯ ಬರಬೇಕಾದ ಕಾಸರಗೋಡಿಗರು ತಿಂಗಳಲ್ಲಿ ನಾಲ್ಕು ಬಾರಿ ಕರೋನಾ ಟೆಸ್ಟ್ ಮಾಡಿಸಿಕೊಳ್ಳಬೇಕಾಗುತ್ತಿದೆ.
ಇದೀಗ ಶಾಲಾ ಕಾಲೇಜುಗಳು ಆರಂಭವಾಗಿದ್ದು ದ.ಕ. ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕಾಸರಗೋಡಿನ ವಿದ್ಯಾರ್ಥಿಗಳು ಕೂಡಾ ಪ್ರತೀ ವಾರ ಕರೋನಾ ಟೆಸ್ಟ್ ಗೆ ಒಳಪಡಬೇಕಾಗುತ್ತಿದೆ. ಅರ್ ಟಿ ಪಿ ಸಿ ಆರ್ ಕಟ್ಟುಪಾಡುಗಳಿಂದ ಗಡಿನಾಡಿನ ಉದ್ಯೋಗ, ವಿದ್ಯಾರ್ಥಿ ಹಾಗೂ ವ್ಯಾಪಾರ ಸಮುದಾಯಗಳನ್ನು ಮುಕ್ತಗೊಳಿಸಬೇಕಾಗಿ ವಿನಂತಿಸಲಾಗಿದೆ.
ಸಹಯಾತ್ರಿ ತಂಡವು ಕಳೆದ 30 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಅವರಿಗೂ ಮನವಿ ಸಲ್ಲಿಸಿದ್ದು ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿತ್ತು. ಕಾಸರಗೋಡು ಜಿಲ್ಲೆಯ ಕೊರೋನ ಟೆಸ್ಟ್ ಪೊಸಿಟಿವಿಟಿ ರೇಟಿನ ಆಧಾರದಲ್ಲಿ ಸೂಕ್ತ ನಿರ್ಣಯವನ್ನು ನೀಡುವುದಾಗಿ ಅವರು ತಿಳಿಸಿದ್ದರು.
ಸಹಯಾತ್ರಿ ತಂಡದ ಪರವಾಗಿ ಲೋಕೇಶ್ ಜೋಡುಕಲ್ಲು, ಗಣೇಶ್ ಭಟ್ ವಾರಣಾಸಿ ಅವರು ಸಚಿವ ಕೋಟಿ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾಜಪ ಮುಖಂಡ ಸತೀಶ ಕುಂಪಲ ಅವರು ಸಹಯಾತ್ರಿ ತಂಡದ ಜೊತೆಯಲ್ಲಿ ಇದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ