||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹತ್ತು ಸಾವಿರ ಕಿ.ಮೀ ಯಾತ್ರೆ ಪೂರೈಸಿದ ಸಾಹಸಿ, ಜ್ಞಾನಭಿಕ್ಷಾ ಪಾದಯಾತ್ರಿ ವಿವೇಕಾನಂದ ಎಚ್‌.ಕೆ

ಹತ್ತು ಸಾವಿರ ಕಿ.ಮೀ ಯಾತ್ರೆ ಪೂರೈಸಿದ ಸಾಹಸಿ, ಜ್ಞಾನಭಿಕ್ಷಾ ಪಾದಯಾತ್ರಿ ವಿವೇಕಾನಂದ ಎಚ್‌.ಕೆಇವರು ಎಚ್ ಕೆ ವಿವೇಕಾನಂದ. ತೂಕಕ್ಕೆ ಹಾಕಿದರೆ ಒಂದೈವತ್ತು ಕೆಜಿಯಾಗಬಹುದು. ಶರ್ಟು, ಪ್ಯಾಂಟು, ತಲೆಯ ಮೇಲೊಂದು ದೇವಾನಂದನ ಟೊಪ್ಪಿಗೆ. ಚೂರು ದಪ್ಪವೆನ್ನುವ ಮೀಸೆ. ಮುಖದ ಮೇಲೆ ಸಹಜ ನಗೆಭಾವ. 


ಇತಿಹಾಸದ ಪಿಎಚ್ ಡಿ ಬೆನ್ನಿಗಿದೆ. ಹೆಂಡತಿ ಮಕ್ಕಳೊಂದಿಗೆ ಸಂಸಾರೊಂದಿಗ. ಯಾರಿಗೂ ಹೊರೆಯಾಗದ ತಣ್ಣಗಿನ ಬದುಕೊಂದು ಅವರಿಗೆ ಸಾಧ್ಯವಿತ್ತು. ಆದರೆ, ಈ ನಾಡ ಮಕ್ಕಳು ದಾವಾನಲದ ಮೇಲೆ ಕೊತಕೊತ ಕುದಿಯುತ್ತಿರಬೇಕಾದರೆ ತಾನು ಮಾತ್ರ ತಣ್ಣಗೆ ಬದುಕುವುದು ದ್ರೋಹಕ್ಕೆ ಸಮವೆಂದು ಬಗೆದು ತನ್ನೆಲ್ಲ ಖಾಸಗೀತನಕ್ಕೆ ತಿಲಾಂಜಲಿಯಿತ್ತು ಮಾನವೀಯ ಮೌಲ್ಯಗಳೆಂಬ ಸವಕಲು ನಾಣ್ಯವನ್ನು ತಿಕ್ಕಿ ತಿಕ್ಕಿ ಹೊಳಪು ನೀಡಲು ತೋಳೇರಿಸಿ ತಮ್ಮ ತೊಡೆಗಳಿಗೆ ದಣಿವೆನ್ನದಿರಿ ಎಂಬ ಎಚ್ಚರಿಕೆಯನಿತ್ತು ಅಂಗಾಲಿಗೆ ಸಕಲ ಜೀವರಾಶಿಗಳ ತುಡಿತವೆಂಬ ನಾಲು ಜಡಿದು ಸರಸರನೆ ಹೆಜ್ಜೆ ಸವೆಸುತ್ತಿದ್ದಾರೆ ಈ ಭೂಪತಿ ರಂಗ!  


ಕಳೆದ ರಾಜ್ಯೋತ್ಸವದಂದು ತಮ್ಮ ಮನೆಯ ಹೊಸ್ತಿಲನ್ನು ದಾಟಿ ಬೀದರ ಜಿಲ್ಲೆಯ ವನಮಾರ್ಪಳ್ಳಿಗೆ ಹೋಗಲು ಬಸ್ಸಿಗಾಗುವಷ್ಟು ಚಾರ್ಜನ್ನು ಮನೆಯವರಿಂದ ಪಡೆದು ಹೊರಬಿದ್ದಾಗ ಅವರು ಮನೆಯವರಿಗೆ ಹೀಗೆ ಹೇಳಿದ್ದಿಷ್ಟು "ಈ ನಾಡಿನ ಮಣ್ಣಿನ ಮಕ್ಕಳ ಸಂಕಟ ನನಗೆ ನೋಡಲಾಗುತ್ತಿಲ್ಲ. ಇವರಿಗಾಗಿ ಏನನ್ನಾದರೂ ಮಾಡಬೇಕೆಂಬ ನನ್ನ ಬಹು ದಿನಗಳಿಂದ ನಾನು ಕನವರಿಸುತ್ತಲೇ ಇದ್ದೆ. ಇದೀಗ ಅದಕ್ಕೊಂದು ರೂಪು ಸಿಕ್ಕಿದೆ. ಅದರ ಈಡೇರಿಕೆಗಾಗಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು. ಕನಿಷ್ಠ ಇನ್ನು ಒಂದು ವರ್ಷ ನಿಮ್ಮಿಂದ ದೂರವಾಗಿ ಇರಲಿದ್ದೇನೆ. ಈ ರಾಜ್ಯದ ಮೂಲೆ ಮೂಲೆಗೂ ತೆರಳಿ ಮಾನವೀಯ ಮೌಲ್ಯಗಳನ್ನು ಪುನರುತ್ಥಾನ ಮಾಡಲು ಪಾದಯಾತ್ರೆ ನಡೆಸಲಿದ್ದೇನೆ. ಅದಕ್ಕೆ ಜ್ಞಾನ ಭಿಕ್ಷಾ ಪಾದಯಾತ್ರೆ ಎಂದು ಹೆಸರಿಟ್ಟಿದ್ದೇನೆ. ಇನ್ನು ಒಂದು ವರ್ಷ ನಿಮಗಾಗಿ ನಾನು ಒಂದು ಪೈಸೆಯೂ ಕೊಡದಿರಬಹುದು; ಹಾಗೆಯೇ ಒಂದು ಪೈಸೆಯನ್ನೂ  ಸಹ ನಿಮ್ಮಿಂದ ಬೇಡಲಾರೆ. ನೀವು ಮನೆಯನ್ನು ಮನೆಯವರನ್ನು ಜಾಗ್ರತೆಯಿಂದ ಸಂಭಾಳಿಸಿಕೊಳ್ಳಿ. ಒಂದು ವರ್ಷದ ಕಾಲ ನಾವು ಪರಸ್ಪರರು

ಅಗಲಿರಬೇಕಾಗುತ್ತದೆ. ಅದರ ಕಷ್ಟವನ್ನು ನಾನು ಊಹಿಸಿದ್ದೇನೆ. ನೀವೂ ಕೂಡ ಮಾನಸಿಕವಾಗಿ ಸಿದ್ಧವಾಗಿದ್ದೀರಿ ಎಂದುಕೊಳುವೆ. ಇಷ್ಟು ದೀರ್ಘ ಅವಧಿಯವರೆಗಿನ ನನ್ನ ಅನುಪಸ್ಥಿತಿ ನೀವು ಸಹಿಸಿಕೊಳುವುದೂ ಕೂಡ ಪರೋಕ್ಷವಾಗಿ ಈ ಮಹಾಜ್ಞಾನದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸುತ್ತದೆ ಎಂದು ತಮಗೆ ಬೇರೆ ಹೇಳಬೇಕಾಗಿಲ್ಲ. ದಯವಿಟ್ಟು ನನ್ನನ್ನು ಸಾಧ್ಯವಾದಷ್ಟು ನಗುಮೊಗದಿಂದ ಬೀಳ್ಕೊಡುತ್ತೀರೆಂದು ನಂಬುವೆ." ಇಷ್ಟು ಹೇಳಿ ಬೆಂಗಳೂರಿನಿಂದ ಬೀದರ ಜಿಲ್ಲೆಯ ಕಟ್ಟ ಕಡೆಯ ಊರಾದ ವನಮಾರ್ಪಳ್ಳಿಗೆ ಹೊರಟ ಸವಾರಿ ಬರೋಬ್ಬರಿ ಕನ್ನಡ ರಾಜ್ಯೋತ್ಸವ ದಿನದಂದು ಅಲ್ಲಿಂದಲೇ ಜ್ಞಾನ ಭಿಕ್ಷಾ ಪಾದಯಾತ್ರೆ ಆರಂಭಿಸಿಯೇ ಬಿಟ್ಟಿತು. ಈ ಪಾದಯಾತ್ರೆಯ ಉದ್ದೇಶ ಮಾನವೀಯ ಮೌಲ್ಯಗಳ ಪುನರುತ್ಥಾನ.  


ಈ ಫಕೀರ ಸೊನ್ನೆ ರೂಪಾಯಿ ಶಿಲ್ಕಿನೊಂದಿಗೆ ಪಾದಯಾತ್ರೆ  ಆರಂಭಿಸಿದಾಗ ಅವರ ಬಳಿ ಇದ್ದದ್ದು ಒಂದೆರಡು ಜೊತೆ ಉಡುಪು, ಬ್ರಶ್ಶು, ಆಗಲೇ ಬಳಸುತ್ತಿರುವ ಪಾದರಕ್ಷೆ ಮತ್ತು ಸಂವಹನಕ್ಕಾಗಿ ಮೋಬೈಲ್, ಅದರ ಚಾರ್ಜರ್ ಮಾತ್ರ. 


ಎಂದೂ ಕಂಡಿರದ ಊರು-ಜನ-ಭಾಷೆ-ಆಚಾರ-ವಿಚಾರ-ಆಹಾರ ಪದ್ಧತಿಗಳನ್ನು ನೆಚ್ಚಿಕೊಂಡು, ಅನುಭವಿಸದ ಪ್ರದೇಶದ ಹವಾಮಾನಕ್ಕೆ ಎದೆಯೊಡ್ಡುವ ದೀಕ್ಷೆ ತೊಟ್ಟು ಅಂಕಣಕ್ಕೆ ಇಳಿದೇ ಬಿಟ್ಟರು ಈ ಭೂಪತಿರಂಗರು. 


ಇಲ್ಲಿಯವರೆಗೆ ಇಂದಿನವರೆಗೆ (3-10-2021) 22 ಜಿಲ್ಲೆಗಳಲ್ಲಿ ಅಧಿಕೃತವಾಗಿ 224 ಊರು-ಕೇರಿಗಳ ಹೊಕ್ಕು 10 ಸಾವಿರ ಕಿಲೋಮೀಟರ್ ಪ್ರಯಾಣದ ಕಾಲ್ನಡಿಗೆ ಪೂರ್ಣಗೊಳಿಸಿ ಪುನರುತ್ಥಾನದ ಮಹಾಯಜ್ಞಕ್ಕೆ ಹವಿಸ್ಸನ್ನು ಬಿಡುತ್ತಲೇ ಇದ್ದಾರೆ. ಸಾವಿರಾರು ಸಂವಾದಗಳು ಜರುಗಿವೆ. ನೂರಾರು ಸಭೆ ಸಮಾರಂಭಗಳು ಆಯೋಜನಗೊಂಡಿವೆ. ಅನೇಕ ಶಾಸಕರು, ಮುಖಂಡರಲ್ಲದೆ  ಸ್ಥಾನಿಕ ಮಾಧ್ಯಮಗಳು ಬೆನ್ನು ತಟ್ಟಿ ಶುಭಕೋರಿವೆ. ವಿದ್ಯಾರ್ಥಿಗಳು, ಯುವೋತ್ಸಾಹಿಗಳು, ಸಮಾಜ ಚಿಂತಕರು ಮನದುಂಬಿ ಶುಭ ಕೋರಿದ್ದಾರೆ.


ಅತ್ಯಂತ ತೀವ್ರ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ ಅವರ ಪಾದಯಾತ್ರೆ ನಿರಾತಂಕವಾಗಿ ಅಬಾಧಿತವಾಗಿ ಮುನ್ನಡೆದಿದೆ. ಕರಾವಳಿ, ಮಲೆನಾಡುಗಳ ಮಳೆನಾಡುಗಳು ಕೂಡ ಅವರ ಪಾದಯಾತ್ರೆಗೆ ಕಿಮಕ್ಕೆನ್ನಲಿಲ್ಲ. ಚಳಿ-ಮಳೆ-ಬಿಸಿಲುಗಳು ವಿವೇಕಾನಂದರ ಸ್ನೇಹಿತರಂತೆ ಜೊತೆಗೂಡಿದವು. 


ಈ ಪಾದಯಾತ್ರೆ ಜೊತೆ ಜೊತೆಗೆ ನಿತ್ಯ ತಮ್ಮದೇ ಆದ ವಿಚಾರ ಲಹರಿಗಳಿಗನುಸಾರ ಪ್ರಬುದ್ಧ ಲೇಖನಗಳನ್ನು ಬರೆದು ಅವನ್ನು ಮೊಬೈಲ್ನಲ್ಲಿ ಅಚ್ಚಿಸಿ ಜಾಲತಾಣಗಳಲ್ಲಿ ಹರಿಬಿಟ್ಟು ತಮ್ಮದೇ ಆದ ಸಂವಹನದ ವಿಧಾನವೊಂದನ್ನು ಕಟ್ಟಿಕೊಂಡಿದ್ದಾರೆ.


ಹೌದು ಇದು ದಾಖಲೆಗಾಗಿ ಮಾಡಿದ ನಡಿಗೆಯಲ್ಲ. ಫೋಟೋ, ಪ್ರಚಾರಕ್ಕಾಗಿ ಕೈಗೊಂಡ ಯಾತ್ರೆಯಲ್ಲ. ಯಾವುದೇ ಗಿಮಿಕ್ಕುಗಳಿಲ್ಲ, ತೆವಲುಗಳಿಲ್ಲ, ಹಪಾಹಪಿಯಿಲ್ಲ, ದುರಾಸೆಯಿಲ್ಲ, ಸ್ವಾರ್ಥ-ಲಾಲಸೆಯಿಲ್ಲ, ವೈಭವೀಕರಣವಿಲ್ಲ, ಢೋಂಗಿತನವಿಲ್ಲ, ಕಪಟನಾಟಕವಲ್ಲ, ಆಷಾಡಭೂತಿಯಲ್ಲ, ಒಣಾಡಂಬರವಿಲ್ಲ, ಯಾರನ್ನೂ ಗೇಲಿ ಮಾಡುವುದಿಲ್ಲ, ಹೀಗೆಳೆಯುವುದಿಲ್ಲ, ಕಾಲೆಳೆಯುವುದಿಲ್ಲ, ಛೂ ಬಿಡುವುದಿಲ್ಲ, ಎದುರು ಹಾಕಿಕೊಳ್ಳುವುದಿಲ್ಲ, ವೈರತ್ವ ಎಂಬುದಿಲ್ಲ, ಮೋಸ-ವಂಚನೆಗಳಿಗಾಸ್ಪದವಿಲ್ಲ, ಯಾವುದೇ ಭಯವೊತ್ತಡವಿಲ್ಲ, ಸಂಸಾರದ ಜಂಜಾಟವಿಲ್ಲ, ಕಿಸೆಯಿಂದ ಹಣ ಖರ್ಚಿಲ್ಲ, ಪರಧನದ ಮೋಹವಿಲ್ಲ, ಚಟ-ವ್ಯಸನಗಳಿಲ್ಲ, ಆರೋಗ್ಯದ ಗೊಡವೆಯಿಲ್ಲ, ಊರು-ಸೀಮೆ, ಆಚಾರ-ವಿಚಾರ, ಆಹಾರ, ಭಾಷೆ, ವೈವಿಧ್ಯಮಯ ವಾತಾವರಣ, ತಾಪಮಾನಗಳ ಹಂಗಿಲ್ಲ, ಪ್ರಪಂಚವನ್ನೇ ತಲೆಕೆಳಗೆ ಮಾಡಿದ ಕೊಕೋನಾ ಪೀಡಿಗೆ ಧೃತಿಗೆಡಲಿಲ್ಲ......... 


ಕತ್ತಲ ಕರಾಳ ರಾತ್ರಿಯಲ್ಲಿ ಕಳೆದುಕೊಂಡ ಸೂಜಿಯನ್ನು ಹುಡುಕಲು ಹೊರಟ ಈ ಫಕೀರನಿಗೆ ಶುಭಕೋರುವುದು ಕಾಟಾಚಾರವಾಗಬಾರದು; ನಾವೇನು ಮಾಡಬಹುದು ಎಂಬ ಚಿಂತನೆ ನಮ್ಮಾಂತರ್ಯದಲ್ಲಿ ಸ್ಫುರಿಸಿದಲ್ಲಿ ಅಷ್ಟಾದರೂ ನಮ್ಮ ಜೀವಂತಿಕೆಯ ಇರುಹಿಗೆ ಚೂರು ಅರ್ಥ ಬಂದೀತು.

ಸಾಗಿದೆ ಜೈತ್ರ ಯಾತ್ರೆ ಪುನರುತ್ಥಾನದತ್ತ...... ಮಾನವೀಯ ಮೌಲ್ಯಗಳ ಪ್ರತಿಷ್ಠಾಪಿಸುತ್ತ.... 

ಪ್ರಬುದ್ಧ ಚಿಂತನೆ ಹರಿಬಿಡುತ್ತ.....


ರವೀಂದ್ರ.......


ತಮ್ಮ ರವೀಂದ್ರರ ಸುಂದರ ಲೇಖನದಿಂದ ಪ್ರೇರಿತನಾಗಿ, ಶ್ರೀ ವಿವೇಕಾನಂದರ ಕುರಿತಂತೆ ನನ್ನದೊಂದು ಕವನ.


ಕವನ


ಅನ್ವರ್ಥಕ ನಾಮ ವಿವೇಕಾನಂದ


ಇವರೇ ನಮ್ಮ ವಿವೇಕಾನಂದರು

ಅನ್ವರ್ಥಕ ನಾಮ ಇಟ್ಟುಕೊಂಡವರು

ಪಾದಯಾತ್ರೆಯಲ್ಲಿ ‌ಧುರೀಣರು

ಅಲ್ಲವೆ ಅಲ್ಲ ಸ್ವಾರ್ಥ ಪರರು


ಮಹಾನ್ ಮಾನವತಾವಾದಿ 

ಸಮ ಸಮಾಜದ ರೂವಾರಿ

ಹೇಳುವರು ಭೇದ ಮಾಡಬೇಡಿರಿ

ದೇವರು ಅಂತ ಇದ್ದರೆ ಈ ವರ ಬೇಡಿರಿ


ಒಂದು ವರ್ಷ ಪರ್ಯಂತ

ನಡಿಗೆ ಅವರದು ನಿತಾಂತ

ಎಣಿಸರು ಬಡವ ಶ್ರೀಮಂತ

ಜನರ ಸೆಳೆವಲ್ಲಿ ಅಯಸ್ಕಾಂತ


ಇಂಥವರು ಬೇಕು ನಮ್ಮ ಸಮಾಜಕೆ

ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಾಮಾಣಿಕತೆ

ಬುದ್ಧ ಬಸವ ಗಾಂಧಿ ವೈಚಾರಿಕತೆ

ಇವೆಲ್ಲ ಇವರಲಿ ಮೇಳವಿಕೆ


ಕೈಯಲಿ ಹಿಡಿದು ಭಿಕ್ಷೆ ಪಾತ್ರೆ

ನಡೆದಿದೆ ಕರ್ನಾಟಕ ಯಾತ್ರೆ

ಸ್ನೇಹಿತರ ಹಾರೈಕೆ ನಿಮಗೆ ರಕ್ಷೆ

ಈಡೇರಲಿ ನಿಮ್ಮ ವಾಂಛೆ


-ಡಿ.ಬಿ.ರಾಘವೇಂದ್ರ ರಾವ್

೦೪-೧೦-೨೦೨೧


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post