|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂತಸ ಪಡಲೇ ಇಂದು ಕನ್ನಡ ರಾಜ್ಯೋತ್ಸವವೆಂದು?

ಸಂತಸ ಪಡಲೇ ಇಂದು ಕನ್ನಡ ರಾಜ್ಯೋತ್ಸವವೆಂದು?

                                                                                    ಚಿತ್ರಕೃಪೆ:ಅಂತರ್ಜಾಲ

ನಾನು ಈಗ ಕೇರಳದಲ್ಲಿರುವ ಕಾಸರಗೋಡಿನ ಕನ್ನಡಿಗ. ಕಳೆದ ಹಲವೂ ವರ್ಷಗಳಿಂದ ಈ ದಿನವನ್ನು ದು:ಖದ ದಿನವಾಗಿಯೂ ಕಪ್ಪುದಿನವಾಗಿಯೂ ಆಚರಿಸಿದವ. ಪ್ರತಿ ವರ್ಷವೂ ಈ ಕರಾಳ ದಿನದ ಬಗ್ಗೆ ಎರಡು ಗೆರೆಯಾದರೂ ಬರೆದವ.

ಕರ್ನಾಟಕದವರಿಗೆ ಬೇಡದ ಕನ್ನಡಿಗರು ನಾವು. ಭಾಷಾವಾರು ಪ್ರಾಂತ್ಯ ರಚನೆಯಾಗುವಾಗ ಹೆಚ್ವು ಕಡಮೆ 70% ದಷ್ಟಿದ್ದ ಕನ್ನಡಿಗರು ಇಂದು 30% ದಷ್ಟೂ ಇಲ್ಲ ಎಂಬುದು ವಾಸ್ತವ.

ಇಲ್ಲೊಂದು ತಮಾಷೆಯೂ ಇದೆ. ಅದೇ ಕೆಲವು ಮೊಂಡುವಾದಗಳು. ಆಗ ಕನ್ನಡ ಎಂದು ಹೇಳಿದವರೆಲ್ಲಾ ಕನ್ನಡಿಗರಲ್ಲ ಎಂದು.

ಇವರ ಪ್ರಕಾರ ತುಳು ಮನೆ ಭಾಷೆಯಾದ ಕಯ್ಯಾರರು ಕನ್ನಡಿಗರಲ್ಲ. ಕೊಂಕಣಿ ಮನೆ ಮಾತಾದ ಮಂ.ಗೋವಿಂದ ಪೈಗಳು ಕನ್ನಡಿಗರಲ್ಲ. ಇನ್ನು ಮನೆಮಾತು ಮಲೆಯಾಳವಾಗಿಯೂ ಕನ್ನಡಕ್ಕಾಗಿ ಹೋರಾಡಿದ ಶೆರೂಲ್, ಶೆಮ್ನಾಡ್ ಇತ್ಯಾದಿತ್ಯಾದಿ ಮಹಾನುಭಾವರು ಯಾರೂ ಕನ್ನಡಿಗರಲ್ಲ. ಕನ್ನಡದ ಹಿರಿಯ ಕವಿಗಳ ಸಾಲು ತೆಗೆದರೆ ಕಾಸರಗೋಡಿನ ಕನ್ನಡಿಗರ ಕೊಡುಗೆ ದೊಡ್ಡದಾಗಿಯೇ ಇದೆ ಎಂಬುದನ್ನು ಗೊತ್ತು ಮಾಡ ಬಹುದು.

ಯಕ್ಷಗಾನದ ಆದಿ ಪುರುಷ ಎಂದೇ ಕರೆಯಲ್ಪಟ್ಟ ಪಾರ್ತಿ ಸುಬ್ಬ ಕೂಡಾ ಕಾಸರಗೋಡಿನವ ಎಂಬುದನ್ನು ಇವರು ಮರೆತೇ ಬಿಡುತ್ತಾರೆ. ಕನ್ನಡ ಕನ್ನಡತ್ವಕ್ಕಾಗಿ‌ ಹೋರಾಡಿದ ಹಲವೂ ಮಹನೀಯರು ಇಲ್ಲಿದ್ದರು ಇದ್ದಾರೆ. ಆದರೆ ಈ ಚಳವಳಿಗಳನ್ನು ಯಶಸ್ವಿಯಾಗಿ ಹತ್ತಿಕ್ಕಿ‌ ಮಲೆಯಾಳಿಗಳನ್ನು ಕಾಸರಗೋಡಿನಲ್ಲಿ ತುಂಬುವುದರಲ್ಲಿ ಕೇರಳ ಸರ್ಕಾರ ಯಶಸ್ವಿಯಾಗಿದೆ ಎಂಬುದೂ ನಿತ್ಯ ಸತ್ಯ.

ಯಾಕೆ ಹೀಗಾಯಿತು? ಆಲೋಚಿಸಿದರೆ ಕರ್ನಾಟಕ ಸರ್ಕಾರದ ಅನಾಸ್ಥೆಯೇ ಕಾರಣ.

ಕರ್ನಾಟಕಕ್ಕೆ ಇದು ಬೇಡದ ಕೂಸು. ರಾಜಕೀಯ ಮುತ್ಸದಿತನ ತೋರಿದ ಕೆ.ಪಿ.ಕೇಶವ ಮೆನನ್, ಪಣಿಕ್ಕರ್ ಎಂಬವರು ಆಡಿದ ಕುಟಿಲ ನೀತಿಗೆ ಯಾವುದೇ ಪ್ರತಿಭಟನೆ ಇಲ್ಲದೆ ಒಪ್ಪಿದ ಅಂದಿನ ಕರ್ನಾಟಕದ ರಾಜಕೀಯ ನಾಯಕರು ಸಂಪೂರ್ಣ ಹೊಣೆ. ಬೆಳಗಾವಿಯ ಬಗ್ಗೆ ಇದ್ದ ಕಳಾಜಿಯ ಕಾಲಂಶ ಕಳಾಜಿ ಕಾಸರಗೋಡಿನ ಬಗ್ಗೆ ಇದ್ದಿದ್ದರೆ ಇಂದು ಕಾಸರಗೋಡು ಕರ್ನಾಟಕದ ಭಾಗವೇ ಆಗಿರುತ್ತಿತ್ತು ಎಂಬುದು ವಾಸ್ತವ. ಬೆಳಗಾವಿಗಾಗಿ ಕಾಸರಗೋಡನ್ನು ಬಿಟ್ಟವರು ಅಂದಿನ ಕರ್ನಾಟಕದ ನೇತಾರರು.

ಅಂದು ಎಲ್ಲಾ ಸರಿಯಾಗಿದ್ದರೆ ಇಂದು ಈ ಗಡಿನಾಡಿನ ಜನತೆ ಅನುಭವಿಸುವ ಸಂಕಷ್ಟಗಳೊಂದೂ ಇರುತ್ತಿರಲಿಲ್ಲ. ಆದರೆ ಇಚ್ಛಾಶಕ್ತಿ ಇಲ್ಲದವರು ನೇತಾರರಾದರೆ ಏನಾಗ ಬಹುದೋ ಅದೇ ಕಾಸರಗೋಡಿನ ಮಟ್ಟಿಗೆ ಆಯಿತು ಎಂಬುದೇ ಸತ್ಯ.

ಮುಂದೆ ಮಹಾಜನ ವರದಿ ಬಂದಾಗ ಅದರ ಜ್ಯಾರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಏನಾಗ ಬೇಕಿತ್ತೋ ಅದು ನಡೆದಿದ್ದರೂ ಕಾಸರಗೋಡು ಇಂದು ಈ ದುರವಸ್ಥೆಯಲ್ಲಿ ಇರುತ್ತಿರಲಿಲ್ಲ.

ಆದ್ದರಿಂದ ಇಂದು ಜೈ ಕನ್ನಡ ಮಾತೆ ಎನ್ನುತ್ತೇನೆ.

ಜೈ ಕರ್ನಾಟಕ ಎನ್ನುವ ಮನ:ಸ್ಥಿತಿ ಖಂಡಿತಾ ಇಲ್ಲ.

ಕರ್ನಾಟಕದ ಸಂಭ್ರಮದಲ್ಲಿ‌ ಪಾಲುಗೊಳ್ಳುವ ಮನಸ್ಸೂ ಇಲ್ಲ. ಕಾಸರಗೋಡಿನ ಜನತೆಗೆ ಇಂದು ಕರ್ನಾಟಕ ಶತ್ರುವಾಗಿದೆ. ಪರದೇಶಕ್ಕೆ ಪ್ರಯಾಣಿಸ ಬೇಕಾದರೆ ಬೇಕಾದುದಕ್ಕಿಂತಲೂ ಹೆಚ್ಚಿನ ಪರವಾನಿಗೆ ಕಾಸರಗೋಡಿನವರು ಕರ್ನಾಟಕ ಪ್ರವೇಶಿಸ ಬೇಕಾದರೆ ಬೇಕಿದೆ. ಆದ್ದರಿಂದ ಸಂತಸ ಬಿಡಿ ಧಿಕ್ಕಾರವೇ ಹೇಳುತ್ತಿದೆ ನನ್ನ ಮನಸ್ಸು ಈ ಅಂತ:ಕ್ಕರಣವಿಲ್ಲದ ಕರ್ನಾಟಕಕ್ಕೆ. ಕನ್ನಡಿಗರಾಗಿ ಹುಟ್ಟಿಯೂ ಕರ್ನಾಟಕದವರಿಗೆ ಬೇಡದ ಕಾಸರಗೋಡು ಎಂಬ ಈ ಕೂಸು ಯಾವುದಕ್ಕೆ ಸಂಭ್ರಮಿಸ ಬೇಕು? ತನ್ನ ತಾಯಿ ತನ್ನನ್ನು ಕೇರಳವೆಂಬ ಮಲತಾಯಿಯ ಮಡಿಲಿಗೆ ಚಂದ್ರಗಿರಿಯ ಮೂಲಕ ತೇಲಿ ಬಿಟ್ಟಳೆಂದೇ? ಅಲ್ಲ ನನ್ನ ನೆಲದ ಮೇಲೆ ಕಾಲಿಡಲೂ ಬಿಡಲಾರೆ ಎಲ್ಲಾದರೂ ಬಿಡಬೇಕಾದ ಸಂದರ್ಭ ಬಂದರೆ ನೀನು ಪರಕೀಯನಿಗಿಂತಲೂ ಪರಕೀಯನಾಗಿ ಬರಬೇಕೆಂದುದಕ್ಕಾಗಿಯೇ? ಹೇಳಿ ಕರ್ನಾಟಕದ್ದೇ ಭಾಗವನ್ನು ಹೊರತಳ್ಳಿದ ಕರ್ನಾಟಕದ ಜವಾಬ್ಧಾರಿಯುತ ಪ್ರಜೆಗಳೇ ಹೇಳಿ;

ಉತ್ತರಿಸಿ. ಯಾಕೆ ಸಂಭ್ರಮಿಸಲಿ? ಕಾಸರಗೋಡಿನ ಕನ್ನಡಿಗರು ಕರ್ನಾಟಕದ ರಾಜ್ಯೋತ್ಸವಕ್ಕೆ?  

ಖೇದದ ಹೃದಯದೊಂದಿಗೆ ಕರ್ನಾಟಕದ ರಾಜ್ಯೋತ್ಸವವನ್ನು ಸಂಭ್ರಮಿಸದ ಹುಟ್ಟಾ ಕನ್ನಡಿಗ



ಎಡನಾಡು ಕೃಷ್ಣ ಮೋಹನ ಭಟ್ಟ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ






0 Comments

Post a Comment

Post a Comment (0)

Previous Post Next Post