|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಳೆಹಣ್ಣು ಎಂಬ ಸೂಪರ್ ಫುಡ್

ಬಾಳೆಹಣ್ಣು ಎಂಬ ಸೂಪರ್ ಫುಡ್


ಅತ್ಯಂತ ರುಚಿಕರವಾದ, ಸ್ವಾದಿಷ್ಟವಾದ, ಆರೋಗ್ಯಕರವಾದ ಹಾಗೂ ಅತೀ ಕಡಿಮೆ ಬೆಲೆಗೆ ಸಿಗುವ ಹಣ್ಣೊಂದಿದ್ದರೆ ಅದು ‘ಬಾಳೆ ಹಣ್ಣು’ ಎಂದರೆ ತಪ್ಪಾಗಲಾರದು. ಅತೀ ಹೆಚ್ಚು ಪೊಟಾಸಿಯಂ, ನಾರು ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿರುವ ಬಾಳೆ ಹಣ್ಣು ಆಪಲ್‍ನಷ್ಟೆ ಶಕ್ತಿಶಾಲಿ ಆಹಾರವಾಗಿರುತ್ತದೆ. ಈ ಕಾರಣದಿಂದ ಈಗ ‘ದಿನಕ್ಕೆರಡು ಬಾಳೆ ಹಣ್ಣು ತಿನ್ನು, ವೈದ್ಯರನ್ನು ದೂರವಿಡಿ’ ಎಂಬ ಮಾತು ಚಾಲ್ತಿಯಲ್ಲಿದೆ. ದಿನಕ್ಕೊಂದು ಆಪಲ್ ತಿನ್ನು, ವೈದ್ಯರಿಂದ ದೂರವಿರಿ ಎಂಬ ಮಾತು ಚಾಲ್ತಿಯಲ್ಲಿದ್ದರೂ, ಸುಲಭವಾಗಿ ದೊರಕದ ಕಾರಣ ಹಾಗೂ ಹೆಚ್ಚಿನ ಹಣದ ಕಾರಣದಿಂದಾಗಿ ಬಾಳೆ ಹಣ್ಣು ಈ ಬಡವರ ಪಾಲಿನ ಏಕೈಕ ಆಶಾಕಿರಣವಾಗಿದೆ ಎಂದರೂ ತಪ್ಪಾಗಲಾರದು.


ಬಾಳೆಹಣ್ಣಿನಲ್ಲಿರುವ ವಿಟಮಿನ್ ಜೀವಸತ್ವಗಳು, ಖನಿಜಾಂಶ ಮತ್ತು ಇತರ ಪೋಷಕಾಂಶಗಳಿಂದಾಗಿ ಬಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾದ ಎಲ್ಲ ಅಂಶಗಳನ್ನು ಪೂರೈಸುವ ಗುಣ ಬಾಳೆಹಣ್ಣಿಗೆ ಇರುತ್ತದೆ. ಅದರ ಜೊತೆಗೆ ಬಾಳೆಹಣ್ಣಿನಲ್ಲಿ ನಾರಿನಂಶ, ನೈಸರ್ಗಿಕ ಸಕ್ಕರೆ ಅಂಶದೊಂದಿಗೆ ಹಿತ ಮಿತವಾದ ಪ್ರಮಾಣದೊಂದಿದೆ ಹೊಂದಾಣಿಕೆಯಾಗಿರುವ ಕಾರಣದಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಆರೋಗ್ಯಕರವಾದ ಮಿತಿಯಲ್ಲಿರುವಂತೆ ಮಾಡುವ ಶಕ್ತಿ ಬಾಳೆ ಹಣ್ಣಿಗೆ ಇರುತ್ತದೆ. ಬಾಳೆ ಹಣ್ಣನ್ನು ಊಟದ ಜೊತೆಗೆ ಅಥವಾ ಊಟದ ಬಳಿಕ ತಿನ್ನಬಾರದು ಇದರಿಂದ ಮ್ಯುಖಸ್ ಉತ್ಪಾದನೆ ಜಾಸ್ತಿಯಾಗಿ ಜೀರ್ಣಕ್ಕೆ ತೊಂದರೆ ಆಗಬಹುದು. ದೈಹಿಕ ಕಸರತ್ತು /ವ್ಯಾಯಮ ಮಾಡುವ ಮೊದಲು ಬಾಳೆಹಣ್ಣು ತಿನ್ನುವುದು ಸೂಕ್ತ, ರಾತ್ರಿ ಮಲಗುವಾಗ ತಿನ್ನಬಾರದು ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಬಾಳೆಹಣ್ಣಿನ ಪ್ರಯೋಜನಗಳು:

1) ಆಪಲ್‍ಗಿಂತಲೂ ಹೆಚ್ಚು ಪ್ರಮಾಣದಲ್ಲಿ ವಿಟಮಿನ್ ಮತ್ತು ಪೋಷಕಾಂಶವನ್ನು ಬಾಳೆಹಣ್ಣು ಹೊಂದಿದೆ. ಆಪಲ್‍ಗಿಂತ ಎರಡು ಪಟ್ಟು ಹೆಚ್ಚು ಶರ್ಕರ ಪಿಷ್ಠಗಳು, ಐದು ಪಟ್ಟು ಹೆಚ್ಚು ವಿಟಮಿನ್ ಎ ಮತ್ತು ಕಬ್ಬಿಣದ ಅಂಶ, ಮೂರು ಪಟ್ಟು ಹೆಚ್ಚು ಫಾಸ್ಪರಸ್ ಅಂಶ ಬಾಳೆಹಣ್ಣಿನಲ್ಲಿ ಇರುತ್ತದೆ, ಅದೇ ರೀತಿ ಹೇರಳವಾಗಿ ಪೊಟ್ಯಾಷಿಯಂ, ನಾರಿನಂಶ  ಮತ್ತು ನೈಸರ್ಗಿಕ ಸಕ್ಕರೆ ಇರುತ್ತದೆ. ದೇಹದ ಆರೋಗ್ಯ ಕಾಪಾಡುವಲ್ಲಿ ವಿಟಮಿನ್ ಸಿ, ಖನಿಜಾಂಶಗಳು ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಬಾಳೆ ಹಣ್ಣಿನಲ್ಲಿರುವ ನಾರಿನಂಶ, ಸಕ್ಕರೆ ಅಂಶದೊಂದಿಗೆ ಸಮತೋಲನವಾಗಿರುವ ಕಾರಣದಿಂದ ಮಧುಮೇಹಿಗಳು ಬಾಳೆಹಣ್ಣನ್ನು ಹಿತಮಿತವಾಗಿ ಸೇವಿಸಬಹುದಾಗಿದೆ. ಈ ಕಾರಣದಿಂದಲೇ ಬಾಳೆಹಣ್ಣನ್ನು ‘ಸೂಪರ್ ಫುಡ್’ಎಂಬ  ಹಣೆಪಟ್ಟಿ ಬಂದಿದೆ.


2) ಶಕ್ತಿವರ್ಧಕ ಪೇಯಕ್ಕಿಂತಲೂ ಹೆಚ್ಚು ಶಕ್ತಿ ಎರಡು ಬಾಳೆ ಹಣ್ಣು ನೀಡುತ್ತದೆ. ಎರಡು ಬಾಳೆ ಹಣ್ಣು ತಿಂದಲ್ಲಿ ಎರಡು ಗಂಟೆಗಳ ಕಾಲ ದೈಹಿಕ ಕಸರತ್ತು ಮಾಡುವಷ್ಟು ಕ್ಯಾಲರಿ ಬಾಳೆಹಣ್ಣಿನಿಂದ ದೊರಕುತ್ತದೆ ಎಂದು ತಿಳಿದು ಬಂದಿದೆ. ಬಳಲಿದಾಗ, ಆಯಾಸವಾದಾಗ, ಸುಸ್ತಾದಾಗ, ಕಾಫಿ, ಟೀ, ಇನ್ಯಾವುದೋ ಪಾಯಕ್ಕಿಂತಲೂ ಬಾಳೆಹಣ್ಣೂ ಉತ್ತಮ ಎಂದು ಸಾಬೀತಾಗಿದೆ. ಅದೇ ರೀತಿ ಬಾಳೆಹಣ್ಣಿನಿಂದ ದೊರಕುವ ಶಕ್ತಿ ಕಾಫಿ, ಟೀಗಿಂತಲೂ ಹೆಚ್ಚು ಕಾಲ ಬಾಳುತ್ತದೆ ಎಂದು ತಿಳಿದುಬಂದಿದೆ.


3) ಬೆಳೆ ಹಣ್ಣಿನಲ್ಲಿನ ಹೆಚ್ಚಿನ ಪೊಟಾಷಿಯಂ ನಿಂದಾಗಿ, ದೇಹದ ರಕ್ತಪರಿಚಲನೆ ನಿರಂತರವಾಗುತ್ತದೆ ಮತ್ತು ಮೆದುಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆಯಾಗುತ್ತಿರುತ್ತದೆ. ಹೃದಯ ಬಡಿತವನ್ನು ನಿರಂತರವಾಗಿ ಮತ್ತು ನಿಯಮಿತವಾಗಿರಲು, ರಕ್ತದೊತ್ತಡ ನಿಯಂತ್ರಣದಲ್ಲಿರಲು ಮತ್ತು ದೇಹದಲ್ಲಿನ ನೀರಿನ ಪ್ರಮಾಣ  ನಿಯಂತ್ರಣದಲ್ಲಿರಲು ಪೊಟಾಷಿಯಂ ಅತೀ ಅಗತ್ಯ. ಹೃದಯದ ಆರೋಗ್ಯಕ್ಕೆ ಪೊಟಾಷಿಯಂ ಅತೀ ಅಗತ್ಯ. ಬಾಳೆಹಣ್ಣಿನಲ್ಲಿನ ಹೇರಳ ಪೊಟಾಷಿಯಂ ಅತ್ಯಮೂಲ್ಯ ಎಂದು ಸಾಬೀತಾಗಿದೆ.


4) ಪೊಟಾಷಿಯಂ ಜಾಸ್ತಿ ಇರುವ ಆಹಾರ ಜಾಸ್ತಿ ಸೇವನೆಯಿಂದ ಮೆದುಳಿನ ಆಘಾತ ಅತವಾ ಸ್ಟ್ರೋಕ್ಸ್ ಬರುವ ಸಾಧ್ಯತೆಯೂ ಕಡಿಮೆಯಾಗಿರುತ್ತದೆ ಎಂದು ಅಮೆರಿಕಾದ ಹೃದಯ ತಜ್ಞರ ಸಂಘ ತಿಳಿಸಿದೆ.


5) ಮಲಬದ್ಧತೆ ಸಮಸ್ಯೆ ಇರುವವರಿಗೆ ಬಾಳೆಹಣ್ಣು ರಾಮಬಾಣವಾಗಿರುತ್ತದೆ. ಚೆನ್ನಾಗಿ ಪಕ್ವವಾದ ಬಾಳೆಹಣ್ಣು ತಿಂದಲ್ಲಿ ಅದರಲ್ಲಿರುವ ನಾರಿನಂಶ, ಕರುಳಿನ ಚಲನೆಯನ್ನು ಹೆಚ್ಚಿಸಿ ಮಲಬದ್ಧತೆ ಆಗದಂತೆ ತಡೆಯುತ್ತದೆ.

ದಿನಕ್ಕೆರಡು ಬಾಳೆಹಣ್ಣು ತಿಂದಲ್ಲಿ ಹೆಚ್ಚಿನ ಎಲ್ಲಾ ಕರುಳು ಸಂಬಂಧಿ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ.


6) ಬಾಳೆಹಣ್ಣಿನಲ್ಲಿ ಸಣ್ಣ ಪ್ರಮಾಣದಲ್ಲಿ ಟ್ರಿಫ್ಟೋಫಾನ್ ಎಂಬ ಅಮಿನೋ ಆಸಿಡ್ ಇರುತ್ತದೆ. ಇದು ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ವಿಟಮಿನ್ ಬಿ6 ಜೊತೆ ಸೇರಿ ಸೆರಟೋನಿನ್ ಎಂಬ ಆನಂದ ತುಂದಿಲವಾಗಿಸುವ ರಸದೂತವನ್ನು  ತಯಾರಿಸುತ್ತದೆ. ಇದು ನಮ್ಮ ದೇಹ ಮತ್ತು ಮನಸ್ಸಿಗೆ ಮುದ ನೀಡಿ, ಮನಸ್ಸು ನಿರಾಳವಾಗಿ, ನಮ್ಮ ಮೂಡ್ ಉತ್ತೇಜಿಸಲ್ಪಡುತ್ತದೆ ಮತ್ತು ನಾವು ಸಂತಸವಾಗಿರುವಂತೆ ಮಾಡುತ್ತದೆ. ಬಾಳೆಹಣ್ಣಿನ ಹಳದಿ ಬಣ್ಣ ಮತ್ತು ಆಕಾರ ಕೂಡಾ ಮನಸ್ಸಿಗೆ ಹಿತವಾಗಿರುತ್ತದೆ.


7) ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ನೊವು ನಿವಾರಣೆಗೆ ವಿಟಮಿನ್ ಬಿ6 ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಬಾಳೆ ಹಣ್ಣಿನಲ್ಲಿರುವ ಈ ಬಿ6 ಮಹಿಳೆಯರಲ್ಲಿ ಋತುಚಕ್ರದ ಸಂದರ್ಭದಲ್ಲಿ ಸೇವಿಸಿದಾಗ ಋತು ಚಕ್ರದ ಮೊದಲು ಬರುವ ನೋವು ಯಾತನೆಯನ್ನು ನಿಯಂತ್ರಿಸುತ್ತದೆ ಎಂದು ತಿಳಿದುಬಂದಿದೆ. ಈ ಕಾರಣದಿಂದ ಋತುಚಕ್ರದ ದಿನಗಳಲ್ಲಿ ಹೆಚ್ಚು ಬಾಳೆ ಹಣ್ಣು ಸೇವಿಸುವುದು ಸೂಕ್ತ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


8) ಮಹಿಳೆಯರಲ್ಲಿ ಗರ್ಭಾವಸ್ಥೆ ಮೊದಲ ಮೂರು ತಿಂಗಳಲ್ಲಿ ಬೆಳಗ್ಗೆ ಹೊತ್ತಿನ ವಾಕರಿಕೆ ತಪ್ಪಿಸುವಲ್ಲಿಯೂ ಬಾಳೆಹಣ್ಣು ಉತ್ತಮ ಎಂದು ತಿಳಿದು ಬಂದಿದೆ. ಇಲ್ಲಿಯೂ ವಿಟಮಿನ್ ಃ6 ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.


9) ಅತೀ ಹೆಚ್ಚು  ಮದ್ಯಪಾನ ಮಾಡಿದ್ದಲ್ಲಿ ಅಥವಾ ದೇಹ ಅತಿಯಾಗಿ ಸುಸ್ತಾಗಿ ಬಳಲಿದಲ್ಲಿ ತಕ್ಷಣವೇ ದೇಹದ ಜೀವಸತ್ವ, ನೀರಿನಂಶ ಹಾಗೂ ಖನಿಜಾಂಶವನ್ನು ಸರಿಪಡಿಸುವಲ್ಲಿ ಬಾಳೆಹಣ್ಣು ಬಹಳ ಸುಲಭದ ಔಷಧಿ ಎಂದು ತಿಳಿದುಬಂದಿದೆ. ಒಂದೆರಡು ಹಣ್ಣನ್ನು, ಒಂದು ಕಪ್ ಮೊಸರು ಅಥವಾ ಒಂದಷ್ಟು ಜೇನು ತುಪ್ಪ ಬೆರಸಿದ ಬಾಳೆ ಹಣ್ಣನ್ನು ತಿಂದಲ್ಲಿ ಹೊಟ್ಟೆ ತಂಪಾಗಿ, ಕಳೆದುಹೋದ ಪೋಷಕಾಂಶ ಮರಳಿ ದೊರಕಿ, ರಕ್ತದಲ್ಲಿನ ಸಕ್ಕರೆ ಅಂಶ ಮೊದಲಿನಂತಾಗುತ್ತದೆ ಮತ್ತು ಬಳಲಿದ ವ್ಯಕ್ತಿ ಮೊದಲಿನಂತಾಗುತ್ತಾನೆ.


10) ದೇಹದಲ್ಲಿ ಸೊಳ್ಳೆ ಕಡಿತದಿಂದ ಚರ್ಮದಲ್ಲಿ ತುರಿಕೆ ಇದ್ದಲ್ಲಿ ಅಥವಾ ಇನ್ಯಾವುದೇ ಕಾರಣದಿಂದ ತುರಿಕೆ ಇದ್ದಲ್ಲಿ ಬಾಳೆಹಣ್ಣಿನ ಸಿಪ್ಪೆಯಿಂದ ಆ ಭಾಗವನ್ನು ಚೆನ್ನಾಗಿ ತಿಕ್ಕಿದಲ್ಲಿ ತುರಿಕೆ ತಕ್ಷಣವೇ ಕಡಿಮೆಯಾಗುತ್ತದೆ. ಯಾಕಾಗಿ ಹೀಗೆ ಕಡಿಮೆಯಾಗುತ್ತದೆ ಎಂಬುದರ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ತಿಂದು ಬಿಸಾಕುವ ಸಿಪ್ಪೆಯಿಂದ ತುರಿಕೆ ಕಡಿಮೆಯಾಗುವುದಿದ್ದಲ್ಲಿ  ಬಳಸುವುದು ತಪ್ಪಿಲ್ಲ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

 

11) ಬಾಳೆ ಹಣ್ಣು ತಿಂದಾಗ ಕರುಳಿನಲ್ಲಿ ಮ್ಯೂಖಸ್ ಹೆಚ್ಚು ಸ್ರವಿಸುವಂತೆ ಮಾಡುತ್ತದೆ. ಕರುಳಿನ ಹುಣ್ಣು ಇದ್ದಲ್ಲಿ ಅದನ್ನು ಶಮನವಾಗಿಸುವಲ್ಲಿ ಬಾಳೆಹಣ್ಣು ಉಪಯುಕ್ತವಾಗಿರುತ್ತದೆ. ಅದೇ ರೀತಿ ಕರುಳು ಕಿರಿಕಿರಿ ಕಾಯಿಲೆ ಇದ್ದಲ್ಲಿ ಕರುಳ ಒಳಪದರದಲ್ಲಿ ಒಂದು ರಕ್ಷಣಾ  ಪರದೆ ನಿರ್ಮಿಸಿ, ಕರುಳಿನ ಒಳಪದರದ ಗಾಯ ಒಣಗುವಂತ ಮಾಡುತ್ತದೆ.


12) ಬಾಳೆಹಣ್ಣು ಕ್ಷಾರೀಯ ಗುಣ ಹೊಂದಿದ್ದು, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಲ್ಲಿ ಅಸಿಡಿಟಿಯ ತೀವ್ರತೆಯನ್ನು ಕಡಿಮೆ ಮಾಡಿ, ಎದಉರಿ, ಹೊಟ್ಟೆ ಉರಿಯನ್ನು ನಿಯಂತ್ರಿಸುತ್ತದೆ. ನೈಸರ್ಗಿಕವಾಗಿ ದೊರಕುವ ಆಂಟಾಸಿಡ್  ಎಂದರತೆ ಬಾಳೆ ಹಣ್ಣು ಎಂದು ಖಂಡಿತವಾಗಿಯೂ ಒಪ್ಪಬಹುದಾಗಿದೆ.


13) ಬಾಳೆಹಣ್ಣೀನಲ್ಲಿ ಹೇರಳವಾಗಿ ನಾರು ಹಾಗೂ ಸಣ್ಣ ಪ್ರಮಾಣದ ಆಂಟಿಆಕ್ಸಿಡೆಂಟ್ ಇರುತ್ತದೆ. ಸಾಮಾನ್ಯ ಗಾತ್ರದ 100ಗ್ರಾಂ ಬಾಳೆಹಣ್ಣಿನಲಿ ಸುಮಾರು 105 ಕ್ಯಾಲರಿ ಶಕ್ತಿ ಇರುತ್ತದೆ. ಹೆಚ್ಚಿನ ನೀರಿನಂಶ ಮತ್ತು ಶರ್ಕರಪಿಷ್ಟಗಳಿರುತ್ತದೆ. ಕೊಬ್ಬಿನಂಶ ಇರುವುದೇ ಇಲ್ಲ ಮತ್ತು ಕನಿಷ್ಟ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ.   ಬಾಳೆ ಕಾಯಿಯಲ್ಲೂ ಹೆಚ್ಚು ಶರ್ಕರ ಪಿಷ್ಟ ಸ್ಟಾರ್ಚ್ ರೂಪದಲ್ಲಿ ಇರುತ್ತದೆ. ಅದು ಹಣ್ಣಾದಾಗ ಈ ಸ್ಟಾರ್ಚ್ ಗ್ಲುಕೋಸ್, ಪ್ರಾಕ್ಟೋಸ್ ಮತ್ತು ಸುಕ್ರೋನ್ ಆಗಿ ಬದಲಾಗುತ್ತದೆ. ಬಾಳೆಹಣ್ಣು ಅತೀ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು, ಆರೋಗ್ಯವಂತ ವ್ಯಕ್ತಿಗಳಲ್ಲಿ ಏನೂ ತೊಂದರೆ ಇರುವುದಿಲ್ಲ. ಆದರೆ ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ ಹೆಚ್ಚು ಹಣ್ಣಾದ ಬಾಳೆಹಣ್ಣು ತಿನ್ನುವುದು ಸೂಕ್ತವಲ್ಲ.


14) ದೇಹದ ತೂಕ ನಿಯಂತ್ರಣದಲ್ಲಿ ಬಾಳೆಹಣ್ಣ್ಣು ಬಹಳ ಸೂಕ್ತ. ಬಾಳೆಹಣ್ಣು ತಿಂದಾಗ ಅದರಲ್ಲಿರುವ ನಾರಿನಂಶ ಬೇಗ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ ಮತ್ತು ಹಸಿವೆ ಬೇಗ ಇಂಗುತ್ತದೆ.


15) ಬಾಳೆ ಹಣ್ಣೀನಲ್ಲಿ ಇರುವಹೇರಳ ಪೊಟ್ಯಾಷಿಯಂನಿಂದಾಗಿ ಕಿಡ್ನಿ ಆರೋಗ್ಯ ವೃದ್ಧಿಸುತ್ತದೆ. ವಾರದಲ್ಲಿ 8 ರಿಂದ 10 ಬಾಳೆ ಹಣ್ಣು ಕಿಡ್ನಿಯ ಆರೋಗ್ಯಕ್ಕೆ ಪೂರಕ ಎಂದು ತಿಳಿದು ಬಂದಿದೆ.


ಕೊನೆಮಾತು:

ಎಲ್ಲಾ ಕಡೆಯಲ್ಲಿ, ಎಲ್ಲಾ ಋತುವಿನಲ್ಲಿ ಅತೀ ಸುಲಭವಾಗಿ ಸಿಗುವ ಹಣ್ಣು ಒಂದಿದ್ದರೆ ಅದು ಬಾಳೆಹಣ್ಣು. ಸಾಕಾಷ್ಟು ಆರೋಗ್ಯಕರ  ಅಂಶಗಳನ್ನು ಹೊಂದಿರುವ ಬಾಳೆಹಣ್ಣು ಹೃದಯ, ಕಿಡ್ನಿ, ಕರುಳು ಹೀಗೆ ಎಲ್ಲಾ ಅಂಗಗಳ ಆರೋಗ್ಯವನ್ನು ಕಾಯುತ್ತದೆ. ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರೂ ಸೇವಿಸುವ, ಮಕ್ಕಳಿಂದ ಮುದುಕರವರೆಗೆ ಇಷ್ಟ್ಟಪಡುವ ಸಾರ್ವಕಾಲಿಕವಾಗಿ ಸಲ್ಲುವ ಬಾಳೆಹಣ್ಣು ನಿಜವಾಗಿಯೂ ಒದು ಸೂಪರ್ ಫುಡ್ ಎಂದರೆ ತಪ್ಪಾಗಲಾರದು. ವಿಪರೀತ ಸುಸ್ತಾಗಿ ಬಳಲಿದಾಗ, ಮನಸ್ಸಿಗೆ ಬೇಜಾರಾಗಿ ಚಿಂತೆಯಿಂದ ಕುಳಿತಾಗ ಅಥವಾ ಹೊಟ್ಟೆಯಲ್ಲಿ ಅಜೀರ್ಣವಾಗಿ ಮಂಕಾಗಿ ಕುಳಿತಾಗ ನೆನಪಿಗೆ ಬರುವುದು ಬಾಳೆಹಣ್ಣು. ಸಕಲ ಸಮಸ್ಯೆಗಳಿಗೂ ತಕ್ಷಣ ತಾತ್ಕಾಲಿಕ ಪರಿಹಾರ ಬೇಕಿದ್ದಲ್ಲಿ ಎಲ್ಲರೂ ಮೊರೆಹೋಗುವ ಬಾಳೆಹಣ್ಣು ಒಂದು ರೀತಿಯಲ್ಲಿ ಆಪದ್ಭಾಂಧವ ಹಣ್ಣು ಎಂದರೂ ತಪ್ಪಾಗಲಾರದು. ತಿನ್ನಬಾರದನ್ನು ತಿಂದಾಗ, ಹೊಟ್ಟೆಯಲ್ಲಿ  ಕಲ್ಮಶ ಸೇರಿದಾಗ ಪ್ರಾಣ ಉಳಿಸುವಲ್ಲಿಯೂ ಬಾಳೆಹಣ್ಣು ಅನಿವಾರ್ಯ. ದಿನದ ಎಲ್ಲಾ ಸಮಯದಲ್ಲೂ, ಬೇಜಾರಾದಾಗ, ಸಂತಸವಾದಾಗ, ಸುಸ್ತಾದಾಗ ತಿಂದು ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾದ ಬಾಳೆಹಣ್ಣು ಒಂದು ರೀತಿಯಲ್ಲಿ  ಜೀವರಕ್ಷಕ ಹಣ್ಣು ಎಂದರೂ ತಪ್ಪಾಗದು.


-ಡಾ|| ಮುರಲೀ ಮೋಹನ್ ಚೂಂತಾರು

BDS, MDS,DNB,MOSRCSEd (U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ: 9845135787


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم