|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಬ್ಬಿನ ಹಾಲು ಎಂಬ ಜೀವರಸ

ಕಬ್ಬಿನ ಹಾಲು ಎಂಬ ಜೀವರಸ


ಇತ್ತೀಚಿನ ದಿನಗಳಲ್ಲಿ ಜನರು ಬಾಯಾರಿದಾಗ ಇಂಗಾಲಯುಕ್ತ ಪೆಪ್ಸಿ, ಕೋಕ್, ಮಿರಿಂಡಾ ಮುಂತಾದ ಕೃತಕ ಪಾನೀಯಗಳನ್ನು ಕುಡಿಯುವುದನ್ನು ಶೋಕಿಯಾಗಿ ಅಥವಾ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಕೃತಕ ಪೇಯಗಳಿಂದ ಯಾವುದೇ ರೀತಿಯ ಲಾಭವಿಲ್ಲದಿದ್ದರೂ ಜನರು ಈ ರೀತಿಯ ಎನರ್ಜಿ ಪೇಯಗಳಿಗೆ ಮಾರು ಹೋಗುತ್ತಿರುವುದು ದುರಂತವೆಂದರೂ ತಪ್ಪಾಗಲಾರದು. ಎಳನೀರು, ಕಬ್ಬಿನ ಹಾಲು, ತಾಜಾ ಹಣ್ಣಿನ ರಸ ಮತ್ತು ಪರಿಶುದ್ಧ ನೀರು ಇವೆಲ್ಲವನ್ನು ಯುವಜನತೆ ಕಣ್ಣೆತ್ತಿಯೂ ನೋಡುವುದಿಲ್ಲ. ಯಾಕೋ ಇಂತಹ ನೈಸರ್ಗಿಕ, ಆರೋಗ್ಯ ಪೂರ್ಣ ಮತ್ತು ಪರಿಪೂರ್ಣ ಪೇಯಗಳನ್ನು ಕಂಡರೆ ಯುವಜನತೆ ಮೂಗು ಮುರಿಯುತ್ತಾರೆ ಎಂಬುದು ಇನ್ನು ಚಿದಂಬರ ರಹಸ್ಯವಾಗಿಯೇ ಉಳಿದಿದೆ.


ಕಬ್ಬಿನ ಹಾಲಿನ ಪ್ರಮುಖ್ಯತೆ ಏನು?

ಪುರಾತನ ಕಾಲದಿಂದಲೂ ನಮ್ಮ ಭಾರತ ದೇಶದಲ್ಲಿ ಕಬ್ಬಿನ ಗಿಡ ಮತ್ತು ಕಬ್ಬಿನ ಹಾಲಿಗೆ ವಿಶಿಷ್ಟ ಸ್ಥಾನವಿದೆ. ಹುಲ್ಲಿನ ಪ್ರಭೇದಕ್ಕೆ ಸೇರಿದ ಈ ಗಿಡ 2ರಿಂದ 6 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. 8.ಸೆ.ಮಿ ಸುತ್ತಳತೆವರೆಗೆ ಕಬ್ಬಿನ ಕಾಂಡ ವಿಸ್ತರಿಸುತ್ತದೆ. ವೇದಗಳ ಕಾಲದಿಂದಲೂ ಈ ಕಬ್ಬಿನ ಹಾಲಿನ ಬಗ್ಗೆ ನಮ್ಮ ಪುರಾಣಗಳಲ್ಲಿ ಉಲ್ಲೇಖವಿದೆ. ಕ್ರಿ.ಪೂ 325ರಲ್ಲಿ ಅಲೆಗ್ಸಾಂಡರ್ ಭಾರತಕ್ಕೆ ದಂಡೆತ್ತಿ ಬಂದು ಹಿಂದಿರುಗುವಾಗ ಕಬ್ಬಿನ ಗಿಡಗಳನ್ನು ತನ್ನ ದೇಶಕ್ಕೆ ಕೊಂಡೊಯ್ದ ಎಂಬುದಾಗಿ ಉಲ್ಲೇಖವಿದೆ. ಭಾರತ ಅಲ್ಲದೆ ಬ್ರೆಜಿಲ್, ಕ್ಯೂಬಾ, ಚೈನಾ, ಮೆಕ್ಸಿಕೋ, ಅಮೇರಿಕಾ, ಪಾಕಿಸ್ತಾನ ಕೊಲಂಬಿಯ, ದಕ್ಷಿಣ ಆಫ್ರಿಕಾ ಮುಂತಾದ ಕಡೆ ಕಬ್ಬನ್ನು ಹೆಚ್ಚು ಬೆಳೆಯುತ್ತಾರೆ. ಅತಿ ಸುಲಭವಾಗಿ ಬೆಳೆಯುವ ಬೆಳೆ ಇದಾಗಿದ್ದು ಎಲ್ಲೆಂದರಲ್ಲಿ ಇದು ಬೆಳೆಯುತ್ತದೆ. ಮತ್ತು ಬಹಳ ಕಡಮೆ ಖರ್ಚಿನಲ್ಲಿ ಎಲ್ಲರಿಗೂ ದೊರಕುತ್ತದೆ. ಕಬ್ಬಿನ ಜಲ್ಲೆಯಿಂದ ತಯಾರಿಸುವ ಕಬ್ಬಿನ ರಸದಲ್ಲಿ 15 ಶೇಕಡಾ ನೈಸರ್ಗಿಕ ಸಕ್ಕರೆ ಮತ್ತು ಅತಿ ಹೆಚ್ಚು ಸಾವಯವ ಲವಣಗಳು ವಿಟಮಿನ್ ಮತ್ತು ಅತೀ ಹೆಚ್ಚು ನೀರಿನಂಶ ಇರುತ್ತದೆ.  


ಕಬ್ಬಿನ ಹಾಲಿನ ಲಾಭಗಳು ಏನು?

1. ಕಬ್ಬಿನ ರಸದಲ್ಲಿ ಅತಿ ಹೆಚ್ಚು ನೀರಿನಂಶ ಇರುವುದರಿಂದ ನಿರ್ಜಲೀಕರಣವಾದಾಗ ಬಹಳ ಉಪಯುಕ್ತ ಪೇಯವಾಗಿದೆ. ಒಂದಷ್ಟು ಲಿಂಬೆ ಮತ್ತು ಶುಂಠಿ ಸೇರಿಸಿದರೆ ಈ ಕಬ್ಬಿನ ಹಾಲಿನ ರುಚಿ ದುಪ್ಪಟ್ಟಾವಾಗುತ್ತದೆ. ಅತೀ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ದೊರಕುವ ಅತ್ಯುತ್ತಮ ನೈಸರ್ಗಿಕ ಪೇಯ ಇದಾಗಿದೆ. ಪ್ರತಿ ನೂರು ಗ್ರಾಂ ಕಬ್ಬಿನ ರಸದಲ್ಲಿ ಕ್ಯಾಲರಿ ಅಂಶ 40ರಷ್ಟು ಇರುತ್ತದೆ.


2. ಹಲ್ಲಿನ ಆರೋಗ್ಯಕ್ಕೆ, ಕಬ್ಬಿನ ರಸ ಅತಿ ಉಪಯುಕ್ತ. ಪ್ರತಿ ನೂರು ಗ್ರಾಂನಲ್ಲಿ 10mg ಕ್ಯಾಲ್ಸಿಯಂ 10mg ಗ್ರಾಂ ಫಾಸ್ಪರಸ್ ಇರುತ್ತದೆ. ದಿನಕ್ಕೊಂದು ಗ್ಲಾಸ್ ಕಬ್ಬಿನ ಹಾಲು ಕುಡಿದಲ್ಲಿ ಹಲ್ಲಿನ ಮತ್ತು ಎಲುಬಿನ ಆರೋಗ್ಯ ಬಹಳ ಚೆನ್ನಾಗಿರುತ್ತದೆ. ನಿರಂತರವಾದ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ದೊರಕುವುದರಿಂದ ದಂತಕ್ಷಯ ಆಗುವುದನ್ನು ತಡೆಯುತ್ತದೆ. ಕಬ್ಬಿನ ಜಲ್ಲೆಯನ್ನು ಜಗಿಯುವುದರಿಂದ ಹಲ್ಲಿನ ಆರೊಗ್ಯಕ್ಕೆ ಬಹಳ ಉತ್ತಮ. ಕಬ್ಬಿನ ಜಲ್ಲೆಯನ್ನು ಜಗಿದಾಗ ಹಲ್ಲು ಶುಚಿಯಾಗುತ್ತದೆ. ಮತ್ತು ಮತ್ತಷ್ಟು ದೃಢವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಬ್ಬಿನ ಜಲ್ಲೆ ಜಗಿಯುವುದು ಬಿಡಿ, ಕಬ್ಬಿನ ಹಾಲನ್ನು ಕುಡಿಯುವವರ ಸಂಖ್ಯೆಯೂ ಕ್ಷೀಣಿಸಿದೆ. ಎಲ್ಲಾ ಯುವಜನರೂ ಎನರ್ಜಿ ಪೇಯಗಳು ಮತ್ತು ಪೆಪ್ಸಿ ಕೋಕ್‍ಗಳಂತಹಾ ಅನಾರೋಗ್ಯಕರ ಪೇಯಗಳಿಗೆ ದಾಸರಾಗಿರುವುದು ಬಹಳ ವಿಷಾದನೀಯ ವಿಚಾರ.
3. ಕಬ್ಬಿನ ರಸದಲ್ಲಿ ವಿಟಮಿನ್, ಲವಣಗಳು ಮತ್ತು ಪ್ರೋಟಿನ್‍ಗಳು ಹೇರಳವಾಗಿರುವುದರಿಂದ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ದೃಡಗೊಳಿಸುತ್ತದೆ. ದೇಹದಲ್ಲಿನ ಆಂಟಿಬಾಡಿಗಳು ಮತ್ತು ಕಿಣ್ವಗಳ ತಯಾರಿಕೆಗೆ ಪ್ರೋಟಿನ್ ಅತೀ ಅವಶ್ಯಕ.


4. ಕಬ್ಬಿನ ರಸದಲ್ಲಿ ಇರುವ ಸಕ್ಕರೆ ಬಹಳ ಸಂಕೀರ್ಣವಲ್ಲದ ಸಾಮಾನ್ಯ ಸುಕ್ರೋಸ್ ಆಗಿರುತ್ತದೆ. ಈ ಕಾರಣದಿಂದಲೇ ಆಯಾಸವಾದಾಗ ಒಂದು ಗ್ಲಾಸು ಕಬ್ಬಿನ ರಸ ಕುಡಿದಾಗ ತಕ್ಷಣವೇ ದೇಹಕ್ಕೆ ಹೊಸ ಹುಮ್ಮಸ್ಸು ಮತ್ತು ಶಕ್ತಿ ಬರುತ್ತದೆ.


5. ಕಬ್ಬಿನ ರಸದಲ್ಲಿ ಅತೀ ಹೆಚ್ಚು ಆಂಟಾಕ್ಸಿಡ್ ಎಂಬ ವಸ್ತು ಇರುತ್ತದೆ. ಇದು ನಮ್ಮ ದೇಹದ ಜೀರ್ಣ ಪ್ರಕ್ರಿಯೆಗೆ ಅತೀ ಅವಶ್ಯಕ ಮತ್ತು ದೇಹದ ರಕ್ಷಣಾ ವ್ಯವಸ್ಥೆಗೆ ಹೆಚ್ಚು ಶಕ್ತಿ ತುಂಬುತ್ತದೆ. ದೇಹದಲ್ಲಿ ಹೆಚ್ಚಾದ ಬಿಲಿರುಬಿನ್ ಎಂಬ ರಾಸಾಯನಿಕ ವಸ್ತುವನ್ನು ನಿಯಂತ್ರಿಸಲು ಈ ಆಂಟಾಕ್ಸಿಡ್ ಬಹಳ ಉಪಯುಕ್ತ.


6. ಕಿಡ್ನಿ ಸಂಬಂಧಿ ರೋಗಿಗಳಿಗೆ ಮತ್ತು ಲಿವರ್ (ಯಕೃತ್) ಸಂಬಂಧಿ ರೋಗಗಳಿಗೆ ಕಬ್ಬಿನ ರಸ ಅತೀ ಉಪಯುಕ್ತ ಎಂದು ತಿಳಿದು ಬಂದಿದೆ. ಜಾಂಡಿಸ್ ಇರುವ ವ್ಯಕ್ತಿಗಳಿಗೆ ಕಬ್ಬಿನ ಹಾಲು ಉತ್ತಮ ಪೇಯ ಎಂದು ಎಲ್ಲರಿಗೂ ತಿಳಿದಿದೆ. ಕಬ್ಬಿನ ರಸದಲ್ಲಿರುವ ಪ್ರೋಟಿನ್‍ಗಳ ಕಿಡ್ನಿಯ ಆರೊಗ್ಯಕ್ಕೆ ಪೂರಕ ಎಂದು ತಿಳಿದು ಬಂದಿದೆ.


7. ಮಧುಮೇಹ ರೋಗಿಗಳಿಗೂ ಕಬ್ಬಿನ ಹಾಲು ಹಿತಮಿತವಾಗಿ ಸೇವಿಸಬಹುದು. ಕಬ್ಬಿನ ಹಾಲಿನಲ್ಲಿರುವ ಸುಕ್ರೋಸ್ ಸಕ್ಕರೆಯ ಗ್ಲೈಸೆಮಿಕ್ ಇಂಡೆಕ್ಸ್ ಬಹಳ ಕಡಮೆ ಇರುವುದರಿಂದ, ಇತರ ಕೃತಕ ಸಕ್ಕರೆಗಳಿಗಿಂತ ಉತ್ತಮ ಎನ್ನಲಾಗಿದೆ. ಆದರೆ ಹಿತಮಿತವಾಗಿ ಸೇವಿಸಬೇಕು.


8. ಕಬ್ಬಿನ ಹಾಲಿನಲ್ಲಿ ಫೋಲಿಕ್ ಆಸಿಡ್ ಮತ್ತು ವಿಟಾಮಿನ್ BG ಇರುವುದರಿಂದ ಗರ್ಭಿಣಿ ಸ್ತ್ರೀಯರಿಗೂ ಬಹಳ ಉತ್ತಮ ಎಂದು ಸಾಬೀತಾಗಿದೆ.


9. ಕಬ್ಬಿನ ರಸ ಸೇವಿಸುವುದರಿಂದ ಮೂತ್ರದ ಪ್ರಮಾಣ ಜಾಸ್ತಿಯಾಗುತ್ತದೆ. ಆ ಮೂಲಕ ಮೂತ್ರದ ಸೋಂಕು, ಕಿಡ್ನಿಯಲ್ಲಿ ಕಲ್ಲು ಇರುವವರಿಗೆ ಕಬ್ಬಿನ ಹಾಲು ರಾಮಬಾಣ ಎಂದು ತಿಳಿಯಲಾಗಿದೆ. ಮತ್ತು ಕಿಡ್ನಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.


10. ಕಬ್ಬಿನ ರಸದ ಆಮ್ಲದ ಮಟ್ಟ 7ಕ್ಕಿಂತ ಜಾಸ್ತಿ ಇರುವುದರಿಂದ ಇದೊಂದು ಕ್ಷಾರೀಯ ದ್ರಾವಣವಾಗಿದ್ದು, ಆಸಿಡಿಟಿ ಇರುವವರಿಗೆ ಉತ್ತಮ ದ್ರವ್ಯವಾಗಿದೆ. ಮತ್ತು ಕಬ್ಬಿನ ಹಾಲು ಕರುಳಿನ ಮತ್ತು ಜಠರದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮತ್ತು ಮಲಬದ್ಧತೆ ಇರುವವರಿಗೆ ಬಹಳ ಉತ್ತಮ ಎಂದು ತಿಳಿದು ಬಂದಿದೆ.


11. ಬಾಯಿ ವಾಸನೆ ಇರುವವರಿಗೆ ಕಬ್ಬಿನ ರಸ ಕುಡಿಯುವುದರಿಂದ ಬಾಯಿ ವಾಸನೆಯ ಸಮಸ್ಯೆಗಳು ದೂರವಾಗುವ ಸಾಧ್ಯತೆ ಇರುತ್ತದೆ.


ಕೊನೆ ಮಾತು:

ಕಬ್ಬಿನ ಹಾಲು ಎನ್ನುವುದು ಒಂದು ಪರಿಪೂರ್ಣ ನೈಸರ್ಗಿಕ ಪೇಯವಾಗಿದ್ದು ಇದರಲ್ಲಿ ಶರ್ಕರಪಿಷ್ಟ, ಪ್ರೋಟಿನ್, ಕಬ್ಬಿಣ, ಪೋಟೆಸಿಯಂ, ಕ್ಯಾಲ್ಸಿಯಂ ಎಲ್ಲವೂ ಇರುತ್ತದೆ. ಆದರೆ ಕೊಬ್ಬಿನ ಅಂಶ ಇರುವುದೇ ಇಲ್ಲ. ಅತೀ ಕಡಿಮೆ ಕ್ಯಾಲರಿ ಇರುವ ಯಾವುದೇ ಖರ್ಚಿಲ್ಲದೆ ಅತೀ ಸುಲಭವಾಗಿ ದೊರಕುವ ಈ ನೈಸರ್ಗಿಕ ಪೇಯವನ್ನು ಕುಡಿಯಲು ಮನಸ್ಸು ಮಾಡದಿರುವುದು ಮಾತ್ರ ಬಹಳ ನೋವಿನ ವಿಚಾರ. ಹೆಚ್ಚು ಹಣ ನೀಡಿ ಕೃತಕ ರಾಸಾಯನಿಕಗಳಿಂದ ಕೂಡಿರುವ ಎನರ್ಜಿ ಪೇಯಗಳನ್ನು ಕುಡಿದು ರೋಗಗಳನ್ನು ಬರಿಸಿಕೊಳ್ಳುವುದಕ್ಕಿಂತ ನೈಸರ್ಗಿಕವಾಗಿ ದೊರಕುವ ಕಬ್ಬಿನ ಹಾಲಿನಂತಹ ಪರಿಪೂರ್ಣ ಪೇಯಗಳನ್ನು ಕುಡಿದು ನಿರೋಗಿಗಳಾಗಿ ಬದುಕುವುದರಲ್ಲಿಯೇ ಜಾಣತನ ಅಡಗಿದೆ.  

-ಡಾ|| ಮುರಲೀ ಮೋಹನ್ ಚೂಂತಾರು 

(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ
0 Comments

Post a Comment

Post a Comment (0)

Previous Post Next Post