|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷ ಸಾಧಕರು ಸರಣಿ-75: ಶ್ರೀಹರಿಲೀಲಾ- ಕೆ. ಹರಿನಾರಾಯಣ ಬೈಪಾಡಿತ್ತಾಯ ಮತ್ತು ಲೀಲಾವತಿ ಬೈಪಾಡಿತ್ತಾಯ

ಯಕ್ಷ ಸಾಧಕರು ಸರಣಿ-75: ಶ್ರೀಹರಿಲೀಲಾ- ಕೆ. ಹರಿನಾರಾಯಣ ಬೈಪಾಡಿತ್ತಾಯ ಮತ್ತು ಲೀಲಾವತಿ ಬೈಪಾಡಿತ್ತಾಯ


ಯಕ್ಷಗಾನ ಪರಂಪರೆಯ ಪ್ರತಿಪಾದಕ ಗುರು ಕೆ. ಹರಿನಾರಾಯಣ ಬೈಪಾಡಿತ್ತಾಯ ಹಾಗೂ ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆ ಭಾಗವತರು ಶ್ರೀಮತಿ ಲೀಲಾ ಬೈಪಾಡಿತ್ತಾಯ.


ಕನ್ನಡ ಕರಾವಳಿಯ ಅದ್ಭುತ ರಂಗ ಕಲೆಯಾಗಿರುವ ಯಕ್ಷಗಾನದ ಪರಂಪರೆ ಉಳಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿದವರು ಈ ರಂಗದ ಹಿಮ್ಮೇಳ ಗುರುಗಳಲ್ಲಿ ಅಗ್ರಮಾನ್ಯರಾದ ಹಾಗೂ 2020ರ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ. ಹರಿನಾರಾಯಣ ಬೈಪಾಡಿತ್ತಾಯರು. ಬಾಲ್ಯದಿಂದಲೇ ಯಕ್ಷಗಾನವನ್ನು ಅಪ್ಪಿಕೊಂಡಿದ್ದ ಅವರಿಗೆ ಸುಮಾರು ಆರು ದಶಕಗಳ ರಂಗಾನುಭವವಿದೆ.


ರಾಮಕೃಷ್ಣ ಬೈಪಾಡಿತ್ತಾಯ ಮತ್ತು ಪದ್ಮಾವತಿ ಅಮ್ಮ ಇವರ ಮಗನಾಗಿ ದಿನಾಂಕ 13.11.1946 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೆಂಚಭಟ್ರೆಯಲ್ಲಿ ಇವರ ಜನನ. ೭ನೇ ತರಗತಿವರೆಗೆ ವಿದ್ಯಾಭ್ಯಾಸ.


ಆರಂಭದಲ್ಲಿ ಕಡಬ ಪುರುಷಯ್ಯ ಆಚಾರ್ಯರಿಂದ ಯಕ್ಷಗಾನದ ಬಾಲಪಾಠ ಪಡೆದು ಮೃದಂಗ ವಿದ್ವಾನ್ ಕಾಂಚನ ಕೆ.ವಿ.ಮೂರ್ತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗದ ನಡೆಗಳನ್ನು ಅರಿತುಕೊಂಡು, ಸಮಗ್ರವಾಗಿ ಮೃದಂಗ ಸಾಹಿತ್ಯವನ್ನು ತಮ್ಮದಾಗಿಸಿಕೊಂಡರು. 15ನೇ ವಯಸ್ಸಿಗೇ ಮೇಳದ ತಿರುಗಾಟ ಆರಂಭಿಸಿದ ಅವರು ಕುಂಡಾವು ಇರಾ ಸೋಮನಾಥೇಶ್ವರ ಮೇಳದಲ್ಲಿ 2 ವರ್ಷ, ಧರ್ಮಸ್ಥಳ, ಕೊಲ್ಲೂರು, ಕೂಡ್ಲು, ಸುಬ್ರಹ್ಮಣ್ಯ, ಪುತ್ತೂರು, ಸುರತ್ಕಲ್, ಕರ್ನಾಟಕ, ಅರುವ, ಕುಂಬಳೆ, ಬಪ್ಪನಾಡು, ತಲಕಳ ಮುಂತಾದ ಟೆಂಟ್ ಮತ್ತು ಬಯಲಾಟ ಮೇಳಗಳಲ್ಲಿ ವ್ಯವಸಾಯ ಮಾಡಿ ಸುಮಾರು ಆರು ದಶಕಗಳಿಂದ ಯಕ್ಷ ಕಲಾ ಮಾತೆಯ ಸೇವೆ ಮಾಡುತ್ತಿದ್ದಾರೆ. ಪ್ರಮುಖ ಭಾಗವತರಾದ ದಾಮೋದರ ಮಂಡೆಚ್ಚರು, ಹಿರಿಯ ಅಗರಿ ಭಾಗವತರು, ಕಡತೋಕ ಮಂಜುನಾಥ ಭಾಗವತರು, ಬಲಿಪ ಭಾಗವತರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ನೆಡ್ಲೆ ನರಸಿಂಹ ಭಟ್, ಕುದ್ರೆಕೂಡ್ಲು ರಾಂ ಭಟ್, ಕಾಸರಗೋಡು ವೆಂಕಟ್ರಮಣ ಮದ್ಲೆಗಾರ್, ಚಕ್ಕುಲಿ ಗೋಪಾಲಕೃಷ್ಣ ಭಟ್ ಮುಂತಾದವರೊಂದಿಗೆ ಸಾಥ್ ನೀಡಿ ಸೈ ಅನ್ನಿಸಿಕೊಂಡಿದ್ದಲ್ಲದೆ, ಶೇಣಿ ಗೋಪಾಲಕೃಷ್ಣ ಭಟ್, ಕುಂಬಳೆ ಸುಂದರ ರಾವ್, ಬಣ್ಣದ ಮಾಲಿಂಗ, ಬಣ್ಣದ ಕುಟ್ಯಪ್ಪು, ಪಡ್ರೆ ಚಂದು, ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಪುತ್ತೂರು ನಾರಾಯಣ ಹೆಗ್ಡೆ, ಪುತ್ತೂರು ಕೃಷ್ಣ ಭಟ್, ಹೊಸಹಿತ್ಲು ಮಹಾಲಿಂಗ ಭಟ್, ಎಂಪೆಕಟ್ಟೆ ನಾರಾಯಣ ರೈ, ವಿಟ್ಲ ಗೋಪಾಲಕೃಷ್ಣ ಜೋಷಿ ಮುಂತಾದ ಘಟಾನುಘಟಿ ಹಿರಿಯರನ್ನು ಕುಣಿಸಿದ್ದಾರೆ ಮತ್ತು ಹೊಸ ಪೀಳಿಗೆಯ ಕಲಾವಿದರನ್ನೂ ರಂಗದಲ್ಲಿ ಮೆರೆಯುವಂತೆ ಮಾಡಿದ್ದಾರೆ. 1960ರಿಂದೀಚೆಗೆ, ಸುಮಾರು ಆರು ದಶಕಕ್ಕೂ  ಹೆಚ್ಚು  ರಂಗಾನುಭವ.


ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ೧೨ ವರ್ಷಗಳ ಕಾಲ ಹಿಮ್ಮೇಳ ಗುರುಗಳಾಗಿ ಸೇವೆ ಸಲ್ಲಿಸಿರುವ ಅವರ ಶಿಷ್ಯರನೇಕರು ಈಗ ವಿವಿಧ ಮೇಳಗಳಲ್ಲಿ ಪ್ರಧಾನ ಪಾತ್ರವಹಿಸಿ ಪ್ರಸಿದ್ಧರಾಗಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಹಿಮ್ಮೇಳ ವಾದಕರನ್ನು ರೂಪಿಸಿರುವ ಖ್ಯಾತಿ ಇವರಿಗೆ ಸಲ್ಲುತ್ತದೆ. ಅಲ್ಲದೆ, ಹಲವು ಕಿರಿಯರಿಗೆ ಯಕ್ಷಗಾನ ಕಲಿಯುವಂತೆ ಆಗ್ರಹಿಸಿ, ಪ್ರೇರೇಪಿಸಿದವರು ಅವರು.


12 ವರ್ಷ ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾ ಕೇಂದ್ರದಲ್ಲಿ ಹಿಮ್ಮೇಳದ ಗುರುಗಳಾಗಿ ಚೆಂಡೆ, ಮದ್ದಳೆ, ಭಾಗವತಿಕೆ ಕಲಿಸಿರುವ ಇವರ ಶಿಷ್ಯರೇ ಈಗ ಟೆಂಟ್ ಮತ್ತು ಬಯಲಾಟ ಮೇಳಗಳಲ್ಲಿ ಕೀರ್ತಿಶಾಲಿಗಳಾಗಿರುವುದು ಅವರ ಗುರುತನದ ಹಿರಿಮೆಗೆ ಸಾಕ್ಷಿ.ಕಟೀಲು, ಮೂಡುಬಿದಿರೆ, ಕಾರ್ಕಳ, ತಲಕಳ ಮುಂತಾದೆಡೆ ಯಕ್ಷಗಾನ ತರಬೇತಿ ನೀಡುತ್ತಾ, ಯಕ್ಷಗಾನದ ಪರಂಪರೆಗೆ ಧಕ್ಕೆಯಾಗದಂತೆ ಕಲಾವಿದರನ್ನು ರೂಪಿಸಿದ್ದಾರೆ.


ಮುಂಬಯಿ, ಗುಜರಾತ್, ಚೆನ್ನೈ, ದೆಹಲಿ, ಕೊಯಮತ್ತೂರು ಮುಂತಾದೆಡೆಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಸೈ ಅನ್ನಿಸಿಕೊಂಡಿದ್ದಾರೆ ಶ್ರೀಯುತ ಹರಿನಾರಾಯಣ ಬೈಪಾಡಿತ್ತಾಯರು. ಪ್ರಸ್ತುತ, ಕಲಿಕೆಯ ಆಸಕ್ತಿಯುಳ್ಳ ಮಕ್ಕಳಿಗೆ ಚೆಂಡೆ, ಮದ್ದಳೆ, ಭಾಗವತಿಕೆ ತರಬೇತಿ ನೀಡುತ್ತಾ, ಅವರನ್ನು ರಂಗಕ್ಕೆ ತರುವಲ್ಲಿ ಶ್ರಮಿಸುತ್ತಿದ್ದಾರೆ.



ಮೂಡುಬಿದಿರೆಯ ಆಲಂಗಾರು ದೇವಸ್ಥಾನದಲ್ಲಿ ಶಿಷ್ಯರನ್ನು ತರಬೇತುಗೊಳಿಸಿದ್ದು, ಶಿಷ್ಯ ವೃಂದದ ಚೆಂಡೆ ಜುಗಲ್ಬಂದಿ ನಡೆಸುವ ಮೂಲಕ ಯಕ್ಷಗಾನದಲ್ಲಿ ಹೊಸ ಸಾಧ್ಯತೆಯನ್ನೂ ಆವಿಷ್ಕರಿಸಿದ್ದಾರೆ. ಜೊತೆಗೆ, ಶಿಷ್ಯರಿಗಾಗಿ ಚೆಂಡೆ-ಮದ್ದಳೆಯ ಪಠ್ಯ ಪುಸ್ತಕವನ್ನು ಹೊರತಂದಿದ್ದಾರೆ. ಅಲ್ಲದೆ, ಯಕ್ಷಗಾನ ಪೂರ್ವರಂಗದ ಆಡಿಯೊ ಸಿಡಿಯನ್ನೂ ಶಿಷ್ಯರ ನೆರವಿನಿಂದ ಹೊರತಂದಿದ್ದಾರೆ.


ಇವರ ಕಲಾಸೇವೆಯನ್ನು ಪರಿಗಣಿಸಿ ವಿವಿಧೆಡೆ ಅಭಿಮಾನಿಗಳು ಸನ್ಮಾನಿಸಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯೂ ಇವರ ಸೇವೆಯನ್ನು 2020ರ ಪ್ರಶಸ್ತಿಗೆ ಗುರುತಿಸಿದೆ. ಕದ್ರಿಯ ಹವ್ಯಾಸಿ ಬಳಗದ ದಶಮಾನ ಸಮ್ಮಾನ, ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನ, ಶ್ರೀಕೃಷ್ಣ ಯಕ್ಷ ಸಭಾ, ಮಂಗಳೂರು, ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ, ಯಕ್ಷಗಾನ ಕಲಾರಂಗ ಉಡುಪಿ ಇದರ ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ, ಪುತ್ತೂರು ಆಂಜನೇಯ ಯಕ್ಷಗಾನ ಕಲಾಸಂಘದ ಗೌರವ, ಗುರುಗಳಾದ ನೆಡ್ಲೆ ನರಸಿಂಹ ಭಟ್ ಹೆಸರಿನ ಪ್ರಶಸ್ತಿ, ಪುತ್ತೂರು ನಾರಾಯಣ ಹೆಗ್ಡೆ ಸ್ಮೃತಿ ಗೌರವ, ಕಡಬ ಸಂಸ್ಮರಣಾ ಪುರಸ್ಕಾರ 2020 - ಇವೆಲ್ಲವೂ ಅವರಿಗೆ ಸಂದ ಪುರಸ್ಕಾರಗಳಲ್ಲಿ ಕೆಲವು.


ಹರಿನಾರಾಯಣ ಅವರ ಕುಟುಂಬವೇ ಯಕ್ಷಗಾನ ಪರಂಪರೆಯದು. ಕಡಬ ಬೈಪಾಡಿ ಬೀಡು ಮನೆತನದವರಾದ ಇವರ ಸಹೋದರರು ಮೋಹನ ಬೈಪಾಡಿತ್ತಾಯ (ಹಿಮ್ಮೇಳ ವಾದಕರು), ಕೇಶವ ಬೈಪಾಡಿತ್ತಾಯ (ಹಿಮ್ಮೇಳ ವಾದಕರು) ಮತ್ತು ಅನಂತ ಬೈಪಾಡಿತ್ತಾಯ (ವೇಷಧಾರಿ, ಅರ್ಥಧಾರಿ, ಭಾಗವತರು) ಕೂಡ ಯಕ್ಷಗಾನ ವ್ಯವಸಾಯಿಗಳು. ವಿವಾಹಾನಂತರದಲ್ಲಿ, ಸಂಗೀತ ಕಲಿತಿದ್ದ ಪತ್ನಿ ಲೀಲಾ ಬೈಪಾಡಿತ್ತಾಯರನ್ನೂ ಈ ರಂಗಕ್ಕೆ ಎಳೆದು ತಂದು, ತರಬೇತಿ ನೀಡಿ ಪ್ರಥಮ ವೃತ್ತಿಪರ ಮಹಿಳಾ ಭಾಗವತರಾಗಿ ರೂಪಿಸಿರುವುದರಲ್ಲಿ ಅಚ್ಚರಿಯೇನಿಲ್ಲ.


ಶ್ರೀಮತಿ ಲೀಲಾ ಬೈಪಾಡಿತ್ತಾಯರು:-


ಕಾಸರಗೋಡಿನ ಮಧೂರಿನ ಪುಂಡರೀಕಾಕ್ಷ ಹೆಬ್ಬಾರ್ ಹಾಗೂ ಮಹಾಲಕ್ಷ್ಮಿ ಅಮ್ಮ ಇವರ ಮಗಳಾಗಿ ದಿನಾಂಕ 23.05.1947 ಇವರ ಜನನ. ಬಡತನದಿಂದಾಗಿ ಓದು ಬರಹ ಇರಲಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು. ಹಿಂದಿ ವಿಶಾರದ ಕೂಡ ಮಾಡಿದ್ದರೆಂಬುದು ಉಲ್ಲೇಖಾರ್ಹ.


ಶ್ರೀಮತಿ ಲೀಲಾ ಬೈಪಾಡಿತ್ತಾಯರು ಸರಿ ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದವರು. ಲೀಲಾ ಅವರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿ 2010ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ, 2012ರಲ್ಲಿ ಕರ್ನಾಟಕ ಸರಕಾರ ಕೊಡಮಾಡಿದ ಸಾಧಕ ಹಿರಿಯ ನಾಗರಿಕರು ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ರಾಣಿ ಅಬ್ಬಕ್ಕ ಪುರಸ್ಕಾರ, ವಿಶ್ವ ತುಳು ಸಮ್ಮೇಳನ ಗೌರವ, ಅಗರಿ ಪ್ರಶಸ್ತಿ, ಸುಳ್ಯದ ರಂಗಮನೆ ಪ್ರಶಸ್ತಿ, ಆಳ್ವಾಸ್ ನುಡಿಸಿರಿ, ಉಡುಪಿ ಕಲಾರಂಗ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಜತೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯೆಯಾಗಿಯೂ ಅವರು ಕೆಲಸ ಮಾಡಿದ್ದಾರೆ.


ಸಂಗೀತ ಕಲಿತಿದ್ದ ಅವರನ್ನು, ಸದ್ಯ ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾಗಿರುವ ಹರಿನಾರಾಯಣ ಬೈಪಾಡಿತ್ತಾಯರು ಕೈಹಿಡಿದ ಬಳಿಕ, ಯಕ್ಷಗಾನ ಕಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಎಂಬಲ್ಲಿನ ಪರಿಸರ ಅವರ ಯಕ್ಷಗಾನ ಕಲಿಕೆಗೆ ಪೂರಕವಾಗಿತ್ತು. ಮನೆ ಮನೆಯಲ್ಲೂ ವಿಶೇಷ ಕಾರ್ಯಕ್ರಮವಿದ್ದರೆ ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿತ್ತು. ಹೀಗೆ ಕಲಿಯುತ್ತಲೇ, ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಅವರು ಬೆಳೆದದ್ದು ಇತಿಹಾಸ. ಪರಿಣಾಮ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ. ಪತಿಯೊಂದಿಗೆ ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ 25ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ್ದಾರೆ.


ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡ ಲೀಲಾ ಅವರಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಲೇ ಬಂದವರು ಪತಿ ಹರಿನಾರಾಯಣರು. ಬಲಿಪ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳು ಅವರನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸಿದವು.


ಗಂಡು ಮೆಟ್ಟಿನ ಕಲೆಯಲ್ಲಿ ಅದರಲ್ಲೂ ವೀರರಸ ಪ್ರಧಾನ ಸನ್ನಿವೇಶಗಳಲ್ಲಿ ಹೆಣ್ಣು ಕಂಠವನ್ನು ಮೆರೆಸಿ, ಯಕ್ಷಗಾನ ಕಲೆಯತ್ತ ಮಹಿಳೆಯರೂ ಆಕರ್ಷಿತರಾಗುವಂತೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅವರು. ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡಿದ್ದಷ್ಟೇ ಅಲ್ಲದೆ, ರಾತ್ರಿಯಿಡೀ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ ಕೀರ್ತಿಯೂ ಇದೆ. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಇವರ ಹೆಗ್ಗಳಿಕೆ. ಬಡಗುತಿಟ್ಟಿನಲ್ಲಿ ತಮ್ಮ ಛಾಪು ಬೀರಿ ನಂದಿದ ನಂದಾದೀಪ ಕಾಳಿಂಗ ನಾವಡರ ಜತೆಗೆ ಶೃಂಗೇರಿ ಹಾಗೂ ಮುಂಬಯಿಯಲ್ಲಿ ಹಾಡುತ್ತಾ, ಅವರ ಮೆಚ್ಚುಗೆಗೂ ಪಾತ್ರರಾದವರು ಶ್ರೀಮತಿ ಲೀಲಾ.


ಸದ್ಯಕ್ಕೆ ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪ್ರೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡುತ್ತಿದ್ದಾರೆ. ಇದಕ್ಕೆ ಮೊದಲು, ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.


ಬೈಪಾಡಿತ್ತಾಯ ದಂಪತಿಗಳ ಇಬ್ಬರು ಮಕ್ಕಳಾದ ಶ್ರೀಯುತ ಗುರುಪ್ರಸಾದ್ ಬೈಪಾಡಿತ್ತಾಯ ಹಾಗೂ ಅವಿನಾಶ್ ಬೈಪಾಡಿತ್ತಾಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಇದ್ದಾರೆ.

ಶ್ರೀಯುತ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಶ್ರೀಮತಿ ಲೀಲಾ ಬೈಪಾಡಿತ್ತಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯ ತಲಕಳ ದೇವಸ್ಥಾನದ ಬಳಿ "ಕಲಾನುಗ್ರಹ" ಮನೆಯಲ್ಲಿ ಮಕ್ಕಳಿಗೆ ಯಕ್ಷಗಾನ ಶಿಕ್ಷಣ ನೀಡುತ್ತಾ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಕಡಬ ರಾಮಚಂದ್ರ ರೈ, ಜಯಪ್ರಕಾಶ್ ನಿಡ್ವಣ್ಣಾಯ, ರಾಜಾರಾಮ್ ರಾವ್ ಅನಾರು, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಚಂದ್ರಶೇಖರ ಕೊಂಕಣಾಜೆ, ಗಿರೀಶ್ ರೈ ಕಕ್ಕೆಪದವು, ಶ್ರೀನಿವಾಸ ಬಳ್ಳಮಂಜ, ಗುರುಪ್ರಸಾದ್ ಬೊಳಿಂಜಡ್ಕ, ಗಿರೀಶ್ ಕಿನಿಲಕೋಡಿ, ಆನಂದ ಗುಡಿಗಾರ್ ಮುಂತಾದವರು ಪ್ರಮುಖ ಶಿಷ್ಯರು.


ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಶ್ರೀಮತಿ ಲೀಲಾ ಬೈಪಾಡಿತ್ತಾಯ ಇಬ್ಬರಿಗೂ 75 ವರ್ಷ ತುಂಬಿದ ಪ್ರಯುಕ್ತ ನ.7ರಂದು ಮೂಡುಬಿದಿರೆಯ ಆಲಂಗಾರು ಮಹಾಗಣಪತಿ ಮಹಾಲಿಂಗೇಶ್ವೇರ ದೇವಸ್ಥಾನದಲ್ಲಿ ಶಿಷ್ಯರು, ಅಭಿಮಾನಿಗಳು ಸೇರಿಕೊಂಡು ಅವರನ್ನು ಗೌರವಿಸಲು ನಿರ್ಧರಿಸಿದ್ದಾರೆ. ದಿನವಿಡೀ ಯಕ್ಷಗಾನ ನಾದೋತ್ಸವ, ಅಭಿನಂದನ ಗ್ರಂಥ ಬಿಡುಗಡೆ, ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post