||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲಾ ಭೋಜನ: ಉಣ್ಣೋದೂ ಒಂದು ಕಲೆ, ಶಿಸ್ತು

ಕಲಾ ಭೋಜನ: ಉಣ್ಣೋದೂ ಒಂದು ಕಲೆ, ಶಿಸ್ತುಯಾವುದೇ ಒಂದು ಕ್ರಿಯೆಯನ್ನು ನಾವು ಮಾಡುವಾಗ ಅದರಲ್ಲಿ ಎರಡು ವಿಧವಿದೆ. ಒಂದು ಮನಸ್ಸಿಗೆ ಬಂದಂತೆ ಅಥವಾ ಯಾವುದೇ ಶಿಸ್ತಿಲ್ಲದೆ ಮಾಡುವುದು. ಇನ್ನೊಂದು ಕಲಾತ್ಮಕವಾಗಿ ಮಾಡುವುದು. ಸಾಹಿತ್ಯ, ಕ್ರೀಡೆ, ಸಂಗೀತ, ನಾಟ್ಯ, ಚಿತ್ರ, ಭಾಷಣ ಮುಂತಾದ ಕಲೆಗಳಂತೆ ಊಟವೂ ಒಂದು ಕಲೆ ಎನ್ನುವಂಥದ್ದು ಬ್ರಾಹ್ಮಣರಿಂದಲೇ ಸೃಷ್ಟಿಯಾಯಿತೋ ಅಥವಾ ಆ ಕಲೆಯನ್ನು ಬ್ರಾಹ್ಮಣರು ನೆಚ್ಚಿಕೊಂಡರೋ ಗೊತ್ತಿಲ್ಲ. ಅಂತು ಬ್ರಾಹ್ಮಣರಿಗೂ ಊಟಕ್ಕೂ ಅವಿನಾಭಾವ ಸಂಬಂಧವಿರುವುದಂತು ನಿಜ.


ಊಟವೆಂದರೆ ಬರಿದೆ ಹೊಟ್ಟೆ ತುಂಬಿಸುವುದಲ್ಲ ಅದರಲ್ಲೂ ಒಂದು ಸಂಸ್ಕಾರ, ಶಿಸ್ತು ಮಾತ್ರವಲ್ಲ ಜಠರಾಗ್ನಿಗೆ ಕೊಡುವ ಹವಿಸ್ಸು ಎಂಬ ಉತ್ಕೃಷ್ಟ ಭಾವನೆಯೂ ಸೇರಿ ಊಟವೆನ್ನುವ ಪ್ರಕ್ರಿಯೆ ಯಜ್ಞವೆಂದೇ ಪರಿಗಣಿಸಿದುದು ಊಟದ ಮಹತ್ವವನ್ನು ಹೇಳುತ್ತದೆ. ಏನೇ ಇರಲಿ ಊಟದ ವಿಚಾರದ ಬಗ್ಗೆ ಸ್ವಲ್ಪ ಕಾಲಹರಣ ಮಾಡೋಣ.


ಊಟಕ್ಕೆ ಆಧಾರಪತ್ರವಾಗಿ ಬಳಸುವಂಥ ಬಟ್ಟಲು, ವಿವಿಧ ಮರಗಳ ಅಗಲವಾದ ಎಲೆ, ಅಡಿಕೆ ಹಾಳೆ ಅಥವಾ ಬಾಳೆಲೆ ಯಾವುದೇ ಇರಬಹುದು ದೇಶಕಾಲಕ್ಕನುಗುಣವಾಗಿ ಆಕ್ಷೇಪವಿಲ್ಲ. ಆದರೆ ಹೆಚ್ಚು ಪ್ರಸ್ತುತವಿರುವುದು ಹಾಗೂ ಪ್ರಶಸ್ತವಾಗಿರುವುದು ಬಾಳೆಲೆಯೇ.ಅದರಲ್ಲೂ ಕದಳಿ ಬಾಳೆಲೆ ಮತ್ತೂ ಶ್ರೇಷ್ಠ. ಸಾಂಪ್ರದಾಯಿಕ ಊಟದ ವಿಚಾರದ ಬಗ್ಗೆ ಹೇಳುವುದಾದರೆ ಬಾಡಿಸಿದ ತುದಿ ಬಾಳೆಲೆಯ ಊಟಕ್ಕೆ ಸರಿಸಮನಾದುದು ಭೂಲೋಕದಲ್ಲೇ ಇಲ್ಲವೆನ್ನಬಹುದು. ಬಾಡಿಸಿದ ಎಲೆಯ ಪರಿಮಳ ಜತೆ ವ್ಯಂಜನಗಳ ಪರಿಮಳ ಬಲ್ಲವರೇ ಬಲ್ಲರು. ಇನ್ನು ಊಟದ ಬಗ್ಗೆ ಹೇಳುವುದಾದರೆ ಊಟಕ್ಕೆ ಎಲೆಯನ್ನು ಇಡುವಾಗ  ಬಾಳೆಲೆಯ ತುದಿ ಊಟ ಮಾಡುವವನ ಎಡಕ್ಕಿರಬೇಕು. ಯಾಕೆಂದರೆ ನಾವು ಬಲಕೈಯಲ್ಲಿ ಊಟ ಮಾಡುವುದರಿಂದ ಊಟ ಮಾಡುವ ಬದಿಯಲ್ಲಿ ಹೆಚ್ಚು ಅಗಲವಾದ ಜಾಗ ಬೇಕಾಗಿರುವುದರಿಂದ ಈ ವ್ಯವಸ್ಥೆ. ನೀರು ಕುಡಿಯುವ ಲೋಟೆ ಬಲಕ್ಕಿರಬೇಕು. ಮಾಡಿದ ಪದಾರ್ಥಗಳನ್ನು ಬಡಿಸುವ ಮುನ್ನ ತುಪ್ಪದಿಂದ ಪಾತ್ರ ಶುದ್ಧಿ ಎನ್ನುವ ಪ್ರಕ್ರಿಯೆ ನಡೆಯಲೇಬೇಕು ತುಪ್ಪ ಶಕ್ತಿವರ್ಧಕವೂ ಹೌದು ಜ್ಞಾನವೃದ್ಧಿಗೂ ಪೂರಕ.


ಹಾಗೆಯೇ ಬಡಿಸುವ ಕ್ರಮವೂ ಅತಿ ವೈಜ್ಞಾನಿಕ. ಊಟ ಪ್ರಾರಂಭಿಸುವ ಮೊದಲು ಊಟಕ್ಕಾಗಿ ಮಾಡಿದ ವ್ಯಂಜನಗಳನ್ನು ನೀಟಾಗಿ ಆಯಾ ಪದಾರ್ಥಗಳಿಗೆ ಸೀಮಿತವಾದ ಜಾಗದಲ್ಲೇ ಬಡಿಸುವುದೂ ಕಲೆಯೇ. ಜಠರಾಗ್ನಿಗೆ ಮೊದಲಾಗಿ ನಾವು ಸಿಹಿಯಾದ ತುತ್ತನ್ನು ಕೊಟ್ಟು ನಂತರ ಇಷ್ಟದ ಭೋಜನ ಮಾಡುವುದೂ ಆರೋಗ್ಯಕರವೆಂದು  ಎಲೆಯ ಬಲಭಾಗದ ಕೆಳಗೆ ಪಾಯಸವನ್ನು ಬಡಿಸುತ್ತಾರೆ. ಪಾಯಸವನ್ನು ತಿಂದೇ ಊಟ ಪ್ರಾರಂಭಿಸಬೇಕೆಂಬ ಉದ್ದೇಶದಿಂದ. ಅಲ್ಲಿಯೂ ಆರೋಗ್ಯದ ಕಾಳಜಿ. ಹಾಗೆಯೇ ಎಲೆಯ ಮೇಲ್ಭಾಗದ ಬಲ ತುದಿಯಿಂದ ಕ್ರಮವಾಗಿ ಪಲ್ಯಗಳು, ಸಾಂಬಾರು, ಮೆಣಸ್ಕಾಯಿ, ಕಾಯಿಹುಳಿ, ಕೋಸಂಬರಿ, ಉಪ್ಪಿನಕಾಯಿ ಹಾಗೂ ಬಾಳೆಲೆಯ ತುದಿಗೆ ಉಪ್ಪು. ಅಲ್ಲಿಂದ ಕೆಳಗೆ ಚಿತ್ರಾನ್ನ, ಎಣ್ಣೆಯಲ್ಲಿ ಕಾಯಿಸಿದ ವ್ಯಂಜನಗಳು, ಹೋಳಿಗೆ ಇತ್ಯಾದಿ ಭಕ್ಷ್ಯಗಳು. ಸತ್ತಲೂ ಇಷ್ಟನ್ನೆಲ್ಲ ಬಡಿಸಿದ ಮೇಲೆ ಮಧ್ಯದಲ್ಲಿ ಇರುವ ಜಾಗ ಅನ್ನಕ್ಕೆ. ಊಟದಂತೆ ಬಡಿಸುವುದೂ ಒಂದು ಕಲೆಯೇ. ಚಾಣಾಕ್ಷನಾದವರು ಪ್ರತಿಯೊಂದು ವ್ಯಂಜನವನ್ನು ಬಡಿಸುವಾಗಲೂ ನಾಜೂಕಿರುತ್ತದೆ ಹಾಗೂ ಅನ್ನದವರೆಗೆ ಎಲ್ಲ ಪದಾರ್ಥಗಳಿಗೂ ಅವಕಾಶವನ್ನಿಟ್ಟಿರುತ್ತಾರೆ. ಕೊನೆಗೆ ಎಲೆಯ ಎಡತುದಿಗೆ ಹಪ್ಪಳ ಸಂಡಿಗೆ ಹಾಗೂ ಅನ್ನದ ಮೇಲೆ ಒಂದಿಷ್ಟು ಸಾರು ಮತ್ತು ತೋವೆ ಬಡಿಸಿ ಪುನಃ ತುಪ್ಪದ ಶುದ್ಧಿ ಮಾಡಿದಾಗ ಊಟದ ಪೂರ್ವ ತಯಾರಿ ಮುಗಿದಂತೆಯೇ.(ಇದೆಲ್ಲ ಸಮಾರಂಭಗಳ ಊಟದ ವಿಚಾರ) ಕೊನೆಗೆ ಮನೆಯ ಯಜಮಾನ ಬಂದು ಊಟ ಪ್ರಾರಂಭಿಸಲು ಪುರೋಹಿತರ ಮಂತ್ರೋಚ್ಚಾರಣೆಯೊಡನೆ ಅನುಮತಿ ಕೊಟ್ಟ ಮೇಲೆ ಎಲ್ಲರೂ ಒಟ್ಟಾಗಿ ಊಟ ಪ್ರಾರಂಭಿಸುವುದು ಸಂಸ್ಕಾರ.   


ಊಟ ಪ್ರಾರಂಭಿಸಿದ ಮೇಲೆ ಸಾರಿನಿಂದ ತೊಡಗಿ ಮಜ್ಜಿಗೆವರೆಗೆ ಬಡಿಸುವ ವ್ಯಂಜನಗಳಿಗೆ ಒಂದು ಕ್ರಮವಿದೆ. ಯಾವುದನ್ನೂ ಮಧ್ಯೆ ಮಧ್ಯೆ ಕೇಳುವಂತಿಲ್ಲ. ಯಾಕೆಂದರೆ ಎಲ್ಲ ಪದಾರ್ಥಗಳನ್ನೂ ಎರೆಡೆರೆಡು ಸಲ ವಿಚಾರಿಸಿ ಬಡಿಸುವುದರಿಂದ ಅದರ ಅವಶ್ಯಕತೆಯೂ ಇರುವುದಿಲ್ಲ. ಇನ್ನು ಉಪ್ಪು ಯಾಕೆ ಎಡಕ್ಕೆ, ಪಲ್ಯ ಯಾಕೆ ಬಲಕ್ಕೆ, ಭಕ್ಷ್ಯ ಯಾಕೆ ಅಲ್ಲಿ ಎನ್ನುವುದಕ್ಕೂ ಅರ್ಥವಿದೆ. ಜಾಗ ಎಲ್ಲಿ ಇದೆಯೋ ಅಲ್ಲಿ ಬಡಿಸುವುದಲ್ಲ. 

ಊಟ ಮಾಡುವಾಗ ತಿನ್ನುವ ತುತ್ತಿನ ಜತೆ ಪಲ್ಯವಾಗಲಿ ಸಾಂಬಾರಾಗಲಿ ಸ್ವಲ್ಪ ಬೆರೆತರೂ ಪರವಾಗಿಲ್ಲ. ಹಾಗೆಯೇ ಕೋಸಂಬರಿ ಬೇಯಿಸದ ಖಾದ್ಯವಾದ್ದರಿಂದ ಅದು ಎಡದ ಮೂಲೆಗೆ. ಹಾಗೂ ಉಪ್ಪು, ಉಪ್ಪಿನಕಾಯಿ ಬೇಕಾದರೆ ಮಾತ್ರ ತಿನ್ನ ಬೇಕಾದ್ದರಿಂದ ಅದಕ್ಕೂ ಒಂದು ಮೂಲೆಯಲ್ಲಿ  ಅವಕಾಶ. ಅಂತೆಯೇ ನಾವು ಊಟಕ್ಕೆ ಪೂರ್ತಿ ಅನ್ನವನ್ನು ಕಲಸಿಕೊಳ್ಳದಿರುವುದರಿಂದ ಬಡಿಸಿದ ಭಕ್ಷ್ಯಕ್ಕೂ ಕಲಸಿಕೊಂಡ ಅನ್ನಕ್ಕೂ ಮಧ್ಯದಲ್ಲಿ ಬರಿದೆ ಅನ್ನ ಮಾತ್ರ ಇರುವುದರಿಂದ ಬೇಕಾದಂತೆ ರುಚಿಕಳಕೊಳ್ಳದಂತೆ ಭಕ್ಷ್ಯವನ್ನೂ ತೆಗೆದಕೊಳ್ಳಬಹುದಾದಂತೆ ಅದಕ್ಕೊಂದು ವ್ಯವಸ್ಥೆ. ಇದರ ಮಧ್ಯೆ ಬಡಿಸುವ ಕ್ರಮವೂ ಅತಿ ವೈಜ್ಞಾನಿಕ. ಒಂದರ ನಂತರ ಒಂದರಂತೆ ಊಟಕ್ಕೆ ಪ್ರಾರಭದಲ್ಲಿ ಬಡಿಸಿದಂತೆ ಕ್ರಮವಾಗಿ ಇರತ್ತದೆ. ಕೊನೆಗೆ ಮಜ್ಜಿಗೆ ಮೊಸರಲ್ಲಿ ಒಂದಿಷ್ಟಾದರೂ ಊಟ ಮಾಡಿದಾಗಲೇ ಸಂಪೂರ್ಣ ತೃಪ್ತಿ ಊಟ ಮಾಡಿದವನಿಗೂ, ಮಾಡಿಸಿದವನಿಗೂ.  


ಇನ್ನೊಂದು ಸೂಕ್ಷ್ಮ ವಿಚಾರವೆಂದರೆ, ಊಟದ ನಂತರ ಎಲೆ ಹೇಗಿದೆ ಎನ್ನುವಲ್ಲಿಗೆ ಅಂದಿನ ಊಟದ ಫಲಿತಾಂಶವೂ ತಿಳಿಯುತ್ತದೆ. ಬಹುತೇಕ ಎಲೆಗಳು ಖಾಲಿಯಾಗಿದ್ದರೆ ಊಟ ಬಹಳ ರುಚಿಕರವಾಗಿತ್ತೆಂದೇ ಹೇಳಬಹುದು. ಅಂತೆಯೇ ಇನ್ನೊಂದು ದೃಷ್ಟಿಯಿಂದ ನೋಡಿದಾಗ ಎಲೆಯಲ್ಲಿ ಸ್ವಲ್ಪವಾದರೂ ಬಿಡದಿದ್ದರೆ ಯಜಮಾನನಿಗೆ ಉಂಡವರಿಗೆ ಕಡಿಮೆಯಾಯಿತೋ ಎಂಬ ಅನುಮಾನವೂ ಬಾರದಿರದು. ಇದರ ಮಧ್ಯೆ ಊಟ ಮಾಡುವಾಗ ಯಾವುದೇ ಮಾತುಕತೆಯಿಗಲಿ, ಹರಟೆಯಾಗಲಿ ಮಾಡದೆ ದೇವರ ಶ್ಲೋಕಗಳನ್ನು ಹಾಡಿ ಬರಿದೆ ಗೋವಿಂದ ಧ್ಯಾನ ಮಾತ್ರ ಮಾಡಬೇಕೆಂಬ ನಿಯಮವೂ ಇದೆ. ಅಂತು ಇದು ಬರೆ ಊಟ ಮಾತ್ರವಲ್ಲ ಊಟದ ಒಂದು ಕಲೆಯ ಅನಾವರಣವೇ ಆಗುವುದು ಸತ್ಯವಲ್ಲವೇ...ಇಂಥ ವ್ಯವಸ್ಥೆಯ ಊಟ ಮಾಡುವುದಾದರೆ ಬ್ರಾಹ್ಮಣರಷ್ಟೇ ಅಲ್ಲ ಎಲ್ಲರೂ ಭೋಜನಪ್ರಿಯರಾಗುವುದರಲ್ಲಿ ಯಾವ ಸಂದೇಹವು ಇಲ್ಲ.. ಏನಂತೀರಿ....??

- ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post