|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಯ ಬಿತ್ತಿ ಹಣ ಬೆಳೆಸುವ 'ಫೋಬಿಯ' ಎಂಬ ಭಾರೀ ವ್ಯಾಪಾರ!

ಭಯ ಬಿತ್ತಿ ಹಣ ಬೆಳೆಸುವ 'ಫೋಬಿಯ' ಎಂಬ ಭಾರೀ ವ್ಯಾಪಾರ!



ಭಾರತದಲ್ಲಿ ಅತ್ಯಂತ ದೊಡ್ಡ ವ್ಯಾಪಾರ ಯಾವುದು? ಎಂದು ನಾನು ನನ್ನ ತರಬೇತಿಯಲ್ಲಿ ಪ್ರಶ್ನೆ ಮಾಡಿದಾಗ ಶಿಬಿರಾರ್ಥಿಗಳಿಂದ ಬೇರೆ ಬೇರೆ ಉತ್ತರಗಳು ಸ್ಫೋಟ ಆಗುತ್ತವೆ. 


ಇಂಟರ್ನೆಟ್, ಕಾಸ್ಮೆಟಿಕ್ಸ್, ಮೊಬೈಲ್, ಸೆಕ್ಸ್, ಡ್ರೆಸ್ ಮೆಟೀರಿಯಲ್, ಡ್ರಗ್ಸ್, ಪೆಟ್ರೋಲ್, ಶಿಕ್ಷಣ... ಹೀಗೆ ತರಹೇವಾರಿ ಉತ್ತರಗಳು ಬಂದದ್ದು ಉಂಟು. ಆದರೆ ನಾನು ಕೊನೆಗೆ ಫೋಬಿಯ (ಭಯ) ಎಂಬ ಉತ್ತರ ಕೊಟ್ಟಾಗ ಎಲ್ಲರೂ ಪರಸ್ಪರ ಮುಖ ಮುಖಗಳನ್ನು ನೋಡುತ್ತಾರೆ! ಹೇಗೆ ಎನ್ನುವುದು ಅವರ ಮುಂದಿನ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ. 


ನಾವು ಭಾರತೀಯರು ಹೆಚ್ಚು ಭಾವನಾ ಜೀವಿಗಳು. ಅವರ ತಲೆಯಲ್ಲಿ ಹುಳವನ್ನು ಹಾಕುವುದು ತುಂಬಾ ಸುಲಭ. ಭ್ರಮೆಗಳನ್ನು, ಭಯವನ್ನು ಹುಟ್ಟು ಹಾಕುವುದು ಇನ್ನೂ ಸುಲಭ. ಒಮ್ಮೆ ಅವರ ಸುಪ್ತ ಮನಸ್ಸಿನ ಒಳಗೆ ಒಂದು ಭಯದ ಬೀಜವನ್ನು ಹಾಕಿ ಬಿಟ್ಟರೆ ಸಾಕು ಅದು ರೆಂಬೆ ಕೊಂಬೆಗಳಾಗಿ ಕೊನೆಗೆ ಹೆಮ್ಮರವಾಗಿ ಬೆಳೆಯುತ್ತದೆ! ಅಷ್ಟೇ ವೇಗವಾಗಿ ಇನ್ನೊಬ್ಬರಿಗೆ, ಮತ್ತೊಬ್ಬರಿಗೆ ಹೀಗೆ ಹರಡುತ್ತ ಹೋಗುತ್ತದೆ ಮತ್ತು ಕೆಲವೇ ಕ್ಷಣದಲ್ಲಿ ಅದು ವೈರಲ್ ಆಗಿ ಬಿಡುತ್ತದೆ.  


ಪ್ರತೀ ಒಬ್ಬರಿಗೆ ಒಂದಲ್ಲ ಒಂದು ಸಮಸ್ಯೆಯು ಬಂದೇ ಬರುತ್ತದೆ. ಅದಕ್ಕೆ ಪರಿಹಾರವನ್ನು ಹುಡುಕುವ ಬದಲು ನಾವು ತಕ್ಷಣ ಓಡುವುದು ಊರಿನ ಜ್ಯೋತಿಷಿ ಅಥವಾ ಮಂತ್ರವಾದಿಗಳ ಮನೆಗೆ! ಕೆಲವು ಜ್ಯೋತಿಷಿ ಮತ್ತು ಮಂತ್ರವಾದಿಗಳು ನಮಗೆ ಧೈರ್ಯ ತುಂಬಿಸಿ ಸಾಂತ್ವನ ನೀಡಿ ಹಿಂದೆ ಕಳುಹಿಸುತ್ತಾರೆ. 


ಆದರೆ ಇನ್ನೂ ಕೆಲವರು ಆ ದೋಷ, ಈ ದೋಷ, ಜಾತಕ ದೋಷ, ಕರ್ಮ ದೋಷ, ವಾಸ್ತು ದೋಷ, ಈ ಶಾಪ ಎಂದೆಲ್ಲ  ಭಯವನ್ನು ಅವರ ತಲೆಯಲ್ಲಿ ಹುಟ್ಟು ಹಾಕುತ್ತಾರೆ. ಅದಕ್ಕೆ ಪರಿಹಾರವಾಗಿ ಆ ಪೂಜೆ, ಭಸ್ಮ ತಾಯಿತ, ತಂಬಿಲ, ಮಂಡಲ, ಶಾಂತಿ, ಮಂತ್ರ ಎಂದೆಲ್ಲ ಹೇಳಿ ಅಮಾಯಕರಿಂದ ಭಾರೀ ಹಣವನ್ನು ಕೀಳುವ ರೀತಿಯನ್ನು  ನೋಡಿದಾಗ ನನಗೇ ಭಯ ಆಗುತ್ತದೆ. ದೇವರು, ದೈವಗಳು, ನಾಗದೇವರು ಇವರನ್ನು ಹೆಚ್ಚು ನಂಬುವ ನಮ್ಮ ಜನರು ಜೋತಿಷಿಗಳಿಂದ ಹಿಂದೆ ಬರುವಾಗ ತಲೆಯಲ್ಲಿ ಭಯವನ್ನು ತುಂಬಿಸಿಕೊಂಡು ಬರುತ್ತಾರೆ. ಕಿಸೆ ಖಾಲಿ ಆಗಿರುತ್ತದೆ. 


ಕೆಲವು ವೈದ್ಯರು, ಸರ್ಜನ್‌ಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕತೆಯೂ ಇದಕ್ಕಿಂತ ಭಿನ್ನ ಅಲ್ಲ! ಸಣ್ಣ ಆರೋಗ್ಯ ಸಮಸ್ಯೆ ಇಟ್ಟುಕೊಂಡು ಇಂಥ ವೈದ್ಯರನ್ನು ಒಮ್ಮೆ ಭೇಟಿ ಮಾಡಿದರೆ ಅಲ್ಲಿಗೆ ಮುಗಿಯಿತು. ಸಣ್ಣ ಸಣ್ಣ ಕಾಯಿಲೆಗಳಿಗೆ MRI ಸ್ಕಾನಿಂಗ್ ಮೊದಲಾದ ದುಬಾರಿ ಪರೀಕ್ಷೆಗಳನ್ನು ಮಾಡುವುದಾದರೆ ಅಂತಹ ವೈದ್ಯರ ಡಿಗ್ರೀಗೆ ಏನು ಬೆಲೆ? ಐದೂವರೆ ವರ್ಷ ಕಾಲ ಮೆಡಿಕಲ್ ಕಾಲೇಜಿನಲ್ಲಿ ಕಡಿದು ಗುಡ್ಡೆ ಹಾಕಿದ್ದು ಏನು?  


ಆಸ್ಪತೆಗಳನ್ನು ಸಾಕುವುದು ತುಂಬಾ ದುಬಾರಿ ಆಗಿರುವ ಕಾರಣ ಅದರ ಖರ್ಚನ್ನು ರೋಗಿಗಳಿಂದಲೆ ವಸೂಲು ಮಾಡುವ ಕೆಲವು ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಬಂಡವಾಳವಾಗಿ ಮಾಡಿದ್ದು ಇದೇ ಫೋಬಿಯಾವನ್ನು! ಅದಕ್ಕೆ ಪೂರಕವಾಗಿ ಕೆಲವು ಸ್ಕಾನಿಂಗ್ ಸೆಂಟರ್‌ಗಳು, ಕೆಲವು ಪರೀಕ್ಷಾ ಕೇಂದ್ರಗಳು, ಮೆಡಿಕಲ್ ಕಂಪೆನಿಗಳು, ಮೆಡಿಕಲ್ ಲ್ಯಾಬ್‌ಗಳು ಕೈ ಜೋಡಿಸಿ ಜನರ ಭಯವನ್ನು ನಗದೀಕರಿಸಲು ಹೊರಡುತ್ತವೆ.


 


ಕಳೆದ ವರ್ಷ ಕೋರೋನಾ ಉಂಟುಮಾಡಿದ ಜಾಗತಿಕ ಭಯವನ್ನು ಗಮನಿಸಿ. ಕೆಲವೇ ಮಾತ್ರೆಗಳು ಮತ್ತು ಸರಿಯಾದ ಕ್ವಾರಂಟೈನ್ ಹಾಗೂ ಆತ್ಮವಿಶ್ವಾಸಗಳ ಮೂಲಕ ಗುಣ ಪಡಿಸಲು ಸಾಧ್ಯವಾಗುವ ಒಂದು ಸಾಮಾನ್ಯವಾದ ಸಾಂಕ್ರಾಮಿಕವಾದ ಕಾಯಿಲೆ ಆಗಿದ್ದ ಕೋರೋನಾ ಉಂಟು ಮಾಡಿದ ಭಯ ಮತ್ತು ತಲ್ಲಣ ಎಷ್ಟು? ಕೆಲವು ಖಾಸಗಿ ಆಸ್ಪತ್ರೆಗಳು ಮಾಡಿದ ಬಿಲ್ ಎಷ್ಟು? ಟಿವಿ ಸುದ್ದಿ ಮಾಧ್ಯಮಗಳು ದಿನವೂ ಎರಡನೇ ಅಲೆ, ಮೂರನೇ ಅಲೆ ಹೀಗೆಲ್ಲ ಪ್ರೆಡಿಕ್ಷನ್ ಮಾಡುತ್ತ ಉಂಟುಮಾಡಿದ ಭಯಂಕರ ಚರ್ಚೆಗಳು ಎಷ್ಟು? ಬ್ಲಾಕ್ ಫಂಗಸ್ ಮತ್ತು ವೈಟ್ ಫಂಗಸ್ ಎಂದು ಉಂಟು ಮಾಡಿದ ಭಾರೀ ತಲ್ಲಣಗಳು ಎಷ್ಟು?


ಸುಮ್ಮನೆ ಕೂತು ಯೋಚಿಸಿ. ಆಗ ನೀವೇ ಗಟ್ಟಿ ನಕ್ಕು ಬಿಡುತ್ತೀರಿ. (With due respect to super mega  vaccination drive in India).


ಇದನ್ನೂ ಓದಿ. ಈ ಭಯವನ್ನು ಉಂಟು ಮಾಡುವ ಮಂದಿಯ ಪವರ್ ನೋಡಿ. ಸೋಲುವ ಭಯವನ್ನು  ಮೆಲ್ಲನೆ ಪೋಷಣೆ ಮಾಡುವ ಕೆಲವು ರಿಯಾಲಿಟಿ ಶೋಗಳು, ಪರೀಕ್ಷೆಯ ಇಲ್ಲದ ಭಯವನ್ನು ಮಕ್ಕಳ ತಲೆಯ ಒಳಗೆ ತುಂಬಿಸಿ ದುಡ್ಡಿನ ತಿಜೋರಿಯನ್ನು ತುಂಬಿಸುವ ಕೆಲವು ಖಾಸಗಿ ಶ್ರೀಮಂತ ಶಾಲೆಗಳು, ಹೆಂಗಸರಲ್ಲಿ ಪ್ರಾಯ ಆಗ್ತಾ ಇದೆ ಎಂದು ಭಯವನ್ನು ಹುಟ್ಟಿಸುತ್ತ ತಮ್ಮ ಬೇಳೆಯನ್ನು ಬೇಯಿಸುವ ಕೆಲವು ಕಾಸ್ಮೆಟಿಕ್ಸ್ ಕಂಪೆನಿಗಳು, ಮಕ್ಕಳ ಪೋಷಕರಲ್ಲಿ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಇನ್ನಿಲ್ಲದ ಭಯ ಹುಟ್ಟಿಸಿ ದುಡ್ಡು ಪೀಕಿಸುವ ಕೆಲವು ಕೋಚಿಂಗ್ ಸೆಂಟರಗಳು, ಒತ್ತಡ, ಸ್ಟ್ರೆಸ್, ಫೋಬಿಯ, ಡಿಪ್ರೆಷನ್ ಹೀಗೆಲ್ಲಾ ಹೇಳುತ್ತಾ ಭಯ ಹುಟ್ಟಿಸುವ ಕೆಲವು ಕೌನ್ಸೆಲಿಂಗ್ ಕೇಂದ್ರಗಳು... 


ಟಿವಿಯಲ್ಲಿ ಬೆಳಿಗ್ಗೆ ಬೆಳಿಗ್ಗೆ ಬಂದು ಕುಕ್ಕರಿಸಿ ಹೆಂಗಸರು ಮತ್ತು ಮಕ್ಕಳನ್ನು ಭಾವನಾತ್ಮಕ ಆಗಿ ಬ್ಲಾಕಮೇಲ್ ಮಾಡುವ ಕೆಲವು ಜೋತಿಷಿಗಳು, ಇತಿಹಾಸದಲ್ಲಿ ನಡೆದಿರುವ ಕೆಲವು ಅಪಸವ್ಯಗಳನ್ನು ಬಂಡವಾಳ ಆಗಿ ಮಾಡಿ ಭಾರತಕ್ಕೆ ಮುಂದೆ ಏನೋ ಆಗುವುದು ಖಂಡಿತ ಎಂದು ಕಿರುಚಿ ಮೈಕ್ ಎದುರು ಭಾರೀ ಭಾಷಣಗಳನ್ನು ಮಾಡುವ ಅಗ್ರೆಸಿವ್ ಭಾಷಣಕಾರರು, ಯಾರ್ಯಾರ ಖಾಸಗಿ ಜೀವನದಲ್ಲಿ ತಮ್ಮ ಕ್ಯಾಮೆರಗಳನ್ನು ಇಟ್ಟು ಅನಾವಶ್ಯಕ ಕುತೂಹಲವನ್ನು ಕೆರಳಿಸುವ ಹಾಗೂ  ಗೊಂದಲ ಮತ್ತು ಇಂಟೆನ್ಸ್ ಆದ ಭಯವನ್ನು ಪ್ರೇಕ್ಷಕರ ತಲೆಯ ಒಳಗೆ ಉಂಟು ಮಾಡುವ ಕೆಲವು ನ್ಯೂಸ್ ಚಾನಲಗಳು ಹಾಗೂ ಸಾಮಾಜಿಕ ಜಾಲತಾಣಗಳು... ಹೀಗೆ ಹಲವು ರೀತಿಯ ಭಯೋತ್ಪಾದಕರು ನಮ್ಮ ಸುತ್ತ ಮುತ್ತ ಇರುತ್ತಾರೆ.!    


ಪಟ್ಟಿ ಅಲ್ಲಿಗೆ ಮುಗಿಯುವುದಿಲ್ಲ. ಅಲ್ಪ ಆದಾಯದಲ್ಲಿ ಬದುಕುವುದೇ ತಪ್ಪು ಎಂದು ಭಯವನ್ನು ಹುಟ್ಟಿಸುವ ಕೆಲವು ಬ್ಲೇಡ್ ಕಂಪೆನಿಗಳು, ನಮಗೆ ಈ ಬಾರಿ ವೋಟ್ ಹಾಕದಿದ್ದರೆ ಆ ಸೌಲಭ್ಯಗಳನ್ನು ಕಳೆದುಕೊಳ್ಳುತ್ತೀರಿ  ಎಂದು ಭೀತಿಯನ್ನು ಸೃಷ್ಟಿಸುವ ಹತ್ತಾರು ರಾಜಕೀಯ ಪಕ್ಷಗಳು.. ಈ ಪಟ್ಟಿ ಬಹಳ ದೊಡ್ಡದಿದೆ! 


ಹತ್ತು ವರ್ಷಗಳ ಹಿಂದೆ ನಾಡಿನ ಶ್ರೇಷ್ಟ ಪತ್ರಿಕೆಯೊಂದು 2012ರ ಇಸವಿ ಇಡೀ ಜಗತ್ತಿನಲ್ಲಿ ಪ್ರಳಯ ಆಗುವುದು ಖಚಿತ ಎಂದು ಮುಖಪುಟ ಲೇಖನವನ್ನು ಪ್ರಕಟಿಸಿತು. ಅದನ್ನೇ ತೆರೆದು ತೋರಿಸುವ ಹಾಲಿವುಡ್  ಸಿನೆಮಾ ಬಂದವು. ಜನರು ಆ ದಿನಾಂಕವನ್ನು ಗುರುತು ಮಾಡಿ ಇಟ್ಟು ನಿದ್ದೆ ಬಿಟ್ಟು ಒದ್ದಾಡಿದರು. ಆದರೆ ಆ ದಿನ ಏನೂ ಆಗಲಿಲ್ಲ! 


ಎಲ್ಲಿಯವರೆಗೆ ಭಯಪಡುವ ಮನಸುಗಳು ಇರುತ್ತವೆ ಅಲ್ಲಿಯವರೆಗೆ ಭಯವನ್ನು ಹುಟ್ಟಿಸುವ ಮಂದಿ ಎಲ್ಲಾ ಕಡೆ ಇರುತ್ತಾರೆ. ನಾವು ನಮ್ಮ ಮನಸನ್ನು ಮೌಢ್ಯಕ್ಕೆ ಬಲಿ ಕೊಡದೆ, ಭ್ರಮೆಗಳಿಗೆ ವಶ ಆಗದೇ, ಗಟ್ಟಿಯಾದ  ಸಂಕಲ್ಪಗಳನ್ನು ಮಾಡಿದರೆ ಯಾವ ಭಯವೂ ನಮ್ಮ ಮನಸನ್ನು ಪ್ರವೇಶ ಮಾಡುವುದಿಲ್ಲ! ಏನಂತೀರಿ? 

-ರಾಜೇಂದ್ರ ಭಟ್ ಕೆ,

ಜೇಸಿಐ ರಾಷ್ಟ್ರ ಮಟ್ಟದ ತರಬೇತುದಾರರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم