ಹೊರಟುಹೋಗಲು ನಿನಗೆ
ಅಷ್ಟೆಲ್ಲ ಆತುರವಿದ್ದಿದ್ದರೆ
ನೀನೇಕೆ
ನಮಗೆ
ಇಷ್ಟು ಇಷ್ಟವಾದೆ?
ಸದಾಶಿವನಗರದ
ಬಂಗಲೆಯಲಿ
ಬೇಕಾಬಿಟ್ಟಿಯಾಗಿ ಬದುಕಿ;
ಝಗಮಗಿಸುವ
ರಾತ್ರಿಯ ಲೋಕದ
ಪಾರ್ಟಿ ಪಬ್ಬುಗಳಲಿ
ಕುಡಿದು, ಕುಣಿದು, ತೂರಾಡಿ;
ಗಾಂಧಿನಗರದ
ಗಾಸಿಪ್ಪುಗಳ
ಬಚ್ಚಲು ಗುಂಡಿಯಲಿ
ಮನಬಂದಂತೆ ಹೊರಳಾಡಿ
ಧುತ್ತನೆ ಎದ್ದು
ಹೋಗಬಹುದಿತ್ತಲ್ಲ...
ಸುಮ್ಮನೆ ನೀನೇಕೆ
ನಮಗೆ
ಇಷ್ಟು ಇಷ್ಟವಾದೆ?
ಬೆಟ್ಟದ ಹೂವಾಗಲು
ನಿನ್ನನ್ನು
ಕೇಳಿದ್ದವರು ಯಾರು?
ಗಂಧವಿಲ್ಲದ
ಪ್ಲಾಸ್ಟಿಕ್ಕು ಕುಸುಮವಾಗಿ,
ಆತ್ಮವಿಲ್ಲದ
ಒಣ ಕಟೌಟುಗಳಾಗಿ
ಮೆರೆದು ಹೋಗಬಹುದಿತ್ತಲ್ಲಾ...
ಸುಮ್ಮನೆ ನೀನೇಕೆ
ನಮಗೆ
ಇಷ್ಟು ಇಷ್ಟವಾದೆ?
ವೃದ್ಧಾಶ್ರಮದ
ರಾಜಕುಮಾರನಾಗಲು
ನಿನ್ನನ್ನು
ಬೇಡಿ ಕೊಂಡಿದ್ದವರು ಯಾರು?
ಬಹುಕೋಟಿ ಬಜೆಟ್ಟಿನ
ಅಬ್ಬರದ ಧೂಳಿನಲಿ,
ಶಿಳ್ಳೆಗೆಂದೇ ಹುಟ್ಟುವ
ಡೈಲಾಗುಗಳ
ಕುಬ್ಜ ಕೋಟೆಯಲಿ
ಹೂತುಹೋಗಬಹುದಿತ್ತಲ್ಲಾ...
ಸುಮ್ಮನೆ ನೀನೇಕೆ
ನಮಗೆ
ಇಷ್ಟು ಇಷ್ಟವಾದೆ?
ಘನತೆ ಗಾಂಭೀರ್ಯದ
ರಾಜ ಬಂಗಲೆಯ
ಕಾಂಪೌಂಡು ದಾಟಿ
ನಮ್ಮ ಅಂಗಳ, ಹಟ್ಟಿ
ಅಡುಗೆಮನೆಗೆ
ನಿನ್ನನ್ನು
ಆಹ್ವಾನಿಸಿದ್ದವರು ಯಾರು?
ಸುಮ್ಮನೆ ಅಲ್ಲಿಂದಲೇ
ಎದ್ದು ಹೋಗಬಹುದಿತ್ತಲ್ಲ,
ನಮ್ಮ ಮನೆ ಮಗನಾಗಲು
ನಿನಗೆ
ಹಕ್ಕು ಕೊಟ್ಟವರು
ಯಾರು?
ನೀನೇಕೆ
ನಮಗೆ
ಇಷ್ಟು ಇಷ್ಟವಾದೆ?
ಹೋಗುವುದೇನೊ
ಹೋಗಿರುವೆ,
ಪೆಪ್ಪರುಮೆಂಟಿಗೆ
ಮುನಿದ
ಮನೆಯ ಪುಟಾಣಿ
ಮಗುವಿನಂತೆ;
ಕೊನೆಯದಾಗಿ
ಈ ಮನವಿಗಾದರು
ಕಿವಿಗೊಟ್ಟುಬಿಡು ಅಪ್ಪು,
ದಯವಿಟ್ಟು
ನಿನ್ನೊಟ್ಟಿಗೆ ಕೊಂಡೊಯ್ದುಬಿಡು
ಆ ನಿನ್ನ
ನಿಷ್ಕಲ್ಮಶ ನಗುವನೂ,
ಅದರ ಇರಿತದ
ನೋವು ಸಹಿಸಿಕೊಳ್ಳಲಾಗುತ್ತಿಲ್ಲ.
ನಿನ್ನನ್ನು
ಇಷ್ಟವಾಗಿಸಿದ
ಆ ಅಮಾಯಕ
ಹತಾರದ
ಭಾರ ತಾಳಲಾಗುತ್ತಿಲ್ಲ!
-ಗಿರೀಶ್ ತಾಳಿಕಟ್ಟೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ