ಕೊಳೆ ಕಳೆವ ಸಾಬೂನು
ತಂದಂದು ಪೂರ್ಣವೇ..
ದಿನ ಕಳೆಯೆ ಕರಗುತ್ತ
ಮಾಯವಾದುದೆಮಗೆ ಅರಿವಾಗಲಿಲ್ಲ.
ಬಾವಿಯ ಹಗ್ಗವದು
ದಿನದಿನವೂ ಎಳೆಯುತ್ತ
ಸವೆದು ತುಂಡಾಗುವ
ಪರಿಯದೆಮಗೆ ಅರಿವಾಗಲಿಲ್ಲ
ಹುಟ್ಟಿರುವ ಮಗುವು
ದಿನಗಳು ಉರುಳುತ್ತ
ನಮ್ಮಿಂದೆತ್ತರ ಬೆಳೆದದ್ದು
ಎಂದೂ ನಮಗೆ ಅರಿವಾಗಲಿಲ್ಲ
ನೆಟ್ಟಂಥ ಗಿಡವೊಂದು
ಪ್ರಕೃತಿಯ ಒಡಗೂಡಿ
ಬಾನೆತ್ತರ ಹರಡಿರುವುದು
ಒಂದಿನಿತೆಮಗೆ ಅರಿವಾಗಲಿಲ್ಲ
ಭೋರ್ಗರೆವ ನದಿಯೊಂದು
ಜಲ ಮೂಲ ಕೊರತೆಯಲಿ
ಎನಿತೆನಿತು ಹರಿವನು
ನಿಲ್ಲಿಸಿದ್ದೆಮಗೆ ಅರಿವಾಗಲಿಲ್ಲ.
ಕೈಸಾಲ ವ್ಯವಹಾರ
ಅಂಕೆ ತಪ್ಪುತಲಿರಲು
ಲಕ್ಷಕ್ಕು ಮಿಗಿಲಾದ
ಋಣಿಗಳೆಂದೆಮಗೆ ಅರಿವಾಗಿಲಿಲ್ಲ.
ಮನದೊಳಗೆ ನುಸುಳಿರುವ
ಸಂಶಯದ ಭಾವವು
ಮನೆಯನ್ನೆ ಒಡೆದೀತು
ಎಂಬಂಥ ದಿಟವೆಮಗೆ ಅರಿವಾಗಲಿಲ್ಲ
ಅಜ್ಜನ ತೊಡೆ ಏರಿ
ಆಡುತಿದ್ದಂಥ ನಮಗೆ
ನಮ್ಮದೇ ಮೊಮ್ಮಗುವು
ತೊಡೆಯೇರಿದ್ದೆಮಗೆ ಅರಿವಾಗಲಿಲ್ಲ.
ಕಾಲ್ನಡಿಗೆಯಿಂದಲೇ
ದಾರಿ ಸಾಗುತಲಿತ್ತು
ಬರಬರುತ ವಾಹನಕೆ
ಶರಣಾದುದೆಮಗೆ ಅರಿವಾಗಲಿಲ್ಲ.
ಆಸೆಯಲಿ ಉಂಡಂಥ
ಆಹಾರ ಕಣವೊಂದು
ವಿಷದ ಅಣುವಾಗಿ
ಆಕ್ರಮಿಸಿದ್ದೆಮಗೆ ಅರಿವಾಗಲಿಲ್ಲ
ವ್ಯಾಪಾರವೆಂಬಂಥ
ನೆಪ ಮಾಡಿ ಆಂಗ್ಲರು
ಅಖಂಡ ಭಾರತವನೆ
ದೋಚಿದ್ದೆಮಗೆ ಅರಿವಾಗಲಿಲ್ಲ
ಸರ್ವ ಧರ್ಮಗಳನ್ನು
ಪ್ರೀತಿಸುವ ನೆಪದಲ್ಲಿ
ಮಾತೃಧರ್ಮವೆ ನಿತ್ಯ
ಕೈ ತಪ್ಪುವುದೆಮಗೆ ಅರಿವಾಗಲಿಲ್ಲ
ಭುವಿಯೊಳಗೆ ಜೀವಾತ್ಮ
ಹುಟ್ಟಿ ತಾ ಬೆಳೆದಂತೆ
ಸಾವೆ ಗುರಿ ಎನ್ನುವ
ಸತ್ಯ ನಮಗೆಂದಿಗೂ ಅರಿವಾಗಲಿಲ್ಲ
ಸಹಜ ಬದುಕನು ಬದುಕಿ
ಸಕಲ ಜೀವಿಗಳೊಡನೆ
ಬಾಳುವುದೆ ಸುಖವೆಂದು
ನಮಗ್ಯಾಕೆ ಇನ್ನೂ ಅರಿವಾಗಲಿಲ್ಲ.!!
**********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ