|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಪ್ಪಾಯಿ ಹಣ್ಣು: ದೇಹದ ತೂಕ ನಿಯಂತ್ರಣಕ್ಕೆ ಉಪಯುಕ್ತ

ಪಪ್ಪಾಯಿ ಹಣ್ಣು: ದೇಹದ ತೂಕ ನಿಯಂತ್ರಣಕ್ಕೆ ಉಪಯುಕ್ತ


ಎಲ್ಲಾ ಕಾಲದಲ್ಲೂ, ಎಲ್ಲಾ ಕಡೆಯಲ್ಲೂ ಅತ್ಯಂತ ಸುಲಭವಾಗಿ ಸಿಗುವ ಹಣ್ಣು ಇದ್ದರೆ ಅದು ಪಪ್ಪಾಯಿ ಹಣ್ಣು ಅಥವಾ ಫರಂಗಿ ಹಣ್ಣು ಆಗಿರುತ್ತದೆ. ಈ ಪಪ್ಪಾಯಿ ಹಣ್ಣು ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂದರೆ ಸೋಂಕು ನಿವಾರಕ ಮತ್ತು ಆಂಟಿ ಫಂಗಲ್ ಗುಣಗಳನ್ನು ಹೊಂದಿದೆ. ಬರೀ ಹಣ್ಣಿನಲ್ಲಿ ಮಾತ್ರವಲ್ಲದೆ ಇದರ ಎಲೆಗಳೂ ಕೂಡ ಸೋಂಕು ನಿಯಂತ್ರಣ ಶಕ್ತಿ ಹೊಂದಿದೆ. ಮಕ್ಕಳು, ಯುವಕರು, ವಯಸ್ಕರು ಹೀಗೆ ಎಲ್ಲರೂ ಈ ಹಣ್ಣನ್ನು ಇಷ್ಟಪಡುತ್ತಾರೆ ಮತ್ತು ಅತೀ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಪಪ್ಪಾಯಿ ಹೊಂದಿರುತ್ತದೆ. ಹೃದಯದ ಸಮಸ್ಯೆ, ಮಲಬದ್ಧತೆ, ಕಣ್ಣುಗಳ ಆರೋಗ್ಯ, ಮುಟ್ಟಿನ ತೊಂದರೆ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಪಪ್ಪಾಯಿ ಹಣ್ನು ಬಹಳ ಉಪಯುಕ್ತ ಎಂದು ತಿಳಿದು ಬಂದಿದೆ.


ಲಾಭಗಳು:

1. ದೇಹದ ತೂಕ ನಿಯಂತ್ರಣಕ್ಕೆ ಅತೀ ಉಪಯುಕ್ತವಾದ ಹಣ್ಣು ಎಂದರೆ ಪಪ್ಪಾಯಿ. ಒಂದು ಮೀಡಿಯಂ ಗಾತ್ರದ ಪಪ್ಪಾಯಿಯಲ್ಲಿ ಕೇವಲ 120 ರಿಂದ 150 ಕ್ಯಾಲರಿ ಇರುತ್ತದೆ. ಇದಲ್ಲದೆ ಅತೀ ಹೆಚ್ಚು ನಾರಿನಂಶ ಇರುವ ಕಾರಣ, ಬೇಗನೆ ಹೊಟ್ಟೆ ತುಂಬಿದಂತಾಗಿ, ಅನಾರೋಗ್ಯಕರ ಕರಿದ ತಿಂಡಿಗಳನ್ನು ತಿನ್ನಬೇಕು ಎಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ, ನಿಮ್ಮ ದೇಹದ ತೂಕ ನಿಯಂತ್ರಿಸುತ್ತದೆ. ನಿಯಮಿತವಾಗಿ, ಹಿತಮಿತ ಆಹಾರದ ಜೊತೆಗೆ ಪಪ್ಪಾಯ ಸೇವಿಸುವುದರಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದು ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.

2. ಪಪ್ಪಾಯಿ ಹಣ್ಣಿನಲ್ಲಿ ಇರುವ ನಾರಿನಂಶ ಜೀರ್ಣಾಂಗದ ಜೀರ್ಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ, ಮಲಬದ್ಧತೆ ಸಮಸ್ಯೆ ಇರುವವರಿಗೆಈ ಹಣ್ಣು ರಾಮ ಬಾಣ ಎಂದರೂ ತಪ್ಪಾಗಲಾರದು. ಮೂಲವ್ಯಾಧಿ ಇರುವವರು ಯಾವುದೇ ಚಿಂತೆ ಇಲ್ಲದೆ ಈ ಹಣ್ಣನ್ನು ಸೇವಿಸಬಹುದು.

3. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಪಪ್ಪಾಯಿ ಹಣ್ಣು ಬಹು ಮುಖ್ಯ ಪಾತ್ರ ವಹಿಸುತ್ತದೆ.

4. ದೇಹದ ಅಪಧಮನಿಗಳ ಒಳಭಾಗದಲ್ಲಿ ಕೊಲೆಸ್ಟ್ರಾಲ್ ಪಾಚಿಗಟ್ಟಿಕೊಂಡು ರಕ್ತ ಸಂಚಾರಕ್ಕೆ ತೊಡಕಾಗಿಸುತ್ತದೆ ಮತ್ತು ಹೃದಯಾ ಘಾತಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಹೆಚ್ಚಿನ ಕೆಟ್ಟ ಕೊಲೆಸ್ಟ್ರಾಲ್ ಇದ್ದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಈ ಕೆಟ್ಟ ಕೊಲೆಸ್ಟ್ರಾಲ್‍ನ್ನು ನಿಯಂತ್ರಿಸುವಲ್ಲಿ ಪಪ್ಪಾಯಿ ಉಪಯುಕ್ತ ಎಂದು ತಿಳಿದು ಬಂದಿದೆ.



5. ಪಪ್ಪಾಯಿ ಹಣ್ಣಿನಲ್ಲಿ ಕಿತ್ತಳೆಗಿಂತಲೂ ಜಾಸ್ತಿ ವಿಟಮಿನ್ ‘ಸಿ’ ಅಂಶ ಹೊಂದಿದೆ. ಅದೇ ರೀತಿ ವಿಟಮಿನ್ ‘ಬಿ’ ಮತ್ತು ‘ಎ’ ಹೇರಳವಾಗಿದೆ. ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ. ಹೆಚ್ಚಿನ ವಿಟಮಿನ್ ‘ಸಿ’ ಕಾರಣದಿಂದಾಗಿ ದೇಹದಲ್ಲಿನ ಗಾಯ ಬೇಗನೆ ಮಾಸುತ್ತದೆ. ಸಂಧಿವಾತ, ಗಂಟು ನೋವು ಇರುವವರಿಗೂ ಉಪಯುಕ್ತ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

6. ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಸಣ್ಣ ಪುಟ್ಟ ನೋವು ಉಲ್ಬಣವಾಗದಂತೆ ತಡೆಯುತ್ತದೆ.

7. 100ಗ್ರಾಂ ಪಪ್ಪಾಯಿಯಲ್ಲಿ ಕೇವಲ 40 ಕ್ಯಾಲರಿ ಇರುತ್ತದೆ. ಹೆಚ್ಚಿನ ನಾರಿನಂಶ, ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲರಿಯಿಂದಾಗಿ ದೇಹದ ಕೊಬ್ಬು ನಿಯಂತ್ರಿಸುತ್ತದೆ ಮತ್ತು ತೂಕ ನಿಯಂತ್ರಿಸಲು ಪಪ್ಪಾಯಿ ಸೂತ್ರವಾಗಿದೆ.

8. ಮಧುಮೇಹ ರೋಗಿಗಳು ಪಪ್ಪಾಯಿ ಹಣ್ಣು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿಸಿ, ಗ್ಲೈಸೆಮಿಕ್.ಸೂಚ್ಯಾಂಕ ನಿಯಂತ್ರಿಸುತ್ತದೆ ಮತ್ತು ಆ ಮೂಲಕ ಮಧುಮೇಹ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ ಎಂದು ತಿಳಿದು ಬಂದಿದೆ.

9. ಪಪ್ಪಾಯಿಯಲ್ಲಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ‘ಎ’ ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಕಣ್ಣಿನ ಪೊರೆ ಬರುವುದನ್ನು, ದೀರ್ಘಕಾಲಿಕ ಕಣ್ಣಿನ ರೋಗಗಳನ್ನು, ಗ್ಲಾಕೋಮ ರೋಗವನ್ನು ಬರದಂತೆ ತಡೆಯುತ್ತದೆ. ಹಿತಮಿತವಾಗಿ ಪಪ್ಪಾಯಿ ಸೇವಿಸುವುದರಿಂದ ಕಣ್ಣು ಹೆಚ್ಚು ಆರೋಗ್ಯಪೂರ್ಣವಾಗಿರುತ್ತದೆ.

10. ಅಜೀರ್ಣ, ಹೊಟ್ಟೆ ಉರಿ, ಎದೆ ಉರಿ, ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಹುಣ್ಣು ಮುಂತಾದ ಸಮಸ್ಯೆಗಳಿಗೂ ಪಪ್ಪಾಯಿ ಉತ್ತಮ ಆಯ್ಕೆ ಆಗಿರುತ್ತದೆ. ಜೀರ್ಣ ಪ್ರಕ್ರಿಯೆಯನ್ನು ಸರಾಗಗೊಳಿಸಿ, ವಿಷಕಾರಿ ವಸ್ತುಗಳನ್ನು ಹೊರಹಾಕಿ ಕರುಳನ್ನು ರಕ್ಷಿಸುತ್ತದೆ.

11. ಪಪ್ಪಾಯಿ ಹಣ್ಣಿನಲ್ಲಿರುವ ವಿಟಮಿನ್‍ಗಳು, ಕಿಣ್ವಗಳು, ಜೀವಸತ್ವಗಳು ಜೀವಕೋಶಗಳಿಗೆ ಶಕ್ತಿ ತುಂಬಿ, ಜೀವಕೋಶಗಳ ಮೇಲೆ ದುಷ್ಪರಿಣಾಮವಾಗದಂತೆ ತಡೆಯುತ್ತದೆ. ಕ್ಯಾನ್ಸರ್ ಬರದಂತೆ ತಡೆಯುತ್ತದೆ ಎಂದು ನಂಬಲಾಗಿದೆ, ಕೂದಲಿನ ಆರೋಗ್ಯ, ಚರ್ಮದ ಕಾಂತಿ ಮತ್ತು ತ್ವಚೆಯ ಆರೋಗ್ಯಕ್ಕೆ ಪಪ್ಪಾಯಿ ಪೂರಕವಾಗಿದೆ.

12. ಹೊಟ್ಟೆಯಲ್ಲಿನ ಜಂತು ಹುಳು ನಿವಾರಣೆಗೆ ಪಪ್ಪಾಯಿ ಹಣ್ಣು ಹೆಚ್ಚು ಸಹಕಾರಿ. ಮಕ್ಕಳಲ್ಲಿ ಹುಳದ ಸಮಸ್ಯೆ ಇದ್ದಲ್ಲಿ ಪಪ್ಪಾಯಿ ಸೇವಿಸಬಹುದಾಗಿದೆ

13. ಪಪ್ಪಾಯಿಯಲ್ಲಿ ಮೆಗ್ನಿಷಿಯಂ, ಪೊಟಾಷಿಯಂ, ವಿಟಮಿನ್, ಬೀಟಾಕ್ಯಾರೋಟಿನ್ ಪ್ರೋಟಿನ್ ಮತ್ತು ನಾರಿನಂಶ ಹೇರಳವಾಗಿದೆ. ಅತೀ ಹೆಚ್ಚುನ ಪ್ರಮಾಣದಲ್ಲಿ ಪಪೈನ್ ಎಂಬ ಕಿಣ್ವ ಇರುತ್ತದೆ. ಇದು ಜೀರ್ಣ ಪ್ರಕ್ರಿಯೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ

14. ಪಪ್ಪಾಯಿ ಹಣ್ಣು ಸೌಂದರ್ಯ ವರ್ಧಕ ಗುಣವನ್ನು ಹೊಂದಿರುತ್ತದೆ. ಚರ್ಮದ ಆರೋಗ್ಯಕ್ಕೆ, ಚರ್ಮದ ಕಾಂತಿ ಹೆಚ್ಚಿಸಲು, ತ್ವಚೆಯ ಆರೋಗ್ಯ ಹಾಗೂ ಕೂದಲಿನ ಆರೋಗ್ಯಕ್ಕೂ ಪೂರಕ ಎಂದೂ ಸಾಬೀತಾಗಿದೆ


ಕೊನೆ ಮಾತು:

ಉಷ್ಣವಲಯದಲ್ಲಿ ಹೆಚ್ಚು ಬೆಳೆಯುವ ಪಪ್ಪಾಯಿ ಹಣ್ಣು ಅತೀ ಹೆಚ್ಚು ವಿಟಮಿನ್, ಆಂಟಿ ಆಕ್ಸಿಡೆಂಟ್ ಮತ್ತು ಜೀವಸತ್ವಗಳನ್ನು ಹಾಗೂ ಖನಿಜಾಂಶಗಳನ್ನು ಹೊಂದಿದೆ. ದೇಹದಲ್ಲಿನ ಉರಿಯೂತ ನಿಯಂತ್ರಿಸಿ, ಹೃದಯವನ್ನು ರಕ್ಷಿಸಿ, ಬೊಜ್ಜು ನಿಯಂತ್ರಿಸಿ, ಸೌಂದರ್ಯವನ್ನು ಕಾಪಾಡುತ್ತದೆ. ಪಪ್ಪಾಯಿಯಲ್ಲಿರುವ ಪಪೈನ್ ಕಿಣ್ವ, ಪ್ರೋಟಿನ್‍ಗಳನ್ನು ಜೀರ್ಣಿಸುವಲ್ಲಿ ಮುಖ್ಯ ಭೂಮಿಕೆ ವಹಿಸುತ್ತದೆ. ಹೆಚ್ಚು ಸ್ನಾಯುಯುಕ್ತ ಮಾಂಸ ಸೇವಿಸುವವರಲ್ಲಿ, ಹೆಚ್ಚಾಗಿ ಪಪ್ಪಾಯಿ ಸೇವಿಸುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ ಹಣ್ಣಾದ ಪಪ್ಪಾಯಿಯನ್ನು ಬೇಯಿಸದೆ ತಿನ್ನಬಹುದು. ಆದರೆ ಸರಿಯಾಗಿ ಹಣ್ಣಾಗದ ಪಪ್ಪಾಯಿ ಕಾಯಿಯನ್ನು ಸೇವಿಸಿದಲ್ಲಿ ಅದರಲ್ಲಿರುವ ಅಂಟು ರಾಸಾಯನಿಕಗಳು ಮತ್ತು ಇತರ ಕಿಣ್ವಗಳು ಸ್ನಾಯುಗಳನ್ನು ಸಂಕುಚಿತಗೊಳಿಸುವ ಸಾಧ್ಯತೆ ಇದೆ. ಈ ಕಾರಣದಿಂದ ಗರ್ಭಿಣಿ ಹೆಂಗಸರಲ್ಲಿ ಪಪ್ಪಾಯಿಯನ್ನು ತಿನ್ನುವುದನ್ನು ಬೇಡ ಎನ್ನುತ್ತಾರೆ.

ಪಪ್ಪಾಯಿ ಕಾಯಿಯನ್ನು ಸರಿಯಾಗಿ ಬೇಯಿಸದೆ ತಿನ್ನಬಾರದು. ಹಸಿರು ಬಣ್ಣದ ಪಪ್ಪಾಯಿ ಕಾಯಿ ಹಣ್ಣಾದಾಗ ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಪಪ್ಪಾಯಿಯಲ್ಲಿ ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳ ತಳಿ ಲಭ್ಯವಿದೆ. ಎಲ್ಲವೂ ಆರೋಗ್ಯಕ್ಕೆ ಪೂರಕ ಎಂದೂ ಸಾಬೀತಾಗಿದೆ. ಕೆರೋಟಿನಾಯ್ಡ್ ಎಂಬ ಆಂಟಿ ಆಕ್ಸಿಡೆಂಟ್ ಪಪ್ಪಾಯಿಯಲ್ಲಿ ಹೇರಳವಾಗಿದೆ. ಇವುಗಳು ಜೀವಕೋಶಗಳನ್ನು ರಕ್ಷಿಸುತ್ತದೆ. ಪಪ್ಪಾಯಿ ಹಣ್ಣಿನಲ್ಲಿರುವ  ಲೈಕೋಪಿನ್ ಎಂಬ ರಾಸಾಯನಿಕ ಕ್ಯಾನ್ಸರ್‍ನಿಂದ ರಕ್ಷಿಸುತ್ತದೆ, ಎಂದೂ ಅಂದಾಜಿಸಲಾಗಿದೆ. ಹೃದಯ ಆರೋಗ್ಯಕ್ಕೂ ಈ ಲೈಕೋಪಿನ್ ಪೂರಕ ಎಂದು ತಿಳಿದು ಬಂದಿದೆ. ಕರುಳು ಕಿರಿಕಿರಿ ಕಾಯಿಲೆ ಇರುವವರಿಗೆ ಪಪ್ಪಾಯಿ ಬಲು ಉಪಯುಕ್ತ ಮತ್ತು  ಕರುಳಿನ ಉರಿಯೂತವನ್ನು ನಿಯಂತ್ರಿಸಿ ಸಮಾಧಾನ ನೀಡುತ್ತದೆ. ಒಟ್ಟಿನಲ್ಲಿ ಜೀರ್ಣಾಂಗ ಸಮಸ್ಯೆ, ಹೃದಯ ತೊಂದರೆ ಮತ್ತು ಉರಿಯೂತ ತೊಂದರೆ ಹೀಗೆ ಹತ್ತು ಹಲವು ರೋಗಗಳಿಗೆ ಪಪ್ಪಾಯಿ ಹಣ್ಣು ರಾಮಬಾಣ ಎಂದು ಸಾಬೀತಾಗಿದೆ. 

-ಡಾ|| ಮುರಲೀ ಮೋಹನ್ ಚೂಂತಾರು

BDS, MDS, DNB, MOSRCSEd (U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ: 9845135787

 (ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم