ನವರಾತ್ರಿ ವಿಶೇಷ: ಪಂಚಮದಂದು ಸ್ಕಂದಮಾತಾ, ಷಷ್ಟಮದ ದಿನ ಕಾತ್ಯಾಯಿನಿಯ ಆರಾಧನೆ

Upayuktha
0

ಶರದ್ ಋತುವಿನ ಆಶ್ವೀಜ ಮಾಸ ಶುಕ್ಲ ಪಕ್ಷದ ಪಂಚಮಿಯ ತಿಥಿ ಹಾಗೂ ಷಷ್ಠಿಯ ತಿಥಿ ಒಟ್ಟಾಗಿ ಒಂದೇ ದಿನ ಬಂದಿರುವುದರಿಂದ ಸ್ಕಂದ ಮಾತೆಯ ಜೊತೆ ಕಾತ್ಯಾಯಿನೀ ದೇವಿಯನ್ನೂ ಇಂದಿನ ದಿನದಲ್ಲಿ ಪೂಜಿಸುತ್ತಾರೆ. 

ಲಲಿತಾ ಪಂಚಮಿಯಂದು ಆರಾಧಿಸಲ್ಪಡುವ ದುರ್ಗಾ ರೂಪ ಸ್ಕಂದಮಾತಾ ಅಥವಾ ಲಲಿತಾಂಬಿಕೆ. ಈಕೆ ಮಾತೃವಾತ್ಸಲ್ಯದ ಖನಿಯಾಗಿ ಮಕ್ಕಳನ್ನು ಒಬ್ಬ ತಾಯಿಯು ಯಾವ ರೀತಿ ಪೊರೆಯುತ್ತಾಳೋ ಹಾಗೆ ಕಾಲಕಾಲದ ಅಗತ್ಯವನ್ನು ಅರಿತು ಪ್ರೀತಿಯಿಂದ ಮಮತೆ ವಾತ್ಸಲ್ಯದಿಂದ ಅವರ ಆಶಯಗಳನ್ನು ಪೂರೈಸುವ ಮಹಾತಾಯಿಯಾಗಿದ್ದಾಳೆ ಈ ಸ್ಕಂದ ಮಾತೆ. ಅಂಬಿಕೆಗೆ ಬಿಳಿ ಹಾಗೂ ಕೇಸರಿ ಬಣ್ಣದ ಸೀರೆ ಮೆಚ್ಚು. ಹಾಗಾಗಿ ಆಕೆಗೆ ಕೇಸರಿ ಬಣ್ಣದ ಸೀರೆ ತೊಡಿಸಿ ಹಳದಿ, ಕೇಸರಿ ಬಣ್ಣದ ಹೂವು, ಗುಲಾಬಿ, ನಾಗಸಂಪಿಗೆ, ಕೇದಿಗೆ, ಸೇವಂತಿಗೆ ಇತ್ಯಾದಿ ವಿವಿಧ ಬಣ್ಣದ ಹೂವುಗಳಿಂದ ಅರ್ಚಿಸಿದರೆ ಆಕೆ ಸಂತೋಷಗೊಳ್ಳುತ್ತಾಳೆ. ಆಕೆಗೆ ನೈವೇದ್ಯ, ಫಲವಸ್ತು, ತಾಂಬೂಲಗಳ ಜೊತೆ ರಸಾಯನವನ್ನು ಸಮರ್ಪಿಸಿದರೆ ಬಹಳ ಉತ್ತಮ. ಕನ್ನಿಕೆಗೆ ವಸ್ತ್ರ ಸುಮಂಗಲಿಯರಿಗೆ ಭಾಗಿನ ಕೊಟ್ಟರೆ ಒಳ್ಳೆಯದು. ಬುಧಗ್ರಹದ ಅಧಿಪತ್ಯವನ್ನು ಹೊಂದಿದ ಈ ಮಾತೆ ಚತುರ್ಭುಜೆಯಾಗಿದ್ದು ತನ್ನೆರಡು ಕೈಗಳಲ್ಲಿ ಕಮಲವನ್ನು ಹಿಡಿದು ಇನ್ನೆರಡು ಕೈಗಳಲ್ಲಿ ಮಗು ಸ್ಕಂದನನ್ನು ಮತ್ತು ಅಭಯ ಮುದ್ರೆಯನ್ನು ಹೊಂದಿದ್ದಾಳೆ. ತಾರಕಾಸುರನೆಂಬ ರಾಕ್ಷಸ ಸಂಹಾರ ಶಿವ ಪಾರ್ವತಿಯರ ಪುತ್ರನಿಂದಾಗಬೇಕಿತ್ತು. ಹಾಗಾಗಿ ಶಿವ ಪಾರ್ವತಿಯರ ಪ್ರೇಮ ಸ್ವರೂಪ ಸ್ಕಂದನ ಜನನವಾಗುತ್ತದೆ. ಆ ಮಗು ಷಣ್ಮುಖನನ್ನು ತೊಡೆಯಲ್ಲಿ ಕೂರಿಸಿಕೊಂಡ ದಿವ್ಯ ರೂಪವೇ ಸ್ಕಂದಮಾತಾ ರೂಪ.


"ಸಿಂಹಾಸನ ಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಾ |

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ" ಎಂಬ ಶ್ಲೋಕದಿಂದ ಆಕೆಯನ್ನು ಪೂಜಿಸಿದರೆ ಸದಾ ಶುಭವನ್ನು ಆಕೆ ನೀಡಿ ಹರಸುತ್ತಾಳೆ.


ಇನ್ನು ಶರನ್ನವರಾತ್ರಿಯ ಷಷ್ಟ್ಯಮ ದಿನದಂದು ದೇವಿ ಕಾತ್ಯಾಯಿನೀ ದುರ್ಗೆ ಭಕ್ತರಿಂದ ಪೂಜಿಸಲ್ಪಡುತ್ತಾಳೆ. ಖಳ ಮಹಿಷಾಸುರನನ್ನು ಸಂಹರಿಸಲು ಸಿಂಹವಾಹಿನಿಯಾಗಿ ಕಾಣಿಸಿಕೊಂಡ ರುದ್ರರೂಪ ಕಾತ್ಯಾಯಿನೀ ದುರ್ಗಾ. ಆಕೆಯನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸುವುದರಿಂದ ಸಕಲ ಕಷ್ಟ, ಭಯ ನಾಶವಾಗಿ ಸುಖ ಸಂತಸದ ಬಾಳನ್ನು ಆಕೆ ನೀಡುತ್ತಾಳೆ. ಬಂಗಾರ ವರ್ಣದ ಈಕೆಯೂ ಚತುರ್ಭುಜೆಯಾಗಿ ಅಭಯ ಮುದ್ರೆ ಹಾಗೂ ವರಮುದ್ರೆ ಮತ್ತು ಇನ್ನೆರಡು ಕೈಗಳಲ್ಲಿ ಕಮಲದ ಹೂವು ಮತ್ತು ಖಡ್ಗವನ್ನು ಧರಿಸಿದ್ದಾಳೆ. ಈಕೆಗೆ ಕೆಂಪು ಬಣ್ಣದ ಸೀರೆ ಮತ್ತು ರವಕೆ, ಕೆಂಪು ಬಣ್ಣದ ಹೂವು, ಲಲಿತಾ ಸಹಸ್ರನಾಮದ ಪಠನೆ ಮಾಡಿ ಕುಂಕುಮದಿಂದ ಅರ್ಚನೆ ಮಾಡಿದರೆ ಶೀಘ್ರವಾಗಿ ಒಲಿಯುತ್ತಾಳೆ. ಕಡಲೆ ಬೇಳೆಯ ಪಾಯಸ, ಜೇನುತುಪ್ಪ, ಅನ್ನ ನೈವೇದ್ಯ ಹಾಲು ಪಾಯಸ ಈಕೆಗೆ ಬಹಳ ಪ್ರಿಯವಾದ ಖಾದ್ಯ. ಭಯ, ರೋಗ ಸಂತಾಪಗಳನ್ನು ದೂರ ಮಾಡಿ ತನ್ನ ಪರಮ ಭಕ್ತರಿಗೆ ಧರ್ಮ ಅರ್ಥ ಕಾಮ ಮೋಕ್ಷವನ್ನು ಕರುಣಿಸುತ್ತಾಳಂತೆ ಈ ಶ್ರೀ ಲಲಿತೆ. ಕೆಂಪು ಬಣ್ಣ ಆರೋಗ್ಯದಾಯಕ, ಧೈರ್ಯ, ಮನಸ್ಸಿಗೆ ಸ್ಥೈರ್ಯ ಜೊತೆಗೆ ಇದು ಪುರುಷತ್ವ ಹಾಗೂ ಸ್ವಾಭಿಮಾನದ ದ್ಯೋತಕ.


"ಚತುರ್ಭುಜೇ ಚಂದ್ರ ಕಲಾವತಂಸೆ ಕುಚೋನ್ನತೆ ಕುಂಕುಮರಾಗಶೋಣಿ ಪುಂಡ್ರೇಕ್ಷು ಪಾಶಾಂಕುಶ ಪುಷ್ಪಬಾಣಹಸ್ತೇ ನಮಸ್ತೇ ಜಗದೇಕಮಾತಃ ಎಂಬ ಶ್ಲೋಕದಿಂದ ಆಕೆಯನ್ನು ಪೂಜಿಸಿದರೆ ಬಹಳ ಒಳ್ಳೆಯದು.

ನವರಾತ್ರಿಯಲ್ಲಿ ನವರೂಪದಲ್ಲಿ ದರ್ಶನ ನೀಡುವ ಆ ದುರ್ಗಾ ಪರಮೇಶ್ವರಿ ನಮ್ಮೆಲ್ಲ ಭಕ್ತರ ಕಷ್ಟಗಳನ್ನು ನಿವಾರಿಸಿ ಕೊರೋನಾ ಮಹಾಮಾರಿಯಂತಹ ಕೆಟ್ಟ ಶಕ್ತಿಗಳನ್ನು ಸಂಪೂರ್ಣ ಧಮನ  ಮಾಡಿ ಎಲ್ಲರಿಗೂ ಸುಂದರ ಸುಖ ಜೀವನವನ್ನು ನೀಡಿ ಸಲಹಲಿ ಎಂದು ಹಾರೈಸೋಣ.

-ರಾಜೇಶ್ ಭಟ್ ಪಣಿಯಾಡಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top