|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶಿಕ್ಷಣವನ್ನು ಪ್ರಸ್ತುತವಾಗಿಸಿ, ವಿದ್ಯಾರ್ಥಿಗಳನ್ನು ಆಸ್ತಿಯಾಗಿಸಲಿದೆ ಎನ್ಇಪಿ: ಡಾ. ಗೋಪಾಲಕೃಷ್ಣ ಜೋಶಿ

ಶಿಕ್ಷಣವನ್ನು ಪ್ರಸ್ತುತವಾಗಿಸಿ, ವಿದ್ಯಾರ್ಥಿಗಳನ್ನು ಆಸ್ತಿಯಾಗಿಸಲಿದೆ ಎನ್ಇಪಿ: ಡಾ. ಗೋಪಾಲಕೃಷ್ಣ ಜೋಶಿ


ಮಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ ಅತ್ಯತ್ತಮ ಶಿಕ್ಷಣ ಪದ್ಧತಿಗಳ ಸಮ್ಮಿಶ್ರಣ. ಶಿಕ್ಷಣವನ್ನು ಪ್ರಸ್ತುತವನ್ನಾಗಿಸಿ, ಅನುಭವದ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದ ದೇಶದ ಆಸ್ತಿಯಾಗಬೇಕೆಂಬುದೇ ಇದರ ಉದ್ದೇಶ, ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಶಿ ಹೇಳಿದ್ದಾರೆ. 


ನಗರದ ಪುರಭವನದಲ್ಲಿ ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ- 2020 ರ ಜಾರಿ ಕುರಿತ ಒಂದು ದಿನದ ಕಾರ್ಯಾಗಾರ ಮತ್ತು ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಶಿಕ್ಷಕರು ತಮಗೆ ತಿಳಿದದ್ದನ್ನು ಕಲಿಸುವ ಬದಲು ವಿದ್ಯಾರ್ಥಿಗಳ ಅಗತ್ಯತೆಗೆ ಅನುಗುಣವಾಗಿ ಶಿಕ್ಷಣ ನೀಡುವುದೇ ಈ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯ ಮೂಲ ಬದಲಾವಣೆ. ಇದು ಭಾರತೀಯ ಶಿಕ್ಷಣ ಪದ್ಧತಿಯನ್ನು ಅಂತಾರಾಷ್ಟ್ರೀಯ ಶಿಕ್ಷಣ ಪದ್ಧತಿಯ ಮಟ್ಟಕ್ಕೇರಿಸುತ್ತದೆ. “ಈ ಪದ್ಧತಿ ವಿದ್ಯಾರ್ಥಿಗಳಲ್ಲಿ ವಿಮರ್ಶೆ, ಸಮಸ್ಯೆ ಪರಿಹಾರದಂತಹ ಕೌಶಲ್ಯಗಳನ್ನು ಬೆಳೆಸುತ್ತದೆ. ಅವರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತದೆ. ಕೌಶಲ್ಯಭರಿತ ಜನಸಂಖ್ಯೆ ನಿಜಾರ್ಥದಲ್ಲಿ ದೇಶದ ಸಂಪತ್ತು ಅನಿಸಿಕೊಳ್ಳಲಿದೆ. ಸಂಯೋಜಿತ ಚಿಂತನೆ, ಬಹುಶಿಸ್ತು ಜ್ಞಾನಾರ್ಜನೆಗೆ ಸಹಾಯಕವಾಗಲಿದೆ,” ಎಂದರು.  


ಮಂಗಳೂರು –ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಖಾಯದ ಡೀನ್ ಡಾ. ಮಂಜುನಾಥ ಪಟ್ಟಾಭಿ ಅವರು ನೂತನ ಶಿಕ್ಷಣ ಪದ್ಧತಿಯ ಜಾರಿಯಲ್ಲಿರುವ ಸವಾಲುಗಳು ಮತ್ತು ಮಾಡಿಕೊಂಡಿರುವ ತಯಾರಿಯ ಬಗ್ಗೆ ಮಾತನಾಡಿ, ಶಿಕ್ಷಕರು ಈ ಪದ್ಧತಿಯನ್ನು ಅರಿತುಕೊಳ್ಳುವುದು ಮತ್ತು ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ಅರ್ಥಮಾಡಿಸುವುದು ತುಂಬಾ ಮುಖ್ಯ ಎಂದರು. 


ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಮುಂದಿನ ದಿನಗಳಲ್ಲಿ ವಿವಿಧ ಕಾಲೇಜುಗಳಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಎನ್ಇಪಿ ಕುರಿತು ಕಾರ್ಯಾಗಾರಗಳು ನಡೆಯಲಿವೆ, ಎಂದರು. “ಎನ್ಇಪಿಯಲ್ಲಿ ಇಂಗ್ಲಿಷ್ ಸೇರಿದಂತೆ ಯಾವ ಭಾಷೆಯನ್ನೂ ಕಡೆಗಣಿಸಲಾಗಿಲ್ಲ. ಶಿಕ್ಷಕರಿಗೂ ಪ್ರಾಧಾನ್ಯತೆಯಿದೆ. ಆದರೆ ಉಪನ್ಯಾಸಕರ ಕಾರ್ಯಭಾರಕ್ಕಾಗಿ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಲು ಸಾಧ್ಯವಿಲ್ಲ. ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕಾತಿ ನಡೆಯಲಿದೆ. ಆದರೆ ನೂತನ ಶಿಕ್ಷಣ ಪದ್ಧತಿಯ ಜಾರಿಗೆ ಮನಃಸ್ಥಿತಿ ಮುಖ್ಯ,” ಎಂದರು.  


ಕುಲಸಚಿವ ಡಾ. ಕಿಶೋರ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವ (ಪರೀಕ್ಷಾಂಗ) ಡಾ. ಪಿ ಎಲ್ ಧರ್ಮ, ಸಿಡಿಸಿ ಮುಖ್ಯಸ್ಥ ಪ್ರೊ. ರವೀಂದ್ರ ಆಚಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು. 


ಬಳಿಕ ವಿವಿಧ ಸ್ವಾಯತ್ತ ಕಾಲೇಜುಗಳ ಪ್ರಾಂಶುಪಾಲರುಗಳು, ಪ್ರತಿನಿಧಿಗಳ ಜೊತೆ ಪ್ರತ್ಯೇಕ ಸಭೆ ನಡೆಯಿತು. ಪಠ್ಯಕ್ರಮ, ಸ್ವಾಯತ್ತ ಕಾಲೇಜುಗಳಿಗೆ ಸಿಗಲಿರುವ ಸ್ವಾತಂತ್ರ್ಯ, ಕಾರ್ಯಭಾರ ಮೊದಲಾದ ವಿಷಯಗಳ ಕುರಿತ ಹಲವು ಗೊಂದಲಗಳನ್ನು ಪರಿಹರಿಸಲು ಡಾ. ಗೋಪಾಲಕೃಷ್ಣ ಜೋಷಿ ಪ್ರಯತ್ನಿಸಿದರು. ವಿಶ್ವವಿದ್ಯಾನಿಲಯ ಕಾಲೇಜುಗಳ ಸಮಸ್ಯೆಗಳಿಗೆ ಸ್ಪಂದಿಸಲಿದೆ. ಸ್ವಾಯತ್ತ ಕಾಲೇಜುಗಳು ತಮ್ಮ ಅನುಭವ, ಸ್ವಾತಂತ್ರ್ಯವನ್ನು ಬಳಸಿಕೊಂಡು ಮಾದರಿಯಾಗಬೇಕು. ಈ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಕರ ಕಾರ್ಯಭಾರಕ್ಕೆ ಸಮಸ್ಯೆಯಿಲ್ಲ. ಉಪನ್ಯಾಸಕ ಯಾವುದೇ ವಿಷಯವನ್ನು ಆನ್ಲೈನ್ ಮೂಲಕ ಕಲಿತು ವಿದ್ಯಾರ್ಥಿಗಳಿಗೆ ಬೋಧಿಸುವ ಅವಕಾಶವಿದೆ, ಎಂದರು.  


ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಕುಲಸಚಿವ ಪರೀಕ್ಷಾಂಗ ಡಾ. ಪಿ ಎಲ್ ಧರ್ಮ, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post