|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆಲ್ಲಿಕಾಯಿ ಎಂಬ ಔಷಧೀಯ ಹಣ್ಣು

ನೆಲ್ಲಿಕಾಯಿ ಎಂಬ ಔಷಧೀಯ ಹಣ್ಣು


ಗೂಸ್ ಬೆರ್ರಿ ಎಂದು ಆಂಗ್ಲಭಾಷೆಯಲ್ಲಿ ಕರೆಯಲ್ಪಡುವ ನೆಲ್ಲಿಕಾಯಿ ಒಂದು ವಿಶೇಷವಾದ ರುಚಿಯುಳ್ಳ ಮತ್ತು ಔಷಧೀಯ ಗುಣ ಇರುವ ಹಣ್ಣು ಆಗಿರುತ್ತದೆ. ನೆಲ್ಲಿಕಾಯಿಯಲ್ಲಿ ಹೇರಳವಾದ ವಿಟಮಿನ್ ‘ಸಿ’, ಕಬ್ಬಿಣ, ಕ್ಯಾಲ್ಸಿಯಂ ಅಂಶ ಇರುತ್ತದೆ. ಹೆಚ್ಚಾಗಿ ನಾವು ನೆಲ್ಲಿಕಾಯಿ ತಿಂದು ನೀರು ಕುಡಿಯುತ್ತೇವೆ. ವಿಶೇಷವಾದ ಹುಳಿ ಮತ್ತು ಕಹಿ ಮಿಶ್ರಣದ ರುಚಿ ಹೊಂದಿರುವ ನೆಲ್ಲಿಕಾಯಿ ತಿಂದ ಬಳಿಕ ನೀರು ಕುಡಿದಾಗ ಸಿಹಿಯ ಅನುಭವವಾಗುತ್ತದೆ. ರುಚಿ, ಕಹಿ ಮತ್ತು ಹುಳಿಯಾಗಿದ್ದರೂ ಇದರ ಪ್ರಯೋಜನಗಳು ದೇಹಕ್ಕೆ ಸಿಹಿಯಾಗಿ ಇರುತ್ತದೆ ಎಂಬ ಸಂದೇಶವನ್ನು ನೆಲ್ಲಿಕಾಯಿ ಸಾರುತ್ತದೆ.


ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಚರ್ಮದ ಆರೋಗ್ಯ ಕಾಪಾಡುವಲ್ಲಿ, ಕೂದಲಿನ ಆರೋಗ್ಯ ರಕ್ಷಿಸುವಲ್ಲಿ ಮತ್ತು ಜೀರ್ಣಕ್ರಿಯೆಯನ್ನು ಸರಾಗವಾಗಿಸುವಲ್ಲಿ ನೆಲ್ಲಿಕಾಯಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ ಎಂದು ತಿಳಿದು ಬಂದಿದೆ. ಆಯುರ್ವೇದದಲ್ಲಿ ನೆಲ್ಲಿಕಾಯಿಗೆ ವಿಷೇಶವಾದ ಮಹತ್ವವಿದೆ. ಪತಂಜಲಿ ಆಯುರ್ವೇದದ ಪ್ರಕಾರ ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಒಂದು ಚಮಚದಷ್ಷು ನೆಲ್ಲಿ ರಸವನ್ನು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ, ಅಜೀರ್ಣ ನಿವಾರಣೆ ಆಗುತ್ತದೆ ಎಂದು ನಮೂದಿಸಲಾಗಿದೆ. ನೆಲ್ಲಿಕಾಯಿಯನ್ನು ವಿವಿಧ ರೂಪದಲ್ಲಿ, ಬಳಸಲಾಗುತ್ತದೆ. ಹಸಿ ನೆಲ್ಲಿಕಾಯಿ, ಒಣಗಿಸಿದ ನೆಲ್ಲಿಕಾಯಿ, ನೆಲ್ಲಿಕಾಯಿಯ ಉಪ್ಪಿನಕಾಯಿ, ನೆಲ್ಲಿಕಾಯಿಯ ತಂಬುಳಿ, ನೆಲ್ಲಿಕಾಯಿ ರಸ ಮತ್ತು ನೆಲ್ಲಿಕಾಯಿ ಜಾಮ್ ಹೀಗೆ ಹತ್ತು ಹಲವು ರೂಪದಲ್ಲಿ ಬಳಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.


ಲಾಭಗಳು ಏನು?

1. ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ನೆಲ್ಲಿಕಾಯಿ ಬಹಳ ಉಪಯುಕ್ತವಾಗಿದೆ. ಕೂದಲಿನ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗೂ ನೆಲ್ಲಿಕಾಯಿ ಪರಿಹಾರ ನೀಡುತ್ತದೆ. ತ್ವಚೆಯ ಕಾಂತಿ ಮತ್ತು ಆರೋಗ್ಯಕ್ಕೂ ನೆಲ್ಲಿಕಾಯಿ ಪೂರಕವಾಗಿದೆ. ಹಿತ ಮಿತವಾಗಿ ಸೇವಿಸಿದಲ್ಲಿ ತ್ವಚೆಯ ಕಾಂತಿ ವೃದ್ಧಿಸುತ್ತದೆ ಮತ್ತು ತಲೆ ಕೂದಲು ತುಂಬಾ ಆರೋಗ್ಯ ಪೂರ್ಣವಾಗಿರುತ್ತದೆ.


2. ನೆಲ್ಲಿಕಾಯಿಯಲ್ಲಿ ಇರುವ ವಿಟಮಿನ್ ‘ಸಿ’ ಮತ್ತು ಆಂಟಿ ಆಕ್ಸಿಡೆಂಟ್‍ಗಳು, ಕ್ಯಾನ್ಸರ್ ಬೆಳೆಯದಂತೆ ತಡೆಯುವ ಗುಣ ಹೊಂದಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವುದಿಲ್ಲವಾದರೂ, ಕ್ಯಾನ್ಸರ್ ಬರದಂತೆ ತಡೆಯುವ ಗುಣ ಹೊಂದಿರುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ ಎಂದು ತಿಳಿದು ಬಂದಿದೆ.




3. ನೆಲ್ಲಿಕಾಯಿ ರಸ ಹೀರುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡುತ್ತದೆ ಮತ್ತು ನೆಲ್ಲಿಕಾಯಿಯಲ್ಲಿ ಹೇರಳವಾಗಿ ನಾರಿನಾಂಶ ಇದ್ದು, ಶರ್ಕರಪಿಷ್ಠ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಈ ಕಾರಣದಿಂದ ತೂಕ ಇಳಿಸುವಲ್ಲಿ ನೆಲ್ಲಿಕಾಯಿ ಬಹಳ ಉಪಯುಕ್ತವಾಗಿರುತ್ತದೆ.


4. ಪಚನ ಕ್ರಿಯೆಯನ್ನು ಸರಾಗಗೊಳಿಸುವಲ್ಲಿ ನೆಲ್ಲಿಕಾಯಿ ಬಹಳ ಉತ್ತಮ ಸಹಾಯ ಮಾಡುತ್ತದೆ. ಹೆಚ್ಚಿನ ನಾರಿನಂಶ ಮತ್ತು ಆಮ್ಲೀಯ ಗುಣದಿಂದಾಗಿ ಜೀರ್ಣಕ್ರಿಯೆಗೆ ಪೂರಕವಾಗಿ ಕೆಲಸ ಮಾಡುತ್ತದೆ.


5. ಅತಿಯಾದ ವಿಟಮಿನ್ ‘ಸಿ’ ಮತ್ತು ಆಂಟಿ ಆಕ್ಸಿಡೆಂಟ್ ಇರುವ ಕಾರಣದಿಂಧ ದೇಹದ ರಕ್ಷಣಾ ಶಕ್ತಿಯನ್ನು ವೃದ್ಧಿಸಲು ನೆಲ್ಲಿಕಾಯಿ ಸಹಕಾರಿ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.


6. ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಅಂಶ ಹೇರಳವಾಗಿದೆ. ಮಧುಮೇಹ ರೋಗಿಗಳಲ್ಲಿ ಇದು ಬಹಳ ಉಪಯುಕ್ತ. ಈ ಕ್ರೋಮಿಯಂ ಕೆಲವೊಂದು ಜೀವಕೋಶಗಳಲ್ಲಿ, ಇನ್ಸುಲಿನ್ ಉತ್ಪತ್ತಿಮಾಡಲು ಪ್ರಚೋದಿಸುತ್ತದೆ ಎನ್ನಲಾಗಿದೆ. ಆ ಮೂಲಕ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ ಎಂದು ನಂಬಲಾಗಿದೆ. ಹೆಚ್ಚಿದ ಇನ್ಸುಲಿನ್‍ನಿಂದಾಗಿ ರಕ್ತದಲ್ಲಿನ ಗ್ಲೂಕೋಸನ್ನು ಬಳಸಿಕೊಂಡು, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಎಂದು ತಿಳಿದು ಬಂದಿದೆ.


ನೆನಪಿರಲಿ:

1. ನೈಸರ್ಗಿಕವಾಗಿ ನೆಲ್ಲಿಕಾಯಿ ಆಮ್ಲೀಯ ಗುಣ ಹೊಂದಿದೆ. ಹೆಚ್ಚಿನ ವಿಟಮಿನ್ ‘ಸಿ’ ಯಿಂದಾಗಿ ಈ ಗುಣ ಬಂದಿರುತ್ತದೆ. ಅತಿಯಾದ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಆಮ್ಲೀಯತೆ ಸಮಸ್ಯೆ ಬರುವ ಸಾಧ್ಯತೆ ಇದೆ.

2. ಅಗತ್ಯಕ್ಕಿಂತ ಜಾಸ್ತಿ ನೆಲ್ಲಿಕಾಯಿ ತಿಂದಲ್ಲಿ, ಮಲಬದ್ಧತೆ ಉಂಟಾಗುವ ಸಾಧ್ಯತೆ ಇದೆ. ಈ ಕಾರಣದಿಂದ ನೆಲ್ಲಿಕಾಯಿ ಸೇವಿಸಿದ ಬಳಿಕ ಜಾಸ್ತಿ ನೀರು ಕುಡಿಯಬೇಕಾಗುತ್ತದೆ.

3. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತಿನಂತೆ, ವಿಪರೀತ ನೆಲ್ಲಿಕಾಯಿ ಸೇವನೆ ಮಾಡಿದಲ್ಲಿ, ದೇಹದಲ್ಲಿ ಸೋಡಿಯಂ ಅಂಶ ಜಾಸ್ತಿಯಾಗಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಲೂಬಹುದು ಮತ್ತು ಮಿತಿ ಮೀರಿ ಸೇವಿಸಿದಲ್ಲಿ ಅಪಾಯಕಾರಿಯಾಗಲೂ ಬಹುದು

4. ಅತಿಯಾದ ನೆಲ್ಲಿಕಾಯಿ ಉತ್ಪನ್ನ ಸೇವಿಸಿದಲ್ಲಿ ಅತಿಯಾದ ವಿಟಮಿನ್ ‘ಸಿ’ ಯಿಂದಾಗಿ, ಉರಿಮೂತ್ರ ಸಮಸ್ಯೆ ಮತ್ತು ಇತರ ಕಿಡ್ನಿ ಸಂಬಂಧಿ ಸಮಸ್ಯೆಗಳು ಉದ್ಬವಿಸಬಹುದು. ನಿಗದಿತ ಪ್ರಮಾಣದಲ್ಲಿ ಸೇವಿಸಿದಲ್ಲಿ ಯಾವುದೇ ತೊಂದರೆ ಉಂಟಾಗದು.

5. ಅತಿಯಾದ ನೆಲ್ಲಿಕಾಯಿ ಸೇವಿಸುವುದರಿಂದ ದೇಹದಲ್ಲಿ ಕೆಲವೊಂದು ಕಿಣ್ವಗಳು ಜಾಸ್ತಿ ಸ್ರವಿಸಿ, ಪಿತ್ತಜನಕಾಂಗದ ಸಮಸ್ಯೆಗೆ ಕಾರಣವಾಗಬಹುದು ಎಂದೂ ತಿಳಿದು ಬಂದಿದೆ.


ಕೊನೆ ಮಾತು:

ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಅಮೃತ ಫಲ್ ಅಥವಾ ಧರ್ತಿಫಲ್ ಎಂದು ಕರೆಯುತ್ತಾರೆ. ನಮ್ಮ ಭಾರತ ದೇಶದಲ್ಲಿ ಅನಾದಿ ಕಾಲದಿಂದಲೂ, ನೆಲ್ಲಿಕಾಯಿಯನ್ನು ಸಾಕಷ್ಟು ಪ್ರಮಾಣದಲ್ಲಿ ಬೇರೆ ಬೇರೆ ರೂಪದಲ್ಲಿ ಬಳಸುತ್ತಿದ್ದಾರೆ. ನೆಲ್ಲಿಕಾಯಿಯನ್ನು ಆಹಾರದ ರೂಪದಲ್ಲಿ ಸೇವಿಸಿ ರೋಗ ಬರದಂತೆ ಮಾಡಲಾಗುತ್ತದೆ. ಅದೇ ರೀತಿ ನೆಲ್ಲಿಕಾಯಿಯನ್ನು ಔಷಧಿಯ ರೂಪದಲ್ಲೂ ಬಳಸಿ ರೋಗದ ಚಿಕಿತ್ಸೆಗೆ ಪೂರಕವಾಗಿ ಬಳಸುತ್ತಾರೆ. ನೆಲ್ಲಿಕಾಯಿಯಲ್ಲಿ ವಿವಿಧ ವಿಟಮಿನ್‍ಗಳು, ಖನಿಜಗಳು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ನಾರಿನಂಶ, ಶರ್ಕರಪಿಷ್ಠಗಳು ಮತ್ತು ಪೋಷಕಾಂಶಗಳು ಸಮೃದ್ದವಾಗಿರುವ ಕಾರಣದಿಂದ ಇದೊಂದು ಪರಿಪೂರ್ಣ ಆಹಾರವೆಂಬ ಹೆಸರು ಗಳಿಸಿದೆ.


ಈಗ ತಿನ್ನುವ ಆಹಾರದಿಂದ ಹಿಡಿದು, ತಲೆಗೆ ಬಳಸುವ ಶ್ಯಾಂಪೂ ತನಕ ಎಲ್ಲವೂ ನೆಲ್ಲಿಕಾಯಿಯಿಂದ ಮಾಡಿರುವಂತದ್ದಾಗಿದೆ ಎಂದರೂ ತಪ್ಪಾಗಲಾರದು. ಈಗಿನ ಹೆಚ್ಚಿನ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ನೆಲ್ಲಿಕಾಯಿಗೆ ವಿಶೇಷವಾದ ಸ್ಥಾನವಿದೆ. ಹೀಗೆ ಆಹಾರ, ಔಷದಿ ಮತ್ತು ಸೌಂದರ್ಯವರ್ಧಕ ಗುಣ ಹೊಂದಿರುವ ನೆಲ್ಲಿಕಾಯಿ ಒಂದು ರೀತಿಯ ಆಪತ್‍ಬಾಂಧವ ಎಂದರೂ ಅತಿಶಯುಕ್ತಿಯಾಗಲಾರದು.


ಫಿಲಂತೇಸಿ ಎಂಬ ಪ್ರಜಾತಿಗೆ ಸೇರಿರುವ ನೆಲ್ಲಿಕಾಯಿಯನ್ನು ಸಂಸ್ಕೃತದಲ್ಲಿ ‘ಆಮ್ಲಕಿ’ ಎಂದೂ ಕರೆಯುತ್ತಾರೆ. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎಂಬ ಮಾತಿನಂತೆ, ನೋಡಲು ಚಿಕ್ಕದಾದರೂ, ತಿನ್ನಲು ಕಹಿ ಅನಿಸಿದರೂ, ನೆಲ್ಲಿಕಾಯಿಯಲ್ಲಿ ಇರುವ ಹೇರಳವಾದ ಖನಿಜಾಂಶ, ಪೋಷಕಾಂಶ ಮತ್ತು ವಿಟಮಿನ್‍ನಿಂದಾಗಿ ಈ ನೆಲ್ಲಿಕಾಯಿಯನ್ನು ಹಿತ ಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ವೈದ್ಯರ ಒಕ್ಕೂರಲಿನ ಒಮ್ಮತವಾಗಿದೆ.


-ಡಾ|| ಮುರಲೀ ಮೋಹನ್ ಚೂಂತಾರು

BDS, MDS,DNB,MOSRCSEd (U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ : 9845135787


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم