|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೃಷಿತೋ ನಾಸ್ತಿ ದುರ್ಭಿಕ್ಷಂ...

ಕೃಷಿತೋ ನಾಸ್ತಿ ದುರ್ಭಿಕ್ಷಂ...


ಇದು ಹಿರಿಯರ ಅನುಭವದ ನುಡಿ. ಒಂದು ಕಾಲದಲ್ಲಿ ಇದು ಎಲ್ಲರ ಅನುಭವವೂ ಕೂಡ. ಕೃಷಿ ಅಥವಾ ಕೃಷಿಕನೆಂದರೆ ಅಕ್ಕಿ, ಗೋಧಿ, ರಾಗಿ, ತರಕಾರಿ, ಹಣ್ಣು, ಮುಂತಾದ ಆಹಾರ ಬೆಳೆಯನ್ನು ಬೆಳೆಸುವವನು. ಇವನನ್ನು ರೈತ ಎಂದು ಗೌರವಿಸುತ್ತೇವೆ. ಈತ ತನಗೂ ಇತರರಿಗೂ ಹೊಟ್ಟೆ ತುಂಬುವ ಆಹಾರವನ್ನು ತಯಾರಿಸುವವನು. ಅದಕೆಂದೇ ತಿಳಿದವರು ರೈತನಿಗೆ ನಮ್ಮ ದೇಶದ ಬೆನ್ನೆಲುಬು ಎಂಬ ವಿಶೇಷಣವನ್ನು ಕೊಟ್ಟಿದ್ದಾರೆ. ಇನ್ನು ವಾಣಿಜ್ಯ ಬೆಳೆಯನ್ನು ಬೆಳೆಸುವವರು ಕೂಡ ಕೃಷಿಕರೇ ಆದರೂ ಆಹಾರೋತ್ಪಾದನಾ ಬೆಳೆಯನ್ನು ಬೆಳೆಸುವವರು ಪ್ರಥಮ ಸಾಲಿನಲ್ಲಿ ಬರುತ್ತಾರೆ.


ಆಹಾರವು ಜೀವಿಯ ಪ್ರಾಥಮಿಕ ಅವಶ್ಯಕತೆಯಾದರೆ, ವಾಣಿಜ್ಯ ಬೆಳೆಯು ಜೀವನಕ್ಕೆ ಪೂರಕ. ಕೃಷಿ ಎಂದರೆ ಹತ್ತಾರು ಜನರ ಪರಿಶ್ರಮದಿಂದ ಆಗಬೇಕಾದಂಥಹ ಪ್ರಕ್ರಿಯೆ. ಮನೆಯ ಯಜಮಾನನಿಂದ ತೊಡಗಿ ಎಲ್ಲರೂ ಕೃಷಿಕರೇ ಆಗಿರಬೇಕಾಗುತ್ತದೆ. ಆಳು-ಕಾಳು, ದನ-ಕರುಗಳು, ಉಳುವ ಕೋಣ-ಎತ್ತುಗಳು, ಪರಿಸರ ಸ್ನೇಹಿ ಹಕ್ಕಿಗಳು, ಮಳೆ-ಬಿಸಿಲು, ಭೂಮಿ-ನೀರು... ಇಂತಹ  ಹಲವಾರು ವಿಷಯಗಳ ಸಂಯೋಗವೇ ಕೃಷಿ. ಅದನ್ನು ಆಯೋಜನೆ ಮಾಡುವವನೇ ಕೃಷಿಕ. ಅದರಲ್ಲಿ ಸಾಫಲ್ಯವನ್ನು ಕಂಡವನೇ ಆದರ್ಶ ಕೃಷಿಕ, ಅಥವಾ ರೈತ. 


ಕೃಷಿ ಎಂದಾಕ್ಷಣ ಅಲ್ಲಿ ದುಡಿಯುವ ಕೈಗಳದ್ದೇ ಮಹತ್ವ. ಜನಶಕ್ತಿಯನ್ನು ಬೇಡುವ ವ್ಯವಹಾರ. ಸೋಮಾರಿಗಳಿಗೆ ಅಲ್ಲಿ ಅವಕಾಶವೇ ಇಲ್ಲ. ಛಲ, ಬಲ, ಇಚ್ಛಾಶಕ್ತಿ, ಪ್ರಾಮಾಣಿಕ ಪ್ರಯತ್ನ, ಕರ್ತವ್ಯ ಪ್ರಜ್ಞೆ, ಅತಿಯಾದ ಹಣದ ದಾಹ ಇಲ್ಲದೇ ಇರುವುದು ಕೃಷಿಯ ಮೂಲಭೂತ ಅವಶ್ಯಕತೆಗಳು. ಯಾರಲ್ಲಿ ಇದೆಲ್ಲವೂ ಒಂದಾಗಿ ಇರುವುದೋ ಆತನಿಗೆ ಕೃಷಿ ಎಂದೂ ಕೈ ಕೊಡದು. ಅಂತಹ ಸಾಧಕನು ಸಿರಿತನವೆಂಬ ಪರ್ವತವನ್ನು ಏರಿ ಕೂರದಿರಬಹುದು, ಆದರೆ ಬಡತನವೆಂಬ ಪ್ರಪಾತಕ್ಕೆ ಜಾರದಂತಿರಬಹುದು. ನಿಯತ್ತಿನಿಂದ, ಅತಿಯಾದ ಆಸೆ ಇರದೆ, ವರ್ತಮಾನದಲ್ಲಿ ಮಾಡುವ ಪ್ರಕ್ರಿಯೆಯನ್ನು ಮಾಡುತ್ತ, ಸಂತೃಪ್ತ ಜೀವನ ನಡೆಸುವ ಹಲವಾರು ಕುಟುಂಬಗಳು ಇಂದಿಗೂ ಇರುವುದು ಮಾತ್ರ ಸತ್ಯ. ಅಂತಹ ಒಂದೆರಡು ಕುಟುಂಬಗಳ ಬಗ್ಗೆ ಒಂದಿಷ್ಟು ಅನುಭವಗಳನ್ನು ಹಂಚಿಕೊಳ್ಳೋಣ. (ಇವರ ಹೆಸರನ್ನು ಬರೆದರೆ ಒಪ್ಪಿಕೊಳ್ಳಲಾರರು. ಆದರು ಸಾಂಕೇತಿಕವಾಗಿ  'ಸುಬ್ಬು, ಮಾಧು' ಎಂದಿಟ್ಟುಕೊಳ್ಳೋಣ.)   


ಸುಬ್ಬುನ ಪ್ರಧಾನ ಕೃಷಿ ಅಡಿಕೆ ಬೆಳೆ. ಇದರ ಜತೆಗೆ ಆತನಿಗೆ ವಂಶಪಾರಂಪರ್ಯವಾಗಿ ಬಂದಂಥ ಅನುಭವದ ಮೂಟೆಗಳೇ ಇವೆ. ತಂದೆಯ ಕಾಲವಾದ ನಂತರ ಸುಬ್ಬು ಸ್ವಲ್ಪ ಸಮಯ ಸಹಜವಾಗಿ ಖಿನ್ನತೆಗೆ ಒಳಗಾದರೂ ಮೈಕೊಡವಿ ಎದ್ದು ಕೃಷಿಯಲ್ಲಿ ತೊಡಗಿಸಿಕೊಂಡ. ಎಲ್ಲರಂತೆ ಎರಡು ಮೂರು ಏಕರೆಗಳಷ್ಟೆ ಅಡಿಕೆ ತೋಟವಿದ್ದರೂ ಇದ್ದಂಥ ಉತ್ಪತ್ತಿಯಲ್ಲಿ ಆದರ್ಶ ಕೃಷಿಕನಾಗಿ ಮುಂದೆ ಬಂದಂಥ ರೀತಿ ಅನನ್ಯವಾದುದು. ಸಾಮಾನ್ಯವಾಗಿ ಅಡಿಕೆ ಧಾರಣೆ ಹೆಚ್ಚಿರುವಾಗ ಎಲ್ಲರೂ ಆರಾಮವಾಗಿ ವ್ಯವಹಾರಗಳನ್ನು ಮಾಡುತ್ತಾರೆ. ಆದರೆ ಬೆಲೆ ಪಾತಾಳಕ್ಕೆ ಕುಸಿದಾಗಲೂ ಸಮತೋಲನ ಕಾಯ್ದುಕೊಳ್ಳುವುದಾದರೆ ಅದು ಸುಬ್ಬುನಂಥವರಿಗೆ ಮಾತ್ರ ಸಾಧ್ಯ. ಹಾಗಾದರೆ ಇದರ ಗುಟ್ಟೇನೆಂದು ತಿಳಿಯ ಹೋದಾಗ ಸಾಧನೆಯ ಒಂದು ಆಯಾಮವೇ ತೆರೆದುಕೊಂಡದ್ದು ಹೀಗೆ. 


ಸುಬ್ಬು ಎಲ್ಲರಂತೆ ಇಲ್ಲದುದೇ ಆತನ ಶ್ರೇಯಸ್ಸಿನ ಮೊದಲ ರಹಸ್ಯ. ಎಲ್ಲರೂ ಬೆಳಗ್ಗೆ ಐದು ಗಂಟೆಯ ನಂತರವೇ ಹಾಸಿಗೆ ಬಿಟ್ಟೇಳುವುದಾದರೆ, ಸುಬ್ಬು ಇನ್ನೂ ಒಂದುವರೆ ಗಂಟೆ ಮುಂಚೆಯೇ ಅಂದರೆ ಮೂರುವರೆ ಗಂಟೆಗೆ ನಿದ್ದೆಯಿಂದ ಹೊರಬರುವುದೇ ಮೊದಲ ಯಶಸ್ವಿ ಹೆಜ್ಜೆ. ಗಂಡ ಹೆಂಡತಿ ಇಬ್ಬರೂ ಈ ಶಿಸ್ತನ್ನು ಪಾಲಿಸುವುದರಿಂದ ನಿತ್ಯವಿಧಿಗಳೆಲ್ಲವೂ ಸೂರ್ಯೋದಯದ ಮುಂಚೆಯೇ ಆಗುವುದರಿಂದ ಹಗಲು ಪೂರ್ತಿ ಸಾಧನೆಗೆ ದೊರಕುವುದು. ಸುಬ್ಬು ಹೇಳುವಂತೆ... ತೋಟದ ಕೆಲಸವೇ ಆಗಲಿ, ಅಡಿಕೆ ತೆಂಗಿನಕಾಯಿ ಸುಲಿಯುವುದೇ ಆಗಲಿ ಅಥವಾ ಕೃಷಿಗೆ ಸಂಬಂಧ ಪಟ್ಟ ಯಾವುದೇ ಕೆಲಸವಾಗಲಿ ಒಂದು ಕ್ರಮದಲ್ಲಿ ನಿತ್ಯವೂ ಮಾಡುತ್ತಿದ್ದರೆ ಶರೀರಕ್ಕೆ ವ್ಯಾಯಾಮವೂ ಆಗುತ್ತದೆ, ಕೆಲಸವೂ ಆಗುತ್ತದೆ, ಶ್ರಮವೂ ಗೊತ್ತಾಗದು, ಕಾರ್ಮಿಕರ ಅಭಾವವೂ ಕಾಣದು, ಮನಸ್ಸಿಗೆ ತೃಪ್ತಿಯೂ ಸಿಗುವುದು.


ಸುಬ್ಬು ಹೇಳುವ ಕೆಲವು ಸರಳ ಸೂತ್ರಗಳನ್ನು ನೋಡುವುದಾದರೆ... ಅವಶ್ಯಕತೆ ಇದ್ದರೂ ಇಲ್ಲದಿದ್ದರೂ ಪ್ರತಿನಿತ್ಯವೂ ಒಂದಷ್ಟು ಅಡಿಕೆ ಸುಲಿಯಲೇಬೇಕು, ಹಾಗೂ ಅದಕ್ಕೊಂದು ಸಮಯ ನಿಗದಿ ಮಾಡಬೇಕು. ಆವಾಗ ಒಂದೇ ಸಲ ಸುಲಿಯುವ ಒತ್ತಡವೂ ಇರದು, ಒಳ್ಳೆಯ ಧಾರಣೆ ಬಂದಾಗ ಮಾರಾಟವನ್ನೂ ಮಾಡಬಹುದು. ಅದೇರೀತಿ ತೆಂಗಿನಕಾಯಿ ಸುಲಿಯುವುದಾದರೂ ಮಾರಾಟ ಮಾಡುವ ದಿನಕ್ಕೆ ಹೊಂದಿಕೊಂಡು ದಿನ ಒಂದಕ್ಕೆ ನೂರು ಅಥವಾ ಇನ್ನೂರರಷ್ಟು ಸುಲಿದುಕೊಳ್ಳತ್ತಿರಬೇಕು. ದಣಿವೂ ಆಗದು ಉದಾಸೀನವೂ ಆಗದು. ಹಾಗೆಯೇ ತೆಂಗಿನಕಾಯಿ ಕೊಯ್ಲು ಮಾಡುವುದಾದರೂ ದಿನ ಒಂದಕ್ಕೆ ಐದು ಮರಕ್ಕೆ ಮಾತ್ರ ಹತ್ತಿ ಕಾಯಿ ತೆಗೆಯಬೇಕು. ಶಕ್ತಿ ಇದೆ ಅಥವಾ ಪುರುಸೊತ್ತಿದೆ ಎಂದು ಹೆಚ್ಚು ಮರಕ್ಕೆ ಹತ್ತಲೂ ಬಾರದು, ಉದಾಸೀನವೆಂದು ಹತ್ತದೆಯೂ ಇರಬಾರದು. ಇದಕ್ಕೂ ಒಂದು ವೇಳೆ ನಿಗದಿ ಮಾಡಿಟ್ಟುಕೊಳ್ಳಬೇಕು. ಶ್ರಮವೆಂದು ಗೊತ್ತಾದಾಗ ಕೆಲಸ ಮುಗಿದಿರುತ್ತದೆ. ಸುಬ್ಬು ಕೆಲಸಕ್ಕೆ ಜನ ಸಿಗುವುದಿಲ್ಲವೆಂದು ಗೋಗರೆದದ್ದು ಇಲ್ಲವೇ ಇಲ್ಲವೆಂದು ಹೇಳಬಹುದು. ತೋಟದ ಹುಲ್ಲು ತೆಗೆಯುವುದಾದರೂ ಇಷ್ಟೇ ಜಾಗ ಅಥವಾ ವೇಳೆ ಎಂಬ ನಿಯಮ ಪಾಲನೆ ಇದೆ. ಇಂಥ ಯಾವುದೇ ಕೆಲಸವಿದ್ದರೂ ಸುಬ್ಬು ಮಧ್ಯಾಹ್ನದೊಳಗೆ ಮುಗಿಸಿ, ಮಧ್ಯಾಹ್ನದ ನಂತರ ಆರಾಮವಾಗಿ ಇರುವುದನ್ನು ನೋಡಿದಾಗ ಕೃಷಿ ಅದೆಷ್ಟು ಸ್ವಾಭಿಮಾನದ, ಸ್ವಾವಲಂಬನೆಯ, ಆನಂದದ, ಇತರ ಹವ್ಯಾಸಗಳನ್ನೂ ಪೋಷಿಸಿ ಖುಷಿ ಪಡುವ ವಿಷಯವೆಂದೆನಿಸದೆ? ಸುಬ್ಬು ಇನ್ನೊಂದು ಸೂಕ್ಷ್ಮ ಹೇಳುತ್ತಾನೆ 'ಈ ಎಲ್ಲ ಸಾಧನೆಗಳಿಗೂ ತನ್ನ ಪತ್ನಿಯ ಸಹಭಾಗಿತ್ವವೇ ನಿರ್ಣಾಯಕ' ಎಂದು. ಆಹಾ ಎಂಥಾ ಸೊಗಸು ಇಂಥಾ ಮನಸು.  


ಹಾಗೆಂದು ಸುಬ್ಬು ಕೃಷಿ ಎಂದುಕೊಂಡು ತೋಟದೊಳಗೇ ಇರುವವನಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ತೊಡಗಿಸಿಕೊಂಡು, ಇತ್ತ ಕೃಷಿಯನ್ನೂ ಮಾಡಿಕೊಂಡು, ಆದಾಯ ಸಣ್ಣದಾದರೂ ಶಿಸ್ತು ಮತ್ತು ತಾದಾತ್ಮ್ಯತೆ ಇದ್ದರೆ ಕೃಷಿ ಕೈ ಬಿಡದು ಎಂದು ಸಾಧಿಸಿತೋರಿಸಿದವನು ಈ ಸುಬ್ಬು. ಈತನ ಆದರ್ಶ ಎಲ್ಲರೂ ಅಳವಡಿಸಿಕೊಂಡರೆ ಕೃಷಿಕನ  ಹಲವಾರು ಸಮಸ್ಯೆಗಳು ಶಾಶ್ವತ ಪರಿಹಾರವಾದಂತೆ. 


ಇನ್ನೊಬ್ಬ ಮಾಧು ಎನ್ನುವವ ಇವನು ಕೂಡ ಒಂದು ಸಹಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದವನು. ಸಾಧಿಸಿದರೆ ಸಬಲವನ್ನೂ ನುಂಗಬಹುದೆಂಬುದಕ್ಕೆ ಈತನೇ ಸಾಕ್ಷಿ. ಮಾಧುಗೆ ಒಂದು ಕಾಲದಲ್ಲಿ ಆಸ್ತಿ ಬದುಕಿದ್ದರೂ ಕಾರಣಾಂತರಗಳಿಂದ ಕೈ ಬಿಟ್ಟು ಹೋದಾಗ ಬೇಸರ,  ಹತಾಶೆ ಆದದ್ದು ಸಹಜವೇ. ಆದರೆ ಈತನ ಮನಸ್ಸಿನಲ್ಲಿ ಆಸ್ತಿ ಬದುಕಿನ ಬಗ್ಗೆ ಅದೆಷ್ಟು ಹಪಹಪಿ ಇತ್ತೆಂದರೆ, ಆತನ ನೌಕರಿಯ ಮಧ್ಯೆ ಹೊಸತು ಜಾಗವನ್ನು ಖರೀದಿಸಿಯೇ ಬಿಟ್ಟನು. ಅದೇನು ಸಾಲ ಮಾಡಿದನೋ ಅಥವಾ ಮೂಲವೇನಾದರೂ ಇದ್ದಿತೋ ಆತನಿಗೇ ಗೊತ್ತು. ಅಂತು ಈತನ ಛಲದ ಮುಂದೆ ಅದೆಲ್ಲವೂ ಗೌಣವೇ ಆಯಿತು. ಗದ್ದೆ ತೋಟಗಳನ್ನು ಅತ್ಯಂತ ವೈಜ್ಞಾನಿಕವಾಗಿ ಮಾಡಿ ಫಸಲನ್ನು ಪಡೆಯುವಷ್ಟರ ಮಟ್ಟಿಗೆ ಇಂದು ಮಾಧು ಬೆಳೆಸಿದ್ದಾನೆ ಮಾತ್ರವಲ್ಲ ಬೆಳೆದಿದ್ದಾನೆ. ಕಷ್ಟವೋ ನಷ್ಟವೋ ಇಂದು ಎಲ್ಲರೂ ಭತ್ತದ ಬೇಸಾಯವನ್ನೇ ಬಿಡುತ್ತಿರುವಾಗ ಈ ಮಾಧು ಹೊಸತಾಗಿ ಗದ್ದೆಗಳನ್ನು ಉತ್ತು ಬಿತ್ತು ಭೂತಾಯಿಯ ಸೇವೆ ಮಾಡಿ ನಾಲ್ಕು ಜನರಿಗೆ ಅನ್ನ ಕೊಡುವ ರೈತನಾದದ್ದು ಸಣ್ಣ ಸಾಧನೆಯಲ್ಲ.  


ಮಾಧುನ ಮಾತಲ್ಲೇ ಕೇಳುವುದಾದರೆ 'ಸಾಲವನ್ನು ಎಷ್ಟೂ ಮಾಡಬಹುದು. ಆದರೆ ನಾವು ಯಾವ ಉದ್ದೇಶಕ್ಕೆಂದು ಸಾಲ ಮಾಡಿದ್ದೇವೋ ಅದಕ್ಕೇ ಅದನ್ನು ವಿನಿಯೋಗಿಸಿದಾಗ ಸಾಲ ಶೂಲವಾಗುವುದಿಲ್ಲ, ಬದಲಾಗಿ ನಮ್ಮ ಸಾಧನೆಗೆ ಮೂಲವಾಗುತ್ತದೆ'. ಇದು ಮಾಧುನ ಸಿದ್ಧಾಂತ. ಇರಬಹುದು ಯಾಕೆಂದರೆ ಮಾಧು ಅದನ್ನು ಸಾಧಿಸಿ ತೋರಿಸಿದ್ದಾನೆ ಮಾತ್ರವಲ್ಲ ಇನ್ನೊಬ್ಬರಿಗೆ ಮಾದರಿಯಾಗಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿ ಕೂಡ ಮಾಧು ಹೇಳುವುದು ಸುಬ್ಬು ಹೇಳಿದಂತೆಯೇ. 'ನನ್ನ ಪತ್ನಿಯ ಸಹಕಾರವಿಲ್ಲದಿದ್ದರೆ ನಾನು ಸಾಮಾನ್ಯ ನೌಕರನಾಗಿಯೇ ಇರಬೇಕಿತ್ತು. ಆದರೆ ಇನ್ನು ನಾಲ್ಕು ವರ್ಷಗಳಲ್ಲಿ ನಾನು ಸಾಹುಕಾರನಾಗುವೆನು' ಎಂದು. ಏನೇ ಇರಲಿ ಇಂತಹ ಸುಬ್ಬು, ಮಾಧುಗಳ ಛಲದ ಮುಂದೆ ಭೂಮಾತೆಯೂ ಸಹಕರಿಸದೆ ಇರಲಾರಳು... ಜಯವಾಗಲಿ... ರೈತನಿಗೆ ಅಂತೆಯೇ ಕೃಷಿಕನಿಗೆ. 

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم