ಸಂವಿಧಾನದಲ್ಲಿ ಇಲ್ಲದ ಇನ್ನೊಂದು ಕಾಯಿಲೆ 'ಸಂಪುಟ ದರ್ಜೆ'ಯ ಸ್ಥಾನಮಾನ

Upayuktha
0

ಇದೊಂದು ಹೊಸ ಕಾಯಿಲೆ ರಾಜ್ಯದ ರಾಜಕೀಯದಲ್ಲಿ ಹುಟ್ಟಿಕೊಂಡ ಕಾಯಿಲೆ. ಇದರ ಹುಟ್ಟು ಎಲ್ಲಿಯಾಯಿತು? ಯಾರಿಂದ ಪ್ರಾರಂಭವಾಯಿತು? ಯಾಕಾಗಿ ಈ ಪಿಡುಗು ಪಕ್ಷದಿಂದ ಪಕ್ಷಕ್ಕೆ ವರ್ಷದಿಂದ ವಷ೯ಕ್ಕೆ ಜಾಸ್ತಿ ಯಾಗುತ್ತಿದೆ ಅನ್ನುವುದು ನಮ್ಮನ್ನು ಕಾಡುವ ದೊಡ್ಡ ಪ್ರಶ್ನೆ. ಈ ಕಾಯಿಲೆ ಎಲ್ಲಿಯವರೆಗೆ ಹಬ್ಬಿದೆ ಅಂದರೆ ನೀವು ಶಾಸಕರಾಗಬೇಕಾಗಿಲ್ಲ, ಮಂತ್ರಿಯೂ ಆಗಬೇಕಾಗಿಲ್ಲ ನಿಮಗೆ ಒಲಿದು ಬರುತ್ತದೆ ಸಂಪುಟ ದಜೆ೯ಯ ಸ್ಥಾನಮಾನ.ಈ ಸ್ಥಾನಮಾನಕ್ಕಾಗಿಯೆ ಜೀವ ಬಿಡುವವರು ಸಾಕಷ್ಟು ಮಂದಿ ಇದ್ದಾರೆ. ಮುಂದೊಂದು ದಿನ ಇದೇ ಮಂದಿಗಳು ನಮಗೂ ಝೀರೊ ಟ್ರಾಫಿಕ್ ಮಾಡಿಕೊಡಿ ಅನ್ನುವ ಬೇಡಿಕೆ ಮುಂದಿಟ್ಟರೂ ಆಶ್ಚರ್ಯಪಡ ಬೇಕಾಗಿಲ್ಲ.


ಇತ್ತೀಚಿಗೆ ಕೆಲವು ಶಾಸಕರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಗಳನ್ನಾಗಿ ನೇಮಿಸಿದರು. ನೇಮಿಸುವಾಗಲೇ ನೇಮಕಾತಿ ಪತ್ರದಲ್ಲಿ ಒಂದು ವಾಕ್ಯ ಸೇರಿಸಿ ಬಿಡಿ ಅನ್ನುವ ಒತ್ತಾಯವೂ ಇರಬಹುದು. ನಮಗೆ ಹುದ್ದೆ ಮುಖ್ಯ ಅಲ್ಲ ಸಚಿವ ಸ್ಥಾನಮಾನ ಬೇಕು. ಸರಕಾರದ ದುಡ್ಡಿನಿಂದ ಪುಕ್ಕಟೆ ಸವಲತ್ತು ಸಾರಿಗೆ ಭತ್ಯೆ. ಸ್ಥಾನ-ಮಾನ, ತಮಗೆ ಸಂಬಂಧಪಡದ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಿ ಕುಳಿತು ಕೊಳ್ಳಲು ಸದವಕಾಶ. ಹೇಗಿದೆ ಜನರ ಖರ್ಚಿನಲ್ಲಿ ಬಿಟ್ಟಿ ಸೇವೆ? ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಆ ಮಂಡಳಿ; ಈ ಮಂಡಳಿ ಅಧ್ಯಕ್ಷ; ಒಂದೇ ಎರಡೇ; ಅಂತೂ ಕೆಲವು ಸಚಿವರಿಗೂ ಸಿಗದ ಗೌರವ ಇವರಿಗೆ ಬೇಕೇ ಬೇಕು! ಇದೊಂದು ನಮ್ಮ ರಾಜ್ಯದ ಸಂಸದೀಯ ಆಡಳಿತದಲ್ಲಿ ಕೆಟ್ಟ ಚಾಳಿ ಸಂಪ್ರದಾಯವಾಗಿ ಬೆಳೆಯುತ್ತಿರುವುದು ಆಶ್ಚರ್ಯವೇ ಸರಿ. ಅದರಲ್ಲೂ ಬಿಜೆಪಿ ಇದಕ್ಕೆ ಇನ್ನಷ್ಟು ಮಣೆ ಹಾಕಿ ಪೇೂಷಿಸುತ್ತಿರುವುದು ನಿಜಕ್ಕೂ ಬೇಸರದ ವಿಚಾರವೇ ಸರಿ. ಸರ್ಕಾರ ಸವಲತ್ತು ಬೇಕಾಬಿಟ್ಟಿಯಾಗಿ ಹಂಚಲು ಯಾರ ತೆರಿಗೆಯ ಹಣವನ್ನು ಬಳಸುತ್ತಿದ್ದಾರೆ ಅನ್ನುವ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಬೇಡವೇ?


ಈ ಹಿಂದೆಯೆ ಇದೇ ಸುಪ್ರೀಂ ಕೇೂರ್ಟ್‌ಗೆ ಹೇೂಗಿ ಆವಾಗ ನ್ಯಾಯಾಂಗ ನೀಡಿದ್ದ ನಿರ್ದೇಶನವೆಂದರೆ ಶಾಸಕರು/ ಸಂಸದರನ್ನು ಇನ್ನೊಂದು ಲಾಭದಾಯಕ ಹುದ್ದೆಗಳಾದ ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸಿ ಅಲ್ಲಿಯೂ ಸಂಬಳ ಇತರ ಭತ್ಯೆ ಪಡೆಯಲು ಅವಕಾಶ ನೀಡಬಾರದು ಅನ್ನುವ ತೀರ್ಪು ನೀಡಿತ್ತು. ಅದೇ ಮಾತು ನಮ್ಮ ರಾಜ್ಯಕ್ಕೆ ಅನ್ವಯಿಸುವುದಿಲ್ಲವೇ? ಇಲ್ಲಿ ಬಾರಿ ಬುದ್ಧಿವಂತಿಕೆ ತೇೂರಿಸಿ ಅಳಿಯ ಅಲ್ಲ ಮಗಳ ಗಂಡ ಅನ್ನುವ ಹಾಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಅನ್ನುವ ನಾಮಕರಣ ಮಾಡಿದ್ದಾರೆ ಅಷ್ಟೇ!


ಏನೇ ಇರಲಿ ಸಚಿವರಲ್ಲದವರಿಗೆ ಇಂತಹ ಸಂಪುಟ ದರ್ಜೆಯ ಸ್ಥಾನ ಮಾನ ನೀಡುವ ಕ್ರಮ ಕಾನೂನಾತ್ಮಕವಾಗಿಯೂ ಸರಿಯಾದ ಕ್ರಮವಲ್ಲ. ಸರಕಾರದ ಖರ್ಚಿನ ಮೇಲೆ ಕಡಿವಾಣ ಹಾಕಬೇಕೆನ್ನುವ ಸರ್ಕಾರ ಇಂತಹ ಅಸಂಸದೀಯ ಹುದ್ದೆಗಳಿಗೆ ಹಣ ವಿನಿಯೇೂಗಿಸುವುದು ಖಂಡಿತವಾಗಿಯೂ ಸರಿ ಅಲ್ಲ ಅನ್ನುವುದು ನನ್ನ ಅಭಿಪ್ರಾಯ. ನಿಮ್ಮ ಅಭಿಪ್ರಾಯವೂ ಮೂಡಿ ಬರಲಿ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top