|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಸ್ತಕ ಪರಿಚಯ: ಒಂದು ತೋಟದ ಕಥೆ

ಪುಸ್ತಕ ಪರಿಚಯ: ಒಂದು ತೋಟದ ಕಥೆ




ನಿನ್ನೆ ಮಧ್ಯಾಹ್ನ ನರೇಂದ್ರ ರೈ ದೇರ್ಲ ಅವರು ಬರೆದ ನಂದನವನ "ಒಂದು ತೋಟದ ಕಥೆ" ಪುಸ್ತಕವನ್ನು ಅಂಚೆಯ ಹುಡುಗಿ ತಂದು ಕೊಟ್ಟಿದ್ದಳು. ಓದುತ್ತಿದ್ದ ಪುಸ್ತಕವೊಂದು ಅರ್ಧದಲ್ಲಿ ಇತ್ತು. ಇನ್ನೊಂದು ಪುಸ್ತಕ ಮುಖ ಪುಟ ಮಾತ್ರ ನೋಡಿ ಮತ್ತೆ ಓದೋಣ ಎಂದು ಬದಿಗಿಟ್ಟಿದ್ದೆ. ಆದ್ದರಿಂದ ಈ ಪುಸ್ತಕವನ್ನೂ ಮುಂದೆ ಓದುವ ಪುಸ್ತಕದೊಂದಿಗೆ ಇಟ್ಟೆ.


ಇಂದು ಮಧ್ಯಾಹ್ನ ಊಟ ಮಾಡಿ ಕುಳಿತವನಿಗೆ ಪುಸ್ತಕದ ಪುಟಗಳನ್ನೊಮ್ಮೆ ತಿರುವಿ ಹಾಕೋಣ ಅನ್ನಿಸಿತು. ಪುಟಗಳನ್ನು ತಿರುವಿದಂತೆ ಆಕರ್ಷಣೀಯ ಚಿತ್ರಗಳು ಸುಂದರ ಸ್ಪುಟವಾದ ಅಕ್ಷರಗಳು ತನ್ನೊಳಗೆ ನನ್ನನ್ನು ಎಳೆದುಕೊಂಡಿತು. ಮುಂದೆ ಹೇಗೆ ಹೋಯಿತೋ ಗೊತ್ತಾಗಲಿಲ್ಲ. ಪುಸ್ತಕದ ಕೊನೆಯ ಪುಟವನ್ನು ಮುಗಿಸಿದಾಗಲೇ ತಿಳಿದುದು ಪುಸ್ತಕ ಓದಿ ಮುಗಿಸಿದ್ದೇನೆಂದು. 


ಒಬ್ಬ ಕೃಷಿಕ ಮಾಡಿದ ಸಾಧನೆಯನ್ನು ಈ ರೀತಿ ಮನಮುಟ್ಟುವಂತೆ ಬರೆದ ರೈಯ್ಯವರಿಗೇ ಇಲ್ಲಿಂದಲೇ ಧನ್ಯವಾದ ಸಲ್ಲಿಸಿದೆ.  


ಹಲವೂ ಕೃಷಿಕರ ಅಭ್ಯಾಸವನ್ನು ರೈಯವರು ಬರೆದಂತೇ ಇರುವ ಅಭ್ಯಾಸ ಇಟ್ಟು ಕೊಂಡವರಲ್ಲಿ ನಾನೂ ಒಬ್ಬ. ಎಲ್ಲೆಲ್ಲಿಂದಲೂ ತಂದ ಸಸಿಗಳು ಒಂದೋ ಯಾವುದೋ ನೀರನಳ್ಳಿಯ ಬುಡದಲ್ಲಿ ಇಲ್ಲದಿದ್ದರೆ ಯಾವುದೋ ಮರದ ತಣ್ಣನೆ ನೆರಳಲ್ಲಿ ಬಾಕಿ ಆಗುವುದೇ ಹೆಚ್ಚು. ಇನ್ನು ಕೆಲವು ಸಲ ಕಾರಿನ ಡಿಕ್ಕಿಯಲ್ಲೇ ವಾರಗಳ ಕಾಲ ಬಾಕಿ ಆದರೂ ಆಯಿತೆ.


ಅಂತಹುದರಲ್ಲಿ ಕುರಿಯಾಜೆ ತಿರುಮಲೇಶ್ವರ ಭಟ್ಟರು ಪ್ರತಿ‌ಗಿಡದ ಬಗ್ಗೆ ವಹಿಸುವ ಆಸಕ್ತಿ ನಿಜಕ್ಕೂ ಅನುಕರಣೀಯ. ನಂದನವನವನ್ನು ಅವರು ಕಟ್ಟಿದ ಅದ್ಭುತವನ್ನು ರೈಗಳು ವರ್ಣಿಸಿದ ಪರಿಯನ್ನು ಬೆರಗು ಕಣ್ಣಿನಿಂದಲೇ ಓದಿ ಸವಿದೆ. ಹಲವೂ ಜಾತಿಯ ಸಸಿಗಳು ನನ್ನಲ್ಲಿ ಇವೆ ಆದರೆ ಒಂದೂ ಫಲಕೊಡುವುದಿಲ್ಲ ಎನ್ನುವವರಿದ್ದರೆ ಅದಕ್ಕಿರುವ ಪರಿಹಾರ ಕಾಣಲು ಈ ಪುಸ್ತಕ ಓದಬೇಕು.


ಆಕರ್ಷಣೀಯ ಚಿತ್ರಗಳು ಪ್ರತೀ ಪುಟದಲ್ಲೂ ಮನಸೆಳೆಯುತ್ತಲೇ ಇತ್ತು. 


ಒಂದು ವ್ಯಕ್ತಿ‌ ಪರಿಚಯದೊಂದಿಗೆ ಅವರ ಸಾಹಸಗಾಥೆಯನ್ನು ಯಾವ ರೀತಿ ಮನಮುಟ್ಟುವಂತೆ ಬರೆಯ ಬಹುದೆಂಬುದನ್ನು ರೈಗಳು ತೋರಿಸಿ ಕೊಟ್ಟಿದ್ದಾರೆ. ಯಾವುದೋ ಒಂದು ವಿಶೇಷ ಸಸ್ಯ ಪಡೆಯಲು ಹೋದವರು ಕಂಡಾಬಟ್ಟೆ ಕ್ರಯ ಎನ್ನುವಾಗ ಆ ಸಸ್ಯವನ್ನು ಸಂಪಾದಿಸಲು ಆ ಸಸ್ಯವನ್ನು ಪುನರ್ ಸೃಷ್ಟಿಸಲು ಬಂದ ಕಷ್ಟಗಳನ್ನು ಯಾರೂ ಪರಿಗಣಿಸುವುದಿಲ್ಲ. ಕೇವಲಾ ಒಂದು ಸಸ್ಯಕ್ಕಾಗಿ ಕೇರಳದ ಒಂದು ಮೂಲೆವರೆಗೂ ಬೈಕ್, ಕಾರು ಓಡಿಸಿ ಅದನ್ನು ತಂದ ಕಷ್ಟ ಖರ್ಚುಗಳು ಅವರಿಗೇ ಗೊತ್ತು. ಲಾಭದ ಬಗ್ಗೆ ಯೋಚಿಸದೆ ಅದು ನನ್ನಲ್ಲಿ ಬೇಕು ಎನ್ನುವ ದೃಷ್ಟಿಯಲ್ಲಿ ತಂದು ಬೆಳೆಸುವವರು ಮಾತ್ರ ಇಂತಹಾ ಸಾಹಸಕ್ಕೆ ಕೈ ಹಾಕಲು ಸಾಧ್ಯ.


ಅವರ ಆದರ್ಶವನ್ನು ಮುಂದುವರಿಸಲು ಹೊರಟ ಅವರ ಮಗ ಸೊಸೆ ಇಬ್ಬರೂ ಅಭಿನಂದನಾರ್ಹರು. ಅವರ ಈ ಸಾಹಸಗಳ ಹಿಂದಿನ ಶಕ್ತಿಯಾದ ಅವರ ಪತ್ನಿಯೂ ಅಭಿನಂದನೆಗೆ ಅತ್ಯಂತ ಅರ್ಹರು ಎಂಬುದು ಪುಸ್ತಕ ಓದಿದಾಗ ತಿಳಿಯ ಬಹುದು. ಹಲವೂ ಕೃಷಿಗಳನ್ನು ತಮ್ಮ ತಮ್ಮ ಜಮೀನಿನಲ್ಲಿ ಬೆಳೆಸ ಬಯಸುವವರು ಖಂಡಿತಾ ಇಂತಹಾ "ಕೃಷಿ ನಂದನವನ" ವನ್ನು ಸಂದರ್ಶಿಸಲೇ ಬೇಕು.


ಪುಸ್ತಕದ ಮೊದಲ ಪುಟದಿಂದಲೇ ನಿಮ್ಮನ್ನು ಆಕರ್ಷಿಸುವುದು ರೈಯವರ ಸಹಜ ಶೈಲಿ. ಕಠಿಣ ಶಬ್ಧಗಳೆಲ್ಲೂ ಇಲ್ಲವೇ ಇಲ್ಲ. ಓದುಗ ತಾನೇ ಆ ಸ್ಥಳದಲ್ಲಿದ್ಧುಕೊಂಡು ಪ್ರತಿಯೊಂದನ್ನೂ ಅನುಭವಿಸುತ್ತಿದ್ದೇನೆ ಎನ್ನುವ ಭಾವನೆ ಓದಿದಾಗ ಮೂಡದೆ ಇರದು. ಕೃಷಿ ಬಗ್ಗೆ ಒಲವಿದ್ದವರು ಓದಲೇ ಬೇಕಾದ ಪುಸ್ತಕವಾದರೆ ಕೃಷಿಯಲ್ಲಿ ಹೊಸತನ್ನು ಮಾಡ ಬಯಸುವವರು ಸಂದರ್ಶಿಸಲೇ ಬೇಕಾದ ಸ್ಥಳ ಈ ನಂದನವನ.


ವರ್ಣ ಚಿತ್ರಗಳಿದ್ದರೆ ಇನ್ನೂ ಆಕರ್ಷಕವಾಗಿತ್ತೇನೋ ಎಂದೊಮ್ಮೆ ಅನ್ನಿಸಿದರೂ ಆ ವರ್ಣ ಚಿತ್ರಗಳು ಕಾಗದ ಹಾಗೂ ಅಚ್ಚಿನ ಕ್ರಯವನ್ನು ಹೆಚ್ಚಿಸಿ ಪುಸ್ತಕವನ್ನು ಪಡೆಯ ಬಯಸುವವನ ಗಿಸೆಗೆ ಸಣ್ಣ ಹೊರೆ ಹೆಚ್ಚಿಸ ಬಹುದಿತ್ತು. ಬರವಣಿಗೆಯ ಮೌಲ್ಯ ಪರಿಗಣಿಸುವವನಿಗೆ ಈ ಪುಸ್ತಕದ ಬೆಲೆ ತುಂಬಾ ಕಡಿಮೆಯಾಯಿತೇನೋ ಅನ್ನಿಸದೆ ಇರದು. ಕೊಂಡು ಓದಬಹುದಾದ ಒಂದು ಉತ್ತಮ ಪುಸ್ತಕ ಎಂಬುದರಲ್ಲಿ ಎರಡನೇ ಮಾತಿಲ್ಲ.


-ಎಡನಾಡು ಕೃಷ್ಣ ಮೋಹನ ಭಟ್ಟ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post