|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೊಸಪೇಟೆಯಲ್ಲೀಗ ಬಾಳೆಕಾಯಿಯ ಹೊಸರುಚಿಗಳದೇ ಸುದ್ದಿ

ಹೊಸಪೇಟೆಯಲ್ಲೀಗ ಬಾಳೆಕಾಯಿಯ ಹೊಸರುಚಿಗಳದೇ ಸುದ್ದಿ

 


"ನಮ್ ಬಾಳೆಕಾಯಿಯಿಂದ ಇವಿಷ್ಟೂ ತಿಂಡಿ ಮಾಡೋ ವಿಚಾರ ನಮಗ್ಯಾರಿಗೂ ಗೊತ್ತಿರ್ಲಿಲ್ಲ." ಇದು ಬಾಳೆ ಊರು ಹೊಸಪೇಟೆಯಲ್ಲಿ ಸುದ್ದಿ ಕೇಳಿದವರೆಲ್ಲರೂ ಹೇಳುವ ಮಾತು. ಕೊರೊನಾ ಕಾಲದಲ್ಲಿ ಬೆಲೆ ಕುಸಿತ, ಕೊಳ್ಳುಗರಿಲ್ಲದೆ ಹತಾಶೆ ಅನುಭವಿಸಿ ಬೆಂಡಾದ ಬೆಳೆಗಾರರ ಕುಟುಂಬಗಳಲ್ಲೀಗ ನಿರೀಕ್ಷೆಯ ತಂಗಾಳಿ. 


ಈ ಕಾರಣಕ್ಕೇ ಅಲ್ಲಿ ಈಚೆಗೆ ನಡೆದ ಎರಡು ಬಾಕಾಹು ತರಬೇತಿ ಶಿಬಿರ ಹುಟ್ಟಿಸಿರುವ ಪಾಲೋ ಅಪ್ ಚಟುವಟಿಕೆ ಹುಬ್ಬೇರಿಸುವಂಥದ್ದು. ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆಯಡಿ ಹೊಸಪೇಟೆಯ ಸ್ಮೆಕ್ ಸಂಸ್ಥೆ ಮತ್ತು ಬಳ್ಳಾರಿಯ ಕೃಷಿ ವಿಜ್ಞಾನ ಕೇಂದ್ರ (ಕೇವೀಕೆ) ಈ ಶಿಬಿರಗಳನ್ನು ಹಮ್ಮಿಕೊಂಡಿದ್ದುವು.


ಇವತ್ತಿನ ಫಲಶ್ರುತಿ ನೋಡಿ. ವಿಜಯನಗರ ಮಹಿಳಾ ಸಮಿತಿಯ ಹತ್ತು ಮಹಿಳೆಯರು ಆನೆಗುಂದಿ ಶಂಕರಕುಮಾರಿ ಅವರ ಮನೆಯಲ್ಲಿ ಸೇರಿದರು. ಇವರಲ್ಲಿ ತರಬೇತಿ ಪಡೆದವರು ಮೂವರೇ. ಇವರಲ್ಲೊಬ್ಬರಾದ ಶಂಕರಕುಮಾರಿಗೆ ಬಾಳೆ ಕೃಷಿ ಇದೆ. ಅದಕ್ಕೇ ಅವರ ಮನೆಯೇ ಇಂದಿನ ಮರುತರಬೇತಿ ಕೇಂದ್ರ!


ಸ್ಮೆಕ್ ಸಂಸ್ಥೆಯ ಸಮುದಾಯ ಸಂಘಟಕಿ ಆರ್.ಲತಾ ಹೇಳುತ್ತಾರೆ, "ಚೆನ್ನಾಗಿ ಸಂಘಟಿಸಿದ್ದಾರೆ. ನನಗೂ ಗೊತ್ತಾಗಿರಲಿಲ್ಲ ಇವತ್ತಿನ ಪ್ಲಾನ್. ಇಂದು ಬೆಳಗ್ಗೆ ಅಷ್ಟೇ ಹೇಳಿದರು."


ಮೊದಲ ತರಬೇತಿಯ ಪಡೆದ ಗುರುವಾರ, ಸೆಪ್ಟೆಂಬರ್ 16ರ ರಾತ್ರಿಯಂದೇ ಶಂಕರಕುಮಾರಿಯವರ ಪ್ರಯೋಗ ಶುರುವಾಗಿತ್ತು. ಫ್ಯಾನ್, ಬಿಸಿಲಿನಲ್ಲಿ ತುಂಡರಿಸಿದ ಬಾಳೆಕಾಯಿ ಒಣಗಿಸಿ ಭಾನುವಾರದ ಸಿರಿಧಾನ್ಯ ಮೇಳಕ್ಕೆ ಬಾಕಾಹು ಮತ್ತು ಅದರ ತಿಂಡಿಗಳನ್ನೂ ಮಾಡಿ ಒಯ್ದಿದ್ದರು! ಮಿಕ್ಕುಳಿದ ಬಾಕಾಹು ಅಲ್ಲೇ ಬಿಕರಿ!


ಬಾಳೆಕಾಯಿ ಹಣ್ಣು, ಕಾಯಿಯ ಪಲ್ಯ ಮಾತ್ರ ಗೊತ್ತಿದ್ದ ಈ ಮಂದಿಗೆ ಈಗ ಸ್ವರ್ಗ ಸಿಕ್ಕಂತಾಗಿದೆ. ಇಂದು ಎಲ್ಲರೂ ಸೇರಿ ಜತೆಗೇ ಉಟ ಕಾಫಿ ಮಾಡಿಕೊಂಡು ಬಾಳೆಕಾಯಿ ಹಪ್ಪಳ, ಬಾಕಾಹು, ಸಂಡಿಗೆ, ಬಾಕಾಶಾ (ಬಾಳೆಕಾಯಿ ಶಾವಿಗೆ ಮತ್ತದರ ಉಪ್ಪಿಟ್ಟು), ಚಕ್ಕುಲಿ- ಇವೆಲ್ಲವನ್ನೂ ಮಾಡಿದರು. ಸಂಜೆ ಕೆಲಸ ಮುಗಿಸುವ ಮೊದಲು ಬಾಕಾಶಾ ಉಪ್ಪಿಟ್ಟಿನ ಔತಣ.


"ಇವೆಲ್ಲಾ ಮಾಡಬರುತ್ತೆ ಅಂತ ಗೊತ್ತಾದ್ದು ಬಹಳ ಛಲೋ ಆಯ್ತು. ಬಾಳೆ ಬೆಳೆಗೆ ಹೆಸರಾದ ನಮ್ಮ ಆನೆಗುಂದಿಯ ರೈತರು ನೂರಾರು ಎಕ್ರೆ ಬಾಳೆ ಕಿತ್ತುಬಿಟ್ಟಿದ್ದಾರೆ. ಇನ್ನಾದರೂ ಒಳ್ಳೆ ಕಾಲ ಬಂದೀತೇನೋ" ಎನ್ನುತ್ತಾರೆ ಶಂಕರಕುಮಾರಿ ಅವರ ಪತಿ ಶೇಷಪ್ಪ.


ಶಂಕರಕುಮಾರಿ ಟೈಲರಿಂಗ್ ಕ್ಲಾಸೂ ನಡೆಸುತ್ತಾರೆ. ಮಂಗಳವಾರ ಈ ವಿದ್ಯೆ ಕಲಿತವರಿಗೆ ದೃಢೀಕರಣ ಪತ್ರ ಪ್ರದಾನ ಸಮಾರಂಭ. "ಅಂದು 30 ಮಂದಿ ಆದ್ರೂ ಸೇರ್ತಾರೆ. ಬಾಕಾಹು, ಬಾಕಾಶಾ ಎರಡರದ್ದೂ ಡೆಮೋನೇ ಮುಖ್ಯ ಆಕರ್ಷಣೆ ಸರ್. ಊರವರೆಲ್ಲಾ ಇದನ್ನು ಕಲಿತುಕೊಳ್ಳಲಿ" ಎನ್ನುತ್ತಾರೆ ಶಂಕರಕುಮಾರಿ. 


ಲತಾ ಆರ್, ಸ್ಮೆಕ್ ಸಂಸ್ಥೆಯ ಸಮುದಾಯ ಸಂಘಟಕಿ - 82774 26945 (6-7 pm)

ಶಂಕರಕುಮಾರಿ, ವಿಜಯನಗರ ಮಹಿಳಾ ಉಪಸಮಿತಿಯ ಸದಸ್ಯೆ - 96321 11037 (6-7 pm)


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post