ಹೊಸಪೇಟೆಯಲ್ಲಿ ’ಬಾಕಾಹು’ (ಬಾಳೆಕಾಯಿ ಹುಡಿ) ತಯಾರಿ ತರಬೇತಿ ನಡೆದದ್ದು ಸೆಪ್ಟೆಂಬರ್ 16ಕ್ಕೆ. ಮರುದಿನದಿಂದಲೇ ಉತ್ಪನ್ನ ತಯಾರಿಸತೊಡಗಿದ ಶಿಬಿರಾರ್ಥಿಗಳಿಗೆ ಇನ್ನೂ ಮಾಹಿತಿಪೂರ್ಣ ಶಿಬಿರ ಬೇಕೆಂದರು.
ಬಳ್ಳಾರಿ ಕೇವೀಕೆ ಸ್ಪಂದಿಸಿತು. ನಿನ್ನೆಯ ಬಾಕಾಹು ಎರಡನೆ ಹಂತದ ತರಬೇತಿಗೆ ಹೊಸ ಸಂಪನ್ಮೂಲ ವ್ಯಕ್ತಿಯೂ ಸಿಕ್ಕಿದರು. ಕಾಸರಗೋಡಿನ ಉತ್ಸಾಹಿ ಕೃಷಿ ಮಹಿಳೆ ಸುಶೀಲಾ ಎಸ್ಸೆನ್ ಭಟ್ (68) ಪಾತನಡ್ಕ- ಸುಶೀಲಕ್ಕ.
ಇವರು ಬಾಳೆಹಣ್ಣು ಹಾಗೂ ಬಾಳೆಕಾಯಿಂದ ವಿವಿಧ ಖಾದ್ಯಗಳ ಮಹಿಳಾ ಉಪಸಮಿತಿಯವರಿಗೆ ಕಲಿಸಿದರು. ಕೆವಿಕೆಯ ಮುಖ್ಯಸ್ಥ ಡಾಕ್ಟರ್ ರಮೇಶ್ ಬಿ.ಕೆ., ಡಾ. ಹೆಚ್. ಶಿಲ್ಪಾ ಮಾಹಿತಿ ಒದಗಿಸಿದರು. ಹಂಪೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಆಗಮಿಸಿ ಗೊನೆಯನ್ನು ಉಚಿತವಾಗಿ ಕೃಷ್ಣಾಪುರದ ಮಹಿಳೆಯರಿಗೆ 25 ಬಾಳೆಗೊನೆ ಕೊಟ್ಟರು.
ಬಾಳೆಕಾಯಿ ಹಪ್ಪಳ, ಚಕ್ಕುಲಿ, ಸೆಂಡಿಗೆ, ಚಕ್ಕುಲಿ. ಹಲ್ವ ಮುಂತಾದ ಏಳು ಮೌಲ್ಯವರ್ಧಿತ ಉತ್ಪನ್ನಗಳನ್ನು ಸುಶೀಲಕ್ಕ ಮಾಡಿ ತೋರಿಸಿದರು. "ಸುಶೀಲಮ್ಮ ತುಂಬ ಅನುಭವಿ. ಒಂದೇ ಹಿಟ್ಟಿನಿಂದ ಹಲವು ಬಗೆ ತಿಂಡಿ ಮಾಡಿ ತೋರಿಸಿದ್ದಾರೆ. ನಾಲ್ಕು ಗಂಟೆ ಕಾಲ ಸತತ, ಒಂದೇ ಉತ್ಸಾಹದಲ್ಲಿ ತರಬೇತಿ ಕೊಟ್ಟಿದ್ದಾರೆ" ಎಂದು ಕೇವೀಕೆಯ ಗೃಹ ವಿಜ್ಞಾನಿ ಡಾ. ಹೆಚ್.ಶಿಲ್ಪಾ ಶ್ಲಾಘಿಸಿದರೆ. "ಇವೆಲ್ಲಾ ನಾನು ಊರಲ್ಲಿ ತಯಾರಿಸಿ ಪಂಚಾಯತಿನ ಇಕೋ ಶಾಪ್ ಮೂಲಕ ಮಾರಾಟ ಮಾಡಿ ಸಫಲಳಾದ ಉತ್ಪನ್ನಗಳು. ಹೊಸಪೇಟೆಯ ಹೆಣ್ಮಕ್ಕಳು ಇದರಲ್ಲಿ ಕೆಲವನ್ನಾದರೂ ಮುಂದುವರಿಸಿದರೆ ಸಂತೋಷ, ಮುಂದುವರಿಸಿಯಾರು" ಎನ್ನುತ್ತಾರೆ ಸುಶೀಲಕ್ಕ.
ಶಿಬಿರಾರ್ಥಿಗಳೂ ಕಡಿಮೆಯಲ್ಲ. ಅವರು ಸುಶೀಲಕ್ಕನ ನಿರೀಕ್ಷೆಗೆ ಅನುಗುಣವಾಗಿಯೇ ಇದ್ದಂತಿದೆ. ಬುಕ್ಕಸಾಗರದ ಗುಂಡಮ್ಮ ನಿನ್ನೆ ರಾತ್ರಿಯೇ ಬಾಳೆಹಣ್ಣು ಹಲ್ವ ಮಾಡಿದ್ದರೆ ಶ್ವೇತಾ ಇಂದು ಮಾಡಿಬಿಟ್ಟಿದ್ದಾರೆ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ