|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಖಗೋಳ ವಿಶೇಷ: ಆಗಸದಲ್ಲಿ ಬಣ್ಣದೋಕುಳಿ, ಧ್ರುವ ಪ್ರಭೆಗಳ ತಾಂಡವ ನರ್ತನ

ಖಗೋಳ ವಿಶೇಷ: ಆಗಸದಲ್ಲಿ ಬಣ್ಣದೋಕುಳಿ, ಧ್ರುವ ಪ್ರಭೆಗಳ ತಾಂಡವ ನರ್ತನ


ಈಗ ನಮ್ಮ ಭೂಮಿಯ ಧ್ರುವ ಪ್ರದೇಶಗಳಲ್ಲಿ ಆಕಾಶ ಅತಿ ಸುಂದರ, ಧ್ರುವ ಪ್ರಭೆಗಳ ತಾಂಡವ ನರ್ತನ. ಪ್ರವಾಸಿಗಳಿಗಂತೂ ಸುಗ್ಗಿ. ಉತ್ತರ ಅಮೇರಿಕಾ, ಕೆನಡಾ, ಇಂಗ್ಲೆಂಡ್, ಯುರೋಪಿನ ಎಲ್ಲಾ ರಸಿಕರೂ ಗ್ರೀನ್ ಲ್ಯಾಂಡ್, ನಾರ್ವೆ, ಸ್ವೀಡನ್ ಕಡೆಗೆ ನುಗ್ಗುತ್ತಿದ್ದಾರೆ. ಉತ್ತರ ಧ್ರುವಪ್ರದೇಶದ ಸಮೀಪದ ಆರ್ಕಟಿಕ್ ಸರ್ಕಲ್ ನ ಪ್ರದೇಶಗಳಲ್ಲಿ ಆಕಾಶದಲ್ಲಿ ಬಣ್ಣದೋಕುಳಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಇಡೀ  ಆಕಾಶದ ಸುತ್ತಲೂ ಕುಣಿ ಕಣಿತದ ಬಣ್ಣ ಬಣ್ಣದ ಪ್ರಭೆ. ಹಸಿರು, ಕೆಂಪು, ನೀಲಿ, ಹಳದಿ ಹಾಗೂ ಸಂಮಿಶ್ರ ಬಣ್ಣಗಳ ಹೊಗೆಯೋ ಎನ್ನುವಂತಹ ಬೆಳಕಿನ ನರ್ತನ. ಇದಕ್ಕೆ ಧ್ರುವ ಪ್ರಭೆ “ಅರೋರೆ” ಎನ್ನುತ್ತಾರೆ. ದಕ್ಷಿಣ ಧ್ರುವ ಅಂಟಾರ್ಟೆಕಾದಲ್ಲೂ ಕಾಣುತ್ತದೆ.


ಇದೇನು ಈಗ ವಿಶೇಷವೆನ್ನುವಿರಾ?, ಹೌದು. ಈಗ ಇದು ಅತ್ಯದ್ಭುತವಾಗಿ ಸೃಷ್ಟಿ ಯಾಗುತ್ತಿದೆ.  ಯಾವಾಗಲೂ ಕಾಣಸಿಗುವುದಿಲ್ಲ ಇದು. ಕೆಲಕಾಲ ಇರುವುದೇ ಇಲ್ಲ. 11 ವರ್ಷಕ್ಕೊಮ್ಮೆ ಕೆಲ ಸಮಯ ಭಾರೀ ವಿಶೇಷವಾಗಿ ಕಂಡುಬರುತ್ತದೆ. ಈಗ ಕಾಣುವ ಪ್ರಭೆ ಇನ್ನೊಂದು ಆರು ತಿಂಗಳು ಈ ಸಂಭ್ರಮವಿರುತ್ತದೆ.  

ಈ ಧ್ರುವ ಪ್ರಭೆಗಳಿಗೂ ನಮ್ಮ ಸೂರ್ಯನಿಗೂ ಭಾರೀ ನಂಟು. ನಮ್ಮ ಸೂರ್ಯನೋ, ಅದೇನೇನು ವಿಸ್ಮಯಗಳನ್ನು ಸೃಷ್ಟಿಸುವನೊ?




ಅಚ್ಚ ಹೊಸ  ಬಿಸಿ ಬಿಸಿ ಸುದ್ದಿ. ಈ ತಿಂಗಳಲ್ಲೇ ನಮ್ಮ ಸೂರ್ಯ ಕೆಂಡಾಮಂಡಲವಾಗಿ ವಿಶೇಷ ಶಕ್ತಿಯನ್ನು ಉಗುಳುತ್ತಿದೆ. ಸಪ್ಟಂಬರ್ 26, 27ರಂದು ಉಗುಳಿದ ಜ್ವಾಲೆ, ಭೂ ಕಾಂತೀಯ ವಾತಾವರಣವನ್ನು ಹಾಗೂ ನಮ್ಮ ಆಧುನಿಕ ಸಂಪರ್ಕಗಳನ್ನು ಕೆಲ ನಿಮಿಷ ವ್ಯತ್ಯಾಸ ಗೊಳಿಸಲೂ ಬಹುದೆಂದು ವಿಜ್ನಾನಿಗಳು ಅಂದಾಜಿಸಿದ್ದಾರೆ. ಇವುಗಳಿಗೆ ಸೋಲಾರ್ ಸ್ಟಾರ್ಮ್ ಅಥವಾ ಕೊರೋನಲ್ ಮಾಸ್ ಇಜೆಕ್ಷನ್ 'ಸಿಎಮ್‌ಇ' ಎನ್ನುತ್ತಾರೆ. ಇದು ಸೂರ್ಯನಲ್ಲಿ ಯಾವಾಗಲೂ ನಡೆಯುವ ಪ್ರಕ್ರಿಯೆಯಾದರೂ ಈಗ ಬಹಳ ಹೆಚ್ಚಾಗುತ್ತಿದೆ. ಇದಕ್ಕೆ ಸೂರ್ಯನ ವಿಚಿತ್ರ ಅಯಸ್ಕಾಂತೀಯ ಚಲನೆಗಳು ಕಾರಣ. ಸುಮಾರು 11 ವರ್ಷಕ್ಕೊಮ್ಮೆ ಸೂರ್ಯನ ಧ್ರುವಗಳ ಅಯಸ್ಕಾಂತೀಯ ಪರಿವರ್ತನೆ ನಡೆಯುತ್ತದೆ. ಈ ಪ್ರಕಿೃಯೆ ನಡೆದ ನಂತರ ಸೂರ್ಯ ಜ್ವಾಲೆಗಳು ಹೆಚ್ಚು. ಈಗ 2021ರಲ್ಲಿ ಇದು ಸೂರ್ಯನಲ್ಲಿ ನಡೆಯುತ್ತಿದೆ. 2019ರಲ್ಲಿ ಸೂರ್ಯನ ಕಲೆಗಳು ಇಲ್ಲವೆಂಬಷ್ಟು ವಿರಳವಾಗಿತ್ತು. ಈ ವಿದ್ಯಾದಾನವನ್ನು ನಿತ್ಯದ, ವರ್ಷದ ಸೂರ್ಯನ ಕಲೆಗಳಿಂದ ತಿಳಿಯ ಬಹುದು. ಸೂರ್ಯನ ಪ್ರತಿಬಿಂಬವನ್ನು ನೋಡಿದಾಗ ಸೂರ್ಯನ ಮೈಯಲ್ಲಿ ಹೆಚ್ಚಿನ ಕಪ್ಪು ಕಲೆಗಳನ್ನು ನೋಡಬಹುದು. ಇವನ್ನು ಸೂರ್ಯನ ಕಲೆಗಳು "ಸನ್ ಸ್ಪೋಟ್ಸ್" ಎನ್ನುವರು.


ಸೂರ್ಯನ ಕಲೆಗಳು: ಸೂರ್ಯನಲ್ಲಿ 11 ವರ್ಷಕ್ಕೊಮ್ಮೆ ಅತೀ ಹೆಚ್ಚು ಕಲೆಗಳನ್ನು ಗುರುತಿಸಬಹುದು. ಇದಕ್ಕೆ ಸೂರ್ಯನ ಸನ್ ಸ್ಪೋಟ್ ಸೈಕಲ್ ಎನ್ನುವರು. ಗೆಲಿಲೀಯೊ ದೂರದರ್ಶಕದಿಂದ 1610 ರಲ್ಲಿ ಪ್ರಥಮವಾಗಿ ಗುರುತಿಸಿದನಂತರ, ನೋಡುತ್ತಲೇ ಬಂದಿದ್ದಾರೆ.


ಈ ಪ್ರಕ್ರಿಯೆಯನ್ನು ಇನ್ನೊಂದು ರೀತಿಯಲ್ಲಿ ಗಮನಿಸಬಹುದು. ಈ ಸೂರ್ಯನ ಕಲೆಗಳು ಹೆಚ್ಚಿರುವ ಸಮಯದಲ್ಲೇ ಭೂಮಿಯ ಧ್ರುವ ಪ್ರದೇಶಗಳಲ್ಲಿ ಬಣ್ಣದೋಕುಳಿ ಧ್ರುವ ಪ್ರಭೆ. ಬಹಳ ಹಿಂದಿನಿಂದ ಇದನ್ನು ಗುರುತಿಸಿದ್ದಾರೆ.


ಹಾಗಾಗಿ ಸೂರ್ಯನ ಕಾಂತೀಯ ವ್ಯತ್ಯಾಸ ಹಾಗೂ ವಿಶೇಷ ಶಕ್ತಿ ಉತ್ಸರ್ಜನದ ಕಾಲದಲ್ಲೇ ಸೂರ್ಯನ ಕಲೆಗಳು ಹಾಗೂ ದ್ರುವ ಪ್ರಭೆ ಹೆಚ್ಚು.


ಒಂದು ಪ್ರಶ್ನೆ ಮೂಡುವುದು ಸಹಜ. ಈ ಕಾಲದಲ್ಲಿ ಧ್ರುವ ಪ್ರದೇಶದಲ್ಲಿ ಮಾತ್ರ ವಿಶೇಷ ಪ್ರಭೆ ಏಕೆ, ಎಂದು. ಇದಕ್ಕೆ ಕಾರಣ ನಮ್ಮ ಭೂಮಿಯ ಸುತ್ತ ಇರುವ ಭೂ ಕಾಂತೀಯ ವಲಯಗಳು. ಇವು ಸೂರ್ಯನಿಂದ ಬರುವ ವಿಶೇಷ ಶಕ್ತಿಯ ಕಣಗಳನ್ನು ನಮ್ಮ ಸಮಭಾಜಕ ವೃತ್ತದ ಆಸುಪಾಸು ಸಂಪೂರ್ಣ ತಡೆಯಬಲ್ಲವು. ಆದರೆ ದ್ರುವಗಳಲ್ಲಿ ಅವುಗಳಿಗೆ ಸಾಧ್ಯವಾಗುವುದಿಲ್ಲ. ಅಲ್ಲಿ ಆ ಶಕ್ತಿಯುತ ಕಣಗಳು ವಾತಾವರಣದ ಒಳ ನುಗ್ಗಿ ಅಲ್ಲಿರುವ ಅಣು, ಪರಮಾಣುಗಳೊಂದಿಗೆ ಘರ್ಷಿಸಿ ಬೆಳಕನ್ನು ಬಿಡುಗಡೆ ಮಾಡುತ್ತವೆ. ಅದೇ ಧ್ರುವ ಪ್ರಭೆ. 


-ಡಾ ಎ ಪಿ ಭಟ್, ಉಡುಪಿ

(ಲೇಖಕರು ನಿವೃತ್ತ ಪ್ರಾಧ್ಯಾಪಕರು ಹಾಗೂ ಉಡುಪಿಯ ಪೂರ್ಣ ಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಸ್ಥಾಪಕರು.)


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post