|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಶ್ವ ಹೃದಯ ದಿನ- ಸೆಪ್ಟೆಂಬರ್ 29: ಇರುವುದೊಂದೇ ಹೃದಯ ಜೋಪಾನ

ವಿಶ್ವ ಹೃದಯ ದಿನ- ಸೆಪ್ಟೆಂಬರ್ 29: ಇರುವುದೊಂದೇ ಹೃದಯ ಜೋಪಾನ


 

ಜಗತ್ತಿನಾದ್ಯಂತ ಸೆಪ್ಟಂಬರ್ 29ರಂದು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತಿದೆ. ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, 2000ನೇ ಇಸವಿಯಲ್ಲಿ ಆರಂಭವಾದ ಈ ಆಚರಣೆಯನ್ನು ಪ್ರತಿ ವರ್ಷ ಸೆಪ್ಟಂಬರ್ 29ರಂದು ಬೇರೆ ಬೇರೆ ತಿರುಳನ್ನು (Theme) ಇಟ್ಟುಕೊಂಡು ಆಚರಿಸಲಾಗುತ್ತಿದೆ. 2011 ರವರೆಗೆ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು. 2012 ರಿಂದ ಖಾಯಂ ಆಗಿ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ. 2021ರ ಆಚರಣೆಯ ತಿರುಳು “ಕನೆಕ್ಟ್ ದಿ ಹಾರ್ಟ್” ಅಂದರೆ “ಹೃದಯವನ್ನು ಜೋಡಿಸಿ” ಎಂಬುದಾಗಿದೆ.


ಪ್ರತಿ ವರ್ಷ ಜಗತ್ತಿನಾದ್ಯಂತ ಕನಿಷ್ಠವೆಂದರೂ 18.6 ಮಿಲಿಯನ್ ಜನರು ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳಿಂದ ಸಾಯುತ್ತಾರೆ. ಕ್ಯಾನ್ಸರ್, ಏಡ್ಸ್, ಮಲೇರಿಯಾ ಈ ಮೂರು ರೋಗಗಳನ್ನು ಒಟ್ಟು ಸೇರಿಸಿದರೆ ಆಗುವ ವರ್ಷಾವಧಿ ಮರಣದ ಸಂಖ್ಯೆಗಿಂತಲೂ ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ಮರಣ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಭೀತಾಗಿದೆ. ಇದೀಗ ಮಾರಣಾಂತಿಕ ಕಾಯಿಲೆಯ ಪಟ್ಟಿಯ ಮೊದಲ ಸ್ಥಾನದಲ್ಲಿ ಹೃದಯ ಸಂಬಂಧಿ ರೋಗ ವಿರಾಜಮಾನವಾಗಿದೆ. ಈ ಹೃದಯ ಸಂಬಂಧಿ ರೋಗಗಳಲ್ಲಿ ಸುಮಾರು 80 ಶೇಕಡಾ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಉತ್ತಮ ವ್ಯಾಯಾಮ, ತಂಬಾಕು ಮತ್ತು ಮಧ್ಯಪಾನ ಸೇವನೆಯನ್ನು ತ್ಯಜಿಸುವುದು, ಉತ್ತಮ ಆಹಾರ ಪದ್ಧತಿ ಹಾಗೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಲ್ಲಿ, ಹೃದಯಾಘಾತದ ಅನುಪಾತನನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು.


2000ನೇ ಇಸವಿಯಲ್ಲಿ ದೈಹಿಕ ಚಟುವಟಿಕೆ (Physical Activity) ಎಂಬ ತಿರುಳನ್ನು ಇಟ್ಟುಕೊಂಡು ಆರಂಭವಾದ ಈ ಆಚರಣೆ ಪ್ರತಿ ವರ್ಷ ಬೇರೆ ಬೇರೆ ತಿರುಳನ್ನು ಇಟ್ಟುಕೊಂಡು ಜನರಲ್ಲಿ ಆಹಾರ ಪದ್ಧತಿ, ಜೀವನ ಶೈಲಿ ಮತ್ತು ಹೃದಯ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೂ ವೈಜ್ಞಾನಿಕತೆ, ವೈಚಾರಿಕತೆ ಮತ್ತು ಆಧುನಿಕತೆ ಬೆಳೆದಂತೆಲ್ಲಾ ಜನರು ಹೆಚ್ಚು ಆಲಸಿಗಳಾಗಿ ದೈಹಿಕ ಕಸರತ್ತನ್ನು ಕಡಿಮೆಯಾಗಿ ಮಾನಸಿಕ ಒತ್ತಡ ಜಾಸ್ತಿಯಾಗಿ ಹೊಸಹೊಸ ರೋಗಗಳು ಹುಟ್ಟತೊಡಗಿದೆ ಮತ್ತು ಬೆಳವಣಿಗೆ ಹೊಂದಿದ ರಾಷ್ಟ್ರಗಳಲ್ಲಿ ಹೃದಯಾಘಾತ ಮುಂತಾದ ಹೃದಯ ಸಂಬಂಧಿ ರೋಗಗಳು ಬಹುಮುಖ್ಯ ರೋಗವಾಗಿ ಹೊರಹೊಮ್ಮಿದೆ. ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ದೇಶಗಳಲ್ಲಿಯೂ ಹೃದಯಾಘಾತ ಮುಂತಾದ ರೋಗಗಳು ಬದಲಾಗುತ್ತಿರುವ ಜೀವನ ಪದ್ಧತಿ, ನಗರೀಕರಣ ಮತ್ತು ಕಲುಷಿತ ವಾತಾವರಣದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅಂಕಿ ಅಂಶಗಳ ಪ್ರಕಾರ 2020ರ ಹೊತ್ತಿಗೆ ವಿಶ್ವದ ಹೃದಯ ರೋಗಿಗಳ ಸಂಖ್ಯೆಯ ಮೂರನೇ ಒಂದಂಶದಷ್ಟು ಬೃಹತ್ ಕಾಣಿಕೆ ಭಾರತವೊಂದರಿಂದಲೇ ಸಿಗುತ್ತದೆ ಎಂದು ಅಂದಾಜಿಸಲಾಗಿದೆ.


ಮೊದಲೇ ಬಡತನ, ಅನಕ್ಷರತೆ ಮೂಡನಂಬಿಕೆಗಳ ಬೀಡಾಗಿರುವ ಭಾರತ ದೇಶಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನೀಕರಣ, ವ್ಯಾಪಾರೀಕರಣ, ಕೈಗಾರೀಕರಣ ಮತ್ತು ಕಲುಷಿತ ವಾತಾವರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಬಹು ದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಲ್ಲಿ ಅಶ್ಚರ್ಯವೇನಿಲ್ಲ. ಭಾರತ ದೇಶವೊಂದರಲ್ಲಿಯೇ 30 ಲಕ್ಷ ಮಂದಿ ವಾರ್ಷಿಕವಾಗಿ ಹೃದಯಘಾತಕ್ಕೆ ತುತ್ತಾಗುತ್ತಾರೆ. ಇದರಲ್ಲಿ 15 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ ಇದರಲ್ಲಿ 15 ಶೇಕಡಾ ಮಂದಿ ಆಸ್ಪತ್ರೆ ತಲುಪುವ ಮೊದಲೇ ಜೀವ ಕಳೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನವರು 30 ಮತ್ತು 40ರ ಹರೆಯದವರು ಆಗಿರುವುದು ವಿಷಾದನೀಯ ವಿಚಾರ. ಆದರೆ ಸಮಾಧಾನಕರ ವಿಚಾರವೆಂದರೆ ಇದರಲ್ಲಿ 80 ಶೇಕಡಾ ಹೃದಯಘಾತವನ್ನು ಸಂಪೂರ್ಣವಾಗಿ ತಡೆದುಕೊಳ್ಳಲು ಸಾಧ್ಯವಿದೆ.




ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ?

ಹೆಚ್ಚಿನ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ತಡೆಗಟ್ಟಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.


1. ದೈಹಿಕ ವ್ಯಾಯಾಮ: ದೈಹಿಕ ವ್ಯಾಯಾಮ ಅಥವಾ ಕಸರತ್ತು ಹೃದಯದ ಆರೋಗ್ಯಕ್ಕೆ ಅತೀ ಅವಶ್ಯಕ ಕನಿಷ್ಠ ಪಕ್ಷ ದಿನಕ್ಕೆ 30 ನಿಮಿಷಗಳ ಬಿರುಸು ನಡಿಗೆ ಮಾಡಲೇ ಬೇಕು. ಹೀಗೆ ಮಾಡಿದಲ್ಲಿ ಹೃದಯಾಘಾತವನ್ನು ಶೇಕಡಾ 60ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿವೆ. ಈಗಿನ ಒತ್ತಡದ ಧಾವಂತದ ಬದುಕಿನಲ್ಲಿ ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಅತಿಯಾದ ಕೆಲಸದ ಒತ್ತಡ, ತೀವ್ರ ತರವಾದ ಪೈಪೋಟಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದ ರಸದೂತಗಳ ಸ್ರವಿಕೆ ಏರುಪೇರಾಗಿ ಹೃದಯದ ಆರೋಗ್ಯದ ಮೇಲೆ ವ್ಯಕ್ತಿರಕ್ತ ಪರಿಣಾಮ ಬೀರುತ್ತದೆ. ಅತಿಯಾದ ಮಾನಸಿಕ ಒತ್ತಡ ಕೂಡಾ ಹೃದಯಾಘಾತಕ್ಕೆ ಪರೋಕ್ಷವಾಗಿ ಕಾರಣವಾಗಬಲ್ಲದು.


2. ಅನಾರೋಗ್ಯಕರವಾದ ಆಹಾರ ಪದ್ಧತಿ: ನಮ್ಮ ಹಿರಿಯರು ಯಾವಾಗಲೂ ಹೇಳುವ ಮಾತು “ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬುದು ಅಕ್ಷರಶಃ ಸತ್ಯ. ನಮ್ಮ ಆಹಾರಕ್ಕೂ ಹೃದಯಕ್ಕೂ ನೇರ ಸಂಬಂಧವಿದೆ. ಅತಿಯಾದ ಕೊಬ್ಬಿನಂಶ ಇರುವ ಅತಿಯಾದ ಸೋಡಿಯಂ ಇರುವ ಕರಿದ ತಿಂಡಿಗಳು ಮತ್ತು ಸಿದ್ಧ ಆಹಾರವನ್ನು ತೆಗೆದುಕೊಳ್ಳಬಾರದು. ಹಸಿ ತರಕಾರಿಗಳು ಮತ್ತು ಹಣ್ಣು ಹಂಪಲುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಸಿದ್ಧ ಆಹಾರಗಳು ಮತ್ತು ಪರಿಷ್ಕರಿಸಿದ ಆಹಾರಗಳಿಗೆ ಹೆಚ್ಚಾಗಿ ಹೆಚ್ಚು ಪ್ರಕ್ಟೋಸ್ ಇರುವ ಸಿಹಿಕಾರಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂತಹ ಆಹಾರ ಪದಾರ್ಥಗಳು ರಕ್ತದಲ್ಲಿನ ಟೈಗ್ಲಿಸರೈಡ್ ಎಂಬ ಕೊಬ್ಬಿನ ಅಂಶವನ್ನು ಹೆಚ್ಚು ಮಾಡಿ ಹೃದಯಾಘಾತದ ಸಂಭವವನ್ನು ಹೆಚ್ಚು ಮಾಡಬಹುದು. ಆಮ್ಲಯುಕ್ತ ಪೇಯಗಳು ಮತ್ತು ರಾಸಾಯನಿಕ ಮಿಶ್ರಿತ ಸಿದ್ಧ ಆಹಾರಗಳೂ ಕೂಡಾ ಹೃದಯದ ಆರೋಗ್ಯಕ್ಕೆ ಮಾರಕವಾಗಬಲ್ಲದು.


3. ಜೀವನ ಶೈಲಿಯ ಬದಲಾವಣೆ: ನಾವು ಕೆಲಸ ಮಾಡುವ  ಸ್ಥಳಗಳಲ್ಲಿ ಮಾನಸಿಕ ಒತ್ತಡದ ವಾತಾವರಣವಿದ್ದಲ್ಲಿ ಹೃದಯದ ಮೇಲೆ ದುಷ್ಪರಿಣಾಮ ಬೀರಬಹುದು. ಕೆಲಸದ ಒತ್ತಡದಿಂದ ನಿದ್ದೆ ಕಡಿಮೆಯಾದಲ್ಲಿ ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಮತ್ತು ಇತರ ಲವಣಗಳು ಶೇಖರಣೆಗೊಂಡು ಹೃದಯಾಘಾತವಾಗುವ ಸಂಭವ ಜಾಸ್ತಿ ಇರುತ್ತದೆ. ಅದೇ ರೀತಿ ಮಾನಸಿಕ ಒತ್ತಡದಿಂದ ರಸದೂತಗಳ ಏರುಪೇರು ಉಂಟಾಗಿ ಹೃದಯಕ್ಕೆ ಮಾರಕವಾಗಬಹುದು. ಅಮೇರಿಕಾದ ಹೃದಯ ಸಂಘದ ಅಂಕಿಅಂಶಗಳ ಪ್ರಕಾರ ದಿನದಲ್ಲಿ 2 ಗಂಟೆಗಳಿಗಿಂತಲೂ ಜಾಸ್ತಿ ಹೊತ್ತು ಟಿವಿ ನೋಡುಗರಲ್ಲಿ 125 ಶೇಕಡಾ ಹೆಚ್ಚು ಹೃದಯಾಘಾತವಾಗುವ ಸಂಭವÀವಿರುತ್ತದೆ. ಅತಿಯಾದ ಮಧ್ಯಪಾನ, ಧೂಮಪಾನ ಖಂಡಿತವಾಗಿಯೂ ಹೃದಯ ರೋಗಗಳಿಗೆ ನೇರ ರಹದಾರಿ ನೀಡಬಹುದು. ಧೂಮಪಾನ ಮಧ್ಯಪಾನ ಬರೀ ಹೃದಯಕ್ಕೆ ಮಾತ್ರವಲ್ಲ, ದೇಹದ ಎಲ್ಲಾ ಅಂಗಾಂಗಗಳಿಗೆ ಮತ್ತು ಸಮಾಜದ ಒಳಿತಿಗೆ ಯಾವತ್ತೂ ಪೂರಕವಲ್ಲ.


4. ಬೊಜ್ಜು, ಅನುವಂಶಿಯತೆ ಮತ್ತಿತರ ಕಾರಣಗಳು: ಅತಿಯಾದ ಬೊಜ್ಜು ಯಾವತ್ತೂ ಹೃದಯದ ಬದ್ಧವೈರಿ. ಇದು ಯಾವ ಕಾಲಕ್ಕೂ ಹೃದಯಾಘಾತಕ್ಕೆ ಮುನ್ನುಡಿ ಬರೆಯಬಹುದು. ಈಗಿನ ಬದಲಾದ ಆಹಾರ ಪದ್ಧತಿಯಿಂದಾಗಿ, ಚಿಕ್ಕ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗಿ ಕೇವಲ ಮೂವತ್ತರ ಆಸು ಪಾಸಿನಲ್ಲಿಯೇ ಹೃದಯಾಘಾತ ವಾಗುವ ಆತಂಕಕಾರಿ ಬೆಳವಣಿಗೆ ಕಂಡು ಬರುತ್ತದೆ. ಮೊದಲೆಲ್ಲಾ 50, 60ರ ಆಸುಪಾಸಿನಲ್ಲಿ ಆಗುತ್ತಿದ್ದ ಹೃದಯಾಘಾತ ಈಗೀಗ ಮೂವತ್ತರ ಯುವಕರಲ್ಲಿ ಬರುವುದು ನಿಜಕ್ಕೂ ಬಹಳ ಆಘಾತÀಕಾರಿ ವಿಚಾರ ಅದೇ ರೀತಿ ಅನುವಂಶೀಯತೆ ಕೂಡ ಹೃದ್ರೋಗಕ್ಕೆ ಕಾರಣವಾಗಬಹುದು. ವಂಶವಾಹಿನಿಗಳ ಮುಖಾಂತರ ಬರುವ ಹೃದಯಘಾತಕ್ಕೆ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಹೆಚ್ಚಿನ ಮಾರ್ಪಾಡು ಮಾಡಿ ಹೃದಯಕ್ಕೆ ಹೆಚ್ಚು ತೊಂದರೆ ಆಗದಂತೆ ನಿಗಾ ವಹಿಸಬೇಕು. ಅದೇರೀತಿ ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ರೋಗಿಗಳು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವವರು ಮತ್ತು ದೇಹದ ತೂಕ ಜಾಸ್ತಿ ಇರುವವರು, ಸಾಕಷ್ಟು ಮುಂಜಾಗರೂಕತೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮಾರ್ಪಾಡು ಮಾಡಿದಲ್ಲಿ ಹೃದ್ರೋಗ ಸಂಬಂಧಿ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಈ ಕಾರಣಕ್ಕಾಗಿಯೇ ಬಲ್ಲವರು ಹೇಳುತ್ತಾರೆ Obesity does not runs in the family but nobody runs in the family”


5. ನಿಯಮಿತವಾಗಿ ಕುಟುಂಬ ವೈದ್ಯರ ಭೇಟಿ: ಹೃದಯ ರೋಗಕ್ಕೆ ಪೂರಕವಾದ ವಾತಾವರಣವುಳ್ಳ ವ್ಯಕ್ತಿಗಳು ಅಂದರೆ ಹೆಚ್ಚಿನ ಬೊಜ್ಜು ಅಧಿಕ ದೇಹದ ಭಾರ, ಅಧಿಕ ರಕ್ತದೊತ್ತಡ ಮಧುಮೇಹ ರೋಗಿಗಳು ಮತ್ತು ಅನುವಂಶೀಯವಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಸಾಧ್ಯತೆ ಇರುವವರು ಜೀವನ ಶೈಲಿ ಮತ್ತು ಆಹಾರದ ಮಾರ್ಪಾಡುವಿನ ಜೊತೆಗೆ ನಿಯಮಿತವಾಗಿ ವೈದ್ಯರಿಂದ ಪರೀಕ್ಷೆಗೊಳಗಾಗಿರಬೇಕು ಮತ್ತು ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ಪರಿಹಾರ ಮತ್ತು ಮಾರ್ಗದರ್ಶನ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಿ ಹೃದಯಾಘಾತವನ್ನು ತಡೆಗಟ್ಟಬಹುದು. ನೆನಪಿರಲಿ ಶೇಕಡಾ 80ರಷ್ಟು ಹೃದಯಾಘಾತಗಳನ್ನು ಖಂಡಿತವಾಗಿಯೂ ತಡೆಗಟ್ಟಬಹುದು ಎಂದು ಸಂಶೋಧನೆಗಳು ಸಾರಿ ಹೇಳಿವೆ.


ಕೊನೆ ಮಾತು:

ಹೃದಯಾಘಾತ ಎನ್ನುವುದು ಬಹಳ ಶಕ್ತಿಶಾಲಿಯಾದ ರೋಗ ಮತ್ತು ಇದಕ್ಕೆ ಕೊಲ್ಲುವ ಶಕ್ತಿ ಬಹಳ ಅಧಿಕವಾಗಿರುತ್ತದೆ. ಒಂದು ವೇಳೆ ಬದುಕಿ ಉಳಿದರೂ ಮಾನಸಿಕ ಸಾಮಥ್ರ್ಯವನ್ನು ಕುಗ್ಗಿಸುತ್ತದೆ. ದುಬಾರಿ ಶಸ್ತ್ರ ಚಿಕಿತ್ಸೆ ಮಾಡಿದರೂ, ಮಾನಸಿಕವಾಗಿ ಉಡುಗಿ ಹೋಗಿ ಮೊದಲಿನಂತೆ ಪರಿಣಾಮಕಾರಿಯಾಗಿ ಕೆಲಸಮಾಡಲು ಹೆಚ್ಚು ಸಮಯ ತೆಗೆದು ಕೊಳ್ಳಬಹುದು. ಒಟ್ಟಿನಲ್ಲಿ ಕುಟುಂಬದ ಆರ್ಥಿಕತೆಗೆ ಕೊಡಲಿ ಏಟು ನೀಡಿ, ಮಾನಸಿಕವಾಗಿ ಕುಗ್ಗಿಸಿ, ದುಡಿವ ವಯಸ್ಸಿನ ಕುಟುಂಬದ ಆಧಾರ ಸ್ತಂಭವಾದ ಮನೆಯ ಯಜಮಾನ ಹೃದಯಾಘಾತದಿಂದ ಮೃತಪಟ್ಟರೆ, ಇಡೀ ಕುಟುಂಬವೇ ತಲ್ಲಣಿಸಿ ಹೋಗುತ್ತಿದೆ.


ಈ ಕಾರಣದಿಂದಲೇ ಸಕಾಲದಲ್ಲಿ ನಾವೆಲ್ಲಾ ಎಚ್ಚೆತ್ತುಕೊಂಡು ಜಾಗೃತರಾಗಿ ಸೂಕ್ತ ಜೀವನಶೈಲಿ, ಆರೋಗ್ಯಕರ ಆಹಾರ ಪದ್ಧತಿ ಅಗತ್ಯ ವ್ಯಾಯಾಮ ಮುಂತಾದವುಗಳಿಂದ ಮಾನಸಿಕ ನೆಮ್ಮದಿ ಪಡೆದು, ತಂಬಾಕು ಹಾಗೂ ಮಧ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿದ್ದಲ್ಲಿ, ಹೃದಯಾಘಾತ ಎಂಬ ಪೆಡಂಬೂತವನ್ನು ಹೊಸಕಿ ಹಾಕುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಆರೋಗ್ಯ ಪೂರ್ಣವಾದ ದೈಹಿಕ ಮತ್ತು ಮಾನಸಿಕ ಜೀವನ ಶೈಲಿಯೇ ಹೃದಯಾಘಾತ ಎಂಬ ರೋಗವನ್ನು ಎದುರಿಸಿ ಗೆಲ್ಲಬಲ್ಲ ಬಹುದೊಡ್ಡ ಬ್ರಹ್ಮಾಸ್ತ್ರ ಎಂದರೂ ತಪ್ಪಲ್ಲ.


ನೆನಪಿರಲಿ, ನೀವು ಆಹಾರ ಸೇವಿಸುವಾಗ ಔಷಧಿಯಂತೆ ಸೇವಿಸಿ. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರವಾಗಿ ಸೇವಿಸಬೇಕಾದ ಅನಿವಾರ್ಯತೆ ಬರಲೂಬಹುದು. ಜೋಕೆ!!


- ಡಾ|| ಮುರಲೀ ಮೋಹನ್ ಚೂಂತಾರು 

BDS, MDS,DNB,MOSRCSEd(U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ : 09845135787

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post