ಮಂಗಳೂರು: ಸಂಶೋಧನೆ ಉದ್ಯೋಗದಲ್ಲಿ ನಮ್ಮ ಬೆನ್ನೆಲುಬಾಗುವ ಜೊತೆಗೆ ನಮ್ಮ ಸಮಾಜದ ತಿಳುವಳಿಕೆಯನ್ನು ಹೆಚ್ಚಿಸುವ, ಸಾಧನೆಯ ಸಂತೋಷ ನೀಡುವ ಪ್ರಕ್ರಿಯೆ, ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆವಿ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿಭಾಗಗಳು, ಎನ್ಎಸ್ಎಸ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಾಮಾಜಿಕ ವಿಜ್ಞಾನದಲ್ಲಿ ಸಂಶೋಧನೆ: ಸಮಸ್ಯೆಗಳು ಮತ್ತು ಕಾಳಜಿಗಳು’ ಎಂಬ ವೆಬಿನಾರ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಸಂಶೋಧನೆಯೆಂದರೆ ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ, ಸರಿಯಾದ ದಿಕ್ಕಿನಲ್ಲಿ ಸತ್ಯದ ಹುಡುಕಾಟ, ಎಂದರು.
“ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿಯಲ್ಲಿ ನಾಲ್ಕು ವರ್ಷದ ಪದವಿಯನ್ನು ಜಾರಿಗೆ ತರುವ ಮೂಲಕ ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ದುಡ್ಡು ಕೊಟ್ಟರೆ ಪಿಹೆಚ್ಡಿ ಸಿಗುತ್ತದೆ ಎನ್ನುವವರಿದ್ದಾರೆ. ಆದರೆ ವಿದ್ಯಾರ್ಥಿಗಳು ಈ ಋಣಾತ್ಮಕತೆಗೆ ಬೆಲೆಕೊಡದೆ, ವಿಷಯ ಜ್ಞಾನಕ್ಕಾಗಿ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು,” ಎಂದರು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಸಂಶೋಧನೆಯ ಬಗ್ಗೆ ತಿಳಿದುಕೊಳ್ಳಬೇಕು, ಆಸಕ್ತಿ ಬೆಳೆಸಿಕೊಳ್ಳಬೇಕು ಎಂಬ ಆಶಯ ನೆರವೇರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅಡಿಗಲ್ಲಾಗಿದೆ, ಎಂದರು.
ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಡಾ ಶಾನಿ ಕೆ ಆರ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಗುರುಪ್ರಸಾದ್ ಟಿಎನ್ ಕಾರ್ಯಕ್ರಮ ನಿರೂಪಿಸಿದರೆ, ಡಾ. ಸೌಮ್ಯ ಕೆ ಬಿ ಧನ್ಯವಾದ ಸಮರ್ಪಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಲತಾ ಪಂಡಿತ್, ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಗಾಯತ್ರಿ ಎನ್ ಮತ್ತು ಡಾ. ಸುರೇಶ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ