|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಧ್ಯಾಪಕನಾಗಬೇಕಾದರೆ ಅರ್ಹತೆ ಸಾಕು; ಗುರುವೆನಿಸಬೇಕಾದರೆ ಯೋಗ್ಯತೆ ಬೇಕು

ಅಧ್ಯಾಪಕನಾಗಬೇಕಾದರೆ ಅರ್ಹತೆ ಸಾಕು; ಗುರುವೆನಿಸಬೇಕಾದರೆ ಯೋಗ್ಯತೆ ಬೇಕು


ಇಂದು ಶಿಕ್ಷಕರ ದಿನ.

******

ನಮ್ಮ ಬಗ್ಗೆ ಯೋಚಿಸಲು ನಮಗೆ ಸಹಾಯ ಮಾಡುವವರೇ ನಿಜವಾದ ಗುರು. ಇದು ಸರ್ವಪಲ್ಲಿಯವರ ಮಾತು. ಈ ಮಾತಿನ ಅರ್ಥ ವಿಶಾಲವಾದುದು. ಬಿ.ಎಡ್ ಅಥವಾ ಎಂ.ಎಡ್ ಮಾಡಿದ ವಿದ್ಯಾರ್ಥಿಗಳಿಗೆ ಈ ಮಾತಿನ ಸೂಕ್ಷ್ಮತೆಗಳನ್ನು ಅರ್ಥಮಾಡಲು ಸುಲಭ ಸಾಧ್ಯ.


ಪ್ರಾಧ್ಯಾಪಕ, ಶಿಕ್ಷಣ ತಜ್ಞ, ತತ್ವಜ್ಞಾನಿ, ಭಾರತದ ರಾಷ್ಟ್ರಪತಿಯಾಗಿ ಮೆರೆದ, ಭಾರತ ರತ್ನ ಗೌರವವನ್ನೂ ಪಡೆದ ಡಾ.ಸರ್ವಪಲ್ಲಿಯವರ ಜನುಮದಿನ ಇಂದು.


"ನನಗೆ ಸಿಗುವ ಗೌರವಧನವು ತನ್ನ ಖರ್ಚುವೆಚ್ಚಕ್ಕಿಂತ ಹೆಚ್ಚಿದೆ; ಅದರ ಅಗತ್ಯವಿಲ್ಲ" ಎಂದು ಅದರ ಬಹುಭಾಗವನ್ನು ಸರಕಾರಕ್ಕೆ ಪುನಃ ಸಲ್ಲಿಸಿದ ಡಾ.ರಾಧಾಕೃಷ್ಣ ಅವರ ಜನುಮದಿನವನ್ನು ಶಿಕ್ಷಕರ ದಿನವೆಂದು ಆಚರಿಸುವಾಗ ನಾವು ತಿಳಿದಿರಬೇಕಾದ ವಿಷಯ ಇದು.


ತರಗತಿ ಕೋಣೆಗೆ ಮಾತ್ರ ಸೀಮಿತರಾಗಿ, ಸಿಲಬಸ್ ನಲ್ಲಿರುವುದನ್ನು ಮಾತ್ರ ಕಲಿಸಿ ವಿದ್ಯಾರ್ಥಿಯನ್ನು ಶೈಕ್ಷಣಿಕ ಪರೀಕ್ಷೆಗೆ ಸಿದ್ಧಗೊಳಿಸುವವರೆಲ್ಲರೂ ಅಧ್ಯಾಪಕರೆಸಿಕೊಳ್ಳುತ್ತಾರೆ. ಇದು ಪ್ರತಿ ಅಧ್ಯಾಪಕನಾದವನ ಕರ್ತವ್ಯದ ಭಾಗ. ಇದಕ್ಕೆ ವೇತನ ಇದೆ; ಇದಕ್ಕೆ ಭಡ್ತಿಯ ಸೌಕರ್ಯ ಇದೆ; ಇದಕ್ಕೂ ಸಾಮಾಜಿಕ ಗೌರವಗಳಿವೆ. ಹೀಗೆ ಸಂಭಾವನೆ, ಅನುಕೂಲತೆ ಪಡೆಯುವ ಕೆಲಸಕ್ಕೆಲ್ಲ ಅರ್ಹತೆ ಸಾಕು. 


ಆದರೆ ಪ್ರತಿ ವಿದ್ಯಾರ್ಥಿಯ ಸುಪ್ತಪ್ರತಿಭೆಯನ್ನು ಅರಿತು, ವಿದ್ಯಾರ್ಥಿಯ ನೈಜ ಕೌಶಲ್ಯ ತಿಳಿದು, ಆತನ ಬವಣೆ, ಇತಿಮಿತಿ ಅರಿತು ಆತನನ್ನು ಮುನ್ನಡೆಸುವ, ತರಗತಿ ಕೋಣೆಯಲ್ಲೂ ಪಠ್ಯಕ್ರಮ ಬೋಧನೆಯಲ್ಲೂ ಸಮರ್ಥನೆನಿಸಿ, ವಿದ್ಯಾರ್ಥಿಯ ಜಾತಿ, ಮತ, ಪಂಥ, ಪಕ್ಷ ನೋಡದೆ, ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಕಾಲ ಶ್ರಮಿಸುವ, ವಿದ್ಯಾರ್ಥಿಯನ್ನು ಎಲ್ಲಾ ರೀತಿಯಲ್ಲೂ ಮುನ್ನಡೆಸುವವ, ತನ್ನ ಸ್ವಂತ ಶಕ್ತಿ ಸಾಮರ್ಥ್ಯದಲ್ಲಿ ನಂಬಿಕೆ ಇರುವವ ಮತ್ತು ವಿದ್ಯಾರ್ಥಿಗೆ ಬದುಕಿನ ಪಾಠವನ್ನು ಬೋಧಿಸಿ, ಆ ದಿಶೆಯಲ್ಲಿ ಆತನ ಬದುಕಿನ ಸೂಕ್ತವಾದ ಆಯ್ಕೆಯ ಸರಿಯಾದ ದಾರಿಯನ್ನು ತೋರಿಸಿಕೊಡುವವ ಗುರು ಎನಿಸುತ್ತಾನೆ.  


ಅಧ್ಯಾಪಕನಿಗೆ ತನ್ನ ವಿದ್ಯಾರ್ಥಿಗಳು  ಉತ್ತಮದರ್ಜೆಯಲ್ಲಿ ಶೈಕ್ಷಣಿಕ ಪರೀಕ್ಷೆಯಲ್ಲಿ ಗೆಲುವು ಪಡೆಯುವುದು ಮುಖ್ಯವಾಗಿರುತ್ತದೆ; ಆದರೆ ಗುರುವಿಗೆ ತನ್ನ ವಿದ್ಯಾರ್ಥಿಗಳು ಜೀವನವೆಂಬ ಪರೀಕ್ಷೆಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರಾಗಬೇಕೆಂಬ ತುಡಿತ ಮುಖ್ಯವಾಗಿರುತ್ತದೆ.


ಅಧ್ಯಾಪಕ ಓದುತ್ತಾನೆ; ಬರೆಯುತ್ತಾನೆ; ಬೋಧಿಸುತ್ತಾನೆ, ಉಪನ್ಯಾಸ ನೀಡುತ್ತಾನೆ. 

ಆದರೆ ಗುರು ಅಧ್ಯಯನ ನಿರತನಾಗಿರುತ್ತಾನೆ, ಬರೆಯುವ ಮೊದಲು ಅನ್ವಯ ಮಾಡಿರುತ್ತಾನೆ, ಬೋಧಿಸುವ ಮೊದಲು ಬೋಧಿಸಬೇಕಾಗಿರುವುದನ್ನು ತನ್ನಲ್ಲಿ ಅಳವಡಿಸಿರುತ್ತಾನೆ; ಉಪನ್ಯಾಸದ ಮೊದಲು ಸಾಮಾಜಿಕ ತಲಸ್ಪರ್ಶಿ ಅನುಭವಗಳನ್ನು ಹೊಂದಿರುತ್ತಾನೆ. 


ಗುರುವಿಗೆ ತನ್ನ ಸ್ವಂತ ಮಕ್ಕಳ ಅದೇ ಕಾಳಜಿ ತನ್ನ ವಿದ್ಯಾರ್ಥಿಗಳ ಮೇಲೂ ಇರುತ್ತದೆ. ಅಧ್ಯಾಪಕನಿಗೆ ಇದು ಇರಲೇಬೇಕೆಂದಿಲ್ಲ.  


ಅಧ್ಯಾಪಕ ತನ್ನ ಭಾಷೆ, ಸಂಸ್ಕೃತಿ, ದೇಶವನ್ನು ಪ್ರೀತಿಸುವ, ಗೌರವಿಸುವ ಪರಿಯನ್ನು ಹೇಳಿಕೊಡುತ್ತಾನೆ. ಆದರೆ ಗುರು ತನ್ನ ಭಾಷೆ, ದೇಶ ಸಂಸ್ಕೃತಿಗಳ ಹಿರಿಮೆಗಳನ್ನು  ಗೌರವಿಸಬೇಕಾದ ರೀತಿಯನ್ನು, ತನ್ನ ಮಾದರಿ ನಡೆಯ ಮೂಲಕ ತೋರಿಸಿಕೊಡುತ್ತಾನೆ. 


ಗುರು ಯಾವತ್ತೂ ತನ್ನ ವಿದ್ಯಾರ್ಥಿಯ ಏಳ್ಗೆಯನ್ನು ಕಂಡು ಕುದಿಯಲಾರ; ಬದಲಾಗಿ ಹೆಮ್ಮೆ ಪಡುವನು. ಆದರೆ ಅಧ್ಯಾಪಕ ಕುದಿಯಲೂಬಹುದು...!  


ಹೌದು...

ಅಧ್ಯಾಪಕನಾಗಬೇಕಾದರೆ ಸರಕಾರ ಸೂಚಿಸುವ ವಿದ್ಯಾರ್ಹತೆ ಸಾಕು. ಆದರೆ ಗುರು ವಾಗಬೇಕಾದರೆ ಸರಕಾರ ಸೂಚಿಸುವ ಶೈಕ್ಷಣಿಕ ಅರ್ಹತೆ ಮಾತ್ರ ಸಾಲದು. ಅದಕ್ಕೆ ಯೋಗ್ಯತೆಯೂ ಬೇಕು...! 

ಅಧ್ಯಾಪಕ ಎಂದರೆ ಬೋಧಕ; ಗುರು ಎಂದರೆ ಬೋಧಕ ಮಾತ್ರವಲ್ಲ ಗುರು ಎಂದರೆ ತೂಕವುಳ್ಳದ್ದು; ಮಹತ್ವದ್ದು ಮತ್ತು ಪೂಜನೀಯವಾದುದು. 


ವಿದ್ಯಾಲಯಗಳಲ್ಲಿ ಪಾಠ ಮಾಡಿದ ಅಧ್ಯಾಪಕರಿಗೆಲ್ಲ ವಂದನೆ.

ಬದುಕಿನ ದಾರಿಗೆ ಬೆಳಕು ತೋರಿದ ಗುರುವರ್ಯರಿಗೆ ಅಭಿವಂದನೆ...

****

-ರತ್ನಾಕರ ಮಲ್ಲಮೂಲೆ


0 Comments

Post a Comment

Post a Comment (0)

Previous Post Next Post